2008ರಲ್ಲಿ ‘ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು… ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ’ ಎಂದು ವಿಧಾನಸೌಧದ ಮೆಟ್ಟಿಲ ಮೇಲೆ ಗಟ್ಟಿ ದನಿಯಲ್ಲಿ ಹೇಳುತ್ತಿದ್ದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಜನರ ಹಷೋದ್ಘಾರ ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರಬಹುದು. ಆ ಅಭೂತಪೂರ್ವ ಸಂದರ್ಭದ ಹಿಂದೆ ದೊಡ್ಡ್ಡ ಹೋರಾಟವಿತ್ತು, ಪರಿಶ್ರಮವಿತ್ತು, ಲಕ್ಷಾಂತರ ಕಾರ್ಯಕರ್ತರ ಹೊನ್ನ ಕಲಶದಂತೆ ಬಿಎಸ್​ವೈ ಅಂದು ನಾಡಿನ ಚೌಕಿದಾರ್ ಆಗಿ ಪಟ್ಟಕ್ಕೇರಿದ್ದರು.
ಈ ಹುದ್ದೆಗೇರುವ ಮುನ್ನ ಅವರ ಪಟ್ಟ ಕಷ್ಟ ಕೋಟಲೆಗಳು ಲೆಕ್ಕವಿಲ್ಲದಷ್ಟು. ಆ ಬಗ್ಗೆ ಒಮ್ಮೆ ಕಣ್ಣುಹಾಯಿಸಿ ಬರುವುದಾದರೆ, ಯಡಿಯೂರಪ್ಪ ಹೋರಾಟ ಆರಂಭವಾಗಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಿಂದ. ಜನರ ಸಮಸ್ಯೆಗೆ ಕಿವಿಯಾಗಿ, ಜನರೊಂದಿಗೆ ಹೋರಾಟ ಮಾಡಿ ನಾಯಕರಾದವರಿಗಿಂತ ಅಳಕ್-ಪುಳಕ್ಕೆಂದು ಉದ್ಭವವಾದವರೇ ಇಂದು ಹೆಚ್ಚು. ಆದರೆ ಯಡಿಯೂರಪ್ಪ ರಾಜಕೀಯವಾಗಿ ಏಳು-ಬೀಳು ಕಂಡವರು. ಹೋರಾಟ ಮತ್ತು ರಾಜ್ಯ ಸುತ್ತಾಟ ಅವರನ್ನು ಮತ್ತೆ ಮತ್ತೆ ಫಿನಿಕ್ಸ್ ರೀತಿ ಮೇಲೆದ್ದು ಬರುವಂತೆ ಮಾಡಿದ್ದು ಇತಿಹಾಸದ ಪುಟ ತಿರುವಿದಾಗ ಕಾಣಿಸುತ್ತದೆ. ಎಷ್ಟೇ ಸೋತರೂ, ವರ್ಚಸ್ಸು ಕುಗ್ಗದಂತೆ ಮಾಡಿದ್ದು ಅವರ ಹೋರಾಟದ ಬದುಕು. ಅವರ ಹೋರಾಟದ ಪಟ್ಟಿ ಹನುಮನ ಬಾಲದಷ್ಟೇ ವಿಸ್ತಾರವಾಗಿ ಬೆಳೆಯುತ್ತದೆ. 1975-80ರಲ್ಲಿ ಶಿಕಾರಿಪುರದ ನೀರು, ವಿದ್ಯುತ್, ರಸ್ತೆ, ಸ್ವಚ್ಛತೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ ನಡೆಸಿದರು. 1983ರಲ್ಲಿ ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಹೋರಾಟಕ್ಕಿಳಿದರು, ಪ್ರತಿಫಲವಾಗಿ ಸರ್ಕಾರ ರೈತರ ಸಾಲಮನ್ನಾ ಘೊಷಿಸಿತು. 1991ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ರಾಷ್ಟ್ರಧ್ವಜ ಹಾರಿಸಲು ಸವಾಲೊಡ್ಡಿದಾಗ ಡಾ.ಮುರಳಿ ಮನೋಹರ ಜೋಶಿ ನೇತೃತ್ವದಲ್ಲಿ ಶ್ರೀನಗರದ ಲಾಲ್​ಚೌಕದಲ್ಲಿ ರಾಷ್ಟ್ರಧ್ವಜರೋಹಣ ಮಾಡುವ ತಂಡದಲ್ಲಿ ಇವರೂ ಇದ್ದರು ಎಂಬುದು ವಿಶೇಷ. ಜೀತಮುಕ್ತರ ಪರಿಹಾರಕ್ಕಾಗಿ ಶಿಕಾರಿಪುರ ಬಿಡಿಎ ಕಚೇರಿ ಮುಂದೆ 5 ತಿಂಗಳು ನಿರಂತರ ಹಗಲು-ರಾತ್ರಿ ಧರಣಿ ನಡೆಸಿ ತಮ್ಮ ಹೋರಾಟದ ಕಿಚ್ಚು ಎಷ್ಟೆಂಬುದನ್ನು ತೋರಿಸಿಕೊಟ್ಟರು. ಬಳಿಕ ಸರ್ಕಾರ ಸ್ಪಂದಿಸದ ಕಾರಣ ಶಿವಮೊಗ್ಗಕ್ಕೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ ನಡೆಸಿ, ಆಡಳಿತ ಪಕ್ಷದ ಗಮನ ಸೆಳೆದರು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೂಲಿಗಾಗಿ ಕಾಳು ಯೋಜನೆ ದುರುಪಯೋಗದ ವಿರುದ್ಧ ತೀವ್ರ ಪ್ರತಿಭಟನೆ ಕೈಗೊಂಡರು. ಆ ಹೋರಾಟಕ್ಕೆ ಸರ್ಕಾರವೇ ಅಲುಗಾಡಿತು.
‘ಸಿ’ ಮತ್ತು ‘ಡಿ’ ವರ್ಗದ ಜಮೀನನ್ನು ರೈತರಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲು ಮುಂದಾದಾಗ, ರೈತರ ಪರ ಗಟ್ಟಿಯಾಗಿ ನಿಂತು ಅಧಿಕಾರಿಗಳ ವಿರುದ್ಧ ದನಿಯಾದರು. 1988ರಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ವಿರೋಧಿಸಿ ಏಕಾಂಗಿ ಹೋರಾಟ ಕೈಗೊಂಡು ಇಡೀ ನಾಡು ತಮ್ಮತ್ತ ಸೆಳೆಯುವಂತೆ ಮಾಡಿದರು. ಪರಿಣಾಮ ಸರ್ಕಾರ ವಿಧೇಯಕವನ್ನು ವಾಪಸ್ ಪಡೆಯಬೇಕಾಯಿತು.
ಗ್ರಾಮ ರಾಜ್ಯ ಉಳಿಸಿ ರೈತರನ್ನು ರಕ್ಷಿಸಿ ಘೊಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ ನಡೆಸಿ, ಹೋರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. 1988ರಲ್ಲಿ ರೈತರ ಸಮಸ್ಯೆಗಳನ್ನು ತೆಗೆದುಕೊಂಡು ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ರೈತ ಜಾಥಾ ಮಾಡಿದರು. ಮೂರನೇ ಬಾರಿಗೆ ಬನವಾಸಿಯಿಂದ ಬೆಂಗಳೂರಿಗೆ ರೈತ ಜಾಥಾ ನಡೆಸಿದರು. ಕೃಷ್ಣರಾಜಸಾಗರಕ್ಕೆ ಮತ್ತೊಂದು ಬಾರಿ ರೈತ ಜಾಥಾ. ಹೀಗೆ ಜಾಥಗಳ ಮೂಲಕ ರೈತರನ್ನು ಜಾಗೃತಗೊಳಿಸಿ ಬಡಿದೆಬ್ಬಿಸಿ, ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. 1998ರಲ್ಲಿ ಕಾವೇರಿ ಸಮಸ್ಯೆ ಮತ್ತೆ ಉಲ್ಬಣವಾಗಿದ್ದ ಸಂದರ್ಭದಲ್ಲಿ ಕಾವೇರಿ ಹುಟ್ಟೂರಿನಲ್ಲೇ ನೀರಿಗಾಗಿ ರೈತರ ಪರದಾಟವಾಗಿತ್ತು. ಈ ವೇಳೆ ಸಾವಿರಾರು ರೈತರೊಂದಿಗೆ ತಲಕಾವೇರಿಯಿಂದ ಕೃಷ್ಣರಾಜಸಾಗರದವರೆಗೆ ರೈತ ಜಾಥಾ ನಡೆಸಿ ಸರ್ಕಾರವನ್ನು ಎಚ್ಚರಿಸಿದರು. 2002ರಲ್ಲಿ ಬಗರ್​ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಸರ್ಕಾರ ಒಕ್ಕಲೆಬ್ಬಿಸಲು ಮುಂದಾದಾಗ ಬಗರ್​ಹುಕುಂ ಸಾಗುವಳಿದಾರರ ಪರವಾಗಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿದರಲ್ಲದೆ, ವಾರ ಕಾಲ ಹಗಲು-ರಾತ್ರಿ ಧರಣಿ ನಡೆಸಿ ಅಧಿಕಾರಿಗಳಿಗೆ ಸಮಸ್ಯೆಯ ತೀವ್ರತೆ ತಿಳಿಸಿಕೊಟ್ಟರು.
2002ರಲ್ಲಿ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಶಿಕಾರಿಪುರ ಮತ್ತು ಶಿವಮೊಗ್ಗದ ಎಪಿಎಂಸಿ ಎದುರು ಧರಣಿ ನಡೆಸಿದರು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಬೆಂಗಳೂರಲ್ಲಿ ನಿರಂತರ 9 ದಿನಗಳ ಕಾಲ ಹಗಲು-ರಾತ್ರಿ ಹೋರಾಟ ಮಾಡಿದರು. ರೈತರ ಆತ್ಮಹತ್ಯೆ ವಿಚಾರದಿಂದ ಹಿಡಿದು ಜಿಂದಾಲ್ ಭೂ ಪರಭಾರೆವರೆಗೆ ಹೋರಾಟ ಮುಂದುವರಿಸಿಕೊಂಡೇ ಬಂದಿದ್ದಾರೆ. ಹತ್ತಾರು ಸರ್ಕಾರಗಳನ್ನು ಹೋರಾಟದ ಮೂಲಕವೇ ಕಾಡಿದ ಇವರು, ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂದು ಜನ ಘೋಷಣೆ ಹಾಕುವಷ್ಟು ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಕಾನೂನಾತ್ಮಕ ಹೋರಾಟ:ಅಧಿಕಾರ ಸಿಕ್ಕಾಗಲೆಲ್ಲ ಯಡಿಯೂರಪ್ಪ ಮೇಲೆ ದೂರುಗಳು ದಾಖಲಾಗಿ ಪ್ರಕರಣ ಎದುರಿಸಿದ್ದಾರೆ. ಬಹುತೇಕ ಪ್ರಕರಣಗಳು ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಕರೊನಾ ಮೊದಲ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಅವರು, ಎರಡನೇ ಅಲೆಯಲ್ಲಿ ಪರಿಸ್ಥಿತಿ ಕೈ ಮೀರಿತು. ಇದೂ ಅವರನ್ನು ಬಾಧಿಸಿತು. ಅಗತ್ಯದಷ್ಟು ಆರೋಗ್ಯ ವ್ಯವಸ್ಥೆ ಸಿದ್ಧಮಾಡಿಕೊಳ್ಳಲು ಸಾಧ್ಯವಾಗದ ಕಾರಣ ವ್ಯಥೆಪಡುವಂತಾಯಿತು.
ಬಿ.ಎಸ್.ಯಡಿಯೂರಪ್ಪಗೆ ನಿರಾಳವಾಗಿ ಅಧಿಕಾರ ನಡೆಸಿದ ಅವಕಾಶ ಸಿಕ್ಕಿದ್ದು ಕಡಿಮೆ. ಎರಡು ಬಾರಿ ಬಿಜೆಪಿಯು ಬಹುಮತದ ಅಂಚಿಗೆ ನಿಂತಿದ್ದರಿಂದ ಸರ್ಕಾರ ಗಟ್ಟಿಮಾಡಿಕೊಳ್ಳುವ ಹೊಣೆಗಾರಿಕೆ ಬಿಎಸ್​ವೈ ಮೇಲೆಯೆ ಇತ್ತು. ಈ ವೇಳೆ ಟೀಕೆ-ಟಿಪ್ಪಣಿಗೆ ತಲೆಕೆಡಿಸಿಕೊಳ್ಳದೆ ಎದೆಗಾರಿಕೆಯಿಂದ ಸಂದರ್ಭವನ್ನು ಜೈಸಿಕೊಂಡರು. ಬಳಿಕ ಪಕ್ಷದೊಳಗಿನ ಬಂಡಾಯ ಅವರನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು. ಜತೆಗಿದ್ದ ಆತ್ಮೀಯ ಶಾಸಕರೇ ರೆಸಾರ್ಟ್ನಲ್ಲಿ ಕುಳಿತು ತಲೆನೋವು ತಂದಿದ್ದು ಜನ ಮರೆತಿಲ್ಲ. ಇನ್ನು ಇವರ ಅವಧಿಯಲ್ಲಿ ಹೆಚ್ಚು ಬಾರಿ ಅತಿವೃಷ್ಟಿಯಾಗಿದೆ. ಈವರೆಗೆ ಅವರ ನೇತೃತ್ವದಲ್ಲಿ ನಾಲ್ಕು ಅತಿವೃಷ್ಟಿ ಎದುರಿಸಿದ್ದು, ಒಮ್ಮೆಯಂತೂ ಸಂಪುಟದಲ್ಲಿ ಅವರೊಬ್ಬರೇ ಇದ್ದು, ಎದೆಗುಂದದೆ ಪರಿಸ್ಥಿತಿ ನಿಭಾಯಿಸಲು ಪರಿಶ್ರಮಪಟ್ಟಿದ್ದು ಕಣ್ಣಿಗೆ ಕಟ್ಟಿದಂತಿದೆ.
ಜನಪರ ಆಡಳಿತ, ಅಧಿಕಾರಿಗಳೊಂದಿಗೆ ಸಮ್ಮಿಳಿತ, ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯದ ವಿಷಯ ಬಂದಾಗ ಯಡಿಯೂರಪ್ಪ ಆಡಳಿತ ವೈಖರಿಯನ್ನು ಅವರ ವಿರೋಧಿಗಳೂ ಮೆಚ್ಚುತ್ತಾರೆ. ಸದಾ ಬಡವರ ಪರ, ನೊಂದವರ ಪರ ನಿಲುವು ತಳೆಯುವ ಯಡಿಯೂರಪ್ಪ ಆಡಳಿತದಲ್ಲಿ ಅನುಭವಿಗಳು. ತಮ್ಮ ಅಧಿಕಾರಾವಧಿಯಲ್ಲಿ ಆಡಳಿತವನ್ನು ಎಂದೂ ನಿಷ್ಕ್ರಿಯವಾಗುವಂತೆ ಬಿಟ್ಟವರಲ್ಲ. ಜನರ ನಾಡಿಮಿಡಿತ ಬಲ್ಲ ಯಡಿಯೂರಪ್ಪ ಅಧಿಕಾರಿಗಳ ಮಾತು ಕೇಳಿದರೂ ಜನರ ಕಷ್ಟಗಳಿಗೆ ಕಿವಿಯಾಗಿ ಸಮನ್ವಯ ಮಾರ್ಗ ತುಳಿದವರು. ಹಾಗಾಗಿ ಅವರು ಜನರಿಗೆ ಹತ್ತಿರವಾದರು. ಸಾರ್ವಜನಿಕರ ತೊಂದರೆ, ಅವರ ದುಃಖಗಳನ್ನು ಅರಿತು ಸಂವೇದನಶೀಲತೆಯಿಂದ ಕಾರ್ಯ ನಿರ್ವಹಿಸಿದರು. ಸವಾಲುಗಳನ್ನು ಮೆಟ್ಟಿನಿಂತು ಆಡಳಿತ ನಡೆಸಿದ ಯಡಿಯೂರಪ್ಪ, ಸದಾ ರೈತರು, ಬಡವರ ಬಗ್ಗೆ ತುಡಿದವರು, ಅವರ ಕಷ್ಟ ಕಾರ್ಪಣ್ಯಗಳಿಗೆ ಮಿಡಿದವರು. ಬಡವರ ಕೆಲಸಗಳಿಗಾಗಿ ಅಧಿಕಾರಿಗಳಿಗೆ ಅನೇಕ ಬಾರಿ ಗುಡುಗಿದರು. ಅವರ ಅಸಮಾಧಾನ, ಸಿಟ್ಟು, ಸೆಡವು ಎಲ್ಲವೂ ಬಡವವ ಕಲ್ಯಾಣಕ್ಕಾಗಿ ಇದ್ದವು. ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತ ನೀಡಿದವರು. ಆಡಳಿತ ವಿಚಾರದಲ್ಲಿ ಅನೇಕ ಆರೋಪಗಳು ಬಂದಾಗಲೂ ಸಂಯಮದಿಂದ ನಿಭಾಯಿಸಿದ ರಾಜಕೀಯ ಚತುರರು. ಅಧಿಕಾರಿ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸಿದವರಲ್ಲಿ ಯಡಿಯೂರಪ್ಪ ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ. ಜನರ ಕಷ್ಟಗಳನ್ನು ಆಲಿಸುವಂತೆಯೇ ಅಧಿಕಾರಿಗಳ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ. ನೌಕರರ ಬೇಡಿಕೆಗೆ ಆದ್ಯತೆ ನೀಡಿ ಬಗೆಹರಿಸಿದರು.
ಕೌಟುಂಬಿಕ ಹಿನ್ನೆಲೆ:1943 ಫೆಬ್ರವರಿ 27ರಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ-ಪುಟ್ಟತಾಯಮ್ಮ ದಂಪತಿ ಪುತ್ರನಾಗಿ ಜನಿಸಿದ ಯಡಿಯೂರಪ್ಪ, ಶಿಕಾರಿಪುರಕ್ಕೆ ಬಂದು ಸಂಘದ ಕೆಲಸ ಆರಂಭಿಸಿದರು. ನಂತರ ಶಿಕಾರಿಪುರವೇ ಅವರ ಕರ್ಮಭೂಮಿಯಾಯಿತು. 1967ರಲ್ಲಿ ಮೈತ್ರಾದೇವಿ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಬಿ.ವೈ.ವಿಜಯೇಂದ್ರ, ಬಿ.ವೈ ರಾಘವೇಂದ್ರ, ಅರುಣಾದೇವಿ, ಪದ್ಮಾವತಿ, ಉಮಾದೇವಿ ಅವರು ಬಿಎಸ್​ವೈ ಮಕ್ಕಳು.
ಶೂನ್ಯದಿಂದ ಸಿಂಹಾಸನದವರೆಗೆ:ವಿಧಾನಸಭೆ ಪ್ರಸ್ತುತ ಅವಧಿಯ ಆರಂಭದಲ್ಲಿ ಬೆರಳೆಣಿಕೆ ದಿನ ಸಿಎಂ ಆಗಿ ವಿಶ್ವಾಸಮತದ ಕೊರತೆ ಕಾರಣ ರಾಜೀನಾಮೆ ನೀಡಿ ನಿರ್ಗಮಿಸಿದ್ದ ಯಡಿಯೂರಪ್ಪ, 14 ತಿಂಗಳ ನಂತರ ಮತ್ತೆ ಸಿಎಂ ಹುದ್ದೆ ಅಲಂಕರಿಸಿದರು. ಈ ಹಂತಕ್ಕೆ ಬರಲು ಅವರು ಸವೆಸಿದ್ದು ಕಲ್ಲು ಮುಳ್ಳಿನ ಹಾದಿ. ಶೂನ್ಯದಿಂದ ಆರಂಭವಾದ ಅವರ ಪಕ್ಷ ಸಂಘಟನೆ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತಂದ ಕೀರ್ತಿ ಅವರದು. ಸೈಕಲ್​ನಲ್ಲಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮೂಲಕ ರಾಜ್ಯಾಧ್ಯಕ್ಷರಾಗಿ ಅಧಿಕಾರ ಹಿಡಿಯುವ ಹಂತಕ್ಕೆ ಬಂದರು.
ಸಂಘಪರಿವಾರದ ಶಿಸ್ತಿನ ಸಿಪಾಯಿ:ಯಡಿಯೂರಪ್ಪ ಸಂಘ ಪರಿವಾರದ ಸಂಪರ್ಕಕ್ಕೆ ಬಂದ ನಂತರ ವಿವಿಧ ಜವಾಬ್ದಾರಿಗೂ ಹೆಗಲು ಕೊಟ್ಟಿದ್ದರು. 1970ರ ಸಂದರ್ಭದಲ್ಲಿ ಅವರು ಆರ್​ಎಸ್​ಎಸ್ ಶಿಕಾರಿಪುರ ಘಟಕದ ಕಾರ್ಯವಾಹಕರಾಗಿ ನೇಮಕಗೊಂಡಿದ್ದರು. ಬಳಿಕ ಸಂಘದ ಹಿರಿಯರ ಸೂಚನೆಯಂತೆ ಜನಸಂಘದ ಜವಾಬ್ದಾರಿ ತೆಗೆದುಕೊಂಡರು. ಜನಸಂಘ ಬಿಜೆಪಿಯಾಗಿ ರೂಪಾಂತರವಾಗುತ್ತಿದ್ದಂತೆ ಬಿಎಸ್​ವೈ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿಯೂ ಜವಾಬ್ದಾರಿ ಪಡೆದುಕೊಂಡರು. ರಾಜಕೀಯ ಸಹವಾಸ ಮಾಡಿದ್ದರೂ, ಸಂಘದ ಸಂಪರ್ಕ ಬಿಟ್ಟವರಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶನದಲ್ಲೇ ನಡೆದುಬಂದರು. ತಮ್ಮ ಜೀವನದಲ್ಲೂ ಸಂಘ ಕಲಿಸಿದ ಶಿಸ್ತನ್ನು ಅಳವಡಿಸಿಕೊಂಡವರು ಎಂಬುದು ವಿಶೇಷ ಸಂಗತಿ. ಇಂದಿಗೂ ಅದನ್ನು ಪಾಲಿಸುತ್ತಿದ್ದಾರೆಂಬುದು ಮತ್ತೊಂದು ವಿಶೇಷ.

ರಾಜಕಾರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿ.ಎಸ್.ಯಡಿಯೂರಪ್ಪನವರೇ ಸಾಟಿ ಎನ್ನುವ ಮಾತಿದೆ. ಅದು ನಿಜವೂ ಹೌದು. ಎಲ್ಲವೂ ತಾನು ಅಂದುಕೊಂಡಂತೆ ಆಗಬೇಕು ಎಂಬ ನಿಟ್ಟಿನಲ್ಲಿ ಹಿಂದೆ ಮುಂದೆ ನೋಡದೆ ಧೈರ್ಯವಾಗಿ ಹೆಜ್ಜೆ ಇಡುವ ಛಾತಿ ಬಿಎಸ್​ವೈ ಅವರದು. ಎಷ್ಟೇ ವಿರೋಧಗಳು ಬಂದರೂ, ಅದನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆ ಅವರದು. ಹೋರಾಟದ ನೆಲೆಯಲ್ಲಿ ನಾಯಕತ್ವ ರೂಪಿಸಿಕೊಂಡ ಅವರಿಗೆ ರಕ್ತದ ಕಣಕಣದಲ್ಲಿಯೂ ಹೋರಾಟ ಎನ್ನುವುದು ಮೈಗೂಡಿಕೊಂಡಿದೆ. ಅವರ ರಾಜಕೀಯ ಜೀವನದ ಪುಟಗಳನ್ನು ತಿರುವಿ ಹಾಕಿದರೆ, ರೂಪಿಸಿ, ನಡೆಸಿದ ಹೋರಾಟಗಳಿಗೆ ಲೆಕ್ಕವಿಲ್ಲ. ಅದರಲ್ಲಿ ರೈತಪರ ಹೋರಾಟ, ಧರಣಿ, ಸತ್ಯಾಗ್ರಹಗಳೇ ಅತಿ ಹೆಚ್ಚು. ರಾಜ್ಯದ ಹಿತ ದೃಷ್ಟಿಯಿಂದ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಎಸ್​ವೈ ಹಿಂದೇಟು ಹಾಕಲಿಲ್ಲ. ಬಳ್ಳಾರಿ ಗಣಿ ಹಗರಣಕ್ಕೆ ತಡೆ ಹಾಕಲು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅದಕ್ಕಾಗಿಯೇ ರಾಜಕೀಯ ಭಿನ್ನಮತ ಸ್ಪೋಟವಾಗಿದ್ದು ಇತಿಹಾಸ. ನಂತರ ರಾಜಕೀಯ ಒತ್ತಡಗಳಿಗೆ ಮಣಿದು ನಿರ್ಧಾರ ಬದಲಿಸಿದ್ದೂ ಇದೆ. ಸಿಎಂ ಗದ್ದುಗೆಯಲ್ಲಿ ಕುಳಿತ ಅವರು ತಮ್ಮ ಕಚೇರಿಯನ್ನು ಶರವೇಗದಲ್ಲಿ ಸ್ಪಂದಿಸುವಂತೆ ಅಧಿಕಾರಿಗಳ ಪಡೆಯನ್ನೇ ಕಟ್ಟಿಕೊಂಡಿದ್ದರು. ಆದರೆ, ಅಲ್ಲಿನ ಅಧಿಕಾರಿಗಳ ವರ್ತನೆ ಬಗ್ಗೆಯೂ ದೂರುಗಳು ಬಂದಿದ್ದರಿಂದ ಅಲ್ಲಿಯೂ ರಾಜೀ ಸೂತ್ರ ಅನುಸರಿಸಿಕೊಂಡು ಶಾಸಕರನ್ನು ನಿಭಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಯಾವುದೇ ಯೋಜನೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರೆ, ಅದನ್ನು ಶತಾಯಗತಾಯ ಮಾಡಿಯೇ ಸಿದ್ಧ ಎನ್ನುವ ತತ್ವಕ್ಕೆ ಅಂಟಿಕೊಂಡ ಬಿಎಸ್​ವೈ ಈಗಲೂ ಅದಕ್ಕೆ ಬದ್ಧರಾಗಿದ್ದಾರೆ. ಜನರಿಗೆ ತಮ್ಮ ಯೋಜನೆಗಳು ತಲುಪಬೇಕು. ರೈತರಿಗೆ ಅನುಕೂಲವಾಗಬೇಕು ಎನ್ನುವ ತುಡಿತ ಬಿಎಸ್​ವೈ ಅವರದು. ಅದಕ್ಕಾಗಿಯೇ ನಿಗದಿತ ಕಾಲ ಮಿತಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸುತ್ತಿದ್ದುದ್ದನ್ನು ಈಗಲೂ ವಿಧಾನಸೌಧ ಸೆಕ್ರೆಟ್ರಿಯೆಟ್ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ. ತಮ್ಮ ವಿರುದ್ದ ಏನಾದರೂ ದೂರು ಹೇಳುವುದು, ತಾವು ಮಾಡಿದ ಕೆಲಸಗಳನ್ನು ಮಾಡಲು ಆಗುವುದಿಲ್ಲ ಎಂದು ಹೇಳುವವರ ಮೇಲೆ ಬಿಎಸ್​ವೈಗೆ ಮೂಗಿನ ಮೇಲೆ ಕೋಪ. ಎಷ್ಟೋ ಸಲ ಅವರ ಕೋಪಕ್ಕೆ ಅಧಿಕಾರಿಗಳು ಹೆದರಿ ಥರಗುಟ್ಟಿ ಹೋಗಿದ್ದು ಇದೆ. ಇದೇ ಸಿಟ್ಟಿನ ಕಾರಣಕ್ಕೆ ಅವಾಂತರ ಮಾಡಿಕೊಂಡಿದ್ದು ಇದೆ. ನಗು ನಗುತ್ತಾ ಆಡಳಿತ ನಡೆಸುವ ಕಾಯಕಕ್ಕಿಂತ ಬಿಗಿ ಹಿಡಿತದಲ್ಲಿ ಸಿಟ್ಟಿನಿಂದಲೇ ಆಡಳಿತ ನಡೆಸುತ್ತಿದ್ದ ಅವರ ವೈಖರಿ ಎಲ್ಲ ಸಿಎಂಗಳಿಗಿಂತ ಭಿನ್ನ. ಸತ್ಯ, ಪ್ರಾಮಾಣಿಕತನಕ್ಕೆ ಅವರು ಕರಗಿ ನೀರಾಗಿದ್ದೂ ಇದೆ. ಅಷ್ಟೇ ಮಾನವೀಯ ನೆಲೆಯಿಂದ ಸ್ಪಂದಿಸಿ ಹೃದಯವಂತ ಮುಖ್ಯಮಂತ್ರಿಯಾಗಿ ನಡೆದುಕೊಂಡು ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ.
ರೈಸ್​ವಿುಲ್​ನಲ್ಲಿ ರೈಟರ್:ಯಡಿಯೂರಪ್ಪ, ಬಿ.ಎ. ಪದವೀಧರರು. ಜೀವನ ನಿರ್ವಹಣೆಗೆ ಉದ್ಯೋಗ ಅರಸಿಕೊಂಡು ಬಂದಿದ್ದು ಮಲೆನಾಡ ಅಂಚಿನಲ್ಲಿರುವ ಶಿಕಾರಿಪುರಕ್ಕೆ. 1965ರಲ್ಲಿ ಶಿಕಾರಿಪುರಕ್ಕೆ ಬಂದಾಗ ಅವರಿಗೆ ಆಶ್ರಯ ನೀಡಿದ್ದು ವೀರಭದ್ರ ಶಾಸ್ತ್ರಿಗಳು. ಶಾಸ್ತ್ರಿಗಳ ರೈಸ್ ಮಿಲ್​ನಲ್ಲಿ ರೈಟರ್ ಆಗಿ ಕೆಲಸಕ್ಕೆ ಸೇರಿದ ಯಡಿಯೂರಪ್ಪ, ಒಂದು ವರ್ಷದಲ್ಲೇ ಶಿಕಾರಿಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರ ಸಂಪರ್ಕಕ್ಕೆ ಬಂದರು.

2008ರಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ. ರಾಜ್ಯದಲ್ಲಿ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ ರೈತರ ಕೃಷಿ ಸಾಲ ಯೋಜನೆ ಜಾರಿ. ಸಾವಯವ ಕೃಷಿ ಯೋಜನೆಗೆ 10.05 ಕೋಟಿ ರೂ. ವಿನಿಯೋಗ, 83 ಸಾವಿರ ರೈತರು ಇದರಲ್ಲಿ ತೊಡಗುವಂತೆ ಮಾಡಿ 76,000 ಹೆಕ್ಟೆರ್ ಭೂಮಿಯಲ್ಲಿ ಅನುಷ್ಠಾನ. ಸುವರ್ಣ ಭೂಮಿ ಯೋಜನೆಯಲ್ಲಿ 10 ಲಕ್ಷ ರೈತರ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಯಿತು. 10 ಅಶ್ವಶಕ್ತಿಯ ತನಕ ಕೃಷಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್​ನಿಂದ ರೈತರ ಆದಾಯ ಹೆಚ್ಚಳಕ್ಕೆ ಸಹಕಾರಿಯಾದರು.
ಕಲ್ಯಾಣ ಕರ್ನಾಟಕ ನಾಮಕರಣ:ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಯಡಿಯೂರಪ್ಪ, ಆ ತರುವಾಯ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ. ಅಲ್ಲದೆ, ಆ ಭಾಗದ ಅಭಿವೃದ್ಧಿಗೆ ಪ್ರತಿ ಬಜೆಟ್​ನಲ್ಲಿ ವಿಶೇಷ ಅನುದಾನ ನೀಡಿದರು.
ಕೋವಿಡ್ ಮೃತರಿಗೆ ನೆರವಿನ ಆಸರೆ:ಕೋವಿಡ್​ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿ, ಸಂತ್ರಸ್ಥ ಕುಟುಂಬಗಳಿಗೆ ಆಸರೆಯಾದರು. ಸುಮಾರು 25 ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ. ಕರೊನಾ ಸೋಂಕಿನಿಂದ ಮೃತಪಟ್ಟ 10,187 ರೈತರ ಸಹಕಾರ ಬ್ಯಾಂಕ್ ಸಾಲ 79.47 ಕೋಟಿ ರೂ. ಮನ್ನಾ ಮಾಡಲು ತೀರ್ವನಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + twenty =
Remember me
