ಭಾರತದ ನ್ಯಾಯಾಂಗ ಕ್ಷೇತ್ರ ಹಾಗೂ ನ್ಯಾಯದಾನ ವಿಧಾನ ವಿಶ್ವದಲ್ಲೇ ಶ್ರೇಷ್ಠ. ಇತ್ತೀಚಿಗೆ ನಮ್ಮ ಎಲ್ಲ ಕೋರ್ಟ್​ಗಳಲ್ಲಿ ಗಣಕೀಕರಣಗೊಂಡು ತಂತ್ರಜ್ಞಾನದ ಸದುಪಯೋಗ ಪಡೆದಿದ್ದೇವೆ. ಇದರಿಂದ ತ್ವರಿತ ನ್ಯಾಯದಾನದತ್ತ ದೃಢವಾದ ಹೆಜ್ಜೆ ಇಟ್ಟಿದ್ದೇವೆ. 2047ಕ್ಕೆ ಸ್ವಾತಂತ್ರ್ಯ ಶತಮಾನೋತ್ಸವದ ಹೊತ್ತಿಗೆ ಜನರಿಗೆ ಕೋರ್ಟ್​ಗಳು ಇನ್ನಷ್ಟು ಹತ್ತಿರವಾಗಬೇಕು, ಬೇಗನೆ ಪ್ರಕರಣಗಳು ಮುಗಿಯಬೇಕು. ಇದಕ್ಕಾಗಿ ಸುಪ್ರೀಂಕೋರ್ಟ್, ಹೈಕೋರ್ಟ್ ಹಾಗೂ ಕೆಳ ಹಂತದ ನ್ಯಾಯಾಲಯಗಳು ಸಜ್ಜಾಗಬೇಕಿದೆ. ಜತೆಗೆ ಹೆಚ್ಚಿನ ಸ್ಪಂದನೆ ಸಿಗಬೇಕಿದೆ. ಇದಕ್ಕಾಗಿ ಜನರು, ವಕೀಲರು ಒಳಗೊಂಡಂತೆ ನ್ಯಾಯಾಂಗ ಕ್ಷೇತ್ರದ ಪ್ರತಿಯೊಬ್ಬರು ಕೈಜೋಡಿಸಬೇಕಾದ ಅಗತ್ಯತೆ ಇದೆ. ಸರ್ಕಾರದಿಂದಲೂ ಹೆಚ್ಚಿನ ಬೆಂಬಲ ಸಿಗಬೇಕು. ಎಲ್ಲ ನ್ಯಾಯಾಲಯಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಜಿಲ್ಲಾ ಕೋರ್ಟ್​ಗಳು ಕೂಡ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಪ್ರಕರಣಗಳು ಹೆಚ್ಚು ಬಾಕಿ ಇರುವುದರಿಂದ ನ್ಯಾಯಮೂರ್ತಿಗಳ ನೇಮಕವೂ ಆಗಬೇಕಿದೆ.
ಮುಖ್ಯವಾಗಿ ನ್ಯಾಯಾಧೀಶರ ನೇಮಕಾತಿಯಲ್ಲಿ ಸಮಾಜದ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕು. ಜಡ್ಜ್​ಗಳ ನೇಮಕದಲ್ಲಿ ಹೆಚ್ಚು ಪಾರದರ್ಶಕತೆಗೆ ಒತ್ತು ಸಿಗಬೇಕು. ಯಾವುದೇ ಮುಲಾಜಿಗೆ ಒಳಗಾಗದೆ ಸಂಪೂರ್ಣ ಮೆರಿಟ್ ಆಧಾರದ ಮೇಲೆಯೇ ನೇಮಕಾತಿ ಪ್ರಕ್ರಿಯೆ ನಡೆಯುವಂತಾಗಬೇಕು. ಈ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿ ಇರದಂತೆ ನೋಡಿಕೊಳ್ಳಬೇಕು. ಇಂತಹ ಉಪಕ್ರಮಗಳನ್ನು ಕೈಗೊಂಡು ಮುಂದಡಿ ಇಟ್ಟಲ್ಲಿ ಜನರಿಗೆ ನ್ಯಾಯಾಲಯಗಳ ಮೇಲೆ ಹೆಚ್ಚಿನ ನಂಬಿಕೆ ಬರುವಂತಾಗುತ್ತದೆ. ಜತೆಗೆ ದೇಶದ ಸ್ವಾತಂತ್ರೊ್ಯೕತ್ಸವದ 100ನೇ ವರ್ಷದ ಹೊಸ್ತಿಲಲ್ಲಿ ಹೊಸ ಭರವಸೆಯೂ ಮೂಡುತ್ತದೆ. ಜನರಲ್ಲಿರುವ ನಂಬಿಕೆ, ಭರವಸೆಯನ್ನು ಹುಸಿಗೊಳಿಸದಂತೆ ನ್ಯಾಯಾಂಗವೂ ಕಾರ್ಯನಿರ್ವಹಿಸುವಂತಾಗಬೇಕು. ತ್ವರಿತವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡುವುದು ಹಾಗೂ ಕಕ್ಷಿದಾರರಿಗೆ ನ್ಯಾಯದಾನ ಸಿಗುವಂತಾದಲ್ಲಿ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನ್ಯಾಯಾಂಗ ಕ್ಷೇತ್ರ ಮುಂದುವರಿಯಬೇಕಿದೆ.
ನ್ಯಾಯಾಲಯ ದೇಗುಲ ಇದ್ದಂತಿದೆ. ಬಹುಶಃ ಕೋರ್ಟ್​ಗಳು ಮಾತ್ರ ಜಾತಿ, ಮತದಿಂದ ದೂರ ಉಳಿದು ಕಾರ್ಯನಿರ್ವಹಿಸುತ್ತಿವೆ. ಜನರ ಈ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು. ಜಡ್ಜ್​ಗಳು ತಮ್ಮ ಕರ್ತವ್ಯವನ್ನು ದೈವತ್ವದ ಕೆಲಸವೆಂದು ಭಾವಿಸಿಕೊಂಡಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು. ಇಂತಹ ಅವಕಾಶದಿಂದ ನ್ಯಾಯಾಂಗ ಕ್ಷೇತ್ರ ಮುನ್ನೆಲೆಗೆ ಬಂದು ಕಕ್ಷಿದಾರರ ದೃಷ್ಟಿಯಲ್ಲಿ ಕೋರ್ಟ್​ಗಳು ್ಲ ನ್ಯಾಯದೇಗುಲಗಳಾಗಿ ಮಾರ್ಪಾಟಾಗುತ್ತವೆ. ಈ ಕೈಂಕರ್ಯದಲ್ಲಿ ಸಮಾಜದ ನಾಲ್ಕನೇ ಅಂಗ ಎನಿಸಿಕೊಂಡಿರುವ ಮಾಧ್ಯಮವೂ ನ್ಯಾಯಾಂಗಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ನಾನು ಹೈಕೋರ್ಟ್ ಜಡ್ಜ್ ಆಗಿ ಕಾರ್ಯನಿರ್ವಹಿಸುವಾಗ ಲೋಕ್ ಅದಾಲತ್ ಮೂಲಕ ಜನರಿಗೆ ಕೋರ್ಟ್​ಗಳು ಹತ್ತಿರವಾಗುವಂತೆ ಕೆಲಸ ಮಾಡಿದ್ದೆವು. ಕೇವಲ ಒಂದು ವರ್ಷ 4 ತಿಂಗಳ ಅವಧಿಯಲ್ಲಿ ಆರು ಬಾರಿ ನಡೆಸಿದ ಲೋಕ್ ಅದಾಲತ್​ನಲ್ಲಿ ದಾಖಲೆಯ 1.8 ಕೋಟಿ ಪ್ರಕರಣಗಳು ಇತ್ಯರ್ಥ ಕಾಣುವಂತಾಯಿತು. ಇಂತಹ ಬದಲಾವಣೆಯನ್ನು ಜನ ಬಯಸುತ್ತಿದ್ದು, ಸ್ವಾತಂತ್ರ್ಯೋತ್ಸವದ 100ನೇ ವರ್ಷಾಚರಣೆಯಲ್ಲಿ ನ್ಯಾಯಾಂಗ ಕ್ಷೇತ್ರ ನವಚೈತನ್ಯ ಪಡೆದಲ್ಲಿ ಕಕ್ಷಿದಾರರಿಗೆ ಅಷ್ಟರಮಟ್ಟಿಗೆ ನೆಮ್ಮದಿ ಸಿಗುತ್ತದೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ.
| ಬಿ.ವೀರಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಭಾರತೀಯರ ಸಾಮರ್ಥ್ಯ ಮನದಟ್ಟಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಸಮರ್ಥ ಸಾಧಕರಿದ್ದಾರೆ. ನಮ್ಮಲ್ಲಿರುವ ಅಪಾರ ಮಾನವ ಸಂಪನ್ಮೂಲವನ್ನು ಅತ್ಯಧಿಕ ಸಾಮರ್ಥ್ಯದೊಂದಿಗೆ ಬಳಸಿಕೊಂಡು, ರಾಷ್ಟ್ರದ ಉನ್ನತಿ ಸಾಧಿಸಲು ಮನಸ್ಸು ಮಾಡಿದರೆ, 2047 ರ ಶತಮಾನೋತ್ಸವ ಸಂಭ್ರಮದ ಹೊತ್ತಿಗೆ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿ ಸಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಒತ್ತು ನೀಡಬೇಕಿದೆ.
ಇದಕ್ಕಾಗಿ ಕೆಲ ವಿಷಯಗಳ ಕಡೆಗೆ ಗಮನಹರಿಸಲೇಬೇಕಿದೆ. ಅತಿ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಎಲ್ಲರಿಗೂ ಶಿಕ್ಷಣ, ಕೌಶಲ ನೀಡಬೇಕು. ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ ಮೂಲಕ ರಾಷ್ಟ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು. ಯಾರೂ ಪರಾವಲಂಬಿಯಾಗದೆ, ಸ್ವಾವಲಂಬಿಗಳಾಗಿ ಭವಿಷ್ಯ ರೂಪಿಸಿಕೊಳ್ಳುವಂತೆ ಚಿಕ್ಕಂದಿನಿಂದಲೇ ಗುರಿಯೊಂದಿಗೆ ಮುನ್ನಡೆಸುವ ಕಾರ್ಯ ಪಾಲಕರು-ಶಿಕ್ಷಕರಿಂದ ಆಗಬೇಕು.
ಭವ್ಯ ಭಾರತ ನಿರ್ವಣ, ವಿಶ್ವ ಗುರುವಾಗಿಸುವ ಕನಸು ನನಸಾಗಿಸುವ ಹೊಣೆ ನಮ್ಮ ಯುವಕ-ಯುವತಿಯರ ಮೇಲಿದೆ. ಅವರೇ ನಮ್ಮ ಭವಿಷ್ಯದ ಪೀಳಿಗೆ. ಅವರು ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಂಡರೆ ಕುಟುಂಬ ಕೂಡ ಸಾಕಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಲಿದೆ. ಒಂದು ವೇಳೆ ಯುವಸಮೂಹದ ಸಂಖ್ಯೆ ಕ್ಷೀಣಿಸಿದರೂ ದೇಶಕ್ಕೆ ಹೆಚ್ಚು ನಷ್ಟ. ಹೀಗಾಗಿ, ಮೊದಲು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮೂಡಿಸಬೇಕು.
ಪ್ರತಿಯೊಬ್ಬರಲ್ಲೂ ರಾಷ್ಟ್ರಭಕ್ತಿ, ನಮ್ಮ ಇತಿಹಾಸ, ಸಂಸ್ಕೃತಿ, ಪಾರಂಪರಿಕ ಐತಿಹಾಸಿಕ ತಾಣಗಳು, ವಾಸ್ತುಶಿಲ್ಪಗಳು, ಕಲೆಗಳ ಕುರಿತು ಬೆಳಕು ಚೆಲ್ಲಿ ಹೆಮ್ಮೆ, ಗೌರವ, ಪ್ರೀತಿ, ಕಾಳಜಿ, ಅಭಿಮಾನ ಮೂಡಿಸುವ ಕೆಲಸವಾಗಬೇಕು. ಇದರಿಂದಲೂ ಭಾರತವನ್ನು ಸಶಕ್ತವಾಗಿ ಮುನ್ನಡೆಸಲು ಸಹಕಾರಿಯಾಗಲಿದೆ.
ಮಹಿಳೆಯರು, ಯುವಸಮೂಹ ಒಳಗೊಂಡು ಇಡೀ ಮಾನವ ಕುಲದ ಸಬಲೀಕರಣ ಆಗಬೇಕಿದೆ. ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಈ ಕೆಲಸ ಆಗುತ್ತಿದೆ. ಇನ್ನೂ ಹೆಚ್ಚಿನ ಒತ್ತು ನೀಡಿ ವಿಶೇಷ ಯೋಜನೆ ರೂಪಿಸಿ, ಅವುಗಳನ್ನು ವ್ಯಾಪಕವಾಗಿ ಪ್ರಚುರಪಡಿಸಿ, ಅನುಷ್ಠಾನಗೊಳಿಸಿದಲ್ಲಿ ಅಗಾಧ ಯಶಸ್ಸು ಸಾಧಿಸಬಹುದಾಗಿದೆ. ನಮ್ಮ ಭಾರತ ಎಲ್ಲ ದೇಶಗಳಂತಲ್ಲ. ಬೇರೆಯವರಿಗಿಂತಲೂ ನಮ್ಮ ದೇಶಕ್ಕೆ ಅತಿದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುವಷ್ಟರಲ್ಲಿ ಇಷ್ಟೆಲ್ಲ ಅಭಿವೃದ್ಧಿ, ಸಾಧನೆ ಆಗಿದೆ ಎಂದಾದರೆ ಅದಕ್ಕೆ ಭಾರತೀಯರ ಕಠಿಣ ಪರಿಶ್ರಮ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಎಲ್ಲರೂ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುಕ್ತ ಮನಸ್ಸಿನಿಂದ ಕೈಜೋಡಿಸಲಿ. ಭಾರತ ವಿಶ್ವಗುರುವಿನ ಸ್ಥಾನದಲ್ಲಿ ಕಂಗೊಳಿಸುವಂತಾಗಲಿ.
| ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾಧಿಕಾರಿ, ಚಿತ್ರದುರ್ಗ
ಒಂದು ವಿಚಾರದ ಬಗ್ಗೆ ಮೊದಲೇ ತೀರ್ವನಿಸದೆ, ಪೂರ್ವಾಗ್ರಹ ಪೀಡಿತರಾಗದೆ ಆ ವಿಷಯವನ್ನು ಅದು ಹೇಗಿದೆಯೋ, ಹಾಗೆ ನೋಡುವ ಸಾಮರ್ಥ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ನನ್ನ ಪ್ರಕಾರ ನಿಜವಾದ ಸ್ವಾತಂತ್ರ್ಯ 2047ಕ್ಕೆ ಭಾರತ ಸ್ವಾತಂತ್ರ್ಯ ಪಡೆದು ನೂರು ವರ್ಷಗಳಾಗಲಿವೆ. 77ನೇ ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಏನೆಲ್ಲಾ ಆಗಬೇಕು? ಚಿತ್ರರಂಗಕ್ಕೆ ಏನು ಬೇಕು? ಎಂತಹ ಬದಲಾವಣೆಗಳು ಆಗಬೇಕು ಎಂದರೆ, ಚಿತ್ರರಂಗ ಜನರಿಗೆ ಇನ್ನಷ್ಟು ಹತ್ತಿರವಾಗುವಂತಹ, ಜನರು ಜನರಿಗೆ ಮತ್ತಷ್ಟು ಹತ್ತಿರವಾಗುವಂತಹ ಸಿನಿಮಾಗಳು ಹೆಚ್ಚು ಮೂಡಿಬರಬೇಕು. ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಖಾಲಿತನ ಜಾಸ್ತಿಯಾಗುತ್ತಿದೆ. ದೈಹಿಕವಾಗಿ ನೂರಾರು ಜನರ ನಡುವೆ ಇದ್ದರೂ ಮಾನಸಿಕವಾಗಿ, ಭಾವನಾತ್ಮಕವಾಗಿ ಒಂಟಿತನ, ಖಾಲಿತನ ಹೆಚ್ಚಾಗುತ್ತಿದೆ. ಆ ಖಾಲಿತನದಿಂದ ಸ್ವಾತಂತ್ರ್ಯ ಕೊಡುವಂತಹ ಸಿನಿಮಾಗಳು ಅಧಿಕವಾಗಿ ಬರಬೇಕು. ಸಿನಿಮಾಗಳು ಕೇವಲ ಸಿನಿಮಾಗಳಾಗದೆ, ಮನರಂಜನೆಗಷ್ಟೇ ಸೀಮಿತವಾಗದೆ, ನಿಜ ಜೀವನದ ಪ್ರತಿಬಿಂಬವಾಗಬೇಕು. ನಾನೊಬ್ಬನೇ ವಿಭಿನ್ನವಾಗಿದ್ದೇನೆ, ನನಗೊಬ್ಬನಿಗೇ ಸಮಸ್ಯೆಗಳಿವೆ, ನಾನೊಬ್ಬನೇ ಕಷ್ಟದಲ್ಲಿದ್ದೇನೆ, ಬೇರೆಯವರೆಲ್ಲರೂ ಚೆನ್ನಾಗಿದ್ದಾರೆ, ಖುಷಿಯಾಗಿದ್ದಾರೆ ಅನ್ನೋ ಭಾವನೆ ಪ್ರತಿಯೊಬ್ಬರಲ್ಲೂ ಹೋಗಬೇಕು. ಅದು ಸಿನಿಮಾದ ಪ್ರಮುಖ ಉದ್ದೇಶವಾದರೆ ಚೆನ್ನಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ.
| ರಾಜ್ ಬಿ. ಶೆಟ್ಟಿ, ನಟ-ನಿರ್ದೇಶಕ

ಭಾರತ ಮತ್ತೆ ವಿಶ್ವ ಗುರುವಾಗಬೇಕೆಂಬ ಬಯಕೆಗೆ ಜೀವ ಬಂದಿದೆ. ವಿಶ್ವಗುರು ಆಗುವುದೆಂದರೆ ಆರ್ಥಿಕ ಹಾಗೂ ರಕ್ಷಣೆಯ ವಿಷಯದಲ್ಲಿ ಪ್ರಗತಿ ಸಾಧಿಸುವುದಷ್ಟೇ ಅಲ್ಲ. ಆಹಾರ ಭದ್ರತೆ ಕಾಯ್ದುಕೊಳ್ಳುವುದೂ ಅತ್ಯವಶ್ಯ. ಸ್ವಾತಂತ್ರ್ಯ ಶತಮಾನೋತ್ಸವದತ್ತ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ ಅನೇಕ ಸವಾಲುಗಳೂ ಇವೆ. ಮುಖ್ಯವಾಗಿ ಈ ದೇಶದ ಜೀವನಾಡಿ ಎಂದೇ ಪರಿಗಣಿಸಲ್ಪಡುವ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದರೆ ಉದ್ಯೋಗ ಸೃಷ್ಟಿ ಜತೆಗೆ ದೇಶದ ಆರ್ಥಿಕತೆಗೂ ಶಕ್ತಿ ಬರುತ್ತದೆ.
ಇಂದು ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಕೆಲವೊಂದು ಸಂಶೋಧನೆಗಳು ನಡೆಯುತ್ತಿವೆ. ಆದರೆ, ಅದು ಲ್ಯಾಬ್​ನಿಂದ ಲ್ಯಾಂಡ್​ವರೆಗೆ ತಲುಪುವುದೇ ಇಲ್ಲ. ಅದರ ಫಲಿತಾಂಶ ಕೇವಲ ಲ್ಯಾಬ್​ಗೆ ಸೀಮಿತವಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸಂಶೋಧನೆ ಎಂಬುದು ಅಂಕ ಗಳಿಕೆ ಇಲ್ಲವೆ ಪದೋನ್ನತಿಗೆ ಸೀಮಿತವಾಗುತ್ತಿರುವುದು ವಿಪರ್ಯಾಸದ ಸಂಗತಿ.
ಸಂಶೋಧನೆಗೆ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಹಾಗೂ ಪೂರಕ ಸನ್ನಿವೇಶ ಸೃಷ್ಟಿಸುವ ಕೆಲಸವೂ ಆಗಬೇಕಿದೆ. ನಮ್ಮಲ್ಲಿರುವ ಜಟಿಲ ಕಾಯ್ದೆಗಳು, ವಿವಿಧ ಹಂತಗಳಲ್ಲಿರುವ ಭ್ರಷ್ಟಾಚಾರ, ಆಡಳಿತ ಯಂತ್ರದ ಅಸಹಕಾರದಿಂದ ಅನೇಕರು ಸಂಶೋಧನೆಯಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಸೊರಗುತ್ತಿರುವುದು ನಮ್ಮ ಕೃಷಿ ಕ್ಷೇತ್ರ ಎಂಬುದು ದುರಂತದ ವಿಚಾರ.
ಪ್ರಸ್ತುತ ಸನ್ನಿವೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಕೃಷಿ ಕ್ಷೇತ್ರವನ್ನು ಆವರಿಸಿಕೊಂಡರೆ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗುವುದರಲ್ಲಿ ಅನುಮಾನ ಬೇಡ. ಆದರೆ, ಈ ನಿಟ್ಟಿನಲ್ಲಿ ಪೂರಕ ಸಂಶೋಧನೆಗಳು ನಡೆಯಬೇಕು. ಇದಕ್ಕೂ ಆಡಳಿತ ಯಂತ್ರದ ಸಹಕಾರ ಅಗತ್ಯ.
ಸಂಶೋಧನೆಗೆ ಪೂರಕವಾಗಿ ಹೊಸ ಉತ್ಪನ್ನಗಳಿಗೆ ಅನುಮತಿ, ದಾಖಲೆಗಳ ಸಂಗ್ರಹ, ಅಂಕಿಅಂಶಗಳನ್ನು ಪಡೆಯುವುದು, ಪರವಾನಗಿ ಹೀಗೆ ಹಲವು ಹಂತಗಳಲ್ಲಿ ಓಡಾಟ ನಡೆಸುವುದರಿಂದ ಬೇಸತ್ತು ಅನೇಕರು ಅದರ ಸಹವಾಸವೇ ಬೇಡ ಎಂದು ದೂರ ಉಳಿಯುತ್ತಿದ್ದಾರೆ. ಹಾಗಾಗಿ ಏಕಗವಾಕ್ಷಿ ಮಾದರಿಯಲ್ಲಿ, ತ್ವರಿತವಾಗಿ ಮತ್ತು ಕಾಲಮಿತಿಯಲ್ಲಿ ಸರ್ಕಾರದಿಂದ ಎಲ್ಲವೂ ದೊರೆತರೆ ಸಂಶೋಧಕರ ಉತ್ಸಾಹವೂ ಹೆಚ್ಚುತ್ತದೆ. ಇದರಿಂದ ಭವಿಷ್ಯದಲ್ಲಿ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ.
ಅಡಕೆ ರಾಷ್ಟ್ರದ ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಬೆಳೆ ಹಾಗೂ ಪ್ರದೇಶದ ವಿಸ್ತರಣೆಯಾಗುತ್ತಿರುವುದೂ ಕೆಲವೊಮ್ಮೆ ಆತಂಕ ಮೂಡಿಸುವುದುಂಟು. ಅಡಕೆಯ ಪರ್ಯಾಯ ಬಳಕೆ ಬಗ್ಗೆ ಸಂಶೋಧನೆಗಳು ಹೆಚ್ಚಬೇಕು. ಆದರೆ, ಅಡಕೆ ಬಗ್ಗೆ ಕೆಲವು ಆರೋಪಗಳಿರುವುದರಿಂದ ಯಾರೂ ಸಂಶೋಧನೆ ಮಾಡುವ, ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಅಡಕೆ ಕ್ಯಾನ್ಸರ್​ಕಾರಕವಲ್ಲ, ಆರೋಗಕ್ಕೆ ಪೂರಕ ಎಂದು ಒಮ್ಮೆ ಸರ್ಕಾರ ಬಲವಾಗಿ ಪ್ರತಿಪಾದನೆ ಮಾಡಿ ಅದಕ್ಕೆ ಕಾನೂನಿನ ರಕ್ಷಣೆ ಒದಗಿಸಿದರೆ ಅಡಕೆ ಸಂಶೋಧನೆಗಳಿಗೆ ಪೂರಕ ವಾತಾವರಣ ನಿರ್ವಣವಾಗುತ್ತದೆ. ಇಂತಹ ಪ್ರಯತ್ನಗಳು ತ್ವರಿತವಾಗಿ ನಡೆಯಬೇಕಿದೆ.
| ನಿವೇದನ್ ನೆಂಪೆ, ಶಿವಮೊಗ್ಗ ಅರೇಕಾ ಟೀ ಸಂಶೋಧಕ
ಸ್ವಾತಂತ್ರ್ಯ ಎಂದ ಕೂಡಲೆ ಬ್ರಿಟಿಷರ ಆಳ್ವಿಕೆಯಿಂದ ಭಾರತ ಮುಕ್ತಗೊಂಡ ದಿನ ಎಂದು ನೆನಪಿಸಿಕೊಳ್ಳುತ್ತೇವೆ. ಅದಕ್ಕಾಗಿ ಎಂದೇ ಈಗ ಹಲವು ಡಾಕ್ಯುಮೆಂಟರಿಗಳು, ಪುಸ್ತಕಗಳು ನಮ್ಮಲ್ಲಿವೆ. ಆದರೆ, ಕಾಲದ ಜತೆ ಸ್ವಾತಂತ್ರ್ಯ ಎನ್ನುವ ಪದದ ಅರ್ಥವೂ ಬದಲಾಗುತ್ತಿದೆ. ಈ ಪದಕ್ಕೆ ನಿಜವಾದ ಅರ್ಥ ಸಿಗುವುದು ಯಾವಾಗ ಎಂದರೆ, ಜನರೇ ನಿಜವಾದ ನಿರ್ಧಾರ ಮಾಡುವ ಅಧಿಕಾರ ಹೊಂದಿದಾಗ. ಅಂದರೆ, ಜನರನ್ನು ಕೀಳಾಗಿ ಕಾಣದೆ, ಗೌರವಿಸುವ ಮನೋಭಾವವಿರುವ ಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡಬೇಕು. ಆ ಪ್ರತಿನಿಧಿಗಳು ಜನರ ನಡುವೆ ಜಾತಿ ಅಥವಾ ಇನ್ನಿತರ ಸೂಕ್ಷ್ಮ ಸಂಗತಿಗಳ ಆಧಾರವಾಗಿ ಆಡಳಿತ ಮಾಡಲು ಮುಂದಾದರೆ ಅದು ತಪ್ಪಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಈ ಸಮಾನತೆ ಇರಬೇಕು. 2047ಕ್ಕೆ ಸ್ವಾತಂತ್ರ್ಯ ಶತಮಾನೋತ್ಸವದ ಹೊತ್ತಿಗೆ ಭಾರತ ಹೀಗಾದರೆ ಚೆಂದ. ಈ ವಿಚಾರದಲ್ಲಿ ಒಂದು ಸಿನಿಮಾ ಕೂಡ ದೊಡ್ಡ ಪರಿಣಾಮ ಬೀರುತ್ತದೆ. ಅನೇಕರಿಗೆ ಸಿನಿಮಾ ಪ್ರೇರಣೆ ಆಗುತ್ತದೆ. ಈ ಹಿಂದೆ ರಾಜಕುಮಾರ್ ಅವರ ‘ಬಂಗಾರದ ಮನುಷ್ಯ’ ಬಿಡುಗಡೆಯಾದಾಗ ಅನೇಕರು ರೈತರಾಗಲು ಮುಂದಾಗಿದ್ದರಂತೆ. ಅದೇ ರೀತಿ, ಇನ್ನುಮುಂದೆಯೂ ಸಾಕಷ್ಟು ಒಳ್ಳೆಯ ಕಂಟೆಂಟ್​ಗಳನ್ನು ಸಿನಿಮಾ ಮೂಲಕ ತೋರಿಸಿದರೆ, ಕೆಲವು ಗಂಭೀರ ವಿಷಯಗಳನ್ನು ಪ್ರಸ್ತುತಪಡಿಸಿದರೆ ಹಲವು ಬದಲಾವಣೆಗೆ ಸಿನಿಮಾ ಕಾರಣವಾಗುತ್ತದೆ. ಉದಾಹರಣೆಗೆ, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ಕಥೆ ಅಥವಾ ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಕಥೆಯನ್ನು ತೋರಿಸಬೇಕು. ಜನರು ಕೂಡ ಅವುಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಸದ್ಯ ಇವೆಲ್ಲ ನಿಧಾನಕ್ಕೆ ಆಗುತ್ತಿದೆ, ಇನ್ನೂ ಹೆಚ್ಚಾಗಬೇಕು. ಅಸಹಿಷ್ಣುತೆಯನ್ನು ಮೀರಿದ ಕಂಟೆಂಟ್​ಗಳು ಬರಬೇಕು, ಜನರು ಸ್ವೀಕರಿಸಬೇಕು. ಸದ್ಯ ಹಳ್ಳಿ ಹಳ್ಳಿಗಳಲ್ಲಿ ಇಂಟರ್​ನೆಟ್ ಸೌಲಭ್ಯವಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಕೆಲಸ ಆಗಬೇಕು. ಅಲ್ಲಿನ ಮಕ್ಕಳು, ಯುವ ಜನತೆ ಈ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡರೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ. ಈ ಕೆಲಸ ಆಗಬೇಕೆಂದರೆ ಸರ್ಕಾರದ ಜನಸಾಮಾನ್ಯರೂ ಕೈ ಜೋಡಿಸಬೇಕು.
ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದರೆ ಅಲ್ಲಿ ಎರಡು ವಿಷಯಗಳು ಬಹಳ ಮುಖ್ಯವಾಗುತ್ತದೆ. ಒಂದು ಶಿಕ್ಷಣ. ಇದು ಎಲ್ಲರಿಗೂ ಸಮಾನವಾಗಿ ಸಿಗುವಂತಾಗಬೇಕು. ಇನ್ನೊಂದು ಉದ್ಯೋಗ. ಇತ್ತೀಚೆಗೆ ಸುಡಾನ್ ದೇಶದ ಬಗ್ಗೆ ಒಂದು ವೀಡಿಯೋ ನೋಡುತ್ತಿದ್ದೆ. ಆ ದೇಶಕ್ಕೆ ಹೋಲಿಸಿದರೆ ಭಾರತ ಬಹಳ ಮುಂದಿದೆ. ಆದರೆ, ಇನ್ನೂ ಮುಂದೆ ಹೋಗುವ ಸಾಧ್ಯತೆ, ಅವಕಾಶ ನಮಗಿದೆ. ಯಾವುದೋ ದೇಶದ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕರೆ ಸಾಕು ಎನ್ನುವ ಮನೋಭಾವ ದೂರಗೊಳಿಸಿ ನಮ್ಮ ದೇಶ, ನಮ್ಮ ಸಂಸ್ಥೆ ಎನ್ನುವ ಭಾವನೆ ಪಾಲಕರು ಹಾಗೂ ಮಕ್ಕಳಲ್ಲಿ ಬೆಳೆಯಬೇಕು. ಇನ್ನು ಈಗಿನ ಯುವ ಜನತೆಯ ಬಗ್ಗೆ ಹೇಳುವುದಾದರೆ, ಬೇಡದಿರುವ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡಬಾರದು. ಸ್ವಾಂತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಗತ್ ಸಿಂಗ್ ಯುವಕರಿದ್ದಾಗಲೇ ದೇಶಕ್ಕಾಗಿ ಹೋರಾಡಿದರು. ದೇಶಕ್ಕಾಗಿ ಪ್ರಾಣ ಬಿಟ್ಟರು. ಆದರೆ, ಈಗಿನ ಯುವ ಜನತೆ ಸಾಮಾಜಿಕ ಜಾಲತಾಣದಲ್ಲಿ ಮುಳಗಿಹೋಗದೇ ಮುಂದೆ ಬರಬೇಕು. ಆಗ, ಭಾರತ ವಿಶ್ವ ಗುರು ಆಗಬಹುದು.
| ರಂಜನಿ ರಾಘವನ್, ನಟಿ
ಭಾರತ ಸ್ವಾತಂತ್ರ್ಯ ಶತಮಾನೋತ್ಸವದ ಹೊತ್ತಿಗೆ ಸಮಸಮಾಜದ ಕನಸು ನನಸಾಗಬೇಕಿದೆ. ಜಾತಿ, ವರ್ಗ ಎಂಬ ಭೇದಭಾವ ಮರೆಯಾಗಿ ಎಲ್ಲರಿಗೂ ಸಮಾನ ಹಕ್ಕು, ಅವಕಾಶ ಸಿಗುವಂತಾದಾಗ ಶತಮಾನೋತ್ಸವಕ್ಕೆ ಅರ್ಥಪೂರ್ಣ ಮೆರುಗು ಸಿಗಲಿದೆ. ಶಿಕ್ಷಣ ಹಕ್ಕಿನಡಿ ಎಲ್ಲರಿಗೂ ಶಿಕ್ಷಣ ದೊರೆತರೂ ಪರಿಣಾಮಕಾರಿಯಾದ ಶಿಕ್ಷಣ ನೀಡುವ ದರ್ದು ಹಿಂದಿಗಿಂತ ಈಗ ಹೆಚ್ಚಿದೆ. ಒಂದು ಸಮಾಜ ಆದರ್ಶ ಎನಿಸಿಕೊಳ್ಳಲು ಅಲ್ಲಿರುವ ಎಲ್ಲರಿಗೂ ಸಮಾನ ಅವಕಾಶಗಳಿರಬೇಕು. ದೇಶ ಕಟ್ಟುವಲ್ಲಿ ಸಾಹಿತ್ಯದ ಕೊಡುಗೆ ಅಪಾರ. ಇಂದು ಸಾಹಿತ್ಯ ಎಂಬುದು ಅಲ್ಪಸಂಖ್ಯಾತರ ಮೀಡಿಯಾ ಎಂಬಂತಾಗಿದೆ. ಇದು ಬದಲಾಗಬೇಕು. ಬೇರೆಬೇರೆ ವರ್ಗದವರು, ಧ್ವನಿ ಇಲ್ಲದವರ ಬಗೆಗಿನ ಬರಹಗಳು ಹೆಚ್ಚು ಬರಬೇಕಿದೆ. ಸಾಹಿತ್ಯ ಎಂದರೆ ಕೇವಲ ಜನಪ್ರಿಯತೆ ಆಗಿದೆ. ಸಾಹಿತಿಗಳು, ಓದುಗರು ಪುಸ್ತಕ ಎಷ್ಟು ಮುದ್ರಣ ಕಂಡಿದೆ ಎಂದು ನೋಡುವಂತಾಗಿದೆ. ಹಲವು ಬಾರಿ ಮುದ್ರಣಗೊಂಡ ಬರಹಗಳಷ್ಟೇ ಓದಲು ಯೋಗ್ಯವಲ್ಲ. ಅದರಾಚೆ ಎಷ್ಟೋ ಉತ್ತಮ, ಚಿಂತನೆಗೆ ಹಚ್ಚುವ, ಗಂಭೀರ ಸಮಸ್ಯೆಗಳ ಒಳಹುಗಳನ್ನು ಬಿಚ್ಚಿಡುವ ಕೃತಿಗಳಿವೆ. ಗಂಭೀರ ಸಾಹಿತ್ಯದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ. ಬರೆದವರು ಯಾರೆಂಬುದಕ್ಕಿಂತ ಬರಹದ ಮಹತ್ವದ ಚರ್ಚೆಗಳಾದಾಗ ಸಾಹಿತ್ಯ ಪರಿಣಾಮ ಸಮಾಜದ ಮೇಲಾಗಲಿದ್ದು, ಈ ಮೂಲಕ ಭವಿಷ್ಯಕ್ಕೊಂದು ಹೊಸ ಪಥ ತೆರೆದುಕೊಳ್ಳಲಿದೆ. ಭಾರತ ಇಂದು ವೇಗವಾಗಿ ಬೆಳೆಯುತ್ತಿದೆ. ವಿಶ್ವ ಗುರುವಾಗುವತ್ತ ಹೆಜ್ಜೆ ಇಡುತ್ತಿದೆ. ಇದು ಖುಷಿಯ ವಿಚಾರ. ಮೊದಲು ನಮ್ಮನ್ನು ನಾವು ಗೆಲ್ಲಬೇಕು. ದೇಶದ ಆಂತರಿಕ ಆಘಾತಕಾರಿ ಬೆಳವಣಿಗೆಗೆ ಕಡಿವಾಣ ಹಾಕುವ ಜರೂರಿದೆ. ಜಾತಿ, ಧರ್ಮದ ಹೆಸರಿನಲ್ಲಿನ ಅಸಹನೀಯ ಕೆಲಸಗಳು ನಿಲ್ಲಬೇಕು. ಮಹಿಳೆಯರಿಗೆ ಮುಕ್ತ ವಾತಾವರಣ, ಅವಕಾಶ, ಹಕ್ಕುಗಳು ಲಭಿಸುವ ನಿಟ್ಟಿನಲ್ಲಿ ಆಡಳಿತ ಕೆಲಸ ನಿರ್ವಹಿಸಬೇಕು. ಮನೆ ಶಾಂತಿ, ನೆಮ್ಮದಿಯಿಂದ ಇದ್ದಾಗ ಸಮಾಜ ಸುಧಾರಣೆ ಸಾಧ್ಯ. ಜ್ಞಾನ, ಆದರ್ಶ, ಮಾನವೀಯತೆ, ಸಮ ಸಮಾಜದ ಕಲ್ಪನೆಯನ್ನು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಿದಾಗ ನಿಜವಾದ ವಿಶ್ವ ಗುರುವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಾಗಲಿ ಎಂಬ ಆಶಯದೊಂದಿಗೆ.
| ಮಂಜುನಾಥ ನಾಯಕ ಚಳ್ಳೂರು, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತ
ವಿಶ್ವದಲ್ಲೇ ಅತಿ ಕಡಿಮೆ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿರುವ ದೇಶ ಭಾರತ. ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ಆದರೂ ಭವಿಷ್ಯದಲ್ಲಿ ತಂತ್ರಜ್ಞಾನ ಹಾಗೂ ಕೃತಿಕ ಬುದ್ಧಿಮತ್ತೆ ಬಳಸಿಕೊಂಡು ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ.
ಭವಿಷ್ಯದಲ್ಲಿ ಭಾರತದ ಪ್ರತಿಯೊಬ್ಬರೂ ಆರೋಗ್ಯವಂತರಾಗಿಬೇಕು, ಅದಕ್ಕಾಗಿ ಎಲ್ಲರಿಗೂ ಆರೋಗ್ಯ ಸೇವೆ ಕೈಗೆಟುಕುವಂತಿರಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಅಭಿವೃದ್ಧಿ ಹಾಗೂ ಬಲಪಡಿಸುವ ಕಾರ್ಯವಾಗಬೇಕು. ಮೂಲಸೌಕರ್ಯ ಹೆಚ್ಚಿಸುವುದರ ಜೊತೆಗೆ ನುರಿತ ಮಾನವ ಸಂಪನ್ಮೂಲವನ್ನು ಹೊಂದಬೇಕಿದೆ.
‘ಎಲ್ಲರಿಗೂ ಆರೋಗ್ಯ’ ದೇಶದ ಪ್ರತಿಯೊಬ್ಬ ಪ್ರಜೆಯೂ ಆರೋಗ್ಯದಿಂದಿರಲು ಸಾಧ್ಯವಾಗಬೇಕು. ಇದರಿಂದ ಮಾನವನ ಕೆಲಸಗಳಲ್ಲಿನ ಗುಣಮಟ್ಟ ಹೆಚ್ಚಲಿದ್ದು, ದೇಶದ ಆರ್ಥಿಕ ಹೊರೆ ತಗ್ಗಲಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಆರೋಗ್ಯ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಸಾಧನೆ ಮಾಡಿದೆ. ದೇಶದ ಬಹುತೇಕ ಕಡೆಗಳಲ್ಲಿ ಏಮ್್ಸ ಮಾದರಿಯ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗುತ್ತಿವೆ. ಮುಂದಿನ 25 ವರ್ಷಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ನಿರ್ವಣಗೊಂಡು, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೇವೆ ದೊರೆಯುವಂತಾಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ.
ಆರೋಗ್ಯವಂತ ಸಮಾಜ ನಿರ್ಮಾಣ:ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅಂದಾಜು ಜಿಡಿಪಿಯ ಶೇಕಡಾ 3.2 (6 ಲಕ್ಷ ಕೋಟಿ ರೂ.) ಖರ್ಚಾಗುತ್ತಿದೆ. ಈ ಖರ್ಚನ್ನು ತಗ್ಗಿಸಲು ಹಾಗೂ ಭಾರತವನ್ನು ಆರ್ಥಿಕವಾಗಿ ಸಬಲವಾಗಿಸಲು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಿದೆ. ದೇಶವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರಾಜಧಾನಿಯಾಗುತ್ತಿದ್ದು, ಈ ಅಸಾಂಕ್ರಾಮಿಕ ರೋಗ (ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ, ಬೊಜ್ಜು) ಗಳನ್ನು ತಡೆಯಬೇಕಿದೆ. ಮಾನಸಿಕ ಆರೋಗ್ಯ ಸುಧಾರಣೆಗೂ ಬಹಳ ಪ್ರಾಮುಖ್ಯತೆ ನೀಡಬೇಕಿದೆ. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸಬೇಕಿದೆ.
ಡಿಜಿಟಲ್ ಡೇಟಾ:ಅಂದಾಜು 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸಹಜವಾಗಿಯೇ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯದ ಕುರಿತು ಡಿಜಿಟಲ್ ದತ್ತಾಂಶ ಸಂಗ್ರಹಿಸಿದರೆ ಸಂಶೋಧನೆಗೆ ಅನುಕೂಲವಾಗಲಿದೆ. ಇದರಿಂದ ಯಾವ ಯಾವ ಕಾಯಿಲೆ ಎಷ್ಟು ಪ್ರಮಾಣದಲ್ಲಿದೆ, ಯಾವ ವರ್ಗದವರಲ್ಲಿ ಇದೆ, ಅದಕ್ಕೆ ಕಾರಣ ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಕ್ರಮವಹಿಸಲು ಸಾಧ್ಯವಾಗಲಿದೆ.
ವಯಸ್ಸಾದವರ ಆರೈಕೆ:ಅಧ್ಯಯನ ಒಂದರ ಪ್ರಕಾರ ಮುಂದಿನ 25-30 ವರ್ಷದ ವೇಳೆಗೆ ವಯಸ್ಸಾದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ. 2011ರ ಜನಗಣತಿಯಂತೆ ಸದ್ಯ 60 ವರ್ಷ ಮೇಲ್ಪಟ್ಟವರ ಜನಸಂಖ್ಯೆ ಶೇ. 6.6 ಇದ್ದು, 2050ರ ವೇಳೆಗೆ ಈ ಸಂಖ್ಯೆ ಶೇ. 3 ಹೆಚ್ಚಾಗಲಿದೆ. ಅಂದರೆ ಭಾರತ ಮುಂದಿನ 15-20 ವರ್ಷಗಳಲ್ಲಿ ವಯಸ್ಸಾದವರ ರಾಜಧಾನಿಯಾಗಲಿದೆ.
ಕೃತಕ ಬುದ್ಧಿಮತ್ತೆ:ದೇಶದ ಆರೋಗ್ಯ ವಲಯದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಭವಿಷ್ಯದಲ್ಲೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಸಂಶೋಧನೆಯ ಅಗತ್ಯವಿದೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ತಲೆ ಎತ್ತಲಿದ್ದು, ಭಾರತ ಜಗತ್ತಿನಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರಲ್ಲಿ ವಿಶ್ವ ಗುರು ಆಗಲಿದೆ.
ಇಂಟಿಗ್ರೇಟೆಡ್​ ಮೆಡಿಸಿನ್​:ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇಂಟಿಗ್ರೇಟೆಡ್ ಮೆಡಿಸಿನ್ ಬಹಳ ಮಹತ್ವ ಪಡೆದುಕೊಂಡಿದೆ. ಆದರೆ ಇದರ ಬಗ್ಗೆ ವೈಜ್ಞಾನಿಕ ಪುರಾವೆಗಳ ಮೇಲೆ ಸಂಶೋಧನೆ ಆಗಬೇಕಿದೆ. ಇದರ ಉಪಯೋಗಗಳ ಕುರಿತು ತಾಂತ್ರಿಕವಾಗಿಯೂ ಸಾಬೀತಾಗಬೇಕಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ಎಲ್ಲ ಅಂಶಗಳು ಸಾಧ್ಯವಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯಗಳು ಆಗಬೇಕಿದೆ.
| ಡಾ.ಎನ್.ಎಸ್. ನಾಗೇಶ್, ನಿರ್ದೇಶಕರು, ಗ್ಯಾಸ್ಟ್ರೋ ಎಂಟರಾಲಜಿ ಸೈನ್ಸಸ್ ಆಂಡ್ ಆರ್ಗ್ಯಾನ್ ಟ್ರಾನ್ಸ್​ಪ್ಲಾಂಟ್ ಸಂಸ್ಥೆ (ಐಗಾಟ್)


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 11 =
Remember me
