ಬೆಂಗಳೂರು:ಬೆಳಗಿನ ಜಾವ ಮೂರು ಗಂಟೆಯ ಸಮಯ ಕೊರೆವ ಚಳಿ, ದಟ್ಟ ಮಂಜಿನ ನಡುವೆ ಮಡಿಯುಟ್ಟು ಕೈಯಲ್ಲಿ ತುಳಸಿ ಪತ್ರೆ ಹಿಡಿದು, ಗೋವಿಂದನನ್ನು ಸ್ತುತಿಸುತ್ತಾ ಭಕ್ತಿಭಾವದೊಂದಿಗೆ ದೇವಾಲಯದತ್ತ ಹೆಜ್ಜೆ ಹಾಕುತ್ತಿದ್ದ ಭಕ್ತರಿಗೆ ಸ್ವರ್ಗದ ಬಾಗಿಲು ಪ್ರವೇಶಿಸುವ ತವಕ…
‘ವೈಕುಂಠ ಏಕಾದಶಿ’ ಪ್ರಯುಕ್ತ ನಗರದಲ್ಲಿ ಸೋಮವಾರ ಕಂಡುಬಂದ ದೃಶ್ಯವಿದು.
ವಿಷ್ಣು ತನ್ನ ಅವತಾರಗಳನ್ನು ಸಮಾಪ್ತಿಗೊಳಿಸಿ ವೈಕುಂಠಕ್ಕೆ ಮರಳಿದ ದಿನವಾಗಿ ಆಚರಿಸುವ ‘ವೈಕುಂಠ ಏಕಾದಶಿ’ಗೆ ತಳಿರು ತೋರಣ ಹೂವುಗಳಿಂದ ಸಿಂಗಾರಗೊಂಡಿದ್ದ ದೇವಾಲಯಗಳಲ್ಲಿ ವಿಶೇಷವಾಗಿ ವೈಕುಂಠದ್ವಾರ ತೆರೆಯಲಾಗಿತ್ತು. ವಿಷ್ಣು ದೇವಾಲಯ, ಕೃಷ್ಣ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ ಸೇರಿ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೆಲವೆಡೆ ಶ್ರೀನಿವಾಸ ಕಲ್ಯಾಣೋತ್ಸವವೂ ನಡೆಯಿತು. ಗಂಟೆಗಟ್ಟಲೆ ಸರತಿಯಲ್ಲಿ ಸಾಗಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ವೆಂಕಟೇಶ್ವರಸ್ವಾಮಿಗೆ ಬೆಳಗಿನ ಜಾವವೇ ವಿಶೇಷ ಪೂಜೆ, ಹೋಮ-ಹವನ, ಯಜ್ಞಗಳು, ಅಭಿಷೇಕ ಹಾಗೂ ವಜ್ರಾಂಗಿ ಅಲಂಕಾರಗಳನ್ನು ಮಾಡಲಾಗಿತ್ತು. ಪ್ರಮುಖ ದೇವಾಲಯಗಳಲ್ಲಿ ಗಣ್ಯರು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು. ದಟ್ಟಣೆ ತಡೆಯುವ ನಿಟ್ಟಿನಲ್ಲಿ ಕೆಲವೆಡೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು.
ಚಾಮರಾಜಪೇಟೆಯ ಕೋಟೆ ಶ್ರೀ ವೆಂಕಟರಮಣ ದೇವಾಲಯ, ರಾಜಾಜಿನಗರದ ಇಸ್ಕಾನ್ ದೇವಾಲಯ, ವೈಯಾಲಿಕಾವಲ್​ನ ಶ್ರೀ ತಿರುಮಲ ತಿರುಪತಿ ದೇವಸ್ಥಾನ, ಜಯನಗರದ ತಿರುಮಲ ತಿರುಪತಿ ದೇವಸ್ಥಾನ, ಮಹಾಲಕ್ಷಿ್ಮ ಲೇಔಟ್​ನ ಶ್ರೀ ವೆಂಕಟೇಶ್ವರ ದೇವಸ್ಥಾನ, ಸಹಕಾರ ನಗರದ ಶ್ರೀ ಲಕ್ಷಿ್ಮೕನಾರಾಯಣ ದೇವಾಲಯ, ಶ್ರೀನಗರದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ, ವಿಜಯನಗರದ ಶ್ರೀ ಕೋದಂಡರಾಮ ದೇವಾಲಯ, ಮುದ್ದಿನ ಪಾಳ್ಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಮಾಗಡಿ ರಸ್ತೆಯ ಎಂ.ಜಿ. ರೈಲ್ವೆ ಕಾಲನಿಯ ಶ್ರೀ ವಿನಾಯಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಮುಂತಾದೆಡೆ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಯಿತು.
ತೋಮಾಲೆ ಹಾಗೂ ಪುಷ್ಪಾಲಂಕಾರ
ಹನುಮಂತನಗರದ 4ನೇ ಮುಖ್ಯರಸ್ತೆಯಲ್ಲಿನ ಶ್ರೀ ಶೇಷಮಹಾ ಗಣಪತಿ ಸೇವಾ ಸಮಿತಿ ಟ್ರಸ್ಟ್ ಶ್ರೀ ಶೇಷ ಮಹಾಬಲಮುರಿ ಗಣಪತಿ ದೇವಾಲಯದಲ್ಲಿ ಈಶ್ವರ ಪಾರ್ವತಿ, ಶ್ರೀ ದತ್ತಾತ್ರೇಯ, ಶ್ರೀ ವೆಂಕಟೇಶ್ವರ ಪದ್ಮಾವತಿ, ಅದಿತ್ಯಾದಿ ನವಗ್ರಹಗಳು ಸೇರಿ ಎಲ್ಲ ದೇವರಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿವಿಧ ವರ್ಣದ ತೋಮಾಲೆ ಗಳಿಂದ ಪುಷ್ಪಾಲಂಕಾರ ಹಾಗೂ ಮುತ್ತಿನ ಹಾರದ ಅಲಂಕಾರ. ಪದ್ಮಾವತಿ ಅಮ್ಮನವರಿಗೆ ತೋಮಾಲೆ ಜತೆಗೆ ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 6.30ಕ್ಕೆ ಆಖಂಡ ಭಜನೆ ಹಾಗೂ ಪೂಜಾ ಕೈಂಕರ್ಯಗಳು ನಡೆದವು. ಬೆಳಗ್ಗೆ 5ರಿಂದ ರಾತ್ರಿ 10.30ರವರೆಗೆ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು, ಎಲ್ಲರಿಗೂ ಲಡ್ಡು ಪ್ರಸಾದ ವಿತರಣೆ ಮಾಡಲಾಯಿತು.
ಇಸ್ಕಾನ್​ನಲ್ಲಿ ಪೊಂಗಲ್ ಪ್ರಸಾದ
ನಗರದ ಕಾರ್ಡ್ ರಸ್ತೆಯ ಇಸ್ಕಾನ್ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಕಳೆಗಟ್ಟಿತ್ತು. ನಸುಕಿನಿಂದ ರಾತ್ರಿವರೆಗೂ ಸಹಸ್ರಾರು ಭಕ್ತರು ಹರೇ ಕೃಷ್ಣಗಿರಿ ಏರಿ ವೈಕುಂಠದ್ವಾರ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಬೆಳಗ್ಗೆ ಮತ್ತು ಸಂಜೆ ಸ್ವಾಮಿಯ ಕಲ್ಯಾಣೋತ್ಸವ ನಡೆಯಿತು. ಶ್ರೀಕೃಷ್ಣ ಮತ್ತು ರುಕ್ಮಿಣಿ, ಸತ್ಯಭಾಮರ ವಿವಾಹ ಶಾಸ್ತ್ರೆೊಕ್ತವಾಗಿ ನಡೆಸಲಾಯಿತು. ದೇವಾಲಯದಲ್ಲಿ 1 ಲಕ್ಷ ಲಡ್ಡು ಹಾಗೂ 8 ಟನ್ ಸಿಹಿ ಪೊಂಗಲ್ ಪ್ರಸಾದ ವಿತರಿಸಲಾಯಿತು.
ಕೋಟೆ ವೆಂಕಟರಮಣಸ್ವಾಮಿ ದೇಗುಲಕ್ಕೆ ಲಕ್ಷಾಂತರ ಭಕ್ತರ ಭೇಟಿ
ಚಾಮರಾಜಪೇಟೆಯ ಕೋಟೆ ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗಿನ ಜಾವ ಸ್ವಾಮಿಯ ಉತ್ಸವ ನಡೆಸಿ ದರ್ಪಣ ಮಂದಿರದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ವೈಕುಂಠದ್ವಾರ ನಿರ್ವಿುಸಿ ಬೆಳಗ್ಗೆ 5 ಗಂಟೆಯಿಂದ ತಡರಾತ್ರಿವರೆಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 1 ಲಕ್ಷಕ್ಕೂ ಹೆಚ್ಚು ಭಕ್ತರು ವೈಕುಂಠದ್ವಾರ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದರು. ಎಲ್ಲರಿಗೂ ಲಡ್ಡು ಪ್ರಸಾದ ವಿತರಿಸಲಾಯಿತು.
ತಿರುಮಲ ತಿರುಪತಿ ದೇವಸ್ಥಾನ
ವೈಯಾಲಿಕಾವಲ್​ನ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನಟಿ ಪುನೀತ್ ರಾಜ್​ಕುಮಾರ್​ವುತ್ತಿತರ ಗಣ್ಯರು ಬೆಳಗ್ಗೆಯೇ ದೇವಾಲಯಕ್ಕೆ ಭೇಟಿ ನೀಡಿ ವೈಕುಂಠ ದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದರು. ತಡರಾತ್ರಿವರೆಗೂ ಸರತಿಯಲ್ಲಿ ಸಾಗುವ ಮೂಲಕ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಯಲಹಂಕ ಮಾರುತಿನಗರದ ಶ್ರೀ ವಿಜಯ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ 5ರಿಂದ ಸಹಸ್ರಾರು ಜನರು ಸ್ವಾಮಿಯ ದರ್ಶನ ಪಡೆದರು. ದೇವಾಲಯದಲ್ಲಿ ಪುಷ್ಪಾಲಂಕೃತ ವೈಕುಂಠದ್ವಾರ ನಿರ್ವಿುಸಲಾಗಿತ್ತು. ಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಶೋಡಶೋಪಚಾರ ಪೂಜೆ ಏರ್ಪಡಿಸಲಾಗಿತ್ತು. ಶ್ರೀ ಸೌಂದರ್ಯಲಹರಿ ಭಜನೆ ಮಂಡಳಿ, ಮಾಗೇರಿ ಶ್ರೀನಿವಾಸ ಭಜನೆ ಮಂಡಳಿ, ಕೃಷ್ಣಲೀಲಾ ಭಜನೆ ಮಂಡಳಿ ನಿರಂತರವಾಗಿ ಕಾರ್ಯಕ್ರಮ ಪ್ರಸ್ತುತಪಡಿಸಿದವು. ಮಂಗಳವಾರ (ಜ.7) ಮುಕ್ಕೋಟಿ ದ್ವಾದಶಿ ಪ್ರಯುಕ್ತ ಮಾರುತಿನಗರ ಬಡಾವಣೆಯ ರಾಜಬೀದಿಗಳಲ್ಲಿ ಸ್ವಾಮಿಯವರ ಉತ್ಸವ, ನಂತರ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:five × two =
Remember me
