ಬೆಂಗಳೂರು:‘ಬ್ರೇಕಿಂಗ್ ಬೌಂಡರೀಸ್’ ಆಶಯದೊಂದಿಗೆ ಮೂರು ದಿನಗಳ ಕಾಲ ಬೆಂಗಳೂರು ಅರಮನೆಯಲ್ಲಿ ಹಮ್ಮಿಕೊಂಡಿರುವ 26ನೇ ಬೆಂಗಳೂರು ಟೆಕ್ ಶೃಂಗಸಭೆಗೆ (ಬಿಟಿಎಸ್-2023) ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಅಪಾರ ಉದ್ಯೋಗಾವಕಾಶ, ಅಭಿವೃದ್ಧಿ ಸಾಧ್ಯತೆಗಳನ್ನು ತೆರೆದಿಡುವ ಜೈವಿಕ ತಂತ್ರಜ್ಞಾನ ಹಾಗೂ ಅನಿಮೇಷನ್, ವಿಷುಯಲ್ ಎಫೆಕ್ಟ್, ಗೇಮಿಂಗ್- ಕಾಮಿಕ್ಸ್ (ಎವಿಜಿಸಿ) ನೀತಿಯನ್ನು ಶೃಂಗದ ವೇಳೆ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಭಾರತ ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್​ಗಳು ಈ ಶೃಂಗವನ್ನು ಆಯೋಜಿಸಿವೆ. ವಿಶ್ವದ 30 ದೇಶಗಳ ಟೆಕ್ ನಾಯಕರು, ಸ್ಟಾರ್ಟಪ್​ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳ ತಜ್ಞರು ಈ ಶೃಂಗದಲ್ಲಿ ಸಮಾವೇಶಗೊಂಡಿದ್ದಾರೆ. ಮೊದಲ ದಿನವೇ ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳ ಕಲರವ ಅಚ್ಚರಿ ಮೂಡಿಸಿತು, ವಿವಿಧ ದೇಶಗಳ ತಂತ್ರಜ್ಞರ ವಿಚಾರ ವಿನಿಯಮ ವಿಶೇಷ ಬೆಳಕು ಚೆಲ್ಲಿತು.
ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡೀಪ್ ಟೆಕ್, ಸ್ಟಾರ್ಟಪ್​ಗಳು ಮತ್ತು ಬಯೋಟೆಕ್, ಅಂತರಾಷ್ಟ್ರೀಯ ಪ್ರದರ್ಶನ, ಜಾಗತಿಕ ಆವಿಷ್ಕಾರ ಮೈತ್ರಿ, ಭಾರತ-ಅಮೆರಿಕ ಟೆಕ್ ಕಾನ್​ಕ್ಲೇವ್, ಆರ್ ಆಂಡ್ ಡಿ-ಲ್ಯಾಬ್, ಬಿ2ಬಿ ಸಭೆಗಳನ್ನು ಈ ಶೃಂಗ ಒಳಗೊಂಡಿವೆ.
ಎಸ್​ಟಿಪಿಐ-ಐಟಿ ರಫ್ತು ಪ್ರಶಸ್ತಿಗಳು, ಸ್ಮಾರ್ಟ್ ಬಯೋ ಪ್ರಶಸ್ತಿಗಳು, ವಿಸಿ ಪ್ರಶಸ್ತಿಗಳು, ಎಟಿಎಫ್ ಪ್ರಶಸ್ತಿಗಳು, ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜಾಂಡ್ ಬಯೋ ಪೋಸ್ಟರ್​ಗಳು ಸಹ ಶೃಂಗಸಭೆಯ ಭಾಗವಾಗಿವೆ. ಈ ಸಮಾವೇಶವು ಗಡಿಗಳನ್ನು ಮೀರಿ ಜಾಗತಿಕ ಸಂಪರ್ಕವನ್ನು ಬೆಸೆಯಲಿದೆ. ಐಟಿಇ ಮತ್ತು ಡೀಪ್ ಟೆಕ್ ಟ್ರಾ್ಯಕ್ ಜಿಸಿಸಿಗಳಿಗೆ ಅವಕಾಶಗಳು, ಕೃತಕ ಬುದ್ಧಿಮತ್ತೆ, ಸುಸ್ಥಿರತೆಗಾಗಿ ತಂತ್ರಜ್ಞಾನ, ಭವಿಷ್ಯದ ಚಲನಶೀಲತೆ, ಸೈಬರ್ ಸುರಕ್ಷತೆ ಮತ್ತು ಸೈಬರ್ ವಾರ್​ಫೇರ್, 5ಜಿ ಅಳವಡಿಕೆ ಮತ್ತು ಭವಿಷ್ಯದ ವೈರ್​ಲೆಸ್ ತಂತ್ರಜ್ಞಾನಗಳು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್​ಗಳಂತಹ ಕೆಲವು ಆಸಕ್ತಿದಾಯಕ ಸೆಷನ್​ಗಳನ್ನು ಟೆಕ್ ಸಮಿಟ್ ಹೊಂದಿದೆ. ಬಯೋಟೆಕ್ ವಿಭಾಗವೂ ಮೌಲ್ಯಯುತ ಚರ್ಚೆ, ಸಂವಾದಗಳನ್ನು ಒಳಗೊಂಡಿದ್ದು, ಬಯೋಟೆಕ್ ವಿಷನ್ ಗ್ರೂಪ್​ನ ಅಧ್ಯಕ್ಷ ಕಿರಣ್ ಮಜುಂದಾರ್ ಷಾ ಮೌಲಿಕ ಮಾತುಗಳನ್ನಾಡಿ ಉತ್ತೇಜಿಸಿದರು.
ಈ ಶೃಂಗದಲ್ಲಿ ಆಸ್ಟ್ರೇಲಿಯಾ, ಫಿನ್​ಲ್ಯಾಂಡ್, ನೆದರ್ಲೆಂಡ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್, ಸ್ವೀಡನ್, ಬ್ರಿಟನ್, ಫ್ರಾನ್ಸ್, ಇಸ್ರೇಲ್, ಪೋಲೆಂಡ್, ಆಸ್ಟ್ರಿಯಾ, ಜರ್ಮನಿ, ಜಪಾನ್, ಸ್ವಿಜರ್ಲೆಂಡ್, ಲಿಥುವೇನಿಯಾ ಸಹಿತ ಹಲವು ದೇಶಗಳ ಸಚಿವರ ನಿಯೋಗಗಳು ಪಾಲ್ಗೊಂಡಿದ್ದವು.
ಗಮನ ಸೆಳೆದ ಪ್ರದರ್ಶನ:ಚಂದ್ರಯಾನ ಮಾದರಿ ಪ್ರದರ್ಶನ, ವೈವಿಧ್ಯಪೂರ್ಣ ಅಂತಾರಾಷ್ಟ್ರೀಯ ವಸ್ತುಪ್ರದರ್ಶನಗಳು ಗಮನ ಸೆಳೆದವು. ಯುವ ವಿಜ್ಞಾನಿಗಳು, ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಮೂರು ದಿನಗಳ ಶೃಂಗಸಭೆಯಲ್ಲಿ 75 ಸೆಷನ್​ಗಳು ನಡೆಯಲಿವೆ. 400ಕ್ಕೂ ಹೆಚ್ಚು ಭಾಷಣಕಾರರು, 350ಕ್ಕೂ ಅಧಿಕ ಸ್ಟಾರ್ಟಪ್​ಗಳು, 600ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 20,000ಕ್ಕಿಂತಲೂ ಹೆಚ್ಚು ವ್ಯಾಪಾರಿಗಳು ಪಾಲ್ಗೊಳ್ಳಲಿದ್ದಾರೆ.
ಎಐ ಹವಾ!:ಐಟಿ-ಬಿಟಿ, ನವೋದ್ಯಮ ಸೇರಿ ಎಲ್ಲೆಡೆ ಕೃತಕ ಬುದ್ಧಿಮತ್ತೆ (ಎಐ)ಯ ಸದ್ದು. ಬೆಂಗಳೂರು ಟೆಕ್ ಶೃಂಗ ಸಭೆಯಲ್ಲಿ ಎಐಯದೇ ಹವಾ. ಕೃತಕ ಬುದ್ಧಿಮತ್ತೆ ಆಧರಿತ ಸಾಧನಗಳು, ಆಪ್​ಗಳು, ಯಂತ್ರೋಪಕರಣ, ನವೋದ್ಯಮಗಳು ವಸ್ತುಪ್ರದರ್ಶನದಲ್ಲಿ ಆಕರ್ಷಣೆ ಕೇಂದ್ರವಾಗಿದ್ದವು.
ಕೃತಕ ಬುದ್ಧಿಮತ್ತೆ, ಬ್ಲಾಕ್​ಚೈನ್, ಎಆರ್/ವಿಆರ್ ಮುಂತಾದ ಉದಯೋನ್ಮುಖ ತಂತ್ರಜ್ಞಾನ ಬಳಸಿಕೊಂಡು ಎವಿಜಿಸಿಯಲ್ಲಿ ರಾಜ್ಯವನ್ನು ಜಾಗತಿಕ ಮುಂದಾಳುವಾಗಿ ರೂಪಿಸುವುದು. ಮಂಗಳೂರು, ಮೈಸೂರು, ಹುಬ್ಬಳ್ಳಿ/ಧಾರವಾಡದಲ್ಲಿ ಎವಿಜಿಸಿ ಉತ್ಕೃ್ಟತಾ ಕೇಂದ್ರಗಳು. ವೃತ್ತಿಪರ ತರಬೇತಿ, ಪ್ರತಿಭೆಗಳನ್ನು ಗುರುತಿಸಲು ನಾವೀನ್ಯತಾ ವೇದಿಕೆ ಸ್ಥಾಪನೆ, 50ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಡಿಜಿಟಲ್ ಆರ್ಟ್ ಸೆಂಟರ್ 2.0. ಎವಿಜಿಸಿ ಕ್ಷೇತ್ರದಲ್ಲಿ ಶಿಕ್ಷಣ, ಉದ್ಯೋಗಾವಕಾಶಗಳ ಕುರಿತು ಯುವಜನರಲ್ಲಿ ಜಾಗೃತಿ. 2028ರ ವೇಳೆಗೆ 30 ಸಾವಿರ ಉದ್ಯೋಗಗಳ ಸೃಜನೆ. 200ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳ ಸಹಭಾಗಿತ್ವದಲ್ಲಿ 50 ಸಾವಿರ ಜನರಿಗೆ ನಿರ್ದಿಷ್ಟವಾಗಿ ಎವಿಜಿಸಿ ಹಾಗೂ ಉತ್ತಮಗುಣಮಟ್ಟದ ನೈಪುಣ್ಯತಾ ತರಬೇತಿ.
ಜೈವಿಕ ತಂತ್ರಜ್ಞಾನ ಉದ್ಯಮಗಳಿಗೆ ಅನುಮತಿ, ಕ್ಷಿಪ್ರ ಸ್ಪಂದನಾ ಪಡೆ ರಚನೆ. ಕೃಷಿ ಸವಾಲುಗಳಿಗೆ ಪೂರಕವಾಗಿ ಬಯೋ ವಿಲೇಜ್ ಉಪಕ್ರಮ, ಲಸಿಕೆ ಸಂಶೋಧನೆ, ಪ್ರಾಯೋಗಿಕ ಉತ್ಪನ್ನ, ಕ್ಲಿನಿಕಲ್ ಟ್ರಯಲ್​ಗೆ ಒತ್ತು. 10 ಕಾಲೇಜುಗಳಿಗೆ 500 ಮೀರದಂತೆ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ, ತರಬೇತಿ ಮತ್ತು ಪ್ರಮಾಣಪತ್ರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ನೆರವು. ಬಯೋ ಉತ್ಪನ್ನ, ಔಷಧಗಳು, ಪರಿಹಾರಗಳು ಇತ್ಯಾದಿಗಳಿಗೆ ಗ್ರೀನ್ ಫೀಲ್ಡ್ ಬಯೋ ಫೌಂಡ್ರಿ ಸ್ಥಾಪನೆ.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನು ಕ್ಲಿನಿಕಲ್ ಟ್ರಯಲ್ ಸೆಂಟರ್ ಎಂದು ಐಸಿಎಂಆರ್ ಮಾನ್ಯತೆ ನೀಡಿದ್ದು, ಬೆಂಗಳೂರಿನ ಐಐಎಸ್​ಸಿಯಲ್ಲಿ ಆಸ್ಪತ್ರೆ ನಿರ್ಮಾಣ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು, ಯಾದಗಿರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಬಯೋಟೆಕ್ ವ್ಯಾಸಂಗಕ್ಕೆ ಪ್ರೋತ್ಸಾಹ.
ಅತ್ಯುನ್ನತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ಸ್ಥಾನವನ್ನು ಕಾಯ್ದುಕೊಳ್ಳಲು ನಮಗಿರುವ ಬದ್ಧತೆಯನ್ನು ಪರಿಷ್ಕೃತ ಬಯೋಟೆಕ್ ನೀತಿ ಪ್ರತಿಬಿಂಬಿಸುತ್ತದೆ. ತಂತ್ರಜ್ಞಾನ, ಸೃಜನಶೀಲತೆ, ಸದಾ ವಿಕಸನವಾಗುವ ಅಂಶವನ್ನು ಗುರುತಿಸಿ, ಎವಿಜಿಸಿ ನೀತಿಗೆ ಚಾಲನೆ ನೀಡಲು ರಾಜ್ಯ ಸಜ್ಜಾಗಿದೆ.
| ಸಿದ್ದರಾಮಯ್ಯ ಸಿಎಂ
ತಂತ್ರಜ್ಞಾನ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಕಾರ್ಯಪರಿಸರ ಉಂಟುಮಾಡಲು ಸರ್ಕಾರವು ಆದ್ಯತೆ ಮುಂದುವರಿಸಲಿದೆ. ಭವಿಷ್ಯದ ಬೆಳವಣಿಗೆ, ಪ್ರತಿಭಾವಂತಿಕೆಗೆ ನೆಲೆ, ಎಲ್ಲರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿ ಸಾಧನೆ, ಪ್ರತಿಯೊಂದು ಹಂತದಲ್ಲಿ ತಂತ್ರಜ್ಞಾನ, ನಾವೀನ್ಯತೆ ಬಳಕೆಗೆ ಬಯಸಿದೆ.
| ಪ್ರಿಯಾಂಕ್ ಖರ್ಗೆ ಐಟಿ-ಬಿಟಿ ಸಚಿವ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕ ಸರ್ಕಾರ ನಿರಂತರ ಬೆಂಬಲ ನೀಡುತ್ತಿದೆ. ನವೋದ್ಯಮಗಳ ಬೆಂಬಲಕ್ಕೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಹಲವು ಉಪಕ್ರಮಗಳ ಮುಖೇನ ನವೋದ್ಯಮ, ಐಟಿಇಎಸ್, ಉದಯೋನ್ಮುಖ ತಂತ್ರಜ್ಞಾನಕ್ಕೂ ಉತ್ತೇಜನ ನೀಡುತ್ತಿದೆ.
– ಅರವಿಂದಕುಮಾರ್, ಮಹಾ ನಿರ್ದೇಶಕ, ಸಾಫ್ಟ್​ವೇರ್ ಪಾರ್ಕ್ ಆಫ್ ಇಂಡಿಯಾ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
