ಬೆಂಗಳೂರು:ಬಜೆಟ್​ನಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರಿ ಮಾದರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ ವಿಷಯ ಶಿಕ್ಷಕರಿಂದ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಆಯೋಜಿಸಿದ್ದ ‘ಕನ್ನಡ ಶಾಲೆ ಉಳಿಸಿ ಕನ್ನಡ ಬೆಳೆಸಿ’ ವಿಷಯ ಕುರಿತ ದುಂಡು ಮೇಜಿನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ವ್ಯಾಮೋಹ ಪಾಲಕರಲ್ಲಿ ಹೆಚ್ಚುತ್ತಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗಿ ಮುಚ್ಚುವ ಹಂತ ತಲುಪುತ್ತಿವೆ ಎಂದರು.
ಪ್ರಸ್ತುತ ರಾಜ್ಯದ 47 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ 3800 ಶಾಲೆಗಳ ದಾಖಲಾತಿ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. 562 ಶಾಲೆಗಳಲ್ಲಿ ಒಬ್ಬೊಬ್ಬರೇ ವಿದ್ಯಾರ್ಥಿಗಳಿದ್ದಾರೆ. ಇಂತಹ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಇಂಗ್ಲೀಷ್ ಕಲಿಕೆ, ಆಂಗ್ಲ ಮಾಧ್ಯಮದಲ್ಲಿ ಬೋಧನೆ ಆರಂಭಿಸಬೇಕಾಗಿದೆ. ಆಗ ಮಕ್ಕಳ ದಾಖಲಾತಿ ಹೆಚ್ಚುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದರು. ಗ್ರಾಮ ಪಂಚಾಯಿತಿಗೊಂದರಂತೆ ನಿರ್ವಿುಸುತ್ತಿರುವ ಸರ್ಕಾರಿ ಮಾದರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಬೋಧಿಸುವ ಜತೆಗೆ ಎಲ್ಲ ತರಗತಿ ಮಕ್ಕಳಿಗೂ ನುರಿತ ಆಂಗ್ಲ ಭಾಷಾ ಶಿಕ್ಷಕರಿಂದ ‘ಸ್ಪೋಕನ್ ಇಂಗ್ಲಿಷ್’ ತರಗತಿ ನಡೆಸಲಾಗುವುದು. ಈ ವರ್ಷ ಹೊಸದಾಗಿ 3000 ಮಾದರಿ ಶಾಲೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಆ ಶಾಲೆಗಳಲ್ಲೂ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸಲು ಅರ್ಹ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ನಾಗೇಶ್ ಹೇಳಿದರು. ದುಂಡು ಮೇಜಿನ ಸಭೆಯಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಬೈರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ, ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿದ್ವಾಂಸರಾದ ಶತಾವಧಾನಿ ಗಣೇಶ್, ಚಂದ್ರಶೇಖರ ದಾಮ್ಲೆ, ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸೇರಿ ಹಲವು ಸಾಹಿತಿಗಳು, ಬರಹಗಾರರು ಭಾಗವಹಿಸಿ ತಮ್ಮ ಸಲಹೆ, ಅಭಿಪ್ರಾಯಗಳನ್ನು ಮಂಡಿಸಿದರು.
ಇನ್ನೂ ಸಿಗದ 200 ಕೋಟಿ ರೂ.!:ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಾಗ ಅದರ ಮೊತ್ತ 5 ಲಕ್ಷ ರೂ. ಅನ್ನು ಕನ್ನಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ನೀಡಲು ಸೂಚಿಸಿದ್ದೆ, ಇದಕ್ಕೆ ಸರ್ಕಾರ ಕೂಡ 200 ಕೋಟಿ ರೂ. ಮೀಸಲಿಡುವುದಾಗಿ ತಿಳಿಸಿತ್ತು. ಈವರೆಗೂ ಈ ಕಾರ್ಯ ನಡೆದಿಲ್ಲವೆಂದು ಎಸ್.ಎಲ್.ಭೈರಪ್ಪ ಬೇಸರ ವ್ಯಕ್ತಪಡಿಸಿದರು. ನನಗೆ ಪ್ರಶಸ್ತಿ ಸಿಕ್ಕಾಗ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದರು. ಕನ್ನಡದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ನೀಡಲು ತಿಳಿಸಿದ್ದೆ. ಸರ್ಕಾರ ಕೂಡ 200 ಕೋಟಿ ರೂ. ನೀಡುವುದಾಗಿ ತಿಳಿಸಿತ್ತು. ಸರ್ಕಾರ ಬದಲಾಯಿತು. ಇದೀಗ ಮತ್ತೆ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಇನ್ನು ಮುಂದೆಯಾದರೂ ಇದನ್ನು ಮಾಡಬೇಕೆಂದರು.
ದ್ವಿಭಾಷಾ ಶಿಕ್ಷಣ ಅವಶ್ಯ:ರಾಜ್ಯದಲ್ಲಿ ಕನ್ನಡ ಶಾಲೆಗಳು ಉಳಿಯಬೇಕಾದಲ್ಲಿ, ವಿದ್ಯಾರ್ಥಿಗಳಿಗೆ ದ್ವಿಭಾಷಾ ಶಿಕ್ಷಣವನ್ನು ಕಲಿಸಿಕೊಡ ಬೇಕೆಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದರು. ಕನ್ನಡ ಶಾಲೆಗಳನ್ನು ಉಳಿಸಬೇಕಾದರೆ, ಆ ಶಾಲೆಗಳಲ್ಲಿ ಕನ್ನಡ ಜತೆಗೆ ಆಂಗ್ಲಭಾಷೆಯ ಪದಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಇದೇ ರೀತಿ ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕನ್ನಡ ಭಾಷೆಯಲ್ಲಿ ಪಾಠಗಳನ್ನು ಅರ್ಥೈಸಬೇಕು. ಒಟ್ಟಾರೆ ತರಗತಿಗಳಲ್ಲಿ ದ್ವಿಭಾಷಾ ಶಿಕ್ಷಣ ಜಾರಿಯಾಗಬೇಕು. ಏಕೆಂದರೆ, ಕನ್ನಡ ಕಲಿತರೆ, ತಾಂತ್ರಿಕ ಕೋರ್ಸ್​ಗಳಲ್ಲಿ ವ್ಯಾಸಂಗ ಮಾಡುವುದು ಕಷ್ಟ ಎಂಬ ಮನೋಭಾವನೆ ಎಲ್ಲ ಪಾಲಕರಲ್ಲೂ ಇದೆ ಎಂದ ಅವರು, ಕನ್ನಡ ಮತ್ತು ಆಂಗ್ಲಭಾಷೆ ಯಾವುದರಲ್ಲೇ ಪರೀಕ್ಷೆ ಬರೆದರೂ, ಅಂಕಗಳನ್ನು ಸರಿ ಸಮನಾಗಿ ನೀಡಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ನೀಗಿಸಬೇಕು. ಸರ್ಕಾರ ಪರೋಕ್ಷವಾಗಿ ಆಂಗ್ಲಭಾಷಾ ಶಾಲೆಗಳ ಬೆಳವಣಿಗೆಗೆ ನೀಡುವ ಪ್ರೋತ್ಸಾಹ ನಿಲ್ಲಿಸಬೇಕು. ಕನ್ನಡಿಗರಿಗೆ ಉದ್ಯೋಗ ಭದ್ರತೆ ನೀಡಬೇಕು.
|ವೀರಭದ್ರ ಚೆನ್ನಮಲ್ಲ ಸ್ವಾಮೀಜಿನಿಡುಮಾಮಿಡಿ ಸಂಸ್ಥಾನ
ಎಲ್ಲ ಸಾಹಿತಿಗಳು, ಸರ್ಕಾರದ ಅಧಿಕಾರಿಗಳು, ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುವ ಪ್ರಯತ್ನ ನಡೆಯಬೇಕು.
|ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗುರುತಾಂತೇಶ್ವರ ಮಹಾಸಂಸ್ಥಾನ, ಬೆಳಗಾವಿ
ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ಮೊದಲು ನೀಗಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಆಯೋಜಿಸಬೇಕು.
|ನಾಡೋಜ ಡಾ.ಮಹೇಶ ಜೋಶಿಅಧ್ಯಕ್ಷ, ಕಸಾಪ
ಸ್ವಾಮೀಜಿಯಾಗಲಿದ್ದಾರೆ ಮಾಜಿ ಸಚಿವ ಪುಟ್ಟಸ್ವಾಮಿ! ಗಾಣಿಗ ಮಠದ ಪೀಠಾಧಿಪತಿ ಆಗಿ ಸದ್ಯದಲ್ಲೇ ಪಟ್ಟಾಭಿಷೇಕ!

ಹಿಂದು ರುದ್ರಭೂಮಿಯಲ್ಲಿನ ಸಮಾಧಿಗಳನ್ನು ವಿರೂಪಗೊಳಿಸಿದ ಎಸ್​ಡಿಪಿಐ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + sixteen =
Remember me
