ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಂ.ವಿ.ರಾಜಶೇಖರನ್​ ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡಿದ್ದು ಕಳೆದ ಕೆಲವು ದಿನಗಳಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬೆಳಗ್ಗೆ 11 ಗಂಟೆಗೆ ಬಸವನಗುಡಿಯಲ್ಲಿರುವ ಅವರ ನಿವಾಸಕ್ಕೆ ಪಾರ್ಥಿವಶರೀರವನ್ನು ತರಲಾಗುವುದು. ನಂತರ ವಿಧಿವತ್ತಾಗಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಆಪ್ತರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ್ದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಯೋಜನಾ ಖಾತೆಯ ರಾಜ್ಯಸಚಿವರಾಗಿಯೂ ಅವರು ಕೆಲಸ ಮಾಡಿದ್ದರು. ಆಗ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಅದಕ್ಕೂ ಮೊದಲು ರಾಜ್ಯದಲ್ಲಿ ವಿಧಾನಪರಿಷತ್ ಸದಸ್ಯರೂ ಆಗಿದ್ದರು.
ಬೆಂಗಳೂರಿನ ಮರಳವಾಡಿ ಅವರ ಹುಟ್ಟೂರು. 1928ರ ಸೆಪ್ಟೆಂಬರ್ 12ರಂದು ಜನಿಸಿದರು. ಪತ್ನಿ ಗಿರಿಜಾ ರಾಜಶೇಖರನ್​. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.
ಬಿಎ ಪದವಿ ವ್ಯಾಸಂಗ ಮಾಡಿದ ಅವರು, ಕ್ವಿಟ್​ ಇಂಡಿಯಾ ಚಳವಳಿಯಲ್ಲೂ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಸ್ಟೂಡೆಂಟ್ ಕಾಂಗ್ರೆಸ್​ ನ ಸಕ್ರಿಯ ಸದಸ್ಯರಾಗಿದ್ದರು. 1945-47ರ ತನಕ ಕನಕಪುರ ತಾಲೂಕು ಸ್ಟೂಡೆಂಟ್ ಕಾಂಗ್ರೆಸ್​ನ ಕಾರ್ಯದರ್ಶಿಯಾಗಿದ್ದು ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಮೈಸೂರು ರಾಜ್ಯ ಭಾರತಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಕನಕಪುರ ತಾಲೂಕಿನಲ್ಲಿ ಮೈಸೂರು ಚಲೋ ಜಾಥಾವನ್ನು ಹಮ್ಮಿಕೊಂಡು ದೇಶದ ಗಮನಸೆಳೆದಿದ್ದರು. 1955-56ರಲ್ಲಿ ದೆಹಲಿ ಪ್ರದೇಶ ಸ್ಟೂಡೆಂಟ್ ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದರು. 1958-60ರ ಅವಧಿಯಲ್ಲಿ ಕನಕಪುರ ತಾಲೂಕು ಕಾಂಗ್ರೆಸ್ ಕಮಿಟಿಯ ಕಾರ್ಯಕಾರಿ ಸದಸ್ಯ, ಬೆಂಗಳೂರು ಗ್ರಾಮೀಣ ಜಿಲ್ಲಾ ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿ ಸದಸ್ಯ, ಯೂತ್ ಕಾಂಗ್ರೆಸ್​ನ ಜಿಲ್ಲಾ ಅಧ್ಯಕ್ಷ, ಮೈಸೂರು ಪ್ರದೇಶ ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದರು.
ಕರ್ನಾಟಕ ಸರ್ಕಾರದಲ್ಲಿ ಪ್ರತ್ಯೇಕ ಯುವಜನ ವ್ಯವಹಾರ ಖಾತೆ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವಹಿಸಿದವರು ರಾಜಶೇಖರನ್​. ಇದು ಇಡೀ ದೇಶಕ್ಕೆ ಮಾದರಿಯಾಗಿ ಬಿಡ್ತು. ಕಾಂಗ್ರೆಸ್​ ಇಬ್ಭಾಗವಾದ ವೇಳೆ ಕಾಂಗ್ರೆಸ್​ (ಒ) ಸೇರಿದ ಅವರು, 1984ರ ವೇಳೆಗೆ ಮತ್ತೆ ಕಾಂಗ್ರೆಸ್ ಐ ಪಕ್ಷಕ್ಕೆ ಸೇರಿದ್ದರು. ನಂತರ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು.
ಲೋಕಸಭೆಗೆ 1967ರಲ್ಲಿ ಕನಕಪುರದ ಪ್ರತಿನಿಧಿಯಾಗಿ ಹೋದವರು ರಾಜಶೇಖರನ್​. ಸಂಸದರಾಗಿ ಹಲವು ಹೊಣೆಗಾರಿಕೆಗಳನ್ನಿ ನಿರ್ವಹಿಸಿದ್ದ ಅವರು, ಕೃಷಿ, ಕೃಷಿಕರ ಪರ ಒಲವು ಹೊಂದಿದವರಾಗಿದ್ದರು. ಸಾಮಾಜಿಕವಾಗಿಯೂ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿದ್ದ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಮುಖ್ಯಮಂತ್ರಿ ಸಂತಾಪ: ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಂ. ವಿ. ರಾಜಶೇಖರನ್ ಅವರು ಸರಳತೆ, ಸಜ್ಜನಿಕೆಯ ಪ್ರಬುದ್ಧ ರಾಜಕಾರಣಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಅಳಿಯನಾದ ಅವರು, ಗ್ರಾಮೀಣ ಆರ್ಥಿಕತೆಯ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಗ್ರಾಮೀಣ ಅಭಿವೃದ್ಧಿ ಕುರಿತು ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು.ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡಿದ್ದರುಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಯೋಜನೆ ಮತ್ತು ಅಂಕಿ ಅಂಶ ಖಾತೆಯ ರಾಜ್ಯ ಸಚಿವರಾಗಿ ಹೊಣೆಗಾರಿಕೆ ನಿಭಾಯಿಸಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ.
ಮೌಲ್ಯಾಧಾರಿತ ರಾಜಕಾರಣದಿಂದಾಗಿಯೆ ಗುರುತಿಸಿಕೊಂಡಿದ್ದರು. ಅವರ ನಿಧನ ಅತ್ಯಂತ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಪುತ್ರಿಗೆ ಫೋನ್ ಕೊಡಿಸಿ ಪೇಚಿಗೆ ಸಿಲುಕಿದ ಪಾಲಕರು- ಫೇಸ್​ಬುಕ್​ನಲ್ಲಿ ಖಾತೆ ತೆರೆದಿದ್ದ ಬಾಲಕಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
