ಅಯೋಧ್ಯೆ ಭಾರತದ ಹೃದಯವಾದರೆ ರಾಮ ಆತ್ಮ; ಇದೀಗ ರಾಮಂದಿರದ ಪ್ರಾಣಪ್ರತಿಷ್ಠಾಪನೆಯ ರೂಪದಲ್ಲಿ ನಡೆಯುತ್ತಿರುವುದು ಭಾರತದ ಆತ್ಮ-ಹೃದಯಗಳ ಪುನಃಪ್ರತಿಷ್ಠಾಪನೆ. ಹೃದಯಹೀನರಾಗದಿರೋಣ; ಆತ್ಮಶೂನ್ಯರಾಗದಿರೋಣ; ರಾಮನೆಂಬ ಸಿಂಧುವಿನಲ್ಲಿ ಒಂದೊಂದು ಬಿಂದುಗಳಾಗಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ.
ರಾಮನಾರವನು?
ಈ ಪ್ರಶ್ನೆಯನ್ನು ಎರಡು ಬಗೆಯಲ್ಲಿ ಅರ್ಥೈಸಬಹುದು:
1. ರಾಮನೆಂದರೆ ಯಾರು?
2. ರಾಮನು ಯಾರವನು?
ರಾಮನು ಯಾರು ಎಂಬ ಮೊದಲ ಪ್ರಶ್ನೆಗೆ ಪರಂಪರೆಯ ಉತ್ತರ ಹೀಗೆ: ರಾಮನೆಂದರೆ ಧರೆಗಿಳಿದ ಪರತತ್ತ ್ವ. ಈ ವಿಶ್ವವನ್ನು ಸೃಜಿಸಿ, ನಡೆಸಿಕೊಂಡು ಹೋಗುತ್ತಿರುವ ಮಹಾಶಕ್ತಿ. ಜೀವಿಗಳೆಲ್ಲರ ಜನಕ. ಈ ಉತ್ತರವನ್ನು ಸ್ವೀಕರಿಸುವುದಾದರೆ ರಾಮನು ಯಾರವನು ಎಂಬ ಎರಡನೆಯ ಪ್ರಶ್ನೆಯ ಉತ್ತರವೂ ಅಲ್ಲಿಯೇ ಇದೆ. ರಾಮನು ಎಲ್ಲರಿಗೂ ಸೇರಿದವನು. ಅದು-ಇದು, ಅವನು-ಇವನು ಎನ್ನುವ ಭೇದವಿಲ್ಲದೇ ಸಮಸ್ತ ಸೃಷ್ಟಿಗೇ ಸಂದವನು.
ಆದರೆ ನಮ್ಮ ಸಂಸ್ಕೃತಿ ರಾಮನನ್ನು ಕೇವಲ ದೇವರಾಗಿ ನೋಡಿಲ್ಲ; ಕೇವಲ ಮಾನವನಾಗಿಯೂ ನೋಡಿಲ್ಲ. ಆತ ಎರಡೂ ಹೌದು; ಮಾನವನಾಗಿ ಇಳಿದು ಬಂದ ದೇವ; ದೇವರೆತ್ತರಕ್ಕೆ ಏರಿದ ಮಾನವ. ಕರುಣೆಯಿಂದ ಇಳಿದು ಬಂದ ದೇವ; ತ್ಯಾಗದಿಂದ ದೇವರಾದ ಮಾನವ. ಇದೀಗ ಮಾನವತೆಯ ಹಿನ್ನೆಲೆಯಲ್ಲಿ ರಾಮ ಯಾರು? ಯಾರಿಗೆ ಸೇರಿದವನು? ಎಂಬುದನ್ನು ಗಮನಿಸೋಣ.
ಅವನು ಇಕ್ಷ್ವಾಕು ವಂಶದಲ್ಲಿ ಉದಿಸಿಬಂದ ಓರ್ವ ದೊರೆ. ರಾಮಾಯಣದ ಪ್ರಕಾರ ಇಕ್ಷ್ವಾಕುವಂಶದ ವ್ಯಾಪ್ತಿ ಸಮಸ್ತ ಭೂಮಂಡಲ! ಇಕ್ಷ್ವಾಕೂಣಾಂ ಇಯಂ ಭೂಮಿಃ ಸಶೈಲವನಕಾನನಾ | ಮೃಗಪಕ್ಷಿ-ಮನುಷ್ಯಾಣಾಂ ನಿಗ್ರಹ-ಪ್ರಗ್ರಹಾವಪಿ || -ಇದು ರಾಮನ ಮಾತು. ಪರ್ವತಗಳು, ಕಾನನಗಳು, ನದಿಗಳು, ಸರೋವರಗಳು, ಸಮುದ್ರಗಳೇ ಮೊದಲಾದ ಪ್ರಕೃತಿಯ ಸಂರಕ್ಷಣೆ ಮತ್ತು ಮೃಗಗಳ, ಪಕ್ಷಿಗಳ, ಮನುಷ್ಯರ ಯೋಗಕ್ಷೇಮಗಳು ಇಕ್ಷ್ವಾಕುಗಳ ಹೊಣೆ. ಮನುಕುಲದ ಮೂಲಪುರುಷನಾದ ಮನುವಿನಿಂದ ಅವನ ಪುತ್ರನಾದ ಇಕ್ಷ್ವಾಕುವಿಗೆ ಈ ಹೊಣೆ ನೀಡಲ್ಪಟ್ಟಿತು. ಇದು ರಾಮನ ವಂಶದ ವ್ಯಾಪ್ತಿ; ರಾಮನ ವ್ಯಾಪ್ತಿ ಇನ್ನೂ ದೊಡ್ಡದು. ಅದು ಭೂಲೋಕಕ್ಕೆ ಸೀಮಿತವಲ್ಲ; ಸಕಲ ಲೋಕಗಳಿಗೂ ಆತ ಸಲ್ಲುವವನಾಗಿದ್ದ ಎಂದು ರಾಮಾಯಣ ನಿರೂಪಿಸುತ್ತದೆ. ರಾಮನನ್ನು ಭೂಮಿಗೆ ಕರೆತಂದವರು ದೇವಲೋಕದವರಲ್ಲವೇ?
ದೇವತೆಗಳು: ರಾಮ ದೇವಕಾರ್ಯಕ್ಕಾಗಿ ಭೂಲೋಕಕ್ಕೆ ಬಂದವನು. ರಾಮಾಯಣ ಆರಂಭವಾಗುವುದೇ ಅಲ್ಲಿಂದ: ದಶರಥ ನಡೆಸಿದ ಪುತ್ರಕಾಮೇಷ್ಟಿಯಲ್ಲಿ ಭಾಗವಹಿಸಲೆಂದು ಯಜ್ಞಮಂಟಪದಲ್ಲಿ ಸೇರಿದ್ದ ದೇವತೆಗಳು ಗಾಢಚಿಂತೆಯಲ್ಲಿದ್ದರು; ಕಾರಣ ರಾವಣನ ಉಪಟಳ ಮಿತಿ ಮೀರಿತ್ತು. ಅದು ಲಂಕೆಯ ಮಿತಿಯನ್ನು ಮೀರಿ, ಪಾತಾಳಕ್ಕಿಳಿದಿತ್ತು; ಸ್ವರ್ಗಕ್ಕೇರಿತ್ತು; ಮೂರು ಲೋಕಗಳನ್ನೂ ವ್ಯಾಪಿಸಿತ್ತು. ದೇವತೆಗಳೂ ಏನೂ ಮಾಡುವಂತಿರಲಿಲ್ಲ; ಏಕೆಂದರೆ ಮಾನವರ ಹೊರತು ಬೇರಾರಿಂದಲೂ ಮರಣ ಬಾರದಂತೆ ರಾವಣನಿಗೆ ವರವಿತ್ತು; ಮಾನವರೂ ಏನೂ ಮಾಡುವಂತಿರಲಿಲ್ಲ; ಏಕೆಂದರೆ ರಾವಣನನ್ನು ಸದೆಬಡಿಯಲು ಅವರ ಸಾಮರ್ಥ್ಯ ಸಾಲುತ್ತಿರಲಿಲ್ಲ. ಹೀಗಾಗಿ ದೇವತೆಗಳು ದಾರಿ ಕಾಣದೇ ಕಂಗೆಟ್ಟಿದ್ದರು.
ಅಷ್ಟರಲ್ಲಿ ಅಲ್ಲಿಗೆ ಮಹಾವಿಷ್ಣುವಿನ ಆಗಮನವಾಯಿತು. ದೇವತೆಗಳೆಲ್ಲ ಮಹಾವಿಷ್ಣುವನ್ನು, ‘ನೀನು ದಶರಥನ ಮಗನಾಗಿ ಮಾನವರೂಪದಲ್ಲಿ ಜನಿಸಿ ರಾವಣನ ಸಂಹಾರ ಮಾಡಬೇಕು’ ಎಂದು ಪ್ರಾರ್ಥಿಸಿದರು. ಪರಿಣಾಮವಾಗಿ ಮಹಾವಿಷ್ಣುವಿನ ತೇಜಸ್ಸಿಗೆ ಮಾನವರೂಪ ಬಂದಿತು. ರಾವಣಸಂಹಾರಕ್ಕೆ ಮಾಧ್ಯಮ ಸಿದ್ಧವಾಯಿತು. ಈ ಹಿನ್ನೆಲೆಯಲ್ಲಿ, ರಾಮ ಯಾರಿಗೆ ಸಂದವನು ಎಂದರೆ ದೇವತೆಗಳಿಗೆ ಸಂದವನು; ಅವರ ಕಾರ್ಯಕ್ಕಾಗಿ ಬಂದವನು. ಅವರ ಕಾರ್ಯವೆಂದರೆ ಅದು ಎಲ್ಲ ಜೀವಗಳ, ಇಡಿಯ ಸೃಷ್ಟಿಯ ಕಾರ್ಯವಾದುದರಿಂದ ರಾಮ ಸಕಲರಿಗೆ, ಸಕಲಕ್ಕೆ ಸಂದವನು.
ಋಷಿಗಳು: ಋಷಿಗಳೆಂದರೆ ದೇವತೆಗಳೇ; ಈ ಲೋಕದಲ್ಲಿ ನಮ್ಮ ನಡುವೆ ಬದುಕುವವರು; ನಮಗಾಗಿಯೇ ಬದುಕು ಸವೆಸುವವರು. ಅವರಿಗಾಗಿಯೂ ರಾಮ ಬಂದ. ಒಳ್ಳೆಯವರಿಗೆ ಒಳ್ಳೆಯದಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ; ಕೆಟ್ಟವರಿಗೆ ವರ ಸಿಕ್ಕಿದರೆ ಅದು ಮತ್ತುಳಿದವರ ಪಾಲಿಗೆ ಶಾಪವಾಗುತ್ತದೆ. ರಾಮ ಬಂದಿದ್ದೇ ಜಗತ್ತಿನ ಸಾತ್ತಿ ್ವರ, ತಾತ್ತಿ ್ವಕರ ಕಷ್ಟವನ್ನು ಕಳೆಯಲು. ರಾಮ ಬರುವ ಮುನ್ನ ಋಷಿಗಳು ದೊಡ್ಡ ಕಷ್ಟದಲ್ಲಿದ್ದರು; ರಾವಣನ, ಅವನ ಅನುಯಾಯಿಗಳ, ಅವನಂತಹವರ ಪೀಡೆಯಲ್ಲಿ ಅವರ ಬದುಕೇ ದುಸ್ತರವಾಗಿತ್ತು. ಹೀಗಿರುವಾಗ ಅವರು ಲೋಕಕಲ್ಯಾಣದ ಕಾರ್ಯಗಳನ್ನು ಮಾಡುವುದಾದರೂ ಹೇಗೆ? ಅದಿಲ್ಲದೇ ಲೋಕಕ್ಕೆ ಕ್ಷೇಮವಾಗುವುದಾದರೂ ಎಲ್ಲಿಂದ? ಋಷಿಗಳನ್ನು ಪೀಡಿಸುತ್ತಿದ್ದ ರಾಕ್ಷಸರು ಸಾಮಾನ್ಯರಾಗಿರಲಿಲ್ಲ; ಆದುದರಿಂದಲೇ ಸಾಮಾನ್ಯರಿಂದ ಋಷಿಗಳ ರಕ್ಷಣೆ ಸಾಧ್ಯವಿರಲಿಲ್ಲ. ಅಸಾಮಾನ್ಯ ವೀರನಾದ ರಾಮ ದಂಡಕಾರಣ್ಯದಲ್ಲಿ ಸಂಚರಿಸುವಾಗ ಋಷಿಗಳೆಲ್ಲ ಸೇರಿ ಆತನ ಶರಣುಹೊಕ್ಕರು. ರಾಮ ಅವರುಗಳಿಗೆ ಅಭಯವಿತ್ತ; ದಂಡಕಾವನದ ದುಷ್ಟರಾಕ್ಷಸರ ಗಡಣದ ಹೆಡೆಮುರಿದ. ಕೃತಕ್ಷೇಮಾಶ್ಚ ದಂಡಕಾಃ -ಯಮನ ಮನೆಯಾಗಿದ್ದ ದಂಡಕಾರಣ್ಯವನ್ನು ಮರಳಿ ಕ್ಷೇಮದ ತಾಣವನ್ನಾಗಿಸಿದ. ರಾಮ ಋಷಿ-ಮುನಿಗಳಿಗೆ ಸಂದವನು, ಅವರಿಗಾಗಿ ಬಂದವನು.
ಸ್ತ್ರೀಯರು: ಕ್ರೂರ ರಕ್ಕಸಿ ತಾಟಕೆ ಬಂದೆರಗಿದ್ದಾಳೆ; ಎಳೆಯ ಬಾಲಕರಾದ ರಾಮ- ಲಕ್ಷ ್ಮರ ಮೇಲೆ ಕಲ್ಲಿನ ಮಳೆಯನ್ನೇ ಸುರಿಸುತ್ತಿದ್ದಾಳೆ. ಆದರೆ ರಾಮ ಅವಳನ್ನು ಕೊಲ್ಲಲು ಮನಸ್ಸು ಮಾಡಲಿಲ್ಲ. ಕಾರಣ- ಆಕೆ ಹೆಣ್ಣು ಎಂಬುದು. ಸ್ತ್ರೀ ಎಂದರೆ ಮೃದುತ್ವ; ಸ್ತ್ರೀಯರೊಡನೆ ಮೃದುವಾಗಿಯೇ ವ್ಯವಹರಿಸಬೇಕು. ಹಾಗಾಗಿ ಈಕೆಯನ್ನು ಕೊಲ್ಲಲಾರೆ ಎನ್ನುವಾಗ ಸ್ತ್ರೀಯರ ಕುರಿತಾದ ಅವನ ಮೃದುಧೋರಣೆ ಪ್ರಕಟವಾಗುತ್ತದೆ. ಮುಂದೆ ಶೂರ್ಪಣಖೆ ಇದಿರಾದಾಗಲೂ ಹೀಗೆಯೇ; ಆಕೆಯಿಂದ ಅದಾಗಲೇ ಅನೇಕ ತೊಂದರೆಗಳಾಗಿವೆ; ಬದುಕಗೊಟ್ಟರೆ ಈಗಾದುದಕ್ಕಿಂತ ದೊಡ್ಡ ತೊಂದರೆಗಳಾಗುವ ಸಂಭವವಿದೆ. ಆದರೂ ರಾಮ ಶೂರ್ಪಣಖಿಯನ್ನು ಕೊಲ್ಲದೇ ಬಿಡುತ್ತಾನೆ. ಏಕೆಂದರೆ ರಾಕ್ಷಸಿಯಾದರೂ ಅವಳೊಂದು ಹೆಣ್ಣು. ಆದರೆ ಆಕೆ ಹೆಣ್ಣಾಗಿ ವರ್ತಿಸಲಿಲ್ಲ; ರಾಕ್ಷಸಿಯಾಗಿಯೇ ನಡೆದುಕೊಂಡಳು; ಸೀತಾರಾಮರ ಮುಂದಿನ ಮಹಾಕ್ಲೇಶಗಳಿಗೆಲ್ಲ ಕಾರಣಳಾದಳು. ಆದರೆ ರಾಮನ ನಿಲುವಿನಲ್ಲಿ ಎಂದೂ ಪರಿವರ್ತನೆಯಾಗಲಿಲ್ಲ.
ರಾವಣನಿಂದ ಹೆಚ್ಚು ಉಪಟಳವಾಗಿದ್ದೇ ಹೆಂಗಳೆಯರಿಗೆ. ರಾವಣಸಂಹಾರದ ಮೂಲಕ ಅವರೆಲ್ಲರ ಬದುಕಿಗೆ ಬಹುದೊಡ್ಡ ಬೆಳಕನ್ನು ಕೊಟ್ಟವನು ರಾಮ. ಇದೆಲ್ಲವನ್ನೂ ಅವಲೋಕಿಸಿದಾಗ ರಾಮ ನೊಂದ ಹೆಂಗಳೆಯರ ಕಣ್ಣೀರೊರೆಸಲು ಬಂದವನು, ಅವರ ಬದುಕಿಗೆ ವರವಾಗಿ ಸಂದವನು ಎನ್ನುವಂತಾಗುತ್ತದೆ.
ವೃದ್ಧರು: ರಾಮನ ವನಗಮನದ ಸಂದರ್ಭ; ಕಾಡಿನವರೆಗೆ ರಥದ ಮೇಲೆ ಕರೆದೊಯ್ದು ಬಿಟ್ಟು ಬರಲು ಸುಮಂತ್ರನಿಗೆ ರಾಜಾಜ್ಞೆಯಾಗಿದೆ; ಸೀತಾರಾಮಲಕ್ಷ್ಮಣರು ರಥವೇರಿ ವೇಗವಾಗಿ ಕಾಡಿನೆಡೆ ಸಾಗುತ್ತಿರುವಾಗ ದೂರದಿಂದ ವೃದ್ಧ ವಿಪ್ರರ ಕ್ಷೀಣಧ್ವನಿ ಕೇಳಿ ಬಂತು. ಹಣ್ಣುತಲೆಯ, ಬಾಗುಬೆನ್ನು, ನಡುಗುವ ಶರೀರದ ಆ ಮುಪ್ಪಿನ ಮುದುಕರು ರಥವೆಳೆಯುವ ಕುದುರೆಗಳನ್ನು ಸಂಬೋಧಿಸಿ, ‘ಕುದುರೆಗಳೇ, ವೇಗವಾಗಿ ಓಡದಿರಿ, ನಿಲ್ಲಿ. ರಾಮನನ್ನು ಅಯೋಧ್ಯಗೆ ಕರೆತರಬೇಕಾದವರು ನೀವು; ದೂರ ಒಯ್ಯದಿರಿ’ ಎಂದರು. ರಥದ ಹಿಂದೆ ಬರುತ್ತಿರುವ ವೃದ್ಧರನ್ನು ಗಮನಿಸಿದ ರಾಮ ಕೂಡಲೇ ರಥವನ್ನು ನಿಲ್ಲಿಸಿ ಕೆಳಗಿಳಿದು, ಕಾಲ್ನಡಿಗೆಯಲ್ಲಿ ಪ್ರಯಾಣವನ್ನು ಮುಂದುವರಿಸಿದ. ಆ ವೃದ್ಧರಿಗೆ ಒಂದಿಷ್ಟೂ ಕಷ್ಟವಾಗಬಾರದು ಎಂಬ ಭಾವ ಅವನಲ್ಲಿ.
ಸೇವಕರು: ರಾಮಾಯಣಯುದ್ಧದ ಒಂದು ಸಂದರ್ಭ. ಹನುಮಂತ ಮತ್ತು ರಾವಣರ ನಡುವೆ ಹಣಾಹಣಿ ನಡೆದಿದೆ. ಹನುಮಂತನ ಮುಷ್ಟಿಪ್ರಹಾರಕ್ಕೆ ತತ್ತರಿಸಿದ ರಾವಣ, ಕುಸಿದು ಕುಳಿತು, ತನ್ನ ಹತ್ತು ಬಾಯಿ, ಇಪ್ಪತ್ತು ಕಣ್ಣುಗಳಿಂದ ರಕ್ತವನ್ನು ಕಕ್ಕಬೇಕಾಯಿತು. ಅದೇ ದಿನ ಮುಂದುವರಿದ ಯುದ್ಧದಲ್ಲಿ ರಾಮ-ರಾವಣರು ಇದಿರಾಗುತ್ತಾರೆ. ರಾವಣ ರಥದ ಮೇಲೆ, ರಾಮ ಹನುಮಂತನ ಹೆಗಲೇರಿ ಕುಳಿತು ಯುದ್ಧ ನಡೆಯಿತು. ಆಗ ರಾವಣ ಹನುಮಂತನ ಮೇಲೆ ಪ್ರತೀಕಾರಕ್ಕೆ ಮುಂದಾದ; ಅನೇಕ ಬಾಣಗಳಿಂದ ಹನುಮಂತನನ್ನು ಗಾಯಗೊಳಿಸಿದ. ಆಗ ರಾಮನಿಗೆ ತಡೆಯಲಾರದ ಕೋಪ ಬಂತು!
ರುದ್ರಾವೇಶದಿಂದ ಯುದ್ಧ ನಡೆಸಿದ ರಾಮ ಕೆಲವೇ ಕ್ಷಣಗಳಲ್ಲಿ ರಾವಣನ ಬಿಲ್ಲು ಮುರಿದು, ಧ್ವಜ ಕತ್ತರಿಸಿ, ಕುದುರೆಗಳು ಮತ್ತು ಸಾರಥಿಯನ್ನು ಸಂಹರಿಸಿ, ಅವನ ರಥವನ್ನು ಎಳ್ಳುಕಾಳಿನಂತೆ ಚೂರುಚೂರು ಮಾಡುತ್ತಾನೆ. ಬಳಿಕ ಹರಿತವಾದ ಬಾಣಗಳಿಂದ ರಾವಣನನ್ನು ಘಾಸಿಗೊಳಿಸುತ್ತಾನೆ. ಕೊನೆಗೆ ಇನ್ನೊಂದು ಬಾಣದಿಂದ ಅವನ ಕಿರೀಟಗಳನ್ನೂ ಕತ್ತರಿಸಿ ಕೆಡವುತ್ತಾನೆ. ಕ್ಷಣಮಾತ್ರದಲ್ಲಿ ರಾವಣ ಜೀವವೊಂದನ್ನುಳಿದು ಮತ್ತೆಲ್ಲವನ್ನೂ ಕಳೆದುಕೊಂಡಿದ್ದ!
ರಾಮನ ಈ ಅದ್ಭುತ ಪರಾಕ್ರಮಕ್ಕೆ ಸ್ಪೂರ್ತಿ ತನ್ನ ಸೇವಕರ ಕುರಿತಾಗಿ ಆತನಿಗಿದ್ದ ಅತೀವ ಪ್ರೀತಿ. ರಾಮಪ್ರಭು ತನ್ನ ಸೇವಕರಿಗಾಗಿ ಬಂದವನು, ಮತ್ತು ಸೇವಕರಿಗೆ ಸಂದವನು.
ಮೃಗ-ಪಕ್ಷಿಗಳು: ಸೀತೆಯನ್ನು ರಾವಣ ಆಕಾಶಮಾರ್ಗದಲ್ಲಿ ಕದ್ದೊಯ್ಯುವಾಗ ಕಾಡಿನ ಜಿಂಕೆಮರಿಗಳು ರೋದಿಸಿದವು; ತಿರುತಿರುಗಿ ಆಕಾಶವನ್ನೇ
ವೀಕ್ಷಿಸುತ್ತಿದ್ದ ಅವಗಳ ಕಣ್ಣುಗಳಲ್ಲಿ ದಳದಳನೆ ನೀರಿಳಿಯಿತು. ಸೀತೆಗಾಗುತ್ತಿದ್ದ ಅನ್ಯಾಯವನ್ನು ಕಂಡು ಸಿಂಹಗಳು, ಹುಲಿಗಳು, ಮತ್ತಿತರ ಮೃಗಗಳು, ಪಕ್ಷಿಗಳು ರೋಷಗೊಂಡವು; ಗಗನಮಾರ್ಗದಲ್ಲಿ ದುರುಳ ರಾವಣ ಸೀತೆಯನ್ನು ಸೆಳೆದೊಯ್ಯುತ್ತಿರಲಾಗಿ ಅವುಗಳು ಭೂಮಾರ್ಗದಲ್ಲಿ ಸುತ್ತಲೂ ನೆಗೆಯುತ್ತ, ಹಾರುತ್ತ ಸೀತೆಯ ನೆರಳನ್ನು ಹಿಂಬಾಲಿಸಿದವು! ಬೆಟ್ಟದಿಂದ ಬೆಟ್ಟಕ್ಕೆ, ನದಿಯಿಂದ ನದಿಗೆ, ಕಣಿವೆಯಿಂದ ಕಣಿವೆಗೆ ಸೀತೆಯನ್ನು ಹುಡುಕಿ ಅಲೆದು ನಿರಾಶನಾದ ರಾಮನಿಗೆ ಸೀತೆಯ ಸುಳಿವನ್ನು ಮೊಟ್ಟಮೊದಲು ಕೊಟ್ಟಿದ್ದು ಇದೇ ಕ್ರೂರಮೃಗಗಳು. ‘ಎಲ್ಲಿ ಸೀತೆ?’ ಎಂದು ಕೇಳುವ ರಾಮನಿಗೆ ಅವುಗಳು ತಮ್ಮ ಮೂಕಭಾಷೆಯಲ್ಲಿ ನಡೆದುದನ್ನು ವಿವರಿಸಿದವು; ದಕ್ಷಿಣ ದಿಕ್ಕಿಗೆ ಓಡಿದವು ಮತ್ತು ಆಗಸದೆಡೆಗೆ ನೋಡಿದವು. ಈ ಸುಳಿವನ್ನು ಆಧರಿಸಿ ಮುಂದುವರಿದ ರಾಮ-ಲಕ್ಷ ್ಮರಿಗೆ ಸೀತಾಪಹರಣದ ಕುರುಹುಗಳು ಮತ್ತು ಜಟಾಯುವಿನ ದರ್ಶನವಾಯಿತು.
ಇವು ಮೃಗಪ್ರೇಮದ ಉದಾಹರಣೆಯಾದರೆ ಪಕ್ಷಿಪ್ರೇಮಕ್ಕೆ ದೃಷ್ಟಾಂತ ಜಟಾಯು. ಆತ ಸೀತೆಗಾಗಿ ಪ್ರಾಣ ಕೊಟ್ಟರೆ ರಾಮ ಅವನಿಗೆ ಮುಕ್ತಿಯನ್ನೇ ಕೊಟ್ಟ. ಕೊನೆಯುಸಿರೆಳೆಯುವಾಗಲೂ ಜಟಾಯುವಿಗೆ ತನ್ನ ಚಿಂತೆಯಿಲ್ಲ; ರಾಮನ ಕುರಿತೇ ಕಾಳಜಿ. ಆದುದರಿಂದಲೇ ದಶರಥನಿಗೂ ಸಿಗದ ಮಹಾಯೋಗವೊಂದು ಜಟಾಯುವಿಗೆ ಲಭಿಸಿತು. ಆತನ ಅಂತ್ಯಕ್ರಿಯೆಯನ್ನು ರಾಮನೇ ವಿಧಿವತ್ತಾಗಿ ನೆರವೇರಿಸಿದ. ಹೀಗೆ ರಾಮನ ವ್ಯಾಪ್ತಿ ಮನುಷ್ಯರಿಗೆ ಸೀಮಿತವಾಗಿರಲಿಲ್ಲ; ಪಶು, ಮೃಗ, ಪಕ್ಷಿಗಳಲ್ಲಿಯೂ ಅದು ವಿಸ್ತರಿಸಿತ್ತು.
ಸರ್ವಜೀವಗಳು: ಇನ್ನು ರಾಮನ ಬದುಕಿನ ಕೊನೆಯ ಘಟ್ಟಕ್ಕೆ ಬಂದರೆ ಅದೊಂದು ಮುಕ್ತಿಯ ಜಾತ್ರೆ! ಮರಳಿ ಬಾರದ ಯಾತ್ರೆಗಾಗಿ ರಾಮ ಸರಯೂನದಿಯೆಡೆ ನಡೆದಾಗ ಅಯೋಧ್ಯೆಗೆ ಅಯೋಧ್ಯೆಯೇ ಅವನನ್ನು ಹಿಂಬಾಲಿಸಿತು. ಉಸಿರಾಡುವ ಒಂದೇ ಒಂದು ಜೀವವೂ ಅಯೋಧ್ಯೆಯಲ್ಲಿ ಉಳಿಯಲಿಲ್ಲ! ದಾರಿಯ ಮಧ್ಯದಲ್ಲಿ ಕುತೂಹಲದಿಂದ ನೋಡಲೆಂದು ಬಂದವರೂ ಮುಕ್ತಿಯ ಜಾತ್ರೆಯಲ್ಲಿ ಸೇರಿಕೊಂಡರು. ತಾನು ಮಹಾನಿರ್ಯಾಣವನ್ನು ಹೊಂದುವಾಗ ಇವರೆಲ್ಲರಿಗೂ ರಾಮ ಮುಕ್ತಿಯನ್ನು ಅನುಗ್ರಹಿಸಿದ.
ಉಪಸಂಹಾರ: ರಾಮನ ಅವತಾರದಿಂದ ಅವತಾರಸಮಾಪ್ತಿಯವರೆಗೆ ಎಲ್ಲಿ ನೋಡಿದರೂ ರಾಮನು ಎಲ್ಲರವನು ಎಂಬುದು ಕಣ್ಣಿಗೆ ಕಟ್ಟುವಂತಿದೆ. ಹೀಗಿರುವಾಗ ಯಾವುದೋ ಒಂದು ಜನಾಂಗಕ್ಕೋ, ವರ್ಗಕ್ಕೋ, ಪಕ್ಷಕ್ಕೋ, ಸಿದ್ಧಾಂತಕ್ಕೋ ಅವನನ್ನು ಸೀಮಿತಗೊಳಿಸುವ ಚಿಂತನೆಯೇ ಸಾಧುವಲ್ಲ. ಹೃದಯ ಹೃದಯಕ್ಕೆ ಸೀಮಿತವಲ್ಲ; ಅದು ಮಾಡುವಕಾರ್ಯದಿಂದ ಇಡಿಯ ಶರೀರವೇ ಲಾಭಾನ್ವಿತ. ಅಯೋಧ್ಯೆ ಭಾರತದ ಹೃದಯವಾದರೆ ರಾಮ ಆತ್ಮ; ಇದೀಗ ರಾಮಂದಿರದ ಪ್ರಾಣಪ್ರತಿಷ್ಠಾಪನೆಯ ರೂಪದಲ್ಲಿ ನಡೆಯುತ್ತಿರುವುದು ಭಾರತದ ಆತ್ಮ-ಹೃದಯಗಳ ಪುನಃಪ್ರತಿಷ್ಠಾಪನೆ. ಹೃದಯಹೀನರಾಗದಿರೋಣ; ಆತ್ಮಶೂನ್ಯರಾಗದಿರೋಣ; ರಾಮನೆಂಬ ಸಿಂಧುವಿನಲ್ಲಿ ಒಂದೊಂದು ಬಿಂದುಗಳಾಗಿ ನಾವೆಲ್ಲರೂ ಸೇರಲು ಸಹಸ್ರಮಾನದ ಸದವಕಾಶ ಒದಗಿಬಂದಿದೆ; ಸದುಪಯೋಗಪಡಿಸಿಕೊಳ್ಳೋಣ.
ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ರೆಡಿ: ಧರೆಗಿಳಿದ ಕೈಲಾಸ, ಏಳು ಸುತ್ತಿನ ಕೋಟೆಯಂತಾದ ರಾಮ ಜನ್ಮಭೂಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
