ಧರ್ಮವು ಹಲವು ಪದರಗಳಿಂದ ಕೂಡಿದ್ದು, ಜೀವನದ ಯಾವುದೇ ಸನ್ನಿವೇಶದಲ್ಲಿ ಒಬ್ಬ ವ್ಯಕ್ತಿ ಕೆಳಮಟ್ಟದ ಧರ್ಮಕ್ಕಿಂತ ಉನ್ನತ ಮಟ್ಟದ ಧರ್ಮವನ್ನು ಆರಿಸಿಕೊಳ್ಳಬೇಕು. ಉದಾಹರಣೆಗೆ, ಒಬ್ಬ ರಾಜನಿಗೆ ರಾಜಧರ್ಮವು ಅವನ ಕುಟುಂಬಧರ್ಮಕ್ಕಿಂತ ಉನ್ನತವಾದದ್ದು. ಕೆಲವೊಮ್ಮೆ, ರಾಜನು ರಾಜಧರ್ಮಪಾಲನೆಗಾಗಿ ಕುಟುಂಬಧರ್ಮವನ್ನು ತ್ಯಜಿಸಬೇಕಾಗುತ್ತದೆ.
ರಾಮನ ಹೆಸರನ್ನು ಕೇಳರಿಯದಿರುವವರು ಯಾರಿದ್ದಾರೆ? ಅದರಲ್ಲೂ ಇತ್ತೀಚೆಗೆ, ದೇಶ-ವಿದೇಶಗಳ ಬೃಹತ್ ಸಂಖ್ಯೆಯ ಜನರ ಶ್ರದ್ಧಾಯುತ ಪ್ರಯತ್ನದಿಂದ ಸಾಧ್ಯವಾದ ಭವ್ಯ ರಾಮಮಂದಿರದ ನಿರ್ಮಾಣ ಹಾಗೂ ಭಾರತದ ಪ್ರಧಾನಮಂತ್ರಿಗಳಿಂದ ನೆರವೇರಿಸಲ್ಪಟ್ಟ ಆ ಮಂದಿರದಲ್ಲಿನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಿಂದಾಗಿ, ಇಂದು ರಾಮನ ಹೆಸರನ್ನು ನೆನೆಯದ ಒಬ್ಬ ಭಾರತೀಯನೂ (ಅನಿವಾಸಿ ಅಥವಾ ಸನಿವಾಸಿ) ಇರಲು ಸಾಧ್ಯವಿಲ್ಲ! ಹೀಗೆ ಎಲ್ಲರೂ ರಾಮನ ಹೆಸರು ಹಾಗೂ ಕಥೆಯನ್ನು ಬಲ್ಲವರೇ. ಆದರೆ ನಿಜವಾಗಿಯೂ ರಾಮನನ್ನು ಬಲ್ಲವರು ಎಷ್ಟು ಜನ? ಎಂಬ ಪ್ರಶ್ನೆಗೆ ಉತ್ತರ ಬಹಳ ಕೆಲವೇ ಮಂದಿಯೆಂದು ಹೇಳಬಹುದು.
ರಾಮನನ್ನು ಅವನ ಭಕ್ತರು ಮರ್ಯಾದಾ ಪುರುಷೋತ್ತಮನೆಂದು ಕರೆಯುತ್ತಾರೆ. ಅಂದರೆ, ಅವನು ಗೌರವನೀಯ ಮಾನವರ ಪೈಕಿ ಸರ್ವಶ್ರೇಷ್ಠನಾದವನು. ಅಂತೆಯೇ, ‘ರಾಮೋ ವಿಗ್ರಹವಾನ್ ಧರ್ಮಃ’, ಎಂದರೆ ‘ಧರ್ಮದ ಸಾಕಾರ ರೂಪವೇ ರಾಮ’ ಎಂದೂ ವರ್ಣಿಸಲಾಗಿದೆ. ಧರ್ಮವೆಂಬ ಪದದ ಅರ್ಥಕ್ಕೆ ಆಳವಾದ ವ್ಯಾಖ್ಯಾನಗಳಿವೆಯಾದರೂ, ಅದನ್ನು ಸರಳವಾಗಿ, ಒಬ್ಬ ವ್ಯಕ್ತಿಯು ಜೀವನದ ಯಾವುದೇ ಸನ್ನಿವೇಶದಲ್ಲಿ ಮಾಡಬೇಕಾದ ಸರಿಯಾದ ಕಾರ್ಯವೆಂದು ಹೇಳಬಹುದು.
ರಾಮಾಯಣ- ರಾಮ+ಆಯಣ (ಪಥ)- ಕಥೆಯು ರಾಮನು ತಾನು ಜೀವಿಸಿ, ನಮಗೆ ತೋರಿದ ಆದರ್ಶಪಥವಾಗಿದೆ. ರಾಮನನ್ನು ನಿಜವಾಗಿ ಅರಿತಿರುವವರು ಅವನು ತೋರಿರುವ ಪಥದಲ್ಲಿ ನಡೆಯಲು ಸಿದ್ಧರಿರಬೇಕು. ರಾಮನ ಚಾರಿತ್ರ್ಯವನ್ನು ಅವನ ದೃಷ್ಟಿಯಿಂದಲೇ, ಎಂದರೆ ಧರ್ಮದ ದೃಷ್ಟಿಯಿಂದಲೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಧರ್ಮ ಎಂಬ ಪದವು ಧ್ರ್ ಎಂಬ ಮೂಲಧಾತುವಿನಿಂದ ಬಂದಿದೆ. ‘ಧಾರಯತಿ ಇತಿ ಧರ್ಮಃ’ ‘ಯಾವುದು ನಮ್ಮನ್ನು ಹೊತ್ತು, ಪೋಷಿಸಿ, ಎತ್ತಿಹಿಡಿಯುವುದೋ, ಅದುವೇ ಧರ್ಮ’.
ಯೋಗಮಾರ್ಗದ ಮಹಾನ್ ಬೋಧಕನಾದ ಶ್ರೀಕೃಷ್ಣನು ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಅರ್ಜುನನು ಅನುಸರಿಸಬೇಕಾದ ಕ್ಷತ್ರಿಯ ಧರ್ಮವನ್ನು ಬೋಧಿಸುತ್ತ, ಧರ್ಮಪಾಲನೆಗಾಗಿ ಒಬ್ಬ ವ್ಯಕ್ತಿ ಪ್ರಾಣತ್ಯಾಗ ಮಾಡಲೂ ಹಿಂಜರಿಯಬಾರದು. ಧರ್ಮಪಾಲನೆಗಾಗಿ ತಾನು ಮಾಡಬೇಕಾದ ಕಾರ್ಯ ಒಂದು ವೇಳೆ ಅಹಿತಕರ ಅಥವಾ ಅಪರಿಪೂರ್ಣವೆಂದು ಕಂಡರೂ, ಅದನ್ನು ಮಾಡಿಯೇ ತೀರಬೇಕು. ಹೀಗೆ ಮಾಡಿದಲ್ಲಿ ಆ ವ್ಯಕ್ತಿಗೆ ಯಾವ ಪಾಪಗಳೂ ಅಂಟುವುದಿಲ್ಲವೆಂದು ಘೊಷಿಸಿದ್ದಾನೆ:
ಶ್ರೇಯಾನ್ ಸ್ವಧಮೋ ವಿಗುಣಃ ಪರಧರ್ವತ್ ಸ್ವನುಷ್ಠಿತಾತ್ |ಸ್ವಧಮೇ ನಿಧನಂ ಶ್ರೇಯಃ ಪರಧಮೋ ಭಯಾವಹಃ ||
(ಭಗವದ್ಗೀತೆ-3.35)
ಸಹಜವಾಗಿ ತನಗೆ ಒದಗಿ ಬಂದ ಧರ್ಮವು ಒಮ್ಮೆ ದೋಷಪೂರ್ಣವೆಂದು ಕಂಡು ಬಂದರೂ, ಅದನ್ನೇ ಮಾಡುವುದು, ಪರಿಪೂರ್ಣವೆಂದು ತೋರುವ ಇನ್ನೊಬ್ಬರ ಧರ್ಮವನ್ನು ಅನುಸರಿಸುವುದಕ್ಕಿಂತಲೂ, ಎಷ್ಟೋ ಮೇಲು. ಸ್ವಧರ್ಮವನ್ನು ಪಾಲಿಸುತ್ತ ಪ್ರಾಣತ್ಯಾಗ ಮಾಡುವುದು ಶ್ರೇಯಸ್ಕರ. ಪರಧರ್ಮವು ಭಯದಿಂದ ಕೂಡಿದೆ. ಒಬ್ಬ ವ್ಯಕ್ತಿ ಜೀವನದಲ್ಲಿ ತನ್ನ ಧರ್ಮವನ್ನು ಏಕೆ ರಕ್ಷಿಸಿಕೊಳ್ಳಬೇಕು? ಈ ಪ್ರಶ್ನೆಗೆ ಮಹಾಭಾರತ ಉತ್ತರ ನೀಡುತ್ತದೆ:
ಧರ್ಮ ಏವ ಹತೋ ಹಂತಿ ಧಮೋ ರಕ್ಷತಿ ರಕ್ಷಿತಃ |ತಸ್ಮಾದ್ ಧಮಂ ನ ತ್ಯಜಾಮಿ ಮಾ ನೋ ಧಮೋ ಹತೋವಧೀತ ||
(ಮಹಾಭಾರತ-3.313.128)
‘ಧರ್ಮವನ್ನು ನಾಶ ಪಡಿಸಿದವನನ್ನು ಧರ್ಮವೇ ನಾಶ ಪಡಿಸುತ್ತದೆ. ಧರ್ಮವನ್ನು ರಕ್ಷಿಸಿದವನನ್ನು ಧರ್ಮವೇ ರಕ್ಷಿಸುತ್ತದೆ. ಈ ಸತ್ಯವನ್ನು ಅರಿತು, ಯಾವ ಸಂದರ್ಭದಲ್ಲಿಯೂ ಧರ್ಮವನ್ನು ತ್ಯಜಿಸಬಾರದು’.
ಆದ್ದರಿಂದ, ಪ್ರತಿಯೊಬ್ಬರೂ ಅವರವರ ಧರ್ಮವನ್ನು ಪಾಲಿಸಿ, ರಕ್ಷಿಸುವುದರಲ್ಲಿಯೇ ಸರ್ವರ ಶ್ರೇಯಸ್ಸಿನ ರಹಸ್ಯವಿದೆ.
ಧರ್ಮವು ಹಲವು ಪದರಗಳಿಂದ ಕೂಡಿದ್ದು, ಜೀವನದ ಯಾವುದೇ ಸನ್ನಿವೇಶದಲ್ಲಿ ಒಬ್ಬ ವ್ಯಕ್ತಿ ಕೆಳಮಟ್ಟದ ಧರ್ಮಕ್ಕಿಂತ ಉನ್ನತ ಮಟ್ಟದ ಧರ್ಮವನ್ನು ಆರಿಸಿಕೊಳ್ಳಬೇಕು. ಉದಾಹರಣೆಗೆ, ಒಬ್ಬ ರಾಜನಿಗೆ ರಾಜಧರ್ಮವು ಅವನ ಕುಟುಂಬಧರ್ಮಕ್ಕಿಂತ ಉನ್ನತವಾದದ್ದು. ಕೆಲವೊಮ್ಮೆ, ರಾಜನು ರಾಜಧರ್ಮಪಾಲನೆಗಾಗಿ ಕುಟುಂಬಧರ್ಮವನ್ನು ತ್ಯಜಿಸಬೇಕಾಗುತ್ತದೆ. ಉನ್ನತ ಧರ್ಮಪಾಲನೆಗಾಗಿ ಕೆಳಮಟ್ಟದ ಧರ್ಮವನ್ನು ತ್ಯಾಗಮಾಡುವುದೇ ಧರ್ಮದ ರಹಸ್ಯವಾಗಿದೆ. ಇದನ್ನು ಮಹಾಭಾರತದ ಉದ್ಯೋಗ ಪರ್ವದಲ್ಲಿ ವಿದುರನು ಧೃತರಾಷ್ಟ್ರನಿಗೆ ನೀಡಿದ ರಾಜನೀತಿಯ ಬೋಧನೆಯಿಂದ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು:
ತ್ಯಜೇತ್ ಕುಲಾರ್ಥೇ ಪುರುಷಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ||
‘ಒಂದು ಕುಟುಂಬದ ಒಳಿತಿಗಾಗಿ ಒಬ್ಬ ವ್ಯಕ್ತಿಯನ್ನು ತ್ಯಾಗ ಮಾಡಬಹುದು. ಒಂದು ಗ್ರಾಮದ ಏಳಿಗೆಗಾಗಿ ಒಂದು ಕುಟುಂಬವನ್ನು ತ್ಯಜಿಸಬಹುದು. ದೇಶಕ್ಕಾಗಿ ಒಂದು ಗ್ರಾಮವನ್ನು ತ್ಯಾಗ ಮಾಡಬಹುದು ಹಾಗೂ ಒಬ್ಬ ವ್ಯಕ್ತಿಯು ಆತ್ಮೋನ್ನತಿಗಾಗಿ ಇಡೀ ಪೃಥ್ವಿಯನ್ನೇ ತ್ಯಜಿಸಬಹುದು’.
ಸರ್ವರ ಶ್ರೇಯಸ್ಸಿಗಾಗಿ ಕೆಲವರು ತಮ್ಮ ಹಿತವನ್ನು ತ್ಯಾಗ ಮಾಡುವುದೇ ಸರಿಯಾದ ಮಾರ್ಗವಾಗಿದೆ. ಇದು ಇಂದಿಗೂ ಅನ್ವಯವಾಗುವ ಸರ್ವಕಾಲಿಕ ಧರ್ಮಸೂತ್ರವಾಗಿದೆ. ಈ ಹಿನ್ನೆಲೆಯಲ್ಲಿ ನಾವೀಗ ‘ರಾಮೋ ವಿಗ್ರಹವಾನ್ ಧರ್ಮಃ- ರಾಮನು ಧರ್ಮದ ಸಾಕಾರ ರೂಪ’, ಎಂಬ ನುಡಿಯನ್ನು ಪರಿಶೀಲಿಸೋಣ. ರಾಮಾಯಣದ ಅರಣ್ಯಕಾಂಡದಲ್ಲಿ ಕಂಡುಬರುವ ಮಾರೀಚ-ರಾವಣರ ಸಂಭಾಷಣೆಯಲ್ಲಿ ರಾಮನ ವ್ಯಕ್ತಿತ್ವದ ಕುರಿತಾಗಿ ಮಾರೀಚನು ಹೀಗೆ ಹೇಳುತ್ತಾನೆ:
ರಾಮೋ ವಿಗ್ರಹವಾನ್ ಧರ್ಮಃ ಸಾಧುಃ ಸತ್ಯ ಪರಾಕ್ರಮಃ |ರಾಜಾ ಸರ್ವಸ್ಯ ಲೋಕಸ್ಯ ದೇವಾನಾಂ ಇವ ವಾಸವಃ ||
(ವಾಲ್ಮೀಕಿ ರಾಮಾಯಣ 3.37.13)
ರಾಮನು ಧರ್ಮದ ಸಾಕಾರ ರೂಪ, ಎಲ್ಲ ಸದ್ಗುಣಗಳ ಆಗರ ಹಾಗೂ ಸತ್ಯವೇ ಅವನ ಪರಾಕ್ರಮದ ಆಧಾರ. ದೇವತೆಗಳಿಗೆ ಇಂದ್ರನಿದ್ದಂತೆ, ಅವನು ಈ ಲೋಕದ ಒಡೆಯ. ಧರ್ಮವೆಂಬ ಮಸೂರದ ಮೂಲಕ ನೋಡಿದಾಗ ಮಾತ್ರ, ಧರ್ಮದ ನಡೆದಾಡುವ ರೂಪದಂತಿದ್ದ ರಾಮನ ವ್ಯಕ್ತಿತ್ವ ಹಾಗೂ ಕಾರ್ಯಗಳನ್ನು ಸರಿಯಾಗಿ ಅರಿತುಕೊಳ್ಳಲು ಸಾಧ್ಯ. ಶ್ರೀರಾಮನ ಚಿಕ್ಕಮ್ಮ ಕೈಕೇಯಿ, ಅವನ ತಂದೆ ದಶರಥ ಮಹಾರಾಜನು ಅವಳಿಗೆ ಎಷ್ಟೋ ವರ್ಷಗಳ ಹಿಂದೆ ನೀಡಿದ್ದ ವರಗಳನ್ನು ದುರುಪಯೋಗ ಪಡಿಸಿಕೊಂಡು, ‘ನನ್ನ ಮಗ ಭರತನಿಗೆ ರಾಜ್ಯದ ಪಟ್ಟವನ್ನು ಕಟ್ಟಿ, ಶ್ರೀರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಬೇಕು’, ಎಂದು ಕೇಳಿಕೊಳ್ಳುತ್ತಾಳೆ. ಇದನ್ನು ತಿಳಿದ ತಕ್ಷಣವೇ ರಾಮನು ತನ್ನ ತಂದೆ ಕೈಕೇಯಿಗೆ ನೀಡಿದ ವಚನವನ್ನು ನಡೆಸಿಕೊಡುವುದೇ ತನ್ನ ಧರ್ಮವೆಂದು ಬಗೆದು, ಪಿತೃವಾಕ್ಯ ಪರಿಪಾಲನೆಗಾಗಿ ನಿಮೋಹಿಯಾಗಿ ಶಾಂತಚಿತ್ತದಿಂದ ವನವಾಸಕ್ಕೆ ಹೊರಟು ಹೋಗುತ್ತಾನೆ.
ನ ಹಿ ಅತಃ ಧರ್ಮಃ ಚರಣಂ ಕಿಂಚಿತ್ ಅಸ್ತಿ ಮಹತ್ತರಂ |ಯಥಾ ಪಿತೃಶುಶ್ರೂಷಾ ತಸ್ಯ ವಾ ವಚನ ಕ್ರಿಯಾ ||
(ವಾಲ್ಮೀಕಿ ರಾಮಾಯಣ 2.19.22)
ಪುತ್ರನಿಗೆ ತಂದೆಯ ಶುಶ್ರೂಷೆ ಅಥವಾ ಆತನ ಆದೇಶವನ್ನು ನೆರವೇರಿಸುವ ಕರ್ತವ್ಯಕ್ಕಿಂತ ಮಿಗಿಲಾದ ಧರ್ಮವು ಯಾವುದೂ ಇಲ್ಲ. ಸ್ವತಃ ಭರತನೇ ಬಂದು ಶ್ರೀರಾಮನನ್ನು ಅಯೋಧ್ಯೆಗೆ ಹಿಂದಿರುಗುವಂತೆ ಕಾಡಿ ಬೇಡಿ ಒತ್ತಾಯಿಸಿದರೂ, ಶ್ರೀರಾಮನು, ಅಯೋಧ್ಯೆಯ ಅರಸನಾಗಿ ವೈಭವಯುತ ಜೀವನವನ್ನು ನಡೆಸುವುದಕ್ಕಿಂತ, ತಂದೆಗೆ ಸುಪುತ್ರನಾಗಿ ಪುತ್ರಧರ್ಮವನ್ನು ಪಾಲಿಸುತ್ತ ಅರಣ್ಯದಲ್ಲಿರುವುದೇ ಶ್ರೇಷ್ಠವೆಂದು ನುಡಿದು ಭರತನ ಬೇಡಿಕೆಯನ್ನು ನಿರಾಕರಿಸುತ್ತಾನೆ. ಆ ಸಂದರ್ಭದಲ್ಲಿ ಮಾತೆ ಕೌಸಲ್ಯೆಯು ತನ್ನ ಮಗನನ್ನು ಹರಸುವ ರೀತಿಯಲ್ಲಿ ಎದ್ದು ಕಾಣುವ ಉದಾತ್ತತೆ, ಸ್ಥೈರ್ಯ ಮತ್ತು ಧರ್ಮನಿಷ್ಠೆಗಳು ಅನುಪಮವಾಗಿವೆ:
ಯಂ ಪಾಲಯಸಿ ಧಮಂ ತ್ವಂ ಧೃತ್ಯಾ ಚ ನಿಯಮೇನ ಚ |ಸವೈ ರಾಘವಶಾರ್ದೂಲ! ಧರ್ಮಸ್ತಾ್ವಮಭಿರಕ್ಷತು ||
(ವಾಲ್ಮೀಕಿ ರಾಮಾಯಣ 1.15.3)
‘ಓ, ರಾಮಾ! ನೀನು ಅತ್ಯಂತ ನಿಷ್ಠೆ ಮತ್ತು ಧೈರ್ಯ ದಿಂದ ಪಾಲಿಸುತ್ತಿರುವ ಧರ್ಮವು ನಿನ್ನನು ರಕ್ಷಿಸಲಿ!’ ರಾಮನಿಗೆ ತನ್ನ ಪತ್ನಿ ಸೀತೆಯನ್ನು ತನ್ನೊಂದಿಗೆ ವನವಾಸಕ್ಕೆ ಕರೆದೊಯ್ದು, ಅವಳನ್ನು ವನವಾಸದ ಕಷ್ಟ- ಕಾರ್ಪಣ್ಯಗಳಿಗೆ ಒಡ್ಡುವ ಇಚ್ಛೆಯಿರಲಿಲ್ಲ. ಇದು ಅವನು ಸೀತೆಗೆ ಹೇಳುವ ಮಾತು:
ಸಾ ತ್ವಂ ವಸೇಹ ಕಲ್ಯಾಣಿ ರಾಜ್ಞಃ ಸಮನುವರ್ತಿನೀ |ಭರತಸ್ಯ ರತಾ ಧಮೇ ಸತ್ಯವ್ರತಪರಾಯಣಾ ||
(ವಾಲ್ಮೀಕಿ ರಾಮಾಯಣ 1.16.38)
‘ಓ ಕಲ್ಯಾಣಿ! ನೀನು ಇಲ್ಲಿ ಅರಮನೆಯಲ್ಲಿಯೇ ವಾಸಿಸುತ್ತ, ಸತ್ಯ-ಧರ್ಮರತಳಾಗಿ ಭರತನಿಗೆ ವಿಧೇಯಳಾಗಿ ಇರು’. ಇದಕ್ಕೆ ಪರಮ ಪತಿವ್ರತೆಯಾದ ಸೀತೆಯ ಉತ್ತರವಾದರೋ ಇಂತಿದೆ:
ಅಹಂ ಗಮಿಷ್ಯಾಮಿ ವನಂ ಸುದುರ್ಗಮಮ್ |ಮೃಗ ಆಯುತಂ ವಾನರ ವಾರಣೈಃ ಯುತಮ್ ||ವನೇ ನಿವತ್ಸಾ್ಯಮಿ ಯಥಾ ಪಿತುರ್ಗೃಹೇ |ತವ ಏವ ಪಾದೌ ಉಪಗೃಹ್ಯ ಸಮ್ಮತಾ ||
‘ನಾನು ನಿನ್ನೊಂದಿಗೆ ಸುದುರ್ಗಮವಾದ, ಕಪಿ ಮತ್ತು ಆನೆಗಳಿಂದ ಕೂಡಿದ ಅರಣ್ಯಕ್ಕೆ ಬರುತ್ತೇನೆ. ನಿನ್ನ ಪಾದಗಳನ್ನು ಆಶ್ರಯಿಸಿ, ತಂದೆಯ ಮನೆಯಲ್ಲಿ ಬಾಳುವಂತೆಯೇ, ಸಂಯಮದೊಂದಿಗೆ ಇರುತ್ತೇನೆ’.
ಉತ್ತಮ ಪತ್ನಿಯಾಗಿ ಪತಿಯನ್ನು ಹಿಂಬಾಲಿಸುವುದೇ ತನ್ನ ಧರ್ಮವೆಂದರಿತ ಸೀತೆ, ರಾಮನು ಎಷ್ಟೇ ಕೇಳಿಕೊಂಡರೂ ಒಪ್ಪದೆ ಅವನನ್ನು ಅನುಸರಿಸಿ ವನವಾಸಕ್ಕೆ ಹೋದಳು. ಹದಿನಾಲ್ಕು ವರ್ಷಗಳ ವನವಾಸದ ಕೊನೆಯ ವರ್ಷದಲ್ಲಿ ಸೀತೆ ಕಾಡಿನಲ್ಲಿ ಹಿಂದೆಂದೂ ಕಾಣದ ಅನುಪಮ ಸೊಬಗಿನೊಂದಿಗೆ ಹೊಳೆಯುತ್ತಿದ್ದ ಒಂದು ಬಂಗಾರದ ಜಿಂಕೆಯನ್ನು ಕಂಡು ಮನಸೋತಳು. ಅದನ್ನು ತನಗೆ ತಂದುಕೊಡುವಂತೆ ರಾಮನಲ್ಲಿ ಬೇಡಿಕೊಂಡಳು. ರಾಮನು ಲಕ್ಷ್ಮಣನನ್ನು ಅಲ್ಲೇ ಇದ್ದು ಸೀತೆಯನ್ನು ರಕ್ಷಿಸುವಂತೆ ಆದೇಶಿಸಿ ಜಿಂಕೆಯನ್ನು ಹಿಂಬಾಲಿಸಿದನು. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ರಾಮನು ಒಬ್ಬ ಪತಿಯಾಗಿ ಬಂಗಾರದ ಜಿಂಕೆಯನ್ನು ಆಶಿಸುವ ಪತ್ನಿಯ ಆಗ್ರಹಪೂರ್ವಕ ಪ್ರಾರ್ಥನೆಯನ್ನು ಈಡೇರಿಸಲೆಂದು ತೆರಳುವಾಗಲೂ, ಅವಳ ಸುರಕ್ಷತೆಯ ಕರ್ತವ್ಯವನ್ನು ಮರೆತಿರಲಿಲ್ಲ.
ಅಣ್ಣನ ಆದೇಶದಂತೆ ಲಕ್ಷ್ಮಣನು ಕುಟೀರದಲ್ಲೇ ಇದ್ದು ಸೀತೆಯನ್ನು ಕಾಯುತ್ತಿರುತ್ತಾನೆ. ಆ ಸಂದರ್ಭದಲ್ಲಿ ಮಾಯಾಜಿಂಕೆಯ ರೂಪದಲ್ಲಿದ್ದ ಮಾರೀಚನು, ರಾಮನ ಸ್ವರವನ್ನು ಅನುಕರಿಸಿ ‘ಹಾ ಸೀತಾ! ಹಾ ಲಕ್ಷ್ಮಣಾ!’ ಎಂದು ಆರ್ತನಾದದಿಂದ ಸಹಾಯಕ್ಕಾಗಿ ಕೂಗಿಕೊಳ್ಳುತ್ತಾನೆ. ಈ ಧ್ವನಿಯನ್ನು ಕೇಳಿದ ಸೀತೆ, ಇದು ರಾಮನದೇ ಧ್ವನಿಯೆಂದು ನಂಬಿ ಲಕ್ಷ್ಮಣನನ್ನು ಅಲ್ಲಿಂದ ರಾಮನ ನೆರವಿಗೆ ಹೋಗುವಂತೆ ಆದೇಶಿಸುತ್ತಾಳೆ. ಆದರೆ, ನಿಜಾಂಶದ ಅರಿವಿದ್ದ ಲಕ್ಷ್ಮಣನು ಅಲ್ಲಿಂದ ಹೋಗಲು ನಿರಾಕರಿಸಿದಾಗ ಸೀತೆ ಅವನ ಉದ್ದೇಶವನ್ನೇ ಅನುಮಾನಿಸುತ್ತಾಳೆ. ಅದನ್ನು ಸಹಿಸಲಾರದ ಲಕ್ಷ್ಮಣನು ಅಲ್ಲಿಂದ ಹೊರಟುಹೋದ ಸಮಯದಲ್ಲಿ ರಾವಣನು ಸೀತೆಯನ್ನು ಅಪಹರಿಸುತ್ತಾನೆ. ಮಾರೀಚನನ್ನು ಕೊಂದು ಕುಟೀರಕ್ಕೆ ಹಿಂದಿರುಗಿದ ರಾಮನು ಅಲ್ಲಿ ನಡೆದ ಅನಾಹುತದಿಂದಾಗಿ ಗರಬಡಿದವನಂತಾಗುತ್ತಾನೆ.
ಲಕ್ಷ್ಮಣನನ್ನು ಕುರಿತು, ‘ಸೀತಾಯಾ ರಹಿತೋ ಅಹಂ ವೈ ನ ಹಿ ಜೀವಾಮಿ ಲಕ್ಷ್ಮಣ- ಓ ಲಕ್ಷ್ಮಣಾ! ಸೀತೆಯಿಲ್ಲದೇ ಹೆಚ್ಚು ಕಾಲ ಜೀವಿಸಲು ನನ್ನಿಂದ ಸಾಧ್ಯವಿಲ್ಲ!’ ಎಂದು ಪ್ರಲಾಪಿಸುತ್ತಾನೆ. ಇದು ಕುಟುಂಬಧರ್ಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಆದರ್ಶ ಪತಿ ರಾಮನಲ್ಲಿ ಕಂಡು ಬರುವ ತನ್ನ ಪತ್ನಿಯ ಮೇಲಿನ ಗಾಢಪ್ರೇಮ.
(ಮುಂದುವರಿಯುವುದು)
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
