ಬಗ್ಗುವಳ್ಳಿ(ತರೀಕೆರೆ ತಾ): ದೇಶದ ವಿವಿಧ ಪ್ರಾಂತ್ಯಗಳಲ್ಲಿರುವ ರೆಡ್ಡಿ ಜನಾಂಗಕ್ಕೂ ಶ್ರೀಶೈಲ ಕ್ಷೇತ್ರಕ್ಕೂ ಶತಮಾನಗಳಿಂದ ಬಿಡಿಸಲಾಗದ ಧಾರ್ಮಿಕ ನಂಟಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ. ಸಮೀಪದ ಬಗ್ಗುವಳ್ಳಿಯಲ್ಲಿ ಬಡಗನಾಡು ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಜನಾಂಗ ಸಂಘವು ಭಾನುವಾರ ಬಗ್ಗುವಳ್ಳಿಯಲ್ಲಿ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ದ್ವಾದಶ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ರೆಡ್ಡಿ ಜನಾಂಗವು ಹೇಮರೆಡ್ಡಿ ಮಲ್ಲಮ್ಮನನ್ನು ತಮ್ಮ ಕುಲದೇವಿಯಾಗಿ ಪೂಜಿಸುತ್ತಾರೆ. ವೇಮನನ್ನು ಆರಾಧಿಸುತ್ತಾರೆ. ವೇಮನನ್ನು ತನ್ನ ಸಾತ್ವಿಕಶಕ್ತಿಯಿಂದ ಬದಲಾಯಿಸಿದ ಹೇಮರೆಡ್ಡಿ ಮಲ್ಲಮ್ಮನ ಕರ್ಮಭೂಮಿಯಾಗಿರುವ ಶ್ರೀಶೈಲದಲ್ಲಿ ಮಲ್ಲಮ್ಮನ ಬೃಹತ್ ದೇವಾಲಯವಿದೆ. ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಸಾಕ್ಷಾತ್ಕಾರ ಮಾಡಿಕೊಂಡ ಮಲ್ಲಮ್ಮ ತನ್ನ ಕುಲಬಾಂಧವರಿಗೆ ಎಂದೂ ಬಡತನ ಬಾರದಿರಲಿ ಎಂಬ ವರ ಪಡೆದುಕೊಂಡಿದ್ದಾಳೆ. ಆ ಮಾತಿಗೆ ಪೂರಕವೆಂಬಂತೆ ವೀರಶೈವ ಸಮುದಾಯದ ಒಳಪಂಗಡಗಳಲ್ಲಿ ರೆಡ್ಡಿ ಜನಾಂಗ ಆರ್ಥಿಕವಾಗಿ ಸದೃಢವಾಗಿರುವುದನ್ನು ಕಾಣಬಹುದು.
ಹೇಮರೆಡ್ಡಿ ಮಲ್ಲಮ್ಮನ ಕಾಯಕಪ್ರಜ್ಞೆ, ಗುರುಭಕ್ತಿ, ಲಿಂಗನಿಷ್ಠೆ, ಜಂಗಮ ಪ್ರೇಮವನ್ನು ಜನ ಮಾನಸಕ್ಕೆ ಮುಟ್ಟಿಸುವುದಕ್ಕಾಗಿ ಶ್ರೀಶೈಲ ಪೀಠವು ಬಹು ಹಿಂದಿನಿಂದ ಸಾಕಷ್ಟು ಕೆಲಸ ಮಾಡಿದೆ. ಮಲ್ಲಮನ ಪುರಾಣ ಪ್ರವಚನ, ಶ್ರೀಶೈಲದಲ್ಲಿ ದೇವಾಲಯ ನಿರ್ಮಾಣ, ರಾಷ್ಟ್ರೀಯ ವಿಚಾರ ಸಂಕಿರಣ, ಚೈತನ್ಯ ರಥಯಾತ್ರೆ, ಸರ್ಕಾರದಿಂದ ಜಯಂತಿ, ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆ ಹೀಗೆ ಹಲವು ಕಾರ್ಯಗಳಾಗಿವೆ. ಈ ಎಲ್ಲ ಕಾರಣಗಳಿಂದ ರೆಡ್ಡಿ ಜನಾಂಗಕ್ಕೂ ಶ್ರೀಶೈಲ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಎಡೆಯೂರು ಮಠದ ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜೈನಾಪುರದ ಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ಬಿ.ಎಸ್.ರಾಜು, ವೀರಶೈವ ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷ ಡಾ.ಶೇಖರಗೌಡ ಮಾಲೀಪಾಟೀಲ್, ಯುವ ಘಟಕದ ರಾಜ್ಯಾಧ್ಯಕ್ಷ ಅನಿಲ್ ತೆಗ್ಗಿನಕೇರಿ, ಬಡಗನಾಡು ರೆಡ್ಡಿ ಜನಾಂಗ ಸಂಘದ ಹೇಮಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಧರ್ಮ ಗುರುಗಳು ಜನರಿಗೆ ಹಿತೋಪದೇಶವನ್ನು ಮಾಡುವುದು ಸಹಜ.ಆದರೆ ಆ ಕಾರ್ಯವನ್ನು ವ್ಯಾಪಕವಾಗಿ ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.
ಕಳೆದ8ವರ್ಷದಿಂದ ಬರೆಯುತ್ತಿರುವ ಶ್ರೀಸಿದ್ಧಾಂತ ಶಿಖಾಮಣಿ ಮತ್ತು ವೀರಶೈವಾಗಮದ ವ್ಯಾಖ್ಯಾನವನ್ನು ‘ಅಮೃತ ಬಿಂದು’ ಎಂಬ ಅಂಕಣದ ಮೂಲಕ ಲಕ್ಷಾಂತರ ಓದುಗರಿಗೆ ಮುಟ್ಟಿಸುವ ಸೇತುವಾಗಿ ವಿಜಯವಾಣಿ ಕೆಲಸ ಮಾಡುತ್ತಿದೆ.ಈ ನಿಟ್ಟಿನಲ್ಲಿ ಪತ್ರಿಕೆಯ ಸಂಸ್ಥಾಪಕರಾದ ಡಾ.ವಿಜಯ ಸಂಕೇಶ್ವರ ಅವರ ಕಾರ್ಯವನ್ನು ಸಮಾಜ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 2 =
Remember me
