|ಪ್ರಶಾಂತ ರಿಪ್ಪನ್​ಪೇಟೆ
ಭಾರತದ ಧಾರ್ಮಿಕ ಇತಿಹಾಸದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು, ಅಷ್ಟಾದಶ ಶಕ್ತಿಪೀಠಗಳು ಪ್ರಮುಖವಾದವುಗಳು. ಅಂತಹ ಜ್ಯೋತಿರ್ಲಿಂಗ ಮತ್ತು ಶಕ್ತಿಪೀಠವಿರುವ ಪುಣ್ಯ ಸ್ಥಳ ಶ್ರೀಶೈಲ. ಜೊತೆಗೆ ವೀರಶೈವ ಧರ್ಮದ ಸನಾತನ ಪಂಚಪೀಠವೂ ಈ ಕ್ಷೇತ್ರದಲ್ಲಿರುವುದರಿಂದ ಶ್ರೀಶೈಲವನ್ನು ಧಾರ್ಮಿಕ ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ.ಸಾಮಾನ್ಯವಾಗಿ ದೇವರ ದರ್ಶನದಿಂದ ಪುಣ್ಯ ಲಭಿಸಿದರೆ; ಶ್ರೀಶೈಲದಲ್ಲಿ ಜ್ಯೋತಿರ್ಲಿಂಗ ದರ್ಶನದಷ್ಟೇ ಪುಣ್ಯ ಇಲ್ಲಿನ ಶಿಖರ ದರ್ಶನದಿಂದ ದೊರೆಯುತ್ತದೆ. “ಶ್ರೀಶೈಲೇ ಶಿಖರೇ ದೃಷ್ಟೇ, ಪುನರ್ಜನ್ಮ ನ ವಿದ್ಯೆತೆ” ಎಂಬ ಮಾತನ್ನು ವ್ಯಾಸ ಮಹರ್ಷಿಗಳು ತಿಳಿಸಿದ್ದಾರೆ.
ಶಿಖರ ದರ್ಶನ ಎಂಬುದರ ತಾತ್ವಿಕ ಅರ್ಥ; ಆತ್ಮಜ್ಞಾನ ಪಡೆಯುವುದು. 36 ತತ್ವಗಳಲ್ಲಿ ಪ್ರಮುಖವಾದ ಶಿವತತ್ವದ ಜ್ಞಾನ ಇರುವುದು ಶಿರದಲ್ಲಿ. ಅಂತಹ ಶಿಖರದ ದರ್ಶನದಿಂದ ಆತ್ಮಜ್ಞಾನದ ಅರಿವಾಗಿ ಮುಕ್ತಿ ಪೆಡೆಯಲು ಸಾಧ್ಯ ಎಂಬುದು ಶಿಖರ ದರ್ಶನದ ಹಿಂದಿರುವ ಮರ್ಮ. ಯಾವುದೇ ವ್ಯಕ್ತಿಗೆ ಶಿವಜ್ಞಾನದ ದರ್ಶನವಾಗಬೇಕಾದರೆ ಆತ ಸದ್ಗುರುವಿಗೆ ಶರಣಾಗಬೇಕು. ಅಂತಹ ಶಿವಜ್ಞಾನವನ್ನು ಸರ್ವರಿಗೂ ಉಪದೇಶ ಮಾಡುವ ಪವಿತ್ರ ಪೀಠವೇ ಶ್ರೀಮದ್ಗಿರಿರಾಜ ಸೂರ್ಯ ಸಿಂಹಾಸನ ಮಹಾಪೀಠ. ಆಧ್ಯಾತ್ಮವನ್ನು ಅರಸಿ ಬರುವ ಮುಮುಕ್ಷುಗಳಿಗೆ ಮುಕ್ತಾಗುಚ್ಛ ಸೂತ್ರದ ಮೂಲಕ ಜ್ಞಾನೋಪದೇಶವನ್ನು ನೀಡುವ ದಿವ್ಯ ಪರಂಪರೆಯನ್ನು ಹೊಂದಿದೆ. ಈ ಕಾರಣದಿಂದ ‘ಸೂರ್ಯ ಶಿಖರ’ ದರ್ಶನದ ಮೂಲಕ ಅಸಂಖ್ಯಾತ ಸದ್ಭಕ್ತರು ಪುನೀತರಾಗಿದ್ದಾರೆ.
ಜಗದ್ಗುರು ಪಂಚಾಚಾಚಾರ್ಯರು ಸಂಸ್ಥಾಪಿಸಿದ ಪ್ರತಿ ಪೀಠಗಳಿಗೂ ಒಂದೊಂದು ಪ್ರತ್ಯೇಕ ಸಿಂಹಾಸನಗಳಿವೆ. ಅಂತೆಯೇ ಶ್ರೀಶೈಲ ಪೀಠಕ್ಕೆ ಸೂರ್ಯ ಸಿಂಹಾಸನ ಪೀಠವೆಂದು ಕರೆಯಲಾಗುತ್ತದೆ. ಸೂರ್ಯ ಎಂದರೆ ಜಗತ್ತಿಗೆ ಬೆಳಕನ್ನು ನೀಡುವ ಭಗವಂತ. ಸೂರ್ಯ ಸರ್ವರಿಗೂ ಸಮಾನವಾಗಿ ಬೆಳಕನ್ನು ಹಂಚುತ್ತಾನೆ. ಅಂತೆಯೇ ಎಲ್ಲ ಭೇದಗಳನ್ನು ತೊಡೆದು, ಶರಣಾಗುವ ಶಿಷ್ಯರಿಗೆ ಸಮಾನವಾಗಿ ಧರ್ಮ ಮತ್ತು ಜ್ಞಾನವನ್ನು ಉಪದೇಶ ಮಾಡುವ ಪೀಠವೇ ಶ್ರೀಶೈಲ ಸೂರ್ಯಸಿಂಹಾಸನ ಪೀಠ.
ಇಂತಹ ಧಾರ್ಮಿಕ, ತಾತ್ವಿಕ ಮತ್ತು ಸಾಮಾಜಿಕ ಹಿನ್ನೆಯುಳ್ಳ ಪ್ರಾಚೀನ ಪೀಠದ ಪ್ರಸ್ತುತ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ದ್ವಾದಶ ಪೀಠಾರೋಹಣದ ನಿಮಿತ್ಯವಾಗಿ ಶ್ರೀಶೈಲ ಕ್ಷೇತ್ರದಲ್ಲಿ ಇದೇ ಜ.10 ರಿಂದ 15 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹನ್ನೆರಡು ವರ್ಷ ಎಂಬುದು ಧಾರ್ಮಿಕ ಹಿನ್ನೆಯಲ್ಲಿ ಮಹತ್ವದ ಹಂತ. ಯಾವುದೇ ವ್ಯಕ್ತಿ ತಾನು ವಹಿಸಿಕೊಂಡ ಜವಾಬ್ದಾರಿಯನ್ನು ಯಾವುದೇ ಲೋಪವಾಗದಂತೆ ಹನ್ನೆರಡು ವರ್ಷ ಪೂರ್ಣಗೊಳಿಸಿದರೆ ಅದೊಂದು ತಪಸ್ಸು ಎಂದು ಧಾರ್ಮಿಕ ಪರಿಭಾಷೆಯಲ್ಲಿ ವಿಶ್ಲೇಷಿಸಲಾಗುತ್ತದೆ. ವೈಜ್ಞಾನಿಕವಾಗಿಯೂ ಪ್ರಕೃತಿಯಲ್ಲಿ ಪ್ರತಿ 12 ವರ್ಷಕ್ಕೆ ಮಹತ್ವದ ಬದಲಾವಣೆಯಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. 12 ವರ್ಷದ ಅವಧಿಗೊಂದು ಸಫಲತೆ ಇದೆ ಎಂಬ ಹಿನ್ನೆಲೆಯಲ್ಲಿ ದ್ವಾದಶ ಪೀಠಾರೋಹಣಕ್ಕೆ ಹಚ್ಚಿನ ಮಹತ್ವವಿದೆ.
ಯೋಗಾ ಯೋಗವೆಂಬಂತೆ ಶ್ರೀಶೈಲ ಜಗದ್ಗುರುಗಳು ಶ್ರೀಪೀಠವನ್ನೇರಿ 12 ಸಂವತ್ಸರಗಳು ತುಂಬಿರುವ ಪರ್ವಕಾಲದಲ್ಲೇ, ಜಗದ್ಗುರುಗಳು ಜನಿಸಿ 50 ಸಂವತ್ಸರಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಭಕ್ತರು ಸಂಯುಕ್ತವಾಗಿ ಹಮ್ಮಿಕೊಂಡಿದ್ದಾರೆ. ಈಗಾಗಲೇ ಯಡೂರ ಕ್ಷೇತ್ರದಿಂದ ಶ್ರೀಶೈಲದವರೆಗೆ 33 ದಿನಗಳ ಯಶಸ್ವಿ ಪಾದಯಾತ್ರೆ ನಡೆಸಿದ ಜಗದ್ಗುರುಗಳು, 42 ದಿನಗಳ ಧಾರ್ಮಿಕ ಅನುಷ್ಠಾನವನ್ನು ಕೈಗೊಂಡಿದ್ದಾರೆ. ಅಂತಿಮವಾಗಿ ಜ.10 ರಿಂದ 5 ದಿನಗಳ ಸಮಾರೋಪ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀಶೈಲದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನವನ್ನು ಜ.14ರಂದು ಹಮ್ಮಿಕೊಳ್ಳಲಾಗಿದೆ. ಶತಮಾನದ ಇತಿಹಾಸ ಹೊಂದಿರುವ ವೀರಶೈವ ಮಹಾಸಭೆಯು ಅಖಿಲ ಭಾರತ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ಪ್ರಾತಿನಿಧಿಕ ಸಂಸ್ಥೆ. ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳ ಸತ್ಸಂಕಲ್ಪದಿಂದ ಅಸ್ತಿತ್ವಕ್ಕೆ ಬಂದ ವೀರಶೈವ ಮಹಾಸಭೆಯ ಕೊನೆಯ ಅಧಿವೇಶನವು ಸುತ್ತೂರು ವೀರಸಿಂಹಾಸನ ಮಠದಲ್ಲಿ ನಡೆದಿತ್ತು. 12 ವರ್ಷಗಳ ನಂತರ ಇದೀಗ ಶ್ರೀಶೈಲ ಕ್ಷೇತ್ರದಲ್ಲಿ ಅಧಿವೇಶವನ್ನು ಆಯೋಜಿಸಲಾಗಿದೆ.
ಜ.11 ರಂದು ಕಾರ್ಯಕ್ರಮದ ಉದ್ಘಾಟನೆಯ ಜೊತೆಗೆ ರಾಷ್ಟ್ರೀಯ ವೇದಾಂತ ಸಮ್ಮೇಳನ ನಡೆಯಲಿದೆ. ಜ.12ರಂದು ತೆಲುಗು, ಕನ್ನಡ, ಮರಾಠಿ ಭಾಷಾ ಬಾಂಧವ್ಯ ಹಾಗೂ ರಾಷ್ಟ್ರೀಯ ವಚನ ಸಮ್ಮೇಳನ, ಜ.13ರಂದು ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಕಾಶೀ ಜಗದ್ಗುರುಗಳು ರಚಿಸಿರುವ “ಜಗದ್ಗುರು ಪಂಚಾಚಾರ್ಯ ಪಂಚಸೂತ್ರಾಣಿ” ಎಂಬ ಸಂಸ್ಕೃತ ಗ್ರಂಥದ ಲೋಕಾರ್ಪಣೆಯಾಗಲಿದೆ. ಜೊತೆಗೆ ಶ್ರೀಶೈಲ ಜಗದ್ಗುರುಗಳ ಪಿಎಚ್​ಡಿ ಮಹಾಪ್ರಬಂಧವಾಗಿರುವ “ಭಗವದ್ಗೀತೆ ಮತ್ತು ಶ್ರೀಸಿದ್ಧಾಂತ ಶಿಖಾಮಣಿ ತೌಲನಿಕ ಅಧ್ಯಯನ” ಇಂಗ್ಲೀಷ್ ಅನುವಾದ ಕೃತಿ ಸೇರಿದಂತೆ ವಿವಿಧ ಗ್ರಂಥಗಳು ಲೋಕಾರ್ಪಣೆಯಾಗಲಿವೆ.
ಜ.15ರಂದು ಶ್ರೀಶೈಲ ಜಗದ್ಗುರುಗಳವರ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಂಚಪೀಠದ ಸಮಾನ ಪೀಠಾಚಾರ್ಯರು ವಿವಿಧ ಮಠಾಧೀಶರು, ರಾಜಕೀಯ ಗಣ್ಯರು, ವಿವಿಧ ಕ್ಷೇತ್ರದ ಪ್ರಮುಖರು, ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಲಿಂಗೈಕ್ಯ ಜಗದ್ಗುರು ಉಮಾಪತಿ ಪಂಡಿತಾರಾದ್ಯ ಭಗವತ್ಪಾದರ ಕರಕಮಲ ಸಂಜಾತರಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಶ್ರೀಶೈಲ ಪೀಠದ ಜಗದ್ಗುರುಗಳಾಗಿ 12 ಸಂವತ್ಸರಗಳು ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ ಶ್ರೀಪೀಠವು ಸರ್ವಾಂಗೀಣ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದೆ. ಪೀಠದ ಪರಿಸರದಲ್ಲಿ ಯಾತ್ರಿ ನಿವಾಸ, ನಿತ್ಯ ದಾಸೋಹ, ಪೂಜಾ ಮಂದಿರ ಸೇರಿದಂತೆ ಹಲವು ಜನೋಪಯೋಗಿ ಕಾರ್ಯಗಳು ನಡೆದಿದ್ದು, ಇತ್ತೀಚೆಗೆ ಆಂಧ್ರ ಸರ್ಕಾರ ಮಂಜೂರು ಮಾಡಿರುವ 10 ಎಕರೆ ಭೂಮಿಯಲ್ಲಿ ಬೃಹತ್ ಕಂಬಿ ಮಂಟಪ, ನೂತನ ಯಾತ್ರಿ ನಿವಾಸ, ಸಾರ್ವಜನಿಕ ಆಸ್ಪತ್ರೆ, ಗುರುಕುಲ ಮಾದರಿ ವಸತಿ ಶಾಲೆ ಮತ್ತಿತರ ಯೋಜನೆಗಳಿಗೆ ದ್ವಾದಶ ವರ್ಧಂತಿ ಸಂದರ್ಭದಲ್ಲಿ ಭೂಮಿಪೂಜೆ ನಡೆಯಲಿದೆ.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರು ನೂತನ ರಜತ ಸಿಂಹಾಸನ ಮತ್ತು ರಜತ ಪಾದುಕೆಗಳನ್ನು ಅರ್ಪಿಸಿದ್ದು, ಕರ್ನಾಟಕದಲ್ಲಿ 20 ಎಕರೆ ಭೂಮಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ಭೂಮಿಯಲ್ಲಿ ಗುರುಕುಲ ಸ್ಥಾಪಿಸುವ ಉದ್ದೇಶವನ್ನು ಜಗದ್ಗುರುಗಳು ಹೊಂದಿದ್ದು, ಒಟ್ಟಿನಲ್ಲಿ ಕಳೆದ 12 ವರ್ಷಗಳಲ್ಲಿ ಪೀಠದ ಪರಿಸರ ಮತ್ತು ಪೀಠದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಕೀರ್ತಿ ಪ್ರಸ್ತುತ ಜಗದ್ಗುರುಗಳಿಗೆ ಸಲ್ಲುತ್ತದೆ.
ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
