ಬೆಂಗಳೂರು:ಸಾಕಷ್ಟು ವಿರೋಧಗಳ ನಡುವೆಯೇ ಆರಂಭಗೊಂಡಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕರೊನಾ ಕಂಟಕವಾಗಬಹುದೆಂಬ ಆತಂಕ ಕಾಡುತ್ತಿದ್ದು, ಶನಿವಾರ ನಡೆದ ಗಣಿತ ಪತ್ರಿಕೆ ಪರೀಕ್ಷೆ ವೇಳೆ ಪತ್ತೆಯಾದ ಪಾಸಿಟಿವ್ ಪ್ರಕರಣಗಳು ವಿದ್ಯಾರ್ಥಿಗಳು-ಪಾಲಕರ ನೆಮ್ಮದಿ ಹಾಳು ಮಾಡಿವೆ. ಸೋಂಕಿಗೆ ಒಳಗಾದ ಅಥವಾ ಸೋಂಕಿತರ ಸಂಪರ್ಕಕ್ಕೆ ಬಂದ ಕೆಲ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆ ನಿರಾಕರಿಸಿದ್ದು, ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಆದರೆ ಮತ್ತೆ ಕೆಲವು ಪ್ರಕರಣಗಳಲ್ಲಿ ಪರೀಕ್ಷೆ ಅವಕಾಶ ನೀಡುವ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಆರೋಗ್ಯ ಇಲಾಖೆ ಅಭಿಪ್ರಾಯ ಸಂಗ್ರಹಿಸಿ ಮುಂದಡಿ ಇಡಲು ಶಿಕ್ಷಣ ಇಲಾಖೆ ತೀಮಾನಿಸಿದೆ.
ಕರೊನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶನಿವಾರ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೊಬ್ಬನಿಗೆ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಆದರೆ, ಈ ಮೊದಲು ಆತ ಡೆಂಘೆ ಜ್ವರದ ತಪಾಸಣೆಗೊಳಗಾಗಿದ್ದ. ಅದೇ ಸಂದರ್ಭದಲ್ಲಿ ಕರೊನಾ ಸ್ಯಾಂಪಲ್ ಪಡೆಯಲಾಗಿದ್ದು, ಗಣಿತ ಪರೀಕ್ಷೆ ಬರೆಯುತ್ತಿದ್ದಾಗ, ಸ್ವೀಕೃತವಾದ ವೈದ್ಯಕೀಯ ವರದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೂಡಲೇ ಆ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಗೆ ಸ್ಥಳಾಂತರಿಸಲಾಯಿತು. ಆತನ ಜತೆ ಆ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಇತರ 19 ವಿದ್ಯಾರ್ಥಿಗಳನ್ನು ಸಹ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಆರೋಗ್ಯ ಇಲಾಖೆ ಅಭಿಪ್ರಾಯದ ಮೇರೆಗೆ ಈ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವಲ್ಲಿ ಹಾಗೂ ಆ ಎಲ್ಲ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ವಹಿಸುವಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜಕೀಯ ವ್ಯಕ್ತಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗುವುದನ್ನು ನಿಲ್ಲಿಸಿ. ಇದು ಅನವಶ್ಯಕವಾಗಿ ಗೊಂದಲ, ಅನಾಹುತಗಳಿಗೂ ಕಾರಣವಾಗಬಹುದು.|ಸುರೇಶ್ ಕುಮಾರ್,ಶಿಕ್ಷಣ ಸಚಿವ
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಬಿ.ಡಿ. ದತ್ತಿ ಕಿವುಡ ಮತ್ತು ಮೂಕ ಮಕ್ಕಳ ವಸತಿಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಎರಡು ದಿನದ ಹಿಂದೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಗದಗದ ನಿಗದಿತ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಆತನ ಪ್ರಥಮ ಸಂಪರ್ಕದ ಇಬ್ಬರು ವಿದ್ಯಾರ್ಥಿ ಸಹಪಾಠಿಗಳು ಹಾಗೆಯೇ ದ್ವಿತೀಯ ಸಂಪರ್ಕದ 19 ವಿದ್ಯಾರ್ಥಿಗಳನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಈ ಎಲ್ಲರೂ ಸುರಕ್ಷಿತವಾಗಿದ್ದು, ಪೂರಕ ಪರೀಕ್ಷೆಯಲ್ಲಿ ಅವರ ಸ್ಥಿತಿಗನುಗುಣವಾಗಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
6,067 ವಿದ್ಯಾರ್ಥಿಗಳು ಗೈರು:
ಗಣಿತ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,08,650 ವಿದ್ಯಾರ್ಥಿಗಳ ಪೈಕಿ 7,91,987 ಮಂದಿ ಹಾಜರಾಗಿದ್ದರು. ಕಳೆದ ವರ್ಷದ ಇದೇ ವಿಷಯದ ಪರೀಕ್ಷೆಗೆ ಹೋಲಿಸಿದರೆ ಹೆಚ್ಚುವರಿಯಾಗಿ 6,067 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಂಟೇನ್ಮೆಂಟ್ ಪ್ರದೇಶಗಳಲ್ಲಿಂದ 2,048 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರೊನಾ ಹೊರತಾಗಿ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 292 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸರ್ಕಾರಿ ಮತ್ತು ಖಾಸಗಿ ನಿಲಯಗಳಿಂದ 1442, ನೆರೆ ರಾಜ್ಯಗಳಿಂದ 600 (59 ಮಂದಿ ಗೈರು) 12,539 (105 ವಿದ್ಯಾರ್ಥಿ ಗಳು ಗೈರು)ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಬೆಂಗಳೂರಿನ ಮೂಡಲಪಾಳ್ಯದಲ್ಲಿ ಸೇಂಟ್ ಕ್ಸೇವಿಯರ್ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 289 ವಿದ್ಯಾರ್ಥಿಗಳು ಇಂದು ಸುರಕ್ಷಿತವಾಗಿ ಪರೀಕ್ಷೆ ಬರೆದು ಹಿಂದಿರುಗಿದ್ದಾರೆ. ಈ ಶಾಲೆಯಿಂದ ಸುಮಾರು 80 ಅಡಿ ದೂರದಲ್ಲಿರುವ ತಿರುವಿನ ರಸ್ತೆಯೊಂದರಲ್ಲಿರುವ ನಿವಾಸಿಯೊಬ್ಬರಿಗೆ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆ ಮನೆಯನ್ನು ಮಧ್ಯರಾತ್ರಿ ಸೀಲ್​ಡೌನ್ ಮಾಡಲಾಗಿದೆ. ಗಣಿತ ಪರೀಕ್ಷೆಗೆ ಎಸ್​ಒಪಿ ಆಧಾರದಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ. ಮುಂದಿನ ಪರೀಕ್ಷೆಗಳನ್ನು ಪ್ರತ್ಯೇಕ ಕೇಂದ್ರದಲ್ಲಿ ನಡೆಸಲಾಗುತ್ತಿದ್ದು, ಎಲ್ಲ ಮಕ್ಕಳಿಗೂ ಕೇಂದ್ರಕ್ಕೆ ಹೋಗಿ ಬರಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬಳ ಅಜ್ಜಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಈ ಪರೀಕ್ಷೆಯಿಂದ ವಿನಾಯ್ತಿ ನೀಡಿ ಮುಂದಿನ ಪರೀಕ್ಷೆಗೆ ಅವಕಾಶ ಕಲ್ಪಿಸಲು ನಿರ್ಣಯಿಸಲಾಗಿದೆ. ಈ ವಿದ್ಯಾರ್ಥಿನಿ ಮೊದಲದಿನದ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದಳು. ಅವಳ ಪಕ್ಕ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೂ ಭಯದ ವಾತಾವರಣ ಸೃಷ್ಟಿಯಾಗಿದೆ.
ಇನ್ನು ಜೂ.25 ರಂದು ಮೊದಲ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಜಿಲ್ಲಾಡಳಿತ ನೇಮಿಸಿದ ಹಿಂದುಳಿದ ವರ್ಗಗಳ ಇಲಾಖಾ ವಿಸ್ತರಣಾಧಿಕಾರಿ ವೀಕ್ಷಕರಾಗಿದ್ದರು. ಅವರು ಪಾವಗಡ ತಾಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಗೆ ಪರಿಶೀಲನೆಗೆ ಹೋದಾಗ ಕೇಂದ್ರದ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ಕುಳಿತು ರ್ಚಚಿಸಿ ವಾಪಸಾಗಿದ್ದರು. ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡಿರಲಿಲ್ಲ. ಅವರಿಗೆ ಜೂ. 26ರ ಶುಕ್ರವಾರ ಸಂಜೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ಕೇಂದ್ರದ ಎಲ್ಲ ಸಿಬ್ಬಂದಿಯನ್ನು ಬದಲಾವಣೆ ಮಾಡಲಾಯಿತು. ಮುಖ್ಯ ಅಧೀಕ್ಷಕರ ಕಚೇರಿ ಸೇರಿ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಆರು ಮಂದಿ ಡಿಬಾರ್:ಗದಗದಲ್ಲಿ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಆರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಅವಳಿನಗರದ ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪ್ರತಿ ಕೊಠಡಿಗಳಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸುವಾಗ ನಕಲು ಮಾಡುತ್ತಿದ್ದ ಆರು ವಿದ್ಯಾರ್ಥಿಗಳು ಡಿಬಾರ್ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಪಿಪಿಇ ಕಿಟ್:ಶಿಕಾರಿಪುರ ತಾಲೂಕಿನ ಖವಾಸಪುರದಲ್ಲಿ ಕರೊನಾ ಸೋಂಕಿನಿಂದ ಓರ್ವ ವೃದ್ಧೆ ಕಳೆದ ವಾರ ಮೃತಪಟ್ಟಿದ್ದು, ವೃದ್ಧೆ ಸಂಪರ್ಕಕ್ಕೆ ಬಂದವರಲ್ಲೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಈ ಗ್ರಾಮದ ಕಂಟೇನ್ಮೆಂಟ್ ವಲಯದ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪಿಪಿಇ ಕಿಟ್ ಹಾಕಿಸಿ ಪ್ರತ್ಯೇಕ ಬಸ್​ನಲ್ಲಿ ಕರೆತರಲಾಯಿತು. ಓರ್ವ ವಿದ್ಯಾರ್ಥಿಯನ್ನು ಮಾರವಳ್ಳಿ ಕೇಂದ್ರ ಹಾಗೂ ಮತ್ತೋರ್ವನನ್ನು ಹೊಸೂರು ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು.
ವಿದ್ಯಾರ್ಥಿನಿ ಬಚಾವ್:ಬಳ್ಳಾರಿ ನಗರದ ಗುಗ್ಗರಹಟ್ಟಿಯಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆಹಿಡಿದಿದ್ದಾರೆ. ಇದರಲ್ಲಿ ಒಬ್ಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾಳೆ. ಮುಹೂರ್ತ ಇಲ್ಲವೆಂಬ ಕಾರಣಕ್ಕೆ ಶುಕ್ರವಾರ ದಿಢೀರ್ ಮದುವೆ ಆಯೋಜಿಸಲಾಗಿತ್ತು. ಒಂದು ದಿನದ ಹಿಂದೆಯಷ್ಟೇ ವಿದ್ಯಾರ್ಥಿನಿ ಪರೀಕ್ಷೆ ಬರೆದ್ದಳು.
ದಿಟ್ಟತನಕ್ಕೆ ಮೆಚ್ಚುಗೆ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ತಾಂಡಾಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಯತ್ನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಆ ವಿದ್ಯಾರ್ಥಿನಿ ಆಂಗ್ಲ, ಗಣಿತ ಪರೀಕ್ಷೆಗೆ ಹಾಜರಾಗಿದ್ದಾಳೆ. ಆಕೆಯ ಧೈರ್ಯಕ್ಕೆ ಸಚಿವರು ಅಭಿನಂದಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೇನು?:ರಾಜ್ಯದಲ್ಲಿ ದಿನೇದಿನೆ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲೂ ಸೋಂಕು ಕಂಡು ಬಂದಿರುವುದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೇಲೆ ಕರಿ ಛಾಯೆ ಬೀರಿದೆ. ಪರೀಕ್ಷೆ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯಕ್ಕೆ ಮೂರು ದಿನಗಳು ಮುಗಿದಿದ್ದು, ಬಾಕಿ ಪರೀಕ್ಷೆಗಳನ್ನು ಕರೊನಾ ಪ್ರಕರಣಗಳು ಕಡಿಮೆಯಾದ ನಂತರ ನಡೆಸುವುದು ಸೂಕ್ತ ಎಂದು ಕೆಲವು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಪಿ ಚೀಟಿ ಕೊಡಲು ಹೋದವ ಸಾವುವಿಜಯಪುರದ ಹೂವಿನ ಹಿಪ್ಪರಗಿಯ ವಿಶ್ವಚೇತನ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರ ದಲ್ಲಿ ಪರೀಕ್ಷೆ ವೇಳೆ ಕಾಪಿ ಚೀಟಿ ಎಸೆಯಲು ಹೋದ ಯುವಕ ಸಾಗರ ಚಲವಾದಿ (18) ಮೃತಪಟ್ಟಿ ದ್ದಾನೆ. ಬಸವನಬಾಗೇವಾಡಿ ತಾಲೂಕಿನ ಕನ್ನಾಳ ಗ್ರಾಮದವನಾದ ಈತ ಚೀಟಿ ಎಸೆಯಲು ಹೋದಾಗ ಬೈಕ್ ಮೇಲಿಂದ ಬಿದ್ದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಭರಾಟೆಯಲ್ಲಿ ಬೈಕ್ ಬಿದ್ದಿದ್ದು ಗಾಯಗೊಂಡ ಸಾಗರನನ್ನು ಕೂಡಲೇ ಬಸವನಬಾಗೇವಾಡಿ ತಾಲೂಕಾಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ.

1 ಮೈಸೂರಿನ ಬನುಮಯ್ಯ ಪರೀಕ್ಷಾ ಕೇಂದ್ರಕ್ಕೆ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಒಬ್ಬಳೇ ವಿದ್ಯಾರ್ಥಿನಿಗಾಗಿ ಒಂದು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆ ತಂದು ಪರೀಕ್ಷೆ ಬರೆಸಲಾಗಿದೆ.
2 ಬೆಂಗಳೂರು ವರ್ತರಿನ ಪರೀಕ್ಷಾ ಕೇಂದ್ರದಲ್ಲಿ ಅಪಘಾತದಲ್ಲಿ ಕಾಲು ಮುರಿದುಕೊಂಡಿರುವ ಅರ್ಷದ್ ಪಾಷಾ ಎಂಬ ವಿದ್ಯಾರ್ಥಿ ತನ್ಮಯತೆಯಿಂದ ಪರೀಕ್ಷೆಗೆ ಹಾಜರಾಗಿರುವುದು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದೆ.
3 ರಾಯಚೂರು ಜಿಲ್ಲೆ ಸಿಂಧನೂರಿನ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಹಳೇ ವಿದ್ಯಾರ್ಥಿಗಳಿಗೆೆ ವಿತರಿಸಬೇಕಿದ್ದ ಗಣಿತ ಪ್ರಶ್ನೆ ಪತ್ರಿಕೆಯನ್ನು ರೆಗ್ಯುಲರ್ ಅಭ್ಯರ್ಥಿಗಳಿಗೆ ನೀಡುವ ಮೂಲಕ ಸಿಬ್ಬಂದಿ ಶನಿವಾರ ಎಡವಟ್ಟು ಮಾಡಿದ್ದಾರೆ. 20 ವಿದ್ಯಾರ್ಥಿಗಳು ಹಳೆಯ ಪ್ರಶ್ನೆಪತ್ರಿಕೆ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ. ಕೊನೆಗೂ ಅದನ್ನೇ ಬರೆದಿದ್ದಾರೆ.
4 ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಾಗವಳ್ಳಿ ಸರ್ಕಾರಿ ಪ್ರೌಢಶಾಲೆಯ 30 ವಿದ್ಯಾರ್ಥಿಗಳು ಅದೇ ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಪರೀಕ್ಷೆ ಬರೆಯಬೇಕಿದ್ದು, ಮಳೆಯ ಕಾರಣ ಮಾರ್ಗಮಧ್ಯೆ ಮರವೊಂದು ಉರುಳಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೆಳಗಿನ ಜಾವದಿಂದಲೇ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳಲು ಅನುವು ಮಾಡಿಕೊಟ್ಟರು.
5 ಧಾರವಾಡದ ಕಾಶಿನಹಟ್ಟಿ ಗ್ರಾಮದ ವಿದ್ಯಾರ್ಥಿನಿ ಯೊಬ್ಬಳನ್ನು ಕರೊನಾ ಸೋಂಕು ಪ್ರಸರಣದ ಭಯದಿಂದ ಪಾಲಕರು ಮೊದಲ ದಿನದ ಪರೀಕ್ಷೆಗೆ ಕಳಿಸಿರಲಿಲ್ಲ. ಇದನ್ನು ಅರಿತ ಇಲಾಖೆಯ ಅಧಿಕಾರಿಗಳು ಪಾಲಕರ ಮನವೊಲಿಸಿ ಶನಿವಾರ ಪರೀಕ್ಷೆಗೆ ಅವಳನ್ನು ಹಾಜರಾಗುವಂತೆ ಮಾಡಿದ್ದಾರೆ.
6 ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರಿನ ಕಿರವಾಡಿ ವೀರಭದ್ರಪ್ಪ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿ ಮೂರ್ಛೆ ಬಂದು ಕುಸಿದು ಬಿದ್ದ ಘಟನೆ ಶನಿವಾರ ನಡೆದಿದೆ. ಬಿಪಿ ಹೆಚ್ಚಳದಿಂದ ವಿದ್ಯಾರ್ಥಿ ಅಸ್ವಸ್ಥನಾಗಿದ್ದು, ಆರೋಗ್ಯದಲ್ಲಿ ಚೇತರಿಕೆಯಾಗಿದೆ.
7 ಚಿಕ್ಕೋಡಿಯ ಆರ್​ಡಿ ಕಾಲೇಜ್​ನ ಎಸ್​ಎಸ್​ಎಲ್​ಸಿ ಬಾಹ್ಯ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ಅಣ್ಣನ ಪರೀಕ್ಷೆ ಬರೆಯಲು ಬಂದಿದ್ದ ತಮ್ಮ ಪೊಲೀಸರ ಕೈಗೆ ಸಿಕ್ಕುಬಿದ್ದ. ಪ್ರವೇಶ ದ್ವಾರದಲ್ಲಿ ಪ್ರವೇಶ ಪತ್ರ ಪರಿಶೀಲನೆ ನಡೆಸುತ್ತಿದ್ದ ವೇಳೆ ತಮ್ಮ ಅಣ್ಣನ ಪರೀಕ್ಷೆ ಬರೆಯಲು ಬಂದಿದ್ದ ಸಂಗತಿ ಬಯಲಾಗಿದೆ. ಕೂಡಲೇ ಪೊಲೀಸರು, ಆತನನ್ನು ಆವರಣದಿಂದ ಹೊರ ಕಳುಹಿಸಿದರು.
8 ಇತ್ತೀಚೆಗೆ ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯನ್ನು ಬಳ್ಳಾರಿ ಬಾಲಮಂದಿರದಿಂದ ವಾಹನದಲ್ಲಿ ಕರೆ ತಂದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಶನಿವಾರ ಗಣಿತ ಪರೀಕ್ಷೆ ಬರೆಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
