ಹಾಸನ:ಕೆಎಸ್‌ಆರ್‌ಪಿ 11ನೇ ಬೆಟಾಲಿಯನ್‌ನಲ್ಲಿ 2015ರಲ್ಲಿ ಬೆಳಕಿಗೆ ಬಂದಿದ್ದ 1.25 ಕೋಟಿ ರೂ. ಸಿಬ್ಬಂದಿ ವೇತನ, ಭತ್ಯೆ ಗುಳುಂ ಪ್ರಕರಣ ಸಂಬಂಧ 5 ವರ್ಷಗಳ ನಂತರ ಬೆಟಾಲಿಯನ್ ಕಮಾಂಡೆಂಟ್ ಕೃಷ್ಣಪ್ಪ ಸೇರಿ ಏಳು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಮುಖ ಆರೋಪಿ ಸ್ಥಾನದಲ್ಲಿರುವ ಪೇದೆ ರಾಜೀನಾಮೆ ನೀಡಿದ ನಾಲ್ಕು ವರ್ಷಗಳ ನಂತರದ ಈ ಬೆಳವಣಿಗೆ ಕುತೂಹಲ ಮೂಡಿಸಿದೆ.
ಕೆಎಸ್‌ಆರ್‌ಪಿ 11ನೇ ಬೆಟಾಲಿಯನ್ ಕಮಾಂಡೆಂಟ್ ಕೃಷ್ಣಪ್ಪ, ಸಿಬ್ಬಂದಿ ಯೋಗೇಶ್, ಲತಾಮಣಿ, ಮನು, ಸತ್ಯಪ್ರಕಾಶ್, ಡಿ.ಎನ್.ಚಂದ್ರು, ಮಾದೇಗೌಡ ವಿರುದ್ಧ ಕೆಎಸ್‌ಆರ್‌ಪಿ ಎಡಿಜಿಪಿ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಜೆ.ಆರ್.ಸುಮಾ ಮೇ 21ರಂದು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಿಎಫ್, ಭತ್ಯೆ ಹಣ ಗುಳುಂ:2015ರಲ್ಲಿ ಸಿಬ್ಬಂದಿಯೊಬ್ಬರು ತಮ್ಮ ವೇತನ ಚೀಟಿ ಹಾಗೂ ಪಿಎಫ್ ಖಾತೆಯಲ್ಲಿನ ಹಣದ ಮೊತ್ತವನ್ನು ಪರಿಶೀಲಿಸಿದಾಗ ತಮ್ಮ ಖಾತೆಗೆ ಪಿಎಫ್ ಮೊತ್ತ ಜಮಾ ಆಗದಿರುವುದು ಕಂಡು ಬಂದಿತ್ತು. ಇದನ್ನು ಅವರು ಬೆಟಾಲಿಯನ್‌ನ ಇನ್ಸ್‌ಪೆಕ್ಟರ್‌ಗಳ ಗಮನಕ್ಕೆ ತಂದಿದ್ದರು. ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳು ವೇತನ ಶಾಖೆ ಸಿಬ್ಬಂದಿಗೆ ಸೂಚಿಸಿದ್ದರು.
ಆದರೆ ಈ ಬಗ್ಗೆ ಯಾವುದೇ ಕ್ರಮವಹಿಸಿರಲಿಲ್ಲ. ದಿನಕಳೆದಂತೆ ಅದೇ ದೂರು ಹಿಡಿದು ಇನ್ಸ್‌ಪೆಕ್ಟರ್‌ಗಳ ಬಳಿಗೆ ಬರುವ ಸಿಬ್ಬಂದಿ ಸಂಖ್ಯೆ ಹೆಚ್ಚಾದ್ದರಿಂದ ಅವರು ಈ ವಿಷಯದ ಬಗ್ಗೆ ಕಮಾಂಡೆಂಟ್ ಗಮನ ಸೆಳೆದು ಸಿಬ್ಬಂದಿಯಿಂದ ಮನವಿ ಪತ್ರ ಕೊಡಿಸಿದ್ದರು.
ಆಗ ಲೆಕ್ಕಪತ್ರ ವಿಭಾಗದ ಸಿಬ್ಬಂದಿ, ವೇತನ ಚೀಟಿ ವಿಷಯದಲ್ಲಿ ಎಡಿಜಿಪಿ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಸರಿಪಡಿಸುವಂತೆ ಕೋರಲಾಗಿದೆ ಎಂದು ಉತ್ತರ ನೀಡಿ ಜಾರಿಕೊಂಡಿದ್ದರು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಆಗಾಗ್ಗೆ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಸಿಬ್ಬಂದಿಯ ಪಿಎಫ್ ಖಾತೆಗೆ ಹಣ ಜಮೆ ಆಗಿರಲಿಲ್ಲ.2017ರ ಏಪ್ರಿಲ್ 3ರಂದು ನಡೆದಿದ್ದ ಸಿಬ್ಬಂದಿ ಕುಂದುಕೊರತೆ ಸಭೆಯಲ್ಲಿ ಕೆಲವು ಸಿಬ್ಬಂದಿ ತಮ್ಮ ವೇತನದಿಂದ ಕಡಿತಗೊಂಡಿರುವ ಜಿಪಿಎಫ್ ಹಣ ಖಾತೆಗೆ ಜಮಾ ಆಗಿಲ್ಲ ಎಂದು ದೂರಿದ್ದರು. ಅದನ್ನು ಸರಿಪಡಿಸುವಂತೆ ಸೂಚಿಸಿದಾಗ ವೇತನ ವಿಭಾಗದ ಸಿಬ್ಬಂದಿ ಅದನ್ನು ಸರಿಪಡಿಸಿರುವುದಾಗಿ ತಿಳಿಸಿದ್ದರು.
ಶಾಶ್ವತ ನೋಂದಾಯಿತ ಖಾತೆ ಸಂಖ್ಯೆಯೇ ನಕಲಿ:ನೌಕರರಿಗೆ ಸರ್ಕಾರದಿಂದ ಶಾಶ್ವತ ನೋಂದಾಯಿತ ಖಾತೆ ಸಂಖ್ಯೆ(ಪ್ರಾನ್) ನೀಡಲಾಗಿರುತ್ತದೆ. ಅವರು ಮುಂದೆ ಯಾವುದೇ ಇಲಾಖೆಗೆ ಹೋದರೂ ಅವರ ವೇತನ, ಭತ್ಯೆಗಳೆಲ್ಲ ಅದೇ ಖಾತೆ ಸಂಖ್ಯೆಗೇ ಸಂದಾಯವಾಗುತ್ತದೆ. ಕೆಎಸ್‌ಆರ್‌ಪಿ 11ನೇ ಬೆಟಾಲಿಯನ್‌ನಲ್ಲಿ ಪೇದೆ ಆಗಿದ್ದ ಸಿ.ಎಸ್.ಜಿನೇಶ್ ಎಂಬವರು 2014ರ ಸೆಪ್ಟಂಬರ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಮಾಜ ಕಲ್ಯಾಣ ಇಲಾಖೆಯ ರಾತ್ರಿ ಕಾವಲುಗಾರ ಹುದ್ದೆಗೆ ನೇಮಕವಾಗಿದ್ದರು. ಅವರಿಗೆ ತಮ್ಮ ಹಿಂದಿನ ಹುದ್ದೆಯ ವೇಳೆ ನೀಡಿದ್ದ ಪ್ರಾನ್ ಸಂಖ್ಯೆ ಮೋಹನ್ ಎಂಬ ಹೆಸರಿನಲ್ಲಿ ನೋಂದಣಿಯಾಗಿದ್ದು, ಹೊಸ ಹುದ್ದೆಯ ಸಂಬಳ ಪಡೆಯಲು ಆಗುತ್ತಿಲ್ಲ, ಅದನ್ನು ಸರಿಪಡಿಸಿಕೊಡಿ ಎಂದು ಕಮಾಂಡೆಂಟ್‌ಗೆ ಮನವಿ ಸಲ್ಲಿಸಿದ್ದರು.
ಆ ಬಗ್ಗೆ ಪರಿಶೀಲಿಸಿದಾಗ ಜಿನೇಶ್ ಅವರ ಪ್ರಾನ್ ಸಂಖ್ಯೆಯನ್ನು ಎಡಿಟ್ ಮಾಡಿ ಮೋಹನ್ ಎಂಬ ಹೆಸರಿಗೆ ಬದಲಾಯಿಸಿ ಅವರು ರಾಜೀನಾಮೆ ನೀಡಿದ ನಂತರವೂ 8 ತಿಂಗಳ ಕಾಲ ವೇತನ, ಭತ್ಯೆ ಜಮಾ ಮಾಡಿಸಿ ಅದನ್ನು ಡ್ರಾ ಮಾಡಿಕೊಂಡಿರುವುದು ಬಯಲಾಗಿತ್ತು. ಇನ್ನಷ್ಟು ದಾಖಲೆಗಳನ್ನು ಪರಿಶೀಲಿಸಿದಾಗ ಅದೇ ಮಾದರಿಯಲ್ಲಿ ಹಲವು ರಾಜೀನಾಮೆ ನೀಡಿರುವ ಸಿಬ್ಬಂದಿ ಹೆಸರಿನಲ್ಲಿ ಸಂಬಳ, ಭತ್ಯೆ ನಕಲಿ ಖಾತೆಗಳಿಗೆ ಜಮಾ ಆಗಿರುವುದು ಅರಿವಿಗೆ ಬಂದಿತ್ತು.
ಅಲ್ಲದೆ ಹೊಸದಾಗಿ ಪೇದೆ ಹುದ್ದೆಗೆ ನೇಮಕವಾಗುವವರಿಗೆ ಅನ್ವಯವಾಗದ ವಾರದ ರಜೆ ಭತ್ಯೆ, ತಾಂತ್ರಿಕ ಭತ್ಯೆ, ತರಬೇತಿ ಭತ್ಯೆಗಳನ್ನೆಲ್ಲ ಅವರ ಖಾತೆಗೆ ಸೇರಿಸಿ ಜಮಾ ಮಾಡಲಾಗಿತ್ತು. ಆರ್‌ಪಿಎಫ್, ನಕಲಿ ಪ್ರಾನ್ ಸೃಷ್ಟಿ, ಇಲ್ಲದ ಭತ್ಯೆ ಜಮಾದಂತಹ ಪ್ರಕರಣಗಳಿಂದ 1 ಕೋಟಿ ರೂ.ಗೂ ಹೆಚ್ಚಿನ ಹಗರಣ ನಡೆದಿದೆ ಎಂದು ಅಂದಾಜಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸುವಂತೆ ಕಮಾಂಡೆಂಟ್ ಎಡಿಜಿಪಿ ಕಚೇರಿಗೆ ಪತ್ರ ಬರೆದಿದ್ದರು.
ಅದರಂತೆ ಪೊಲೀಸ್ ಪ್ರಧಾನ ಕಚೇರಿಯ ಲೆಕ್ಕಪರಿಶೋಧಕರು ಮಾರ್ಚ್ 2 ರಿಂದ 21ರವರೆಗೆ ಆಡಿಟಿಂಗ್ ನಡೆಸಿದ್ದು, ವೇತನ ವಿಭಾಗದ ಸಿಬ್ಬಂದಿಯ ಕೈಚಳಕ, ಹಣ ಲಪಟಾಯಿಸಿರುವ ವಿಧಾನ ನೋಡಿ ಹೌಹಾರಿದ್ದಾರೆ. ಕಡೆಗೆ 1.25 ಕೋಟಿ ರೂ. ದುರುಪಯೋಗವಾಗಿರುವುದನ್ನು ಪತ್ತೆಹಚ್ಚಿ ಎಡಿಜಿಪಿಗೆ ವರದಿ ಸಲ್ಲಿಸಿದ್ದರು.
ಸುಳ್ಳು ನೆಪ, ಫಟಾಫಟ್ ರಾಜೀನಾಮೆ:ವೇತನ, ಭತ್ಯೆ ವಿಷಯದಲ್ಲಿ ತಮ್ಮ ಕಚೇರಿಯಲ್ಲಿ ಹಗರಣ ನಡೆದಿರುವ ಬಗ್ಗೆ ಸಕಲ ಮಾಹಿತಿ ಹೊಂದಿದ್ದ ಕಮಾಂಡೆಂಟ್ ಕೃಷ್ಣಪ್ಪ, ಆರೋಪಿ ವೈ.ಎಚ್.ಮನು ದಿಢೀರ್ ನೀಡಿದ ರಾಜೀನಾಮೆಯನ್ನು ಅಷ್ಟೇ ತರಾತುರಿಯಲ್ಲಿ ಅಂಗೀಕರಿಸಿ ಸೇವೆಯಿಂದ ಬಿಡುಗಡೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
2016ರ ಅಕ್ಟೋಬರ್ 28ರಂದು ಸಂಜೆ 5.30ರಲ್ಲಿ ಕಮಾಂಡೆಂಟ್ ನಿವಾಸಕ್ಕೆ ತೆರಳಿದ ಮನು, ತಮಗೆ ಅನುದಾನಿತ ಕಾಲೇಜೊಂದರಲ್ಲಿ ಉಪನ್ಯಾಸಕ ಹುದ್ದೆ ದೊರಕಿದ್ದು ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಆಡಳಿತ ಮಂಡಳಿ ಸೂಚಿಸಿದೆ. ಆದ್ದರಿಂದ ಅದೇ ದಿನ ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದರು.ಆಶ್ಚರ್ಯವೆಂಬಂತೆ ಈ ವಿಷಯವನ್ನು ಬೆಟಾಲಿಯನ್‌ನ ಇನ್ಸ್‌ಪೆಕ್ಟರ್ ಗಮನಕ್ಕೂ ತಾರದೆ ತಾವೇ ಪೇದೆ ರಾಜೀನಾಮೆ ಅಂಗೀಕರಿಸಿ ಸೇವೆಯಿಂದ ಬಿಡುಗಡೆ ಮಾಡಿ ಕಳುಹಿಸಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಮಾಂಡೆಂಟ್ ಕೃಷ್ಣಪ್ಪ, ಮಾನವೀಯತೆ ದೃಷ್ಟಿಯಿಂದ ರಾಜೀನಾಮೆ ನೀಡಿದ ದಿನದಿಂದಲೇ ಅನ್ವಯವಾಗುವಂತೆ ಅದನ್ನು ಅಂಗೀಕರಿಸಲಾಗಿತ್ತು. ಆದರೆ ಅವರು ಸುಳ್ಳು ಮಾಹಿತಿ ನೀಡಿ ರಾಜೀನಾಮೆ ಸಲ್ಲಿಸಿದ್ದು, ಯಾವುದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ತಿಳಿದು ಬಂದಿದೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
