| ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು:ಕರೊನಾ ಸಂಕಷ್ಟ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಕುಂಟುತ್ತಿರುವ ಕಾಲದಲ್ಲೇ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಿಯಲ್ ಎಸ್ಟೇಟ್ ರಂಗ ನೆಲಕಚ್ಚಿರುವುದರಿಂದಾಗಿ, ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ ಪ್ರಮುಖ ಪಾತ್ರವಹಿಸುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಳೆದ 2 ವರ್ಷದಿಂದ ತೆರಿಗೆ ಸಂಗ್ರಹದಲ್ಲಿ ಗುರಿ ಮುಟ್ಟಲು ತಿಣುಕಾಡುತ್ತಿದೆ. ಇಂತಹ ಸಂದಿಗ್ಧದ ನಡುವೆ ಸರ್ಕಾರದ ಉದ್ದೇಶಿತ ಪ್ರಸ್ತಾವನೆ ಚರ್ಚೆಗೆ ಗ್ರಾಸವಾಗಿದೆ.
ಕರೊನಾ ಲಾಕ್​ಡೌನ್​ನಿಂದ ನಿರುದ್ಯೋಗ ಹೆಚ್ಚಿದ್ದು, ಹೊಸ ಉದ್ಯೋಗ ಸೃಷ್ಟಿಯಾಗದೆ ಆರ್ಥಿಕತೆ ಚೇತರಿಕೆ ಕಂಡಿಲ್ಲ. ರೆವಿನ್ಯೂ ಸೈಟ್​ಗಳ ನೋಂದಣಿ ಸ್ಥಗಿತಗೊಂಡ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮ ಪಾತಾಳ ಸೇರಿದೆ. ಅಪಾರ್ಟ್ ಮೆಂಟ್​ಗಳಲ್ಲಿ ಫ್ಲಾ್ಯಟ್​ಗಳು ಮಾರಾಟವಾಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ಮುದ್ರಾಂಕ ಶುಲ್ಕ ಪರಿಷ್ಕರಿಸುವುದಕ್ಕಾಗಿ ಆ.6ರಂದು ಸಭೆ ನಿಗದಿಯಾಗಿತ್ತು. ಆದರೆ, ಹೊಸ ಸಚಿವ ಸಂಪುಟ ರಚನೆಯಾದ ಹಿನ್ನೆಲೆಯಲ್ಲಿ ಸಭೆ ರದ್ದು ಮಾಡಿ ಶೀಘ್ರದಲ್ಲೇ ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ.
ಈಗಾಗಲೇ ಅನೇಕ ಪ್ರದೇಶಗಳಲ್ಲಿ ಮಾರುಕಟ್ಟೆ ದರಕ್ಕಿಂತ ಸರ್ಕಾರದ ದರಪಟ್ಟಿಯೇ ಹೆಚ್ಚಿಗೆ ಇದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಖರೀದಿದಾರರಿಗೆ ಹೊರೆಯಾಗಿದೆ. ಮಧ್ಯಮ ವರ್ಗದ ಜನರು ಸರ್ಕಾರದ ಮಾರ್ಗಸೂಚಿ ಬೆಲೆಗೆ ಜಮೀನು, ಸೈಟು, ಫ್ಲಾ್ಯಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಸಬ್ ರಿಜಿಸ್ಟ್ರಾರ್​ಗಳ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಮಂದಗತಿಯಲ್ಲಿ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸ ತುಂಬಿಸಲು ಸಾಧ್ಯವಾಗದೆ ಅಧಿಕಾರಿಗಳು ಪರದಾಡುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಪು್ಪಹಣವೇ ಹೆಚ್ಚಾಗಿ ಚಲಾವಣೆಗೊಳ್ಳುವುದು. ಆಸ್ತಿ ಮಾಲೀಕನ ಕಡೆಯಿಂದ ಮಾರುಕಟ್ಟೆ ದರ ಅಂದರೆ ಕಡಿಮೆ ಅಥವಾ ಹೆಚ್ಚಿನ ಬೆಲೆಗೆ ಖರೀದಿಸಿ ಸರ್ಕಾರದ ಮಾರ್ಗಸೂಚಿ ದರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುತ್ತಿದ್ದರು. ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಸಹ ಬರುತ್ತಿದೆ. ಆದರೆ, ಸರ್ಕಾರದ ಮಾರ್ಗಸೂಚಿ ದರವೇ ಹೆಚ್ಚಾದರೆ ಕಪು್ಪಹಣ ಚಲಾವಣೆ ಕಷ್ಟ. ಹೊಸ ಐಟಿ ಕಾಯ್ದೆ ಪ್ರಕಾರ ಮಾರ್ಗಸೂಚಿ ದರಕ್ಕಿಂತ (30 ಲಕ್ಷ ರೂ. ಮೇಲ್ಪಟ್ಟ ಆಸ್ತಿ) ಕಡಿಮೆ ಮೌಲ್ಯಕ್ಕೆ ಆಸ್ತಿಯನ್ನು ಖರೀದಿ ಮಾಡುವಂತಿಲ್ಲ. ಅಂತಹ ಕರಾರು ಒಪ್ಪಂದದ ನೋಂದಣಿ ಕಂಡುಬಂದರೆ ಖರೀದಿದಾರ ಮತ್ತು ಮಾರಾಟಗಾರರಿಗೆ ಆದಾಯ ತೆರಿಗೆ ಅಧಿಕಾರಿಗಳು ದಂಡ ವಿಧಿಸಬಹುದು. ಐಟಿ ಕಾಯ್ದೆಯಿಂದ ಪಾರಾಗಬೇಕಾದರೆ ಆದಾಯದ ಮೂಲ ತೋರಿಸಿ ತೆರಿಗೆ ಪಾವತಿಸಿರಬೇಕು ಅಥವಾ ಸಾಲ ಪಡೆದಿರಬೇಕು. ಈ ಎರಡೂ ನಿರ್ವಹಿಸಲು ಎಲ್ಲರಿಗೂ ಸಾಧ್ಯವಾಗುವು ದಿಲ್ಲ. ಕಪು್ಪಹಣ ಹೂಡಿಕೆಗೆ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದು, ರಿಯಾಲ್ಟಿ ಉದ್ಯಮ ಮತ್ತಷ್ಟು ನೆಲಕಚ್ಚಲಿದೆ. ಸಾಮಾನ್ಯ ಜನರಿಗೂ ತೆರಿಗೆ ಹೊರೆ ಬೀಳಲಿದೆ. ಕರೊನಾ 3ನೇ ಅಲೆ ಬರಲಿದೆ ಎಂಬ ಆತಂಕ ಮತ್ತು ಇಂಧನ ಬೆಲೆ ಏರಿಕೆ ನಡುವೆ ಮುದ್ರಾಂಕ ಶುಲ್ಕ ಏರಿಕೆ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಫ್ಲಾ್ಯಟ್ ಮಾರಾಟಕ್ಕಿಲ್ಲ ಉತ್ತೇಜನ
ರಾಜಸ್ವ ಸಂಗ್ರಹ ಹೆಚ್ಚಿಸಲು 2020-21ನೇ ಸಾಲಿನ ಬಜೆಟ್​ನಲ್ಲಿ 35 ಲಕ್ಷ ರೂಪಾಯಿಂದ 45 ಲಕ್ಷ ರೂಪಾಯಿವರೆಗಿನ ಮೌಲ್ಯದ ಫ್ಲಾ್ಯಟ್​ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5 ರಿಂದ 3ಕ್ಕೆ ತಗ್ಗಿಸುವುದಾಗಿ ಘೋಷಿಸಲಾಗಿದೆ. ಆದರೆ ಈವರೆಗೂ ಗೆಜೆಟೆಡ್ ನೋಟಿಫಿಕೇಷನ್ ಹೊರಡಿಸಲಾಗಿಲ್ಲ. ಅನೇಕ ಅಪಾರ್ಟ್​ವೆುಂಟ್​ಗಳಲ್ಲಿ ಫ್ಲಾ್ಯಟ್​ಗಳು ಬಿಕರಿ ಆಗದೆ ಹಾಗೇ ಉಳಿದಿವೆ. ಮಧ್ಯಮ ವರ್ಗದ ರಿಯಲ್ ಎಸ್ಟೇಟ್ ಉದ್ಯಮಿಗಳೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪರಿಷ್ಕರಣೆ ಮುಂದೂಡಿ
2018-19ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಸರಾಸರಿ ಅಂದಾಜು ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿ ಪರಿಷ್ಕರಿಸಲಾಗಿದೆ. ಆನಂತರ 2019-20 ಮತ್ತು 2020-21ರಲ್ಲಿ ಕರೊನಾ ಲಾಕ್​ಡೌನ್ ಪರಿಣಾಮ ಪರಿಷ್ಕರಣೆ ನಿರ್ಧಾರ ಕೈಬಿಡಲಾಗಿತ್ತು. ಆರ್ಥಿಕತೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಂಡಿಲ್ಲ. ಈ ವರ್ಷವೂ ಮುಂದೂಡಿದರೆ ಒಳಿತು ಎಂಬುದು ತಜ್ಞರ ಅಭಿಪ್ರಾಯ.
ಜನಾಕ್ರೋಶ…
ಮಹಾರಾಷ್ಟ್ರದಲ್ಲಿ ನೋಂದಣಿ, ಮುದ್ರಾಂಕ ಶುಲ್ಕವನ್ನು ಶೇ.15 ರಿಂದ 20 ಕಡಿಮೆ ಮಾಡಿ ತೆರಿಗೆ ಹೊರೆ ಇಳಿಸಿದೆ. ಇತ್ತ ರಾಜ್ಯದಲ್ಲಿ ತೆರಿಗೆ ಏರಿಕೆ ಮಾಡಲು ಹೊರಟಿರುವುದು ಅವೈಜ್ಞಾನಿಕ ನಿರ್ಧಾರ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
