ದಾವಣಗೆರೆ:ತಾಂಡಾಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್​ನಲ್ಲಿ 100 ಕೋಟಿ ರೂ. ಮೀಸಲಿಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ಶುಕ್ರವಾರ ಸಂತ ಸೇವಾಲಾಲ್ ಮಹಾರಾಜರ 281 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಲಂಬಾಣಿ ಕಲೆ, ಸಂಸ್ಕೃತಿ, ಭಾಷೆ ಉಳಿಸಿ ಬೆಳೆಸಲು ಲಂಬಾಣಿ ಕಲೆ ಮತ್ತು ಭಾಷಾಭಿವೃದ್ಧಿ ಅಕಾಡೆಮಿ ಸ್ಥಾಪಿಸಲಾಗುವುದು, ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪ್ರಸ್ತಾವನೆ ಹಂತದಲ್ಲಿದೆ ಎಂದು ತಿಳಿಸಿದರು.
ಮುಂದಿನ 2 ವರ್ಷಗಳಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿಯೇ ತೀರುತ್ತೇನೆ, ಅದಕ್ಕೆ ಅಗತ್ಯ ಹಣಕಾಸಿನ ವ್ಯವಸ್ಥೆ ಮಾಡಲಾಗುತ್ತಿದೆ. ಲಂಬಾಣಿ ಸಮುದಾಯ ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆಯಲು ತಾಂಡಾಗಳಲ್ಲೇ ಉದ್ಯೋಗ ಸೃಷ್ಟಿಗೆ ವಿಶೇಷ ಪ್ಯಾಕೇಜ್ ಘೊಷಿಸ ಲಾಗುವುದು ಎಂದು ತಿಳಿಸಿದರು. ಸೂರಗೊಂಡನಕೊಪ್ಪ, ಬೀದರ್ ಜಿಲ್ಲೆಯ ಲಾಲಧರಿ ಮತ್ತು ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಲಾಲಧರಿ ಬಳಿ 34 ಎಕರೆ, ಗದ್ದನಕೇರಿ ಬಳಿ 6 ಎಕರೆ ಭೂಮಿಯನ್ನು ಸರ್ಕಾರ ನಿಗಮಕ್ಕೆ ಮಂಜೂರು ಮಾಡಿದೆ. ಸೂರಗೊಂಡನಕೊಪ್ಪವನ್ನು ರಾಷ್ಟ್ರೀಯ ಪ್ರವಾಸಿ ತಾಣವಾಗಿ ಮಾಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಉದ್ಯಾನವನ, ಕಾರಂಜಿ, ಕುಡಿಯುವ ನೀರು ಇನ್ನಿತರ ಸೌಕರ್ಯಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಬಹದ್ದೂರ್​ಬಂಡಿಯಲ್ಲಿ ಲಂಬಾಣಿ ಉಡುಪುಗಳ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಮುಂದಿನ 3 ವರ್ಷಗಳಲ್ಲಿ ಲಂಬಾಣಿ ಸಮಾಜ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸೂರಗೊಂಡನಕೊಪ್ಪದಲ್ಲಿ ಸಮಗ್ರ ಅಭಿವೃದ್ಧಿ ಮಾಡಬೇಕು. ಈ ಧಾರ್ವಿುಕ ಕ್ಷೇತ್ರಕ್ಕೆ ಬರುವ ಮಾಲಾಧಾರಿಗಳು, ಪ್ರವಾಸಿಗರ ಅನುಕೂಲಕ್ಕೆ 55 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿಗೆ ನೆರವು ನೀಡಬೇಕು. ಈ ಭಾಗದ ಕೆರೆಗಳನ್ನು ತುಂಬಿಸುವ 71ಕೋಟಿ ರೂ.ಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹಣ ಬಿಡುಗಡೆ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್, ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು. ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಕೆ.ಬಿ. ಅಶೋಕ ನಾಯ್ಕ, ದೇವಾನಂದ್ ಫೂಲ್​ಸಿಂಗ್ ಚವ್ಹಾಣ್, ಎಂಎಲ್​ಸಿ ರುದ್ರೇಗೌಡ,
ಮಾಜಿ ಸಚಿವ ರುದ್ರಪ್ಪ ಎಂ. ಲಮಾಣಿ, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಎಂ. ಬಸವರಾಜ ನಾಯ್ಕ, ಬಿಜೆಪಿ ಮುಖಂಡ ಜಿ.ಎಂ. ಅನಿತ್ ಇದ್ದರು.
-ಠಿ;300 ಕೋಟಿಗೆ ಮನವಿ
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ 300 ಕೋಟಿ ರೂ. ನೀಡಬೇಕು. ಸಮುದಾಯಕ್ಕೆ ಎಂಎಲ್​ಸಿ ಹಾಗೂ ಕೆಪಿಎಸ್ಸಿ ಸದಸ್ಯ ಸ್ಥಾನ ನೀಡಬೇಕು ಎಂದು ಪಶು ಸಂಗೋಪನೆ ಮತ್ತು ವಕ್ಪ್ ಸಚಿವ ಪ್ರಭು ಬಿ. ಚವ್ಹಾಣ್ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಆತಂಕ ಸೃಷ್ಟಿಸಿದ ಗುಡ್ಡದ ಬೆಂಕಿ
ಸೂರಗೊಂಡನಕೊಪ್ಪದಲ್ಲಿ ಶುಕ್ರವಾರ ಸಂತ ಸೇವಾಲಾಲ್ ಅವರ ಜಯಂತ್ಯುತ್ಸ ವದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿದ್ದ ಸಂದರ್ಭದಲ್ಲೇ ಮಠದ ಆವರಣ ಪಕ್ಕದ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಹುಟ್ಟಿಸಿತ್ತು. ಮಠದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಮಾಡಿದ್ದ ಸ್ಥಳದ ಹಿಂಭಾಗದ ಗುಡ್ಡದಲ್ಲಿ ಈ ಘಟನೆ ನಡೆದಿದ್ದು, ಒಣ ಹುಲ್ಲು, ಗಿಡಗಳು, ಪೊದೆಗಳಿಗೆ ಬೆಂಕಿ ಹತ್ತಿಕೊಂಡಿತು. ಕೂಡಲೇ 2 ವಾಹನಗಳಲ್ಲಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಜಾಗೋ ಬಂಜಾರ ವಾಹಿನಿಗೆ ಚಾಲನೆ
ತಾಂಡಾ ಅಭಿವೃದ್ಧಿ ನಿಗಮದಿಂದ ರೂಪಿಸಿದ ಜಾಗೋ ಬಂಜಾರವಾಹಿನಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಸರ್ಕಾರದ ಮತ್ತು ನಿಗಮದ ಯೋಜನೆಗಳ ಬಗ್ಗೆ ರಾಜ್ಯದ 3395 ತಾಂಡಾಗಳಲ್ಲಿ ಜಾಗೃತಿ ಮೂಡಿಸುವುದು ಈ ವಾಹಿನಿಯ ಉದ್ದೇಶವಾಗಿದೆ.
ಹೊಸ ರೈಲು ಮಾರ್ಗ: ಶಿವಮೊಗ್ಗ, ಶಿಕಾರಿಪುರ ಮತ್ತು ರಾಣೇಬೆನ್ನೂರು ಸಂರ್ಪಸುವ 1400 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಯೋಜನೆಯ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಈ ಮಾರ್ಗ ಸೂರಗೊಂಡನಕೊಪ್ಪದ ಮೂಲಕ ಹಾದು ಹೋಗುವಂತೆ ಮಾಡಲು ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಇಲ್ಲೊಂದು ರೈಲು ನಿಲ್ದಾಣವನ್ನೂ ನಿರ್ವಿುಸಲಾಗುವುದು. ಈ ವಿಚಾರವಾಗಿ ನಾವು ಮತ್ತು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ದೆಹಲಿ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 700 ಕೋಟಿ ರೂ. ನೀಡಲಿವೆ. ಈ ರೈಲು ಮಾರ್ಗದಿಂದ ದೇಶದ 16 ರಾಜ್ಯಗಳಿಗೆ ಸಂಪರ್ಕ ಸಾಧ್ಯವಾಗಲಿದೆ ಎಂದು ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + ten =
Remember me
