| ಮೃತ್ಯುಂಜಯ ಕಪಗಲ್ ಬೆಂಗಳೂರುಕೇಂದ್ರ ಸರ್ಕಾರ ಸಂಗ್ರಹಿಸುವ ಸುಂಕ ಹಾಗೂ ಹೆಚ್ಚುವರಿ ಶುಲ್ಕ (ಸೆಸ್ ಮತ್ತು ಸರ್ಚಾರ್ಜ್) ರೂಪದ ಆದಾಯದಲ್ಲೂ ಪಾಲು ಹಂಚಿಕೆ ಮಾಡಬೇಕು ಎಂದು ರಾಜ್ಯ ಸರ್ಕಾರ ಮೊರೆಯಟ್ಟಿದೆ.
ಕೇಂದ್ರ ಹಣಕಾಸು ಸಚಿವಾಲಯವು 2026-27 ರಿಂದ 2030-31ರ ಅವಧಿಯ 16ನೇ ಹಣಕಾಸು ಆಯೋಗ ರಚನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಪೂರ್ವಭಾವಿಯಾಗಿ ಪ್ರಸ್ತಾವಿತ ಐದು ವರ್ಷಗಳಲ್ಲಿ ಕೇಂದ್ರದ ತೆರಿಗೆ ಆದಾಯ, ಸಹಾಯ ಅನುದಾನ, ಇನ್ನಿತರ ವರಮಾನಗಳಲ್ಲಿ ರಾಜ್ಯಗಳಿಗೆ ಹಂಚಿಕೆ ಪಾಲಿನ ಮೊತ್ತವನ್ನು ಆಯೋಗ ಅಂತಿಮಗೊಳಿಸಲಿದೆ.
ಆಯೋಗ ರಚನೆ ಪೂರ್ವ ನಿಯಮ, ನಿಬಂಧನೆಗಳ ಕರಡು ಸಿದ್ಧಪಡಿಸುವ ಉದ್ದೇಶದಿಂದ ಕೋರಿಕೆ ಸಲ್ಲಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದ್ದು, ನಿಗದಿತ ಜೂನ್ ಗಡುವಿನೊಳಗೆ ಪತ್ರ ಬರೆದಿರುವ ರಾಜ್ಯ ಸರ್ಕಾರ ಐದಾರು ಪ್ರಮುಖ ಅಂಶಗಳನ್ನು ಕರಡು ಪ್ರಸ್ತಾವನೆಯಲ್ಲಿ ಸೇರಿಸಲು ವಿನಂತಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಸ್ತಾಪಿತ ಪ್ರಮುಖ ಅಂಶಗಳು:ಸೆಸ್ ಮತ್ತು ಸರ್ಚಾರ್ಜ್ ರೂಪದಲ್ಲಿ ಕೇಂದ್ರದ ಖಜಾನೆಗೆ ವಾರ್ಷಿಕ 5ಲಕ್ಷ ಕೋಟಿ ರೂ. ಜಮಾ ಆಗುತ್ತಿದ್ದು, ಈ ಆದಾಯದಲ್ಲೂ ಪಾಲು ನೀಡಿದರೆ 7 ರಿಂದ 8 ಸಾವಿರ ಕೋಟಿ ರೂ. ರಾಜ್ಯಕ್ಕೆ ಲಭ್ಯವಾಗಲಿದೆ ಎಂಬ ಅಂದಾಜಿದೆ. ಈ ಹಿಂದೆ 15ನೇ ಹಣಕಾಸು ಆಯೋಗ ರಚನೆ ಸಂದರ್ಭದಲ್ಲಿ ಕೆಲ ಮಾನದಂಡಗಳ ಬದಲಾವಣೆಗೆ ಕೋರಿದ್ದರೂ ಪರಿಗಣಿಸಿಲ್ಲ. ಈಗ 16ನೇ ಹಣಕಾಸು ಆಯೋಗ ರಚನೆ ವೇಳೆ ಪರಿಗಣಿಸಲು ಕೋರಿದೆ. ಕೇಂದ್ರದ ಬೊಕ್ಕಸಕ್ಕೆ ಹೆಚ್ಚು ಆದಾಯ ನೀಡುವ ರಾಜ್ಯಕ್ಕೆ ಕಡಿಮೆ ಪಾಲು ಸಿಗುತ್ತಿದ್ದು, ಪಾಲು ಹಂಚಿಕೆ ವ್ಯತ್ಯಾಸ ಸರಿಪಡಿಸಬೇಕು. ತೆರಿಗೆ ವರಮಾನದಲ್ಲಿ ಪಾಲು ನಿಗದಿ ಮಾಡುವಾಗ 15ನೇ ಹಣಕಾಸು ಆಯೋಗವು 2011ರ ಜನಗಣತಿ ವರದಿಯನ್ನು ಮಾನದಂಡ ಮಾಡಿಕೊಂಡಿದ್ದು, ಚಾಚೂ ತಪ್ಪದೇ ಜನಸಂಖ್ಯಾ ನಿಯಂತ್ರಣ ಪಾಲಿಸಿದ ದಕ್ಷಿಣದ ರಾಜ್ಯಗಳಿಗೆ ಸಮಸ್ಯೆಯಾಗಿದೆ. ಈ ಮುಂಚಿನಂತೆ 1971ರ ಜನಗಣತಿ ವರದಿ ಪರಿಗಣಿಸಿದರೆ ಸಮಸ್ಯೆ ಬಗೆಹರಿಯಲಿದೆ. ಐಟಿ-ಬಿಟಿ ರಫ್ತು ವಹಿವಾಟು ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಹೊರ ರಾಜ್ಯಗಳ ಉದ್ಯೋಗಿಗಳು ಮತ್ತು ಕಾರ್ವಿುಕರಿಗೆ ಕೈತುಂಬ ಕೆಲಸ ಕೊಟ್ಟಿದೆ. ಹಾಗಾಗಿ ಬೆಂಗಳೂರಿನ ತಲಾ ಆದಾಯವನ್ನು ಇಡೀ ರಾಜ್ಯಕ್ಕೆ ಅನ್ವಯಿಸುವುದು ವಾಸ್ತವಿಕ ಮಾನದಂಡವಾಗದು. ಆದ್ದರಿಂದ ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್​ನಂತಹ ನಗರಗಳನ್ನು ಹೊರಗಿಟ್ಟು, ರಾಜ್ಯದ ತಲಾ ಆದಾಯ ಪರಿಗಣಿಸಬೇಕು ಎಂದು ಕೋರಲಾಗಿದೆ.
ಹೆಚ್ಚಿನ ನೆರವು ನೀಡಿ:ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕಲಬುರಗಿ ನಗರಗಳಿಗೆ ಹೊರ ರಾಜ್ಯದವರು ವಲಸೆ ಬಂದು ಬದುಕು ಕಂಡುಕೊಂಡಿದ್ದು, ಮಹಾನಗರಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು 16ನೇ ಹಣಕಾಸು ಆಯೋಗ ಮೀಸಲಿಡುವಂತೆ ಶಿಫಾರಸು ಮಾಡಬೇಕು. ಕೇಂದ್ರದ ಬೊಕ್ಕಸಕ್ಕೆ ಹೆಚ್ಚೆಚ್ಚು ಜಿಎಸ್​ಟಿ ಸಂಗ್ರಹಿಸಿ ನೀಡುತ್ತಿರುವ ಮಹಾರಾಷ್ಟ್ರ, ಕರ್ನಾಟಕದಂತಹ ರಾಜ್ಯಗಳಿಗೆ ಪ್ರೋತ್ಸಾಹಧನ ನೀಡಿ ಬೆನ್ನು ತಟ್ಟಿದರೆ, ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹಣಕಾಸು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
1.50 ಲಕ್ಷ ಕೋಟಿ ರೂ. ಕಾಮಗಾರಿ ವೆಚ್ಚ:ಜಲಸಂಪನ್ಮೂಲ ಇಲಾಖೆ 1.05 ಲಕ್ಷ ಕೋಟಿ ರೂ., ಪಿಡಬ್ಲ್ಯುಡಿ 27 ಸಾವಿರ ಕೋಟಿ ರೂ. ಮತ್ತು ಸಣ್ಣ ನೀರಾವರಿ ಇಲಾಖೆ 12 ಸಾವಿರ ರೂ. ಸೇರಿ ವಿವಿಧ ಇಲಾಖೆಗಳಲ್ಲಿ ಕೈಗೆತ್ತಿಕೊಂಡಿರುವ ಚಾಲ್ತಿ ಕಾಮಗಾರಿಗಳ ವೆಚ್ಚದ ಒಟ್ಟು ಮೊತ್ತವೇ 1.50 ಲಕ್ಷ ಕೋಟಿ ರೂ. ಇದ್ದು, ಹಳೇ ಬಿಲ್ ಬಾಕಿ ಮೊತ್ತ 27 ಸಾವಿರ ಕೋಟಿ ರೂ. ಇದೆ ಎನ್ನಲಾಗಿದೆ.
ಕೇಂದ್ರಕ್ಕೆ ಮುಖ್ಯಮಂತ್ರಿ ಪತ್ರ:ಮಧ್ಯಂತರ ಪರಿಹಾರ ರೂಪದಲ್ಲಿ 5,495 ಕೋಟಿ ರೂ. ಹಾಗೂ ಅಂತಿಮ ವರದಿಯಲ್ಲಿ ಸರೋವರ, ಕೆರೆಗಳ ಅಭಿವೃದ್ಧಿಗೆ 6 ಸಾವಿರ ಕೋಟಿ ರೂ. ರಾಜ್ಯಕ್ಕೆ ನೀಡುವಂತೆ 15ನೇ ಹಣಕಾಸು ಆಯೋಗ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಬಾಕಿ ಮೊತ್ತವನ್ನು ಪಾವತಿಸಲು ಕೋರಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಸಿಎಂ ಸಿದ್ದರಾಮಯ್ಯ ಬರೆಯಲಿರುವ ಪತ್ರವೂ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಂತರ ಪರಿಹಾರ ನೀಡುವಂತೆ ಬಿಜೆಪಿ ಆಡಳಿತಾವಧಿಯಲ್ಲಿ ಬಸವರಾಜ ಬೊಮ್ಮಾಯಿ ಅನೇಕ ಬಾರಿ ಪತ್ರ ಬರೆದರೂ ಕೇಂದ್ರ ಹಣಕಾಸು ಸ್ಪಂದಿಸಿದ್ದಿಲ್ಲ. ಆದರೆ, ಅಂತಿಮ ವರದಿಯಲ್ಲಿ ಸರೋವರಗಳ ಅಭಿವೃದ್ಧಿಗೆ 6 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಪ್ರಸ್ತಾಪಿಸಿದ್ದು, ಎರಡೂ ಮೊತ್ತ ಸೇರಿದರೆ 11,495 ಕೋಟಿ ರೂ.ಆಗಲಿದ್ದು, ಅಷ್ಟೂ ಮೊತ್ತ ನೀಡಬೇಕು ಎಂದು ಸಿದ್ದರಾಮಯ್ಯ ಪತ್ರ ಬರೆಯಲಿದ್ದಾರೆ.
ಗಾದೆಮಾತು ಪ್ರಕರಣ: ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಮಹತ್ವದ ಸೂಚನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
