| ಅರವಿಂದ ಅಕ್ಲಾಪುರ ಶಿವಮೊಗ್ಗರಾಜ್ಯದಲ್ಲಿ ಅಡಕೆ ಮಾರುಕಟ್ಟೆ ಅಸ್ಥಿರಗೊಳಿಸಿ, ರೈತರ ಆತಂಕದ ಲಾಭ ಅನುಕೂಲಕ್ಕೆ ಬಳಸಿಕೊಳ್ಳುವ ಷಡ್ಯಂತ್ರವೊಂದು ತೆರೆಮರೆಯಲ್ಲಿ ನಡೆಯುತ್ತಿದೆ. ಭೂತಾನ್​ನಿಂದ 17 ಸಾವಿರ ಟನ್ ಅಡಕೆ ಆಮದಾಗಿದೆ ಎಂಬ ಸುದ್ದಿ ಕಳೆದೊಂದು ವಾರದಿಂದ ಅಡಕೆ ಬೆಳೆಯುವ ಪ್ರದೇಶಗಳಲ್ಲಿ ಹರಿದಾಡುತ್ತಿದೆ. ರಾಶಿ ಇಡಿ 50 ಸಾವಿರ ರೂ. ಗಡಿ ದಾಟಿ ಅಡಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಕಾಣುತ್ತಿರುವ ಸಂದರ್ಭದಲ್ಲೇ ಈ ಸುದ್ದಿ ಆತಂಕ ಮೂಡಿಸಿದೆ.
ಇನ್ನೇನು ಅಡಕೆ ಮಾರುಕಟ್ಟೆ ಪಾತಾಳಕ್ಕೆ ತಲುಪುತ್ತದೆ ಎಂಬ ಕಳವಳದಿಂದ ಬೆಳೆಗಾರರು ಇರುವ ಅಡಕೆಯನ್ನೆಲ್ಲ ಮಾರಾಟ ಮಾಡುವ ತರಾತುರಿಯಲ್ಲಿದ್ದಾರೆ. ಮಾರುಕಟ್ಟೆಯಲ್ಲೂ ಅಡಕೆ ಧಾರಣೆ ಸ್ವಲ್ಪಮಟ್ಟಿನ ಕುಸಿತ ಕಂಡಿದೆ.
ವರ್ಷದ ಹಿಂದೆ ಗ್ರೀನ್ ಸಿಗ್ನಲ್:ಕೇಂದ್ರ ಸರ್ಕಾರ ಭೂತಾನ್​ನಿಂದ ಅಡಕೆ ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದು 2022ರ ಸೆಪ್ಟೆಂಬರ್​ನಲ್ಲಿ. ಈ 11 ತಿಂಗಳ ಅವಧಿಯಲ್ಲಿ ಅಡಕೆ ಮಾರುಕಟ್ಟೆಯಲ್ಲಿ ಯಾವುದೇ ಸಂಚಲನ ಉಂಟಾಗಿರಲಿಲ್ಲ. ಬಯಲುಸೀಮೆ ಪ್ರದೇಶದಲ್ಲೂ ಅಡಕೆ ಸಂಸ್ಕರಣೆ ನಡೆಯುತ್ತಿದ್ದು, ಇನ್ನು ಕೆಲವು ದಿನಗಳಲ್ಲಿ ಆ ಅಡಕೆ ಮಾರುಕಟ್ಟೆಗೆ ಬರಲಿದೆ. ವರ್ಷಾಂತ್ಯಕ್ಕೆ ಮಲೆನಾಡಿನ ಅಡಕೆಯೂ ಸಿದ್ಧವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಭೂತಾನ್ ಅಡಕೆ ಸುದ್ದಿ ತೇಲಿಬಿಟ್ಟು ಧಾರಣೆ ಕುಸಿಯುವಂತೆ ನೋಡಿಕೊಳ್ಳುವುದು, ಬೆಲೆ ಕಡಿಮೆಯಾದ ಬಳಿಕ ತಮಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಅಡಕೆ ಖರೀದಿಸುವುದು ಕೆಲವರ ದೂರಾಲೋಚನೆಯಾಗಿದೆ ಎಂಬುದು ಸಹಕಾರ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.
ರಾಜ್ಯದ ಕೊಡುಗೆಯೇ ಹೆಚ್ಚು:ಕರ್ನಾಟಕ, ಕೇರಳ, ಅಸ್ಸಾಂ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ತ್ರಿಪುರ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಅಡಕೆ ಬೆಳೆಯಲಾಗುತ್ತದೆ. ಆದರೆ ಕರ್ನಾಟಕದಲ್ಲಿ 2.61 ಲಕ್ಷ ಹೆಕ್ಟೇರ್ ಅಡಕೆ ಬೆಳೆಯುವ ಪ್ರದೇಶವಿದ್ದು, ದೇಶದ ಶೇ.61 ಅಡಕೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ.
ಕೇಂದ್ರ ಸರ್ಕಾರ ಭೂತಾನ್​ನಿಂದ ಅಡಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿರುವುದು ನಿಜ. ಆದರೆ ಇನ್ನೂ ಆ ಅಡಕೆ ದೇಶದೊಳಕ್ಕೆ ಬಂದಿಲ್ಲ. ಅಲ್ಲಿನ ಕಳಪೆ ಹಸಿ ಅಡಕೆ ಇಲ್ಲಿಗೆ ಬಂದು ಸಂಸ್ಕರಣೆ ಆಗುವಷ್ಟರಲ್ಲಿ ಅದರ ಗುಣಮಟ್ಟ ಮತ್ತಷ್ಟು ಕುಸಿಯುತ್ತದೆ. ಯಾವ ಕಾರಣಕ್ಕೂ ಆ ಅಡಕೆ ಇಲ್ಲಿ ಸಿದ್ಧವಾಗುವ ಅಡಕೆಗೆ ಸರಿಸಾಟಿಯಲ್ಲ. ಹೀಗಾಗಿ ಅಡಕೆ ಬೆಳೆಗಾರರು ಆತಂಕಪಡಬೇಕಾದ ಅಗತ್ಯವಿಲ್ಲ. ತರಾತುರಿಯಲ್ಲಿ ಅಡಕೆ ಮಾರಾಟ ಮಾಡುವ ಬದಲು ಸ್ವಲ್ಪ ಸಮಯ ರೈತರು ಕಾಯಬೇಕು. ಖಂಡಿತವಾಗಿಯೂ ಮಾರುಕಟ್ಟೆ ಸ್ಥಿರವಾಗುತ್ತದೆ.
| ಮಹೇಶ್ ಹುಲ್ಕುಳಿ, ಮ್ಯಾಮ್ಕೋಸ್ ಉಪಾಧ್ಯಕ್ಷ
ವಾಸ್ತವ ಮರೆಮಾಚಿ ಲಾಭ ಪಡೆಯುವ ಯತ್ನ:ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಭೂತಾನ್ ಹಸಿ ಅಡಕೆ ಆಮದಿಗೆ. ಆದರೆ ಈಗ ಹಸಿ ಅಡಕೆ ಎಂಬ ವಿಷಯವನ್ನೇ ಮರೆಮಾಚಲಾಗುತ್ತಿದೆ. ಕೇಂದ್ರ ಸರ್ಕಾರ 2011-12ರಲ್ಲಿ ಅಡಕೆ ಸಂಸ್ಕರಣಾ ವೆಚ್ಚವನ್ನು ಕೆಜಿಗೆ ಕನಿಷ್ಠ 110 ರೂ. ಎಂದು ನಿಗದಿಪಡಿಸಿ ಅದರ ಮೇಲೆ ಶೇ.100 ಆಮದು ಸುಂಕ ಏರಿಸಿದ ಪರಿಣಾಮ ದೇಶೀಯ ಅಡಕೆಗೆ ಹೋಲಿಸಿದರೆ ಆಮದು ಅಡಕೆಯೇ ದುಬಾರಿ ಎನಿಸಿಕೊಳ್ಳತೊಡಗಿತು. ಸ್ಥಳೀಯವಾಗಿಯೇ 5ರಿಂದ 6 ಸಾವಿರ ರೂ.ಗೆ ಹಸಿ ಅಡಕೆ ದೊರೆಯುತ್ತಿರುವ ಸಂದರ್ಭದಲ್ಲಿ ಭೂತಾನ್​ನ ಕಳಪೆ ಅಡಕೆ ಆಮದಿಗೆ ಯಾರೂ ಮುಂದಾಗುವುದಿಲ್ಲ ಎಂಬುದನ್ನು ವರ್ತಕರೇ ಒಪ್ಪಿಕೊಳ್ಳುತ್ತಿದ್ದಾರೆ.
ಇದೇ ಮೊದಲಲ್ಲ:ಅಡಕೆ ಮಾರುಕಟ್ಟೆ ಅಸ್ಥಿರಗೊಳಿಸುವ ಯತ್ನ ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಇಂತಹ ಸನ್ನಿವೇಶಗಳು ಎದುರಾಗಿವೆ. ಸುಪ್ರೀಂಕೋರ್ಟ್​ನಲ್ಲಿ ಗುಟ್ಖಾ ನಿಷೇಧ ವಿಚಾರಣೆ, ಅಡಕೆಯಲ್ಲಿ ಕ್ಯಾನ್ಸರ್​ಕಾರಕ ಅಂಶಗಳಿವೆ ಎಂದು ಕೇಂದ್ರ ಸರ್ಕಾರ ಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ ಸಂದರ್ಭ, ಕೆಲ ರಾಜ್ಯಗಳಲ್ಲಿ ಗುಟ್ಖಾ ನಿಷೇಧ ಮಾಡಿದಾಗ ಅಡಕೆ ಮಾರುಕಟ್ಟೆ ಅಸ್ಥಿರಗೊಂಡಿದ್ದಿದೆ. ಒಂದೇ ವಾರದಲ್ಲಿ ಕ್ವಿಂಟಾಲ್​ಗೆ 5-10 ಸಾವಿರ ರೂ. ಕುಸಿತ ಕಂಡಿರುವ ನಿದರ್ಶನಗಳೂ ಇವೆ. ಈಗ ಮತ್ತೊಮ್ಮೆ ಅಂಥದ್ದೇ ಪ್ರಯತ್ನಗಳು ನಡೆಯುತ್ತಿವೆ.
ಕಳವಾದ ಮೊಬೈಲ್‌ಫೋನ್ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸುವಲ್ಲಿ ಕರ್ನಾಟಕ ಪೊಲೀಸರೇ ಪ್ರಥಮ!

ಮದುವೆಯಾಗುವ ಕನಸು ಚಿಗುರಿಸಿದ ಟೊಮ್ಯಾಟೋ; ಹುಡುಗಿ ಹುಡುಕಲು ಮುಂದಾದ ಕೃಷಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − three =
Remember me
