ರಾಜ್ಯವನ್ನು ಕಾಡುತ್ತಿರುವ ಸಂಪನ್ಮೂಲ ಕೊರತೆ, ಖಾಸಗಿ ಸಹಭಾಗಿತ್ವಕ್ಕೆ ಒತ್ತು, ಕೇಂದ್ರದ ನೆರವು ಕಡಿತ ಸರಿದೂಗಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಏಳನೇ ಬಜೆಟ್​ನಲ್ಲಿ ಮಂಡಿಸಿದ್ದಾರೆ. ಇದೊಂದು ವಾಸ್ತವಿಕತೆ ಆಧರಿಸಿದ ಮುಂಗಡಪತ್ರ.
ರಾಜ್ಯದ ಒಟ್ಟಾರೆ ಬೆಳವಣಿಗೆಯ ದರ ಶೇ.7.8ರಿಂದ 6.8ಕ್ಕೆ ಇಳಿದಿರುವ ನಡುವೆಯೇ ಕೃಷಿ, ನೀರಾವರಿ, ಸಾಮಾಜಿಕ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಪ್ರಾದೇಶಿಕ ಸಮತೋಲನ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿರುವುದು ಕಂಡು ಬರುತ್ತದೆ.
ಕೇಂದ್ರದಿಂದ ಬರಬೇಕಾದ ಪಾಲು ಪೂರ್ಣ ಬಂದಿಲ್ಲವೆಂಬ ಆತಂಕವನ್ನು ಬಜೆಟ್​ನಲ್ಲಿಯೇ ವ್ಯಕ್ತಪಡಿಸಿದ್ದರೂ, ಸ್ವಂತ ತೆರಿಗೆ ಹಾಗೂ ಕೇಂದ್ರದ ಪಾಲಿನಲ್ಲಿ ಕಡಿತ ಸರಿದೂಗುವ ನಿರೀಕ್ಷೆ ಇಟ್ಟುಕೊಂಡೇ ಖಾಸಗಿಯವರಿಗೆ ಕೆಂಪು ಹಾಸಿನೊಂದಿಗೆ ಬಹುತೇಕ ಎಲ್ಲ ವಲಯಗಳಲ್ಲಿ ಸ್ವಾಗತ ಮಾಡುತ್ತಿದ್ದಾರೆ.
ಮುಖ್ಯ ಕಾರ್ಯದರ್ಶಿ ನೇತೃತ್ವದ ವಿತ್ತೀಯ ನಿರ್ವಹಣಾ ಸಮಿತಿ ಹಿಂದಿನ ವರ್ಷ ನೀಡಿದ್ದ ಸಲಹೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದ ಭಾಗವಾಗಿಯೇ ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ. ತೆರಿಗೆ ದರಗಳ ಹೆಚ್ಚಳಕ್ಕೆ ಸೀಮಿತ ಅವಕಾಶಗಳಿರುವುದರಿಂದ ತೆರಿಗೆಯೇತರ ಆದಾಯ ವೃದ್ದಿಸಿಕೊಳ್ಳಬೇಕು ಎಂಬುದು ಸಮಿತಿಯ ಸಲಹೆಯಾಗಿತ್ತು. ಆ ಸಲಹೆ ಜಾರಿಗೆ ಈ ಮೂಲಕ ಆದ್ಯತೆ ಸಿಗಲಿದೆ.
ರಾಜ್ಯ ಸರ್ಕಾರ ರಾಜಸ್ವ ಉಳಿತಾಯ ಸಾಧಿಸಿದ್ದರೂ ಆ ಪ್ರಮಾಣ 285.09 ಕೋಟಿ ರೂ.ಗಳಿಂದ 143.32 ಕೋಟಿ ರೂ.ಗಳಿಗೆ ಇಳಿದಿದೆ. ಸಂಬಳ, ಬಡ್ಡಿ ಪಾವತಿ, ನಿವೃತ್ತಿ ವೇತನದಂತಹ ರಾಜಸ್ವ ವೆಚ್ಚಗಳು 10 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಳವಾಗುತ್ತಿರುವುದು ಆತಂಕದ ಸಂಗತಿ. ಅದನ್ನು ಯಡಿಯೂರಪ್ಪ ಅವರೇ ತಮ್ಮ ಭಾಷಣದಲ್ಲಿ ತೋಡಿಕೊಂಡಿದ್ದಾರೆ.
ಕೇಂದ್ರದ ತೆರಿಗೆ ಪಾಲು 8887 ಕೋಟಿ ರೂ.ಗಳು, ಜಿಎಸ್​ಟಿ ಪರಿಹಾರ 3000 ಕೋಟಿ ರೂ. ಕಡಿಮೆಯಾಗಿದೆ. ಇದರಿಂದಲೇ ಇಲಾಖೆಗಳಿಗೆ ವೆಚ್ಚ ಕಡಿತ ಮಾಡಲಾಗಿದೆ. ಇದನ್ನು ತೋರಿಸದೆ ಇರುವ ಉದ್ದೇಶದಿಂದಲೇ ಆರು ವಲಯಗಳಾಗಿ ಬಜೆಟ್ ಅನ್ನು ಮೊದಲ ಬಾರಿಗೆ ವಿಭಜಿಸಲಾಗಿದೆ. 2019-20ನೇ ಸಾಲಿನ ಬಜೆಟ್​ನಲ್ಲಿ ಒಟ್ಟಾರೆ ಆದಾಯ 1.81 ಲಕ್ಷ ಕೋಟಿ ರೂ. ನಿರೀಕ್ಷೆ ಮಾಡಿದ್ದರೂ, ಕೊನೆಗೆ ಪರಿಷ್ಕರಿಸಿರುವುದು 1.77 ಲಕ್ಷ ಕೋಟಿ ರೂ. ಅಂದರೆ 4000 ಕೋಟಿ ರೂ. ಕಡಿಮೆಯಾಗಿದೆ. ಆದರೂ ಈ ವರ್ಷ 1.79 ಲಕ್ಷ ಕೋಟಿ ರೂ.ಗಳಿಗೆ ನಿಗದಿ ಮಾಡಲಾಗಿದೆ.
ಅಂದರೆ ಕೇವಲ 2000 ಕೋಟಿ ರೂ. ಹೆಚ್ಚಿನ ಸಂಪನ್ಮೂಲ ನಿರೀಕ್ಷೆ ಇದೆ. ರಾಜ್ಯದ ತೆರಿಗೆ ಹೊರತು ಕೇಂದ್ರದ ಪಾಲು, ತೆರಿಗೆಯೇತರ ರಾಜಸ್ವಗಳೆಲ್ಲ ಕಡಿಮೆಯಾಗಿವೆ. ಹೆಚ್ಚುವರಿ ಸಂಪನ್ಮೂಲ ಸಂಗ್ರಹಣೆ ಹೇಗೆ ಎಂಬ ಬಗ್ಗೆ ಚರ್ಚೆಗಳಿವೆ. ಕಳೆದ ವರ್ಷಕ್ಕಿಂತ ಸುಮಾರು 5000 ಕೋಟಿ ರೂ. ಹೆಚ್ಚು ಸಾಲ ಮಾಡಲಾಗುತ್ತಿದೆ. 48832.54 ಕೋಟಿ ರೂ.ಗಳನ್ನು ಪ್ರಸಕ್ತ ಸಾಲಿನಲ್ಲಿ ಮಾಡಿದ್ದರೆ, ಮುಂದಿನ ಸಾಲಿನಲ್ಲಿ 53214.13 ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಒಟ್ಟಾರೆ ಸಾಲ 3,68,692 ಕೋಟಿ ರೂ.ಗಳಿಗೆ ತಲುಪಿದರೆ ಬಜೆಟ್ ಗಾತ್ರ 2.37 ಲಕ್ಷ ಕೋಟಿ ರೂ.ಗಳಾಗುತ್ತಿದ್ದು, 4000 ಕೋಟಿ ರೂ. ಮಾತ್ರ ಹೆಚ್ಚಳವಾಗಿದೆ.
ಈ ಎಲ್ಲ ಅಂಕಿ-ಅಂಶಗಳನ್ನು ಹೇಳಿರುವ ಯಡಿಯೂರಪ್ಪ, ಆ ಮೂಲಕ ರಾಜ್ಯದ ಆರ್ಥಿಕ ಸ್ಥಿತಿ ಕಠಿಣವಾಗಿದೆ, ಕೇಂದ್ರ ತಮ್ಮ ಪಾಲನ್ನು ಪೂರ್ತಿ ನೀಡಬೇಕು ಹಾಗೂ 15ನೇ ಹಣಕಾಸು ಆಯೋಗದಲ್ಲಿ ಆಗಿರುವ ಕಡಿತವನ್ನು ಸಹ ಮರುಪರಿಶೀಲನೆ ಮಾಡಬೇಕು ಎಂದು ಸದನದ ಮೂಲಕವೇ ಪರೋಕ್ಷ ಒತ್ತಾಯ ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಶುದ್ದ ಕುಡಿಯುವ ನೀರು ನೀತಿಗಳನ್ನು ಹೊಸದಾಗಿ ಪ್ರಕಟಿಸುವುದಾಗಿ ಹೇಳಿದ್ದಾರೆ. ಆ ಮೂಲಕ ಈ ಕ್ಷೇತ್ರಗಳನ್ನು ಇವತ್ತಿನ ಅಗತ್ಯಗಳಿಗೆ ಸಜ್ಜುಗೊಳಿಸುವುದಕ್ಕೆ ಬಜೆಟ್​ನಲ್ಲಿ ಮುನ್ನುಡಿ ಬರೆದಿದ್ದಾರೆ. ಹೊಸ ನಿಕ್ಷೇಪಗಳನ್ನು ಹುಡುಕುವುದಕ್ಕೆ ಆದ್ಯತೆ ನೀಡಿರುವ ಸಿಎಂ, ಆ ಮೂಲಕ ಆದಾಯದ ಹೊಸ ಮೂಲವನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮಠಗಳಿಗೆ ವಿಶೇಷ ನೆರವು ಇಲ್ಲದಿದ್ದರೂ ಎಲ್ಲ ಜಾತಿ, ಧರ್ಮಕ್ಕೆ ಆದ್ಯತೆ ನೀಡುವ ಮೂಲಕ ಸರ್ವಧರ್ಮ ಸಮನ್ವಯತೆಯ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ. ಅದರೊಂದಿಗೆ ಕೋಲಾರ, ಚಾಮರಾಜನಗರ ಹೊರತು ಉಳಿದೆಲ್ಲ ಜಿಲ್ಲೆಗಳನ್ನು ನೆನಪಿಸಿಕೊಂಡು ಪ್ರಾದೇಶಿಕ ಸಮಾನತೆ ತಂದಿದ್ದಾರೆ.
ಮಹಿಳಾ ಬಜೆಟ್ ರೀತಿಯಲ್ಲಿಯೇ ಮಕ್ಕಳ ಬಜೆಟ್ ಹೊಸ ಪ್ರಯತ್ನವಾಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ. ನೀರಾವರಿ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಮೊತ್ತದ ಘೋಷಣೆಗಳಿಗೆ ಆದ್ಯತೆ ನೀಡಿಲ್ಲ. ಬಜೆಟ್ ಗಾತ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗಿಸಿಕೊಳ್ಳದೆ, ಇರುವ ಸಂಪನ್ಮೂಲದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸುವ ಪ್ರಯತ್ನ ಮಾಡಿರುವುದು ಯಡಿಯೂರಪ್ಪ ಅವರೊಳಗೊಬ್ಬ ಉತ್ತಮ ಆರ್ಥಿಕ ತಜ್ಞ ಇದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಹಾಸಿಗೆ ಇದ್ದಷ್ಟೇ ಕಾಲು…
ರ್ಚವಿತಚರ್ವಣ ರೀತಿಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಅಭಿವೃದ್ಧಿ ನಿಗಮಗಳನ್ನು ಇ-ವಾಣಿಜ್ಯ ಕೇಂದ್ರಗಳ ರೀತಿ ವ್ಯಾಪಾರ ವಹಿವಾಟಿಗೆ ಸಿದ್ದಪಡಿಸುವ ಕೆಲಸಕ್ಕೆ ಸಜ್ಜುಗೊಳಿಸಲು ಯಡಿಯೂರಪ್ಪ ಆದ್ಯತೆ ನೀಡುವುದಾಗಿ ಹೇಳಿರುವುದು ಹೊಸತನದ ಪ್ರಯತ್ನವಾಗಿದೆ.
ಶಿಕ್ಷಕ ಮಿತ್ರ, ಜೀವನ ಚೈತ್ರ, ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಕೃತಕ ಗರ್ಭಧಾರಣೆಯ ನಳಿಕೆ ಉತ್ಪಾದನೆ, ಮನೆ ಮನೆಗೆ ಗಂಗೆ, ಜಲಗ್ರಾಮ ಕ್ಯಾಲೆಂಡರ್, ಗ್ರಾಮೀಣ ಸುಮಾರ್ಗ… ಹೀಗೆ ಅನೇಕ ಹೊಸ ಯೋಜನೆಗಳಿವೆ. ಈ ಮೂಲಕ ಅಭಿವೃದ್ಧಿ ಸೂಚ್ಯಂಕ ಹೆಚ್ಚಿಸುವ ಗುರಿ ಹಾಕಿಕೊಂಡಿದ್ದಾರೆ. ಸಂಪನ್ಮೂಲದ ಇತಿಮಿತಿಯಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚಿದ್ದಾರೆ.
ಪೆಟ್ರೋಲ್ ​ಡೀಸೆಲ್ ಸುಂಕ ಹೆಚ್ಚಳ
ಸಂಪನ್ಮೂಲ ಕ್ರೋಡೀಕರಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿದ್ದಾರೆ. ಇದು ಬೇರೆ ಬೇರೆ ಪರಿಣಾಮಗಳನ್ನು ಬೀರಲಿದೆ. ಆದರೆ ನೋಂದಣಿ ಶುಲ್ಕ ತಗ್ಗಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ಬಡವರಿಗೆ ಅನುಕೂಲವಾದರೆ, ನೋಂದಣಿ ಹೆಚ್ಚಾಗಿ ತೆರಿಗೆಯೂ ಹೆಚ್ಚು ಬರುತ್ತದೆ.
ಇದು ಚಾಣಾಕ್ಷ ನಿರ್ಧಾರವೇ ಸರಿ. ಹಣಕಾಸಿನ ಸಂಕಷ್ಟದ ಪರಿಸ್ಥಿತಿಯ ನಡುವೆಯೇ ಕೃಷಿಕರಿಗೆ ನೆಮ್ಮದಿ ತರುವ, ನೀರಾವರಿ ಮೂಲಕ ಕೃಷಿ ಕ್ಷೇತ್ರವನ್ನು ಸಮೃದ್ಧಿಗೊಳಿಸುವ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೈಗಾರಿಕೆ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದು ಯಡಿಯೂರಪ್ಪ ಅವರ ಬದ್ಧ್ದತೆಗೆ ಸಾಕ್ಷಿಯಾಗಿದೆ.
| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − ten =
Remember me
