ಬೆಂಗಳೂರು:ಆರ್ಥಿಕ ಹಿಂಜರಿತ, ಕೇಂದ್ರದ ನೆರವಿನ ಕಡಿತದಂತಹ ಸಮಸ್ಯೆಗಳ ನಡುವೆಯೂ ಬಜೆಟ್ ಕಾರ್ಯಕ್ರಮ ಜಾರಿಗೆ ಪಣ ತೊಟ್ಟಿರುವ ಯಡಿಯೂರಪ್ಪ ಸರ್ಕಾರ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ದಶದಾರಿ ಕಂಡುಕೊಂಡಿದೆ!
ವಿವಿಧ ಯೋಜನೆಗಳ ಸಹಾಯಧನಗಳಿಗೆ ಕತ್ತರಿ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಪಾವತಿ, ಜಿಎಸ್​ಟಿ ದರ ಅಥವಾ ಉಪಕರಗಳ ಹೆಚ್ಚಳಕ್ಕೆ ಮನವಿ, 15ನೇ ಹಣಕಾಸು ಆಯೋಗದ ಶಿಫಾರಸಿನ ವಿಶೇಷ ಅನುದಾನ ಪಡೆಯಲು ಯತ್ನ, ವಿವಿಧ ನಿಗಮಗಳಿಗೆ ನೀಡಿರುವ ಸಾಲದ ವಸೂಲಾತಿ ಮೂಲಕ ಸಂಪನ್ಮೂಲ ಸಂಗ್ರಹಿಸುವ ಬಗ್ಗೆ ಗಂಭೀರ ಆಲೋಚನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ, ಮುಖ್ಯ ಕಾರ್ಯದರ್ಶಿ ನೇತೃತ್ವದ ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿ ನೀಡಿರುವ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ.
ತೆರಿಗೆ ಹೆಚ್ಚಳ:ಪೆಟ್ರೋಲ್, ಡೀಸೆಲ್, ಮದ್ಯ, ಮೋಟಾರ್ ವಾಹನಗಳ ಮೇಲೆ ಸ್ವಲ್ಪ ಮಟ್ಟಿಗೆ ತೆರಿಗೆ ಹೆಚ್ಚಿಸಿ, ಸ್ವಂತ ತೆರಿಗೆಗಳಲ್ಲೇ 8,989 ಕೋಟಿ ರೂ. ಹೆಚ್ಚಿಗೆ ಸಂಗ್ರಹಿಸುವುದು ಸಿಎಂ ಯಡಿಯೂರಪ್ಪ ಗುರಿಯಾಗಿದೆ. ಅದರ ಜತೆಗೆ ಕೇಂದ್ರದಿಂದಲೂ ನಿರೀಕ್ಷೆಯಷ್ಟು ನೆರವು ಸಿಕ್ಕರೆ ಮುಂದಿನ ವರ್ಷ ಅಭಿವೃದ್ಧಿ ಸಾಧನೆಗೆ ಯಾವುದೇ ಅಡ್ಡಿ ಆಗುವುದಿಲ್ಲವೆಂಬುದು ಅವರ ವಿಶ್ವಾಸ. ಸಂಪನ್ಮೂಲ ಸಂಗ್ರಹಣೆ ವಿಶ್ವಾಸದಿಂದಲೇ ಬಜೆಟ್​ವೆಚ್ಚ ಹೆಚ್ಚಳದ ಜತೆಗೆ, ಬಜೆಟ್ ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆಗೂ 10 ಸಾವಿರ ಕೋಟಿ ರೂ.ಘೋಷಿಸಿದ್ದಾರೆ.
ನೌಕರರ ಸಂಬಳ, ಸಾರಿಗೆ, ನಿವೃತ್ತ ವೇತನ, ಬಡ್ಡಿ ಪಾವತಿಯಂತಹ ಬದ್ಧ ವೆಚ್ಚಗಳು ಶೇ.90ಕ್ಕೆ ಮುಟ್ಟಿವೆ. ಹೀಗಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ವಿವಿಧ ಸಂಪನ್ಮೂಲ ಮೂಲಗಳ ಸಲಹೆ ನೀಡಿದೆ.
ಸಹಾಯಧನಕ್ಕೆ ಕತ್ತರಿ
ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿ ಕಳೆದ ವರ್ಷಗಳಲ್ಲಿ ಮಾಡಿದ್ದ ಶಿಫಾರಸು 2020-21ರ ಬಜೆಟ್​ನಲ್ಲಿ ಜಾರಿಗೆ ಬರುತ್ತಿದೆ. ಸಹಾಯಧನಗಳನ್ನು ಕಡಿಮೆ ಮಾಡಬೇಕು ಹಾಗೂ ಫಲಾನುಭವಿಗಳಿಗೆ ನೇರ ವರ್ಗಾವಣೆಯಾಗಬೇಕು ಎಂಬ ಸಲಹೆಯನ್ನು ಸಮಿತಿ ಕಳೆದ ಎರಡು ವರ್ಷಗಳಲ್ಲಿ ನೀಡಿತ್ತು. ಯಡಿಯೂರಪ್ಪ ಬಜೆಟ್​ನಲ್ಲಿ ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ ಮುಂದಿನ ವರ್ಷಕ್ಕೆ 2212.21 ಕೋಟಿ ರೂ. ಸಹಾಯಧನ ಕಡಿಮೆ ಮಾಡಲಾಗಿದೆ.
ಕೃಷಿ, ಹಾಲು, ಸಾರಿಗೆ, ಆಹಾರ, ವಿದ್ಯುತ್ ಹೀಗೆ ವಿವಿಧ ಇಲಾಖೆಗಳಲ್ಲಿ ಸಹಾಯಧನ ಆಧಾರಿತ ಯೋಜನೆಗಳಿವೆ. 2019-20ರ ಸಾಲಿನಲ್ಲಿ 25688.12 ಕೋಟಿ ರೂ.ಗಳಿದ್ದ ವೆಚ್ಚವನ್ನು 2020-21ನೇ ಸಾಲಿಗೆ 23475.91 ಕೋಟಿ ರೂ.ಗಳಿಗೆ ಇಳಿಸಲಾಗುತ್ತಿದೆ. ಕೃಷಿ, ಹಾಲು, ಆಹಾರ, ವಸತಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಲ್ಲಿ ಕಡಿತ ಮಾಡಲಾಗುತ್ತಿದೆ.
ಜಿಎಸ್​ಟಿ ಹೆಚ್ಚಳ
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವ ಜಿಎಸ್​ಟಿ ಪರಿಹಾರ ಇಳಿಕೆಯಾಗುತ್ತಿರುವ ಕಾರಣ ಕೊರತೆ ಸರಿದೂಗಿಸಲು ಜಿಎಸ್​ಟಿ ದರಗಳನ್ನು ಅಥವಾ ಉಪಕರ ದರಗಳನ್ನು ಹೆಚ್ಚಿಸುವಂತೆ ಜಿಎಸ್​ಟಿ ಸಮಿತಿಗೆ ಮನವಿ ಮಾಡುವಂತೆ ಸಮಿತಿ ಹಣಕಾಸು ಇಲಾಖೆಗೆ ಸೂಚನೆ ನೀಡಿದೆ. ಸೆಸ್​ಗಳನ್ನು ಹೆಚ್ಚಿಸಿಕೊಳ್ಳುವಂತೆಯೂ ಹೇಳಿದೆ. ಕೇಂದ್ರದಿಂದ ಜಿಎಸ್​ಟಿ ತೆರಿಗೆ ಪಾಲು 8887 ಕೋಟಿ ರೂ. ಹಾಗೂ ಜಿಎಸ್​ಟಿ ಪರಿಹಾರ 3000 ಕೋಟಿ ರೂ. ಕಡಿಮೆಯಾಗುತ್ತದೆ. ಒಟ್ಟು 11,887 ಕೋಟಿ ರೂ.ಗಳನ್ನು ಕೂಡಲೇ ಪಡೆಯಲು ವಿಶೇಷ ಪ್ರಯತ್ನ ಮಾಡಬೇಕೆಂದು ಸಮಿತಿ ಸಲಹೆ ನೀಡಿದೆ.
ವಿಶೇಷ ಅನುದಾನ
ಹದಿನೈದನೇ ಹಣಕಾಸು ಆಯೋಗ ತೆರಿಗೆಯಲ್ಲಿ ಕೇಂದ್ರದ ಪಾಲನ್ನು ರಾಜ್ಯಕ್ಕೆ ಕಡಿಮೆ ಮಾಡಿರುವುದರಿಂದ ಮುಂದಿನ ವರ್ಷಕ್ಕೆ 11,887 ಕೋಟಿ ರೂ. ಕಡಿಮೆಯಾಗುತ್ತದೆ. ಹೀಗಿದ್ದರೂ, ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಈ ವಿಶೇಷ ಅನುದಾನ ನೀಡಲು ಒಪು್ಪತ್ತಿಲ್ಲ. ಇದನ್ನು ಪಡೆಯಲು ಪ್ರಯತ್ನ ನಡೆಸಬೇಕೆಂಬುದು ಸಮಿತಿಯ ಪ್ರಮುಖ ಸಲಹೆ.
ಸಿಗದ ಬಡ್ಡಿ ಸ್ವೀಕೃತಿ
ಕೇಂದ್ರದ ಖಜಾನೆಯಲ್ಲಿ ಮಾಡಿರುವ ಹೂಡಿಕೆಯ ಬಡ್ಡಿ 1237 ಕೋಟಿ ರೂ. ಸಿಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ರಾಜ್ಯದ ಖಜಾನೆಯಲ್ಲಿನ ನಗದು ಶಿಲ್ಕು ಕೇಂದ್ರದ ಖಜಾನೆಯಲ್ಲಿ ಹೂಡಿಕೆ ಮಾಡುವಷ್ಟು ಇಲ್ಲ. ಆದ್ದರಿಂದ ಬಡ್ಡಿ ಅಂದಾಜಿಗಿಂತ 472 ಕೋಟಿ ರೂ. ಕಡಿಮೆಯಾಗುತ್ತಿದೆ.
ಸಮಿತಿಯ ಸಲಹೆ
* ಬಡ್ಡಿ ಸ್ವೀಕೃತಿಯನ್ನು ವಸ್ತುಸ್ಥಿತಿಗೆ ತಕ್ಕಂತೆ ಅಂದಾಜು ಮಾಡುವುದು
* 15 ನೇ ಹಣಕಾಸು ಆಯೋಗಕ್ಕೆ ಪುನರ್ ಪರಿಶೀಲನೆಗೆ ಮನವಿ ಮಾಡುವುದು
* ಸಹಾಯಧನ ಪಡೆಯುವ ಸಂಸ್ಥೆಗಳ ವೇತನವನ್ನು ಎಚ್​ಆರ್​ಎಂಎಸ್​ನಡಿ ತರುವುದು
* ಆಡಳಿತ ಸುಧಾರಣೆಯಾದಲ್ಲಿ ಬದ್ಧ ವೆಚ್ಚ ಕಡಿಮೆಯಾಗಲಿದೆ
* ಎಲ್ಲ ಯೋಜನೆಗಳ ಮೇಲ್ವಿಚಾರಣೆಗೆ ಪಿಎಫ್​ಎಂಎಸ್​ನಡಿ ತರುವುದು.
* ವೆಚ್ಚಗಳ ಸುಧಾರಣೆಗೆ ಕ್ರಿಯಾ ಯೋಜನೆ ಕಡ್ಡಾಯ ಮಾಡುವುದು
ಸಹಾಯಧನಗಳ ಕತ್ತರಿ ಎಷ್ಟು?
(ಕೋಟಿ ರೂ.ಗಳಲ್ಲಿ)
ಇಲಾಖೆ 2019-20 2020-21 ಕಡಿತ ಮೊತ್ತ
ಕೃಷಿ, ತೋಟಗಾರಿಕೆ 2865.59 2661.32 204.27
ಹಾಲು 1362.27 1250.00 112.27
ಮಹಿಳಾ ಮತ್ತು ಮಕ್ಕಳ ಕಲ್ಯಾಣ 309.42 100.00 209.42
ವಸತಿ 2057.10 1250.00 807.10
ಶಿಕ್ಷಣ 538.11 390.46 147.65
ಆಹಾರ 3755.00 2546.00 1209.00
ಸರ್ಕಾರಕ್ಕೆ ಸವಾಲು
ಸಾಲ ವಸೂಲಿ
ಸರ್ಕಾರದ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಸರ್ಕಾರ ನೀಡಿರುವ ಸಾಲ ಮುಂದಿನ ವರ್ಷಕ್ಕೆ 4271.72 ಕೋಟಿ ರೂ.ಗೆ ತಲುಪಲಿದೆ. ಆ ಸಾಲ ವಸೂಲಿ ಮಾಡಲು ಆಡಳಿತ ಇಲಾಖೆಗಳ ಜತೆ ನಿರಂತರ ಸಭೆ ನಡೆಸಲು ನಿರ್ಧರಿಸಲಾಗಿದೆ.
| ರುದ್ರಣ್ಣ ಹರ್ತಿಕೋಟೆ
ಡಿ.ಕೆ.ಶಿವಕುಮಾರ್​ಗೆ ಕೆಪಿಸಿಸಿ ಅಧ್ಯಕ್ಷನ ಪಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
