|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಮೇಕೆದಾಟು ಯಾತ್ರೆ ಬಳಿಕ ಎದೆಯುಬ್ಬಿಸಿ ಆತ್ಮವಿಶ್ವಾಸದಿಂದ ಮುಂದಿನ ಅವಧಿಗೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ಭಾವನಾತ್ಮಕ ಹೊಡೆತಕ್ಕೆ ಸಿಲುಕಿ ಬೆವತು ಹೋಗಿದ್ದಾರೆ. ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ನಿರೀಕ್ಷಿತ ಸಾಧನೆ ಮಾಡದಿರುವುದು ಸೇರಿ ಹಿಜಾಬ್ ಬೆಳವಣಿಗೆ, ದಿ ಕಶ್ಮೀರ್ ಫೈಲ್ಸ್ ಸಿನಿಮಾ ಪ್ರಚಾರದಿಂದ ರಾಜಕೀಯವಾಗಿ ಪಕ್ಷದ ಮೇಲಾಗುತ್ತಿರುವ ಪರಿಣಾಮದಿಂದ ರಾಜ್ಯ ಕೈ ನಾಯಕರು ಚಿಂತೆಗೀಡಾದಂತೆ ಕಾಣಿಸಿದೆ.
ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ, ಪಕ್ಷದ ಪ್ರಮುಖ ಸ್ಥಾನದಲ್ಲಿರುವ ನಾಯಕರು ನಾಲ್ಕು ದಿನಗಳ ಹಿಂದೆ ಕೆಲವು ಶಾಸಕರೊಟ್ಟಿಗೆ ಖಾಸಗಿ ಹೋಟೆಲ್​ನಲ್ಲಿ ಅನೌಪಚಾರಿಕ ಸಭೆ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪರೋಕ್ಷ ಪ್ರಚಾರವನ್ನು ಎದುರಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಅಧಿವೇಶನ ನಡೆದ ಬಹುತೇಕ ದಿನಗಳಲ್ಲಿ ವಿಧಾನಸಭೆ ಮೊಗಸಾಲೆಯಲ್ಲಿ ಗುಂಪಾಗಿ ಚರ್ಚೆ ನಡೆಸಿದ್ದಾರೆ. ಸೋಮವಾರವೂ ಈ ಸರಣಿ ಸಭೆ ಮುಂದುವರಿಯಲಿದೆ.
ಬಿಜೆಪಿಯ ಭಾವನಾತ್ಮಕ ರಾಜಕೀಯ ದಾಳ ನಮ್ಮನ್ನೇ ಗುರಿಯಾಗಿಸಿದೆ. ದಿ ಕಶ್ಮೀರ್ ಫೈಲ್ಸ್ ಚಿತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಇಮೇಜ್​ಗೆ ಧಕ್ಕೆ ಮಾಡುತ್ತಿದ್ದಾರೆ, 30 ವರ್ಷದ ಹಿಂದೆ ಆಗಿಹೋದ ಘಟನೆ ಮತ್ತು ಆಸಂದರ್ಭದಲ್ಲಿ ಯಾವ ಪರಿಸ್ಥಿತಿ ಇತ್ತೋ ತಿಳಿಯದು. ಬಿಜೆಪಿಯವರಿಗೆ ಈಗ ನಮ್ಮನ್ನು ಹಣಿಯಲು ಅದೇ ವಿಷಯವಾಗಿದೆ. ಜನರೂ ತಮಗೆ ಸಂಕಷ್ಟಕ್ಕೀಡು ಮಾಡುತ್ತಿರುವ ವಿಷಯ ಬದಿಗಿಟ್ಟು ಭಾವನಾತ್ಮಕ ಬಲೆಗೆ ಸಿಲುಕುತ್ತಿದ್ದಾರೆ, ಇದರಿಂದ ಹೊರಬರುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹಿರಿಯ ನಾಯಕರು ಉಸುರಿದ್ದಾರೆ.
ಜನ ಸಾಮಾನ್ಯರು ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಹೆಚ್ಚು ಗಮನ ಕೊಡದೆ ಬಿಜೆಪಿಯ ಕಶ್ಮೀರ್ ಫೈಲ್ಸ್, ಹಿಜಾಬ್ ಅಜೆಂಡಾಕ್ಕೆ ಮಹತ್ವಕೊಡುತ್ತಿರುವುದು ನಮ್ಮ ಪಾಲಿಗಂತೂ ಕಳವಳಕಾರಿ. ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗ ಇಂತಹ ಬೆಳವಣಿಗೆ ಪಕ್ಷದ ಪಾಲಿಗೆ ಕಷ್ಟದ ಸನ್ನಿವೇಶ ಎಂದು ಕೈ ನಾಯಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಗಣನೀಯ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಸೇರಿ ಹತ್ತಾರು ಅಡೆತಡೆ ಇದ್ದಾಗಲೂ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ ಎಂದರೆ ಇದು ಗಂಭೀರವಾಗಿ ಕಾಂಗ್ರೆಸ್ ಪಾಲಿಗೆ ಕಷ್ಟದ ದಿನಗಳು. ಬಿಜೆಪಿಯವರು ಭ್ರಷ್ಟಾಚಾರ ಮಾಡಿದರೂ ಅದು ‘ಪಿಚ್’ ಆಗುತ್ತಿಲ್ಲ. ರಾಜ್ಯದಲ್ಲೂ ಚುನಾವಣೆ ಬರುತ್ತಿದೆ, ಬಿಜೆಪಿಯನ್ನು ಎದುರಿಸುವ ಬಗೆಗೆ ಏನು ಮಾಡಬೇಕೆಂದೇ ತೋಚುತ್ತಿಲ್ಲ ಎಂಬುದು 2-3 ಬಾರಿ ಚುನಾವಣೆ ಗೆದ್ದ ಶಾಸಕರ ಕಳವಳವಾಗಿದೆ.
ಮುಂದೇನು?:ಜಿಲ್ಲಾ ಹಾಗೂ ತಾಲೂಕು ಮಟ್ಟದ ಮುಖಂಡರಿಗೆ ಪತ್ರ ಬರೆಯುವ ಬಗ್ಗೆ ತೀರ್ವನಿಸಿದ್ದೇವೆ. ಬಿಜೆಪಿ ಯಾವ ರೀತಿ ಭಾವನಾತ್ಮಕವಾಗಿ ಹೋಗುತ್ತಿದೆ, ವಾಸ್ತವ ಏನು? ಕಾಂಗ್ರೆಸ್ ಪಾತ್ರವೇನು? ನಮ್ಮ ಬದ್ಧತೆ ಏನು ಎಂದು ಜನರಿಗೆ ತಿಳಿಸಿ ಹೇಳುವುದು, ಬಿಜೆಪಿಯ ಪ್ರಚಾರಕ್ಕೆ ಬಲಿಯಾಗದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸಲು ಒಂದು ಯೋಜನೆ ಸಿದ್ಧವಾಗುತ್ತಿದೆ. ಪಕ್ಷದ ಅಧ್ಯಕ್ಷರು, ಪ್ರತಿಪಕ್ಷ ನಾಯಕರ ಸಮ್ಮುಖ ಅಂತಿಮ ಚರ್ಚೆ ನಡೆದು ಅಂತಿಮಗೊಳಿ ಸಲಾಗುತ್ತದೆ ಎಂದು ನಾಯಕರೊಬ್ಬರು ಹೇಳಿಕೊಂಡಿದ್ದಾರೆ.
ಜನ ದಡ್ಡರಲ್ಲ. ಬಿಜೆಪಿಯವರು ಸಮಾಜ ಒಡೆಯಲು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬೆಲೆ ಏರಿಕೆ ಸೇರಿ ಸಾಕಷ್ಟು ಗಂಭೀರ ವಿಚಾರಗಳಿವೆ. ಕಬ್ಬಿಣದ ಬೆಲೆ 90 ಸಾವಿರದಿಂದ 1 ಲಕ್ಷ ರೂ.ವರೆಗೆ ಮುಟ್ಟಿದೆ. ಸಿಮೆಂಟ್ ಚೀಲಕ್ಕೆ 450 ರೂ. ಆಗಿದೆ. ಇವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸಣ್ಣ ಮನೆ ಕಟ್ಟುವವರ ಕಥೆ ಏನಾಗಬೇಕು?
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಹಿಂದುತ್ವ ಹಾಗೂ ಭಾವನಾತ್ಮಕ ವಿಷಯ ಇಟ್ಟುಕೊಂಡು ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಹಿಜಾಬ್ ವಿವಾದ ಹಾಗೂ ದಿ ಕಶ್ಮೀರ್ ಫೈಲ್ಸ್ ಚಲನಚಿತ್ರದಿಂದ ರಾಜ್ಯದ ಜನರ ಮನಸ್ಸು ಬದಲಾವಣೆ ಮಾಡಲು ಆಗುವುದಿಲ್ಲ. ಪಕ್ಷಕ್ಕೆ ಹಾನಿ ಮಾಡಿದವರನ್ನು ಹಾಗೂ ದ್ರೋಹ ಬಗೆದವರನ್ನು ಮರಳಿ ಕಾಂಗ್ರೆಸ್​ಗೆ ಸೇರಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಬರುವ ಅನ್ಯ ಪಕ್ಷೀಯರನ್ನು ಸ್ವಾಗತಿಸುತ್ತೇವೆ.
|ಸಿದ್ದರಾಮಯ್ಯವಿಧಾನಸಭೆ ಪ್ರತಿಪಕ್ಷ ನಾಯಕ
ಅಭಿಪ್ರಾಯವೇ ಮುಳುವು:ಕೈ ನಾಯಕರಿಗೆ ಕೆಲವು ವಿಷಯ ಅರಗಿಸಿಕೊಳ್ಳಲಾಗದ ಪರಿಸ್ಥಿತಿ ತಂದೊಡ್ಡುತ್ತಿದೆ, ಪರ ಅಥವಾ ವಿರೋಧದ ಅಭಿಪ್ರಾಯ ನೀಡದಂತಹ ಸಂದಿಗ್ಧತೆ ಇತ್ತೀಚೆಗೆ ಎದುರಾಗುತ್ತಿದೆ. ಹಿಜಾಬ್ ಬಗ್ಗೆ ಕೋರ್ಟ್ ತೀರ್ಪು ಅಥವಾ ಪಠ್ಯದಲ್ಲಿ ಭಗವದ್ಗೀತೆ ವಿಷಯದಲ್ಲಿ ಕಾಂಗ್ರೆಸ್ ಕಡೆಯಿಂದ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೆಂಬುದೇ ಸವಾಲಾಗಿದೆ. ಯಾವುದೇ ನಿಲುವು ತೆಗೆದುಕೊಂಡರು ಪಕ್ಷಕ್ಕೆ ಹಾನಿ ಎಂಬುದು ಹಸಿ ಉದಾಹರಣೆಯಾಗಿದೆ, ಪಕ್ಷಕ್ಕೆ ಗರಗಸ ಕೊಯ್ದಂತಹ ಅನುಭವ. ಹಿಂದೆ ಹೆಜ್ಜೆ ಇಟ್ಟರೂ ಪೆಟ್ಟು, ಮುಂದೆ ಇಟ್ಟರೂ ಹೊಡೆತ ಬೀಳುವ ಆತಂಕ. ಇದೇ ಕಾರಣಕ್ಕೆ ಹಿರಿಯ ಶಾಸಕರೆಲ್ಲ ಮುಗುಮ್ಮಾಗಿ ಮೌನಕ್ಕೆ ಶರಣಾಗಿದ್ದಾರೆ.
ಬೆಂಗಳೂರು:ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಕಾಂಗ್ರೆಸ್ ಸೋಮವಾರ ಸಂಜೆ ಖಾಸಗಿ ಹೋಟೆಲ್​ನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಇನ್ನೂ 8 ದಿನ ಕಲಾಪ ನಡೆಯಲಿದ್ದು, ಈ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳಲು ಪಕ್ಷ ಬಯಸಿದೆ. ಶೇ.40 ಪರ್ಸೆಂಟ್ ಕಮೀಷನ್ ಆರೋಪ ಪ್ರಕರಣವನ್ನು ಹೆಚ್ಚೆಚ್ಚು ಚರ್ಚೆಯಾಗುವಂತೆ ಮಾಡುವ ನಿಟ್ಟಿನಲ್ಲಿ ನಿಲುವಳಿ ಸೂಚನೆ ಮಂಡಿಸಬೇಕೆಂಬ ಅಭಿಪ್ರಾಯ ಪಕ್ಷದ ಪ್ರಮುಖ ನಾಯಕರಲ್ಲಿದೆ. ಇದೇ ವೇಳೆ ಕ್ಷೇತ್ರದ ಬಗ್ಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ, ಅನುದಾನ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಬೇಕೆಂಬ ಅಭಿಪ್ರಾಯ ಹೊಸ ಶಾಸಕರಲ್ಲಿದೆ. ಹೀಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಪಷ್ಟತೆ ತರಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ಕಾಂಗ್ರೆಸ್ ಕಡೆಯಿಂದ ಸಲ್ಲಿಕೆಯಾದ ನಿಲುವಳಿ ಸೂಚನೆ ಪ್ರಸ್ತಾವನೆ ತಿರಸ್ಕಾರವಾಗಿ ನಿಯಮ 69ರಡಿ ಸಾರ್ವಜನಿಕ ಮಹತ್ವದ ಜರೂರು ಚರ್ಚೆಗೆ ಅವಕಾಶ ದೊರೆತಿದೆ. ಆದರೆ ಜೆಡಿಎಸ್ ಹಿಜಾಬ್ ಹಾಗೂ ಕಾಡಾನೆ ದಾಳಿ ವಿಷಯದಲ್ಲಿ ನಿಯಮ 69ರಡಿ ಚರ್ಚೆಗೆ ಅವಕಾಶ ಕೋರಿದೆ. ಹೀಗಿರುವಾಗ ಜೆಡಿಎಸ್ ಹೆಚ್ಚೆಚ್ಚು ಅವಕಾಶ ಬಳಸಿಕೊಳ್ಳಬಹುದು, ಸರ್ಕಾರ ಕೂಡ ಜೆಡಿಎಸ್ ಪರ ವರ್ತಿಸುವ ಸಾಧ್ಯತೆ ಹೆಚ್ಚಿದೆ. ಇದು ಕಾಂಗ್ರೆಸ್ ಪಾಲಿಗೆ ಕಸಿವಿಸಿ ಉಂಟು ಮಾಡಿದೆ. ಹೀಗಾಗಿಯೇ ಮಂಗಳವಾರ ಕಲಾಪದಲ್ಲಿ ಹೋರಾಟಕ್ಕೆ ಧುಮುಕಲು ಕಾಂಗ್ರೆಸ್ ಬಯಸಿದೆ. ಜತೆಗೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೆಚ್ಚೆಚ್ಚು ಬಿಂಬಿಸಬೇಕೆಂದು ಈಗಾಗಲೆ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ನಿರ್ಧಾರವಾಗಿದ್ದು, ಶಾಸಕರ ಸಮ್ಮುಖವೂ ಸಭೆಯ ನಿಲುವಳಿ ತಿಳಿಸಲಾಗುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
