ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯ ವಿಚಾರದಲ್ಲಿ ನಡೆದಿರುವ ಜಟಾಪಟಿಯ ಮುಂದುವರಿದಿದ್ದು, ಬುಧವಾರ ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಪ್ರತಿಭಟನೆಗೆ ಮುಂದಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನವದೆಹಲಿಯ ಜಂತರ್​ವುಂಥರ್​ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೆ, ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲಿದೆ.
ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳು ಕೇಂದ್ರದ ಅನುದಾನದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿವೆ. ಪ್ರತಿಷ್ಠೆಯಾಗಿ ತೆಗೆದುಕೊಂಡು ಹೋರಾಟಕ್ಕೆ ಮುಂದಾಗಿವೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಕಾಂಗ್ರೆಸ್ ಹೋರಾಟ: ರಾಜ್ಯಕ್ಕೆ 2017-18 ರಿಂದ 1.87 ಲಕ್ಷ ಕೋಟಿ ರೂ.ಗಳಷ್ಟು ಮೊತ್ತ ನಷ್ಟವಾಗಿದೆ. ಅನೇಕ ಯೋಜನೆಗಳಿಗೆ ಮಂಜೂರಾತಿ ನೀಡಿಲ್ಲ. ಬರ ಪರಿಹಾರ ಬಿಡುಗಡೆ ಮಾಡಲಿಲ್ಲವೆಂಬುದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ದೂರು. ಆದ್ದರಿಂದಲೇ ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನ ನಡೆಸಿದ್ದು ಅದರ ಭಾಗವಾಗಿಯೇ ದೆಹಲಿಯಲ್ಲಿ ಪ್ರತಿಭಟನೆ ಮೂಲಕ ಇಡೀ ದೇಶದ ಗಮನ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
ಅನುದಾನ ತಾರತಮ್ಯ ವಿಚಾರದಲ್ಲಿಯೇ ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ಕೊಲ್ಕತ್ತದಲ್ಲಿ ಇತ್ತೀಚೆಗೆ ಎರಡು ದಿನ ಧರಣಿ ನಡೆಸಿದ್ದರು. ಕೇರಳ ಸಿಎಂ ಪಿನರಾಯಿ ಫೆ.8 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಆ ನಂತರ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಸಹ ಧರಣಿಗೆ ಮುಂದಾಗಿದ್ದಾರೆ. ರಾಜ್ಯದ ಎಲ್ಲ ಸಚಿವರು, ಶಾಸಕರು, ಸಂಸದರು ಮಂಗಳವಾರ ಸಂಜೆ ದೆಹಲಿ ತಲುಪಿದ್ದರು. ಶಾಸಕರನ್ನು ಕರೆ ತರುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿತ್ತು. ಸೋಮವಾರವೇ ದೆಹಲಿಗೆ ತೆರಳಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅಲ್ಲಿನ ಸಿದ್ಧತೆ ಪರಿಶೀಲಿಸಿದ್ದರು. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಸಹ ಪ್ರತಿಭಟನೆಗೆ ಗೈರಾಗದಂತೆ ಶಾಸಕರಿಗೆ ಸೂಚಿಸಿದ್ದರು.
ಬುಧವಾರವೇ ಕೆಲ ಕಾಂಗ್ರೆಸ್ ಸಮಿತಿಗಳು ಆಯಾ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ. ಕೆಆರ್​ಎಸ್ ಪಕ್ಷದ ಕಾರ್ಯಕರ್ತರು ಕೇಂದ್ರದ ಅನ್ಯಾಯದ ವಿರುದ್ಧ ಬುಧವಾರ ಫ್ರೀಡಂ ಪಾರ್ಕ್​ನಲ್ಲಿ ಧರಣಿ ಹಮ್ಮಿಕೊಂಡಿದ್ದಾರೆ. ಸಿಪಿಐಎಂ ಗುರುವಾರ ಪ್ರತಿಭಟನೆ ನಡೆಸುತ್ತಿದೆ.
ನೀತಿ ಆಯೋಗದ ಹಿಂದಿನ ಸಿಇಒ ಹೇಳಿಕೆಗೆ ಉತ್ತರವೇನು?ಹಣಕಾಸು ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಸ್ವತಃ ನೀತಿ ಆಯೋಗದ ಸಿಇಒ ಬಹಿರಂಗಪಡಿಸಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪ್ರಶ್ನಿಸಿದ್ದಾರೆ. ಸಂಸತ್ತಿನಲ್ಲಿ ಹಣಕಾಸು ಆಯೋಗದ ಪ್ರಾವಿತ್ರ್ಯತೆ ಬಗ್ಗೆ ಮಾತನಾಡಿರುವುದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರಶ್ನಿಸಿರುವ ಸಿಎಂ, ಕರ್ನಾಟಕಕ್ಕೆ ವಿಶೇಷ ಅನುದಾನ 5,495 ಕೋಟಿ ರೂ. ನೀಡುವಂತೆ ಆಯೋಗ ಮಾಡಿದ್ದ ಶಿಫಾರಸು ತಿರಸ್ಕರಿಸಿದ್ದು ಏಕೆ? ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್​ನಲ್ಲಿ ಘೋಷಣೆ ಮಾಡಿದ್ದ 5,300 ಕೋಟಿ ರೂ.ಗಳನ್ನು ಇದುವರೆಗೂ ಏಕೆ ಬಿಡುಗಡೆ ಮಾಡಿಲ್ಲ? ಎಂದು ಕೇಳಿದ್ದಾರೆ.
ಪ್ರತಿಭಟನೆಗೂ ಮುನ್ನ ಅನುದಾನ ಕೊಡಿಸಿ: ಬಿಜೆಪಿಗೆ ಪರಮೇಶ್ವರ್ ಸವಾಲು
ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೂ ಮುನ್ನ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸಲಿ. ಎಷ್ಟು ಅನುದಾನ ಬಂದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಹೇಳುತ್ತಿದೆ, ಎಷ್ಟು ಹಣ ಕೊಟ್ಟಿದ್ದೇವೆ ಎಂಬುದನ್ನು ಕೇಂದ್ರ ಸರ್ಕಾರ ಅಂಕಿ-ಅಂಶಗಳ ಸಹಿತ ಹೇಳಲಿ.
ಡಾ. ಜಿ. ಪರಮೇಶ್ವರ | ಗೃಹ ಸಚಿವ
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿರುವ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಗೇ ಅನುಮಾನವಿದೆ. ಹೀಗಾಗಿ ಕಾಂಗ್ರೆಸ್​ನ ಎಲ್ಲ ಶಾಸಕರನ್ನು ದೆಹಲಿಗೆ ಪಿಕ್ನಿಕ್ ಕರೆದೊಯ್ಯುತ್ತಿದ್ದಾರೆ. ಅಲ್ಲಿ ಪ್ರತಿಭಟನೆ ನಾಟಕ ಮಾಡಲು ಮುಂದಾಗಿದ್ದಾರೆ.
| ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ
ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವಲ್ಲ, ಇದು ಟಿಪ್ಪು ಆಡಳಿತ. ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ.
| ಎನ್. ರವಿಕುಮಾರ್, ಎಂಎಲ್​ಸಿ
ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಿಗೆ ಅನುದಾನ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹೀಗಾಗಿ ದೆಹಲಿಯಲ್ಲಿ ಅನಿವಾರ್ಯವಾಗಿ ಪ್ರತಿಭಟನೆ ಮಾಡಲಾಗುತ್ತಿದೆ.
| ದಿನೇಶ್ ಗುಂಡೂರಾವ್, ಸಚಿವ
ಸಂಸದರಿಗೆ ಸಿದ್ದರಾಮಯ್ಯ ಪತ್ರಬೆಂಗಳೂರು: ನವದೆಹಲಿಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರಾಜ್ಯದ ಸಂಸದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಆಹ್ವಾನಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ, ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಾಮಾಜಿಕ ನ್ಯಾಯ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ 28 ಲೋಕಸಭಾ ಹಾಗೂ 12 ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ಸಂಸದರು, ಶಾಸಕರ ಹೋರಾಟಕಾಂಗ್ರೆಸ್ ಪ್ರತಿಭಟನೆ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿ ಧರಣಿಯ ನಿರ್ಧಾರವನ್ನು ಬಿಜೆಪಿ ಕೈಗೊಂಡಿತ್ತು. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕಿಂತ ಮೋದಿ ಸರ್ಕಾರ ಮೂರು ಪಟ್ಟು ಹೆಚ್ಚು ಅನುದಾನ ನೀಡಿದೆ ಎಂಬುದನ್ನು ಜನರಿಗೆ ತಿಳಿಸಲು ಬಿಜೆಪಿ ಧರಣಿಗೆ ಮುಂದಾಗಿದೆ. ಜತೆಗೆ, ಬರಪೀಡಿತ ರೈತರಿಗೆ ಪರಿಹಾರ ನೀಡಿಲ್ಲವೆಂಬುದು ಬಿಜೆಪಿ ಆರೋಪ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದ ಪ್ರತಿಭಟನೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್​ನ ಬಿಜೆಪಿ ಸದಸ್ಯರು ಭಾಗವಹಿಸಲಿದ್ದಾರೆ.
ಸಂಸತ್ ಎದುರು ಪ್ರತಿಭಟನೆ:ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಂಸದರು ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 10 ಗಂಟೆಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಅಯೋಜಿಸಿದ್ದಾರೆ.
ಜೋಶಿ ತಿರುಗೇಟುಕರ್ನಾಟಕದ ತೆರಿಗೆ ಹಣ ಪಡೆದು ನ್ಯಾಯಯುತ ತೆರಿಗೆ ಪಾಲನ್ನು ನೀಡುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ವಾದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಇದೇ ವಾದವನ್ನು ಬೆಂಗಳೂರಿಗೆ ಅನ್ವಯಿಸಿದರೆ ಕೋಲಾರ, ಬೀದರ್ ಕಥೆ ಏನು ಎಂದು ಪ್ರಶ್ನಿಸಿದ್ದಾರೆ. ಕಲ್ಲಿದ್ದಲು ವಿಚಾರದಲ್ಲಿ ಹೀಗೆ ಮಾಡಿದರೆ ಇಡೀ ದೇಶ ಕತ್ತಲಲ್ಲಿ ಇರಲಿದೆ. ಸಿದ್ದರಾಮಯ್ಯ ಮಾತಿನಲ್ಲಿ ತರ್ಕವಿಲ್ಲ. ಆಯೋಗ ಮಾಡಿದ ಶಿಫಾರಸು ಅಂತಿಮ. ಕರ್ನಾಟಕಕ್ಕೆ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿಲ್ಲ. ರಾಜ್ಯದಲ್ಲಿ ಸಂಗ್ರಹಿಸಿದ ಜಿಎಸ್​ಟಿಯಲ್ಲಿನ ಪಾಲು ರಾಜ್ಯದ ಬಳಿ ಇದೆ. ಅಂತಾರಾಜ್ಯ ಜಿಎಸ್​ಟಿ ಶೇ. 50 ರಾಜ್ಯಕ್ಕೆ ಹೋಗುತ್ತಿದೆ. ಈ ತೆರಿಗೆ ಪದ್ದತಿ ನೆಹರೂ ಕಾಲದಿಂದಲೂ ಇದೆ. ನಯಾಪೈಸಾ ಜಿಎಸ್​ಟಿ ಬಾಕಿ ಉಳಿಸಿಕೊಂಡಿಲ್ಲ. 50 ವರ್ಷದಲ್ಲಿ ರೂ 6,280 ಕೋಟಿ ಬಡ್ಡಿರಹಿತ ಸಾಲ ನೀಡಲಾಗಿದೆ. 18,000 ಕೋಟಿ ರೂ.ಅನುದಾನ ರಾಜ್ಯಕ್ಕೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ದಿಲ್ಲಿಗೆ ಯಾತ್ರೆ ಹೊರಟಿರುವ ಕಾಂಗ್ರೆಸ್ ಪಕ್ಷದ ಎರಡು ತಲೆ ರಾಜಕಾರಣ ಈಗ ಬೆತ್ತಲಾಗಿದೆ. ಅದರ ವರಸೆ ಹೇಗಿದೆ ಎಂದರೆ, ಕರ್ನಾಟಕಕ್ಕೆ ಒಂದು ನೀತಿ. ಕೇರಳಕ್ಕೆ ಮತ್ತೊಂದು ನೀತಿ! ಅದರ ಉದ್ದೇಶ ಲೋಕಸಭೆ ಚುನಾವಣೆ ಅಷ್ಟೇ. ರಾವಣ ತಲೆಗಳ ಕಾಂಗ್ರೆಸ್ ರಾಜಕಾರಣ ಬಯಲಾಗಿದೆ.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ನಕಲಿ ದಾಖಲೆ ಸೃಷ್ಟಿಸಿ 16 ಎಕರೆ ಭೂಮಿ ಕಬಳಿಕೆ ಆರೋಪ: ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ ಬಂಧನ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 + nine =
Remember me
