| ಶ್ರೀಕಾಂತ್ ಶೇಷಾದ್ರಿ
ಬೆಂಗಳೂರು:2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೂತ್ ಸಮಿತಿ ಮೇಲೆ ಹೆಚ್ಚು ಅವಲಂಬಿತವಾಗಿ ಗೆಲುವಿನ ದಡ ತಲುಪಿತ್ತು. ಅದೇ ಹಾದಿಯಲ್ಲಿ ಸಾಗಲು ರಾಜ್ಯ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬೂತ್ ಸಮಿತಿ ಬಲವರ್ಧನೆಗೆ ಹೆಚ್ಚು ಒತ್ತು ನೀಡಲು ಕೈ ನಾಯಕರು ನಿರ್ಧರಿಸಿದ್ದು, ಕೇರಳದಲ್ಲಿ ಮಾಡಿದ ಪ್ರಯತ್ನಗಳನ್ನು ಅಧ್ಯಯನ ಮಾಡಿ ಅಲ್ಲಿನ ಉತ್ತಮ ಅಂಶಗಳನ್ನು ಇಲ್ಲಿ ಅಳವಡಿಸುವ ಬಗ್ಗೆ ಚರ್ಚೆ ನಡೆದಿವೆ.
1500ಕ್ಕಿಂತ ಹೆಚ್ಚು ಮತದಾರರಿರುವ ಒಂದು ಬೂತ್​ನಲ್ಲಿ 20ರಿಂದ 22 ಸಂಖ್ಯೆಯಲ್ಲಿ ಸದಸ್ಯರಿರುವ ಸಮಿತಿ ಮಾಡಿ, ಪ್ರತಿ ಮನೆಯವರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕೆಂಬ ಕಲ್ಪನೆ ಇದಾಗಿದೆ. ಶೀಘ್ರವೇ ಹಿರಿಯ ನಾಯಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿ, ಬೂತ್ ಸಮಿತಿ ಕುರಿತಂತೆ ಮಾರ್ಗಸೂಚಿ ಹೊರತರಲು ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಬೂತ್ ಸಮಿತಿ ಬಲವಾಗಿದ್ದರಷ್ಟೇ ಬಿಜೆಪಿಗೆ ಬಲವಾದ ಪ್ರತಿರೋಧ ಒಡ್ಡಬಹುದೆಂಬ ಸ್ಪಷ್ಟತೆ ಕಂಡುಕೊಂಡಿರುವ ಹೊಸ ಅಧ್ಯಕ್ಷರು, ಈ ನಿಟ್ಟಿನಲ್ಲಿ ವಿವಿಧ ಚಿಂತನೆಯನ್ನೂ ಹೊರಗೆಡವಿದ್ದಾರೆ. ಪ್ರತಿಯೊಬ್ಬರೂ ಬೂತ್ ಸಮಿತಿ ಯಿಂದಲೇ ಪ್ರತಿನಿಧಿಬೇಕು, ಪ್ರಮುಖ ನಾಯಕರೂ ಬೂತ್ ರಚನೆಯಲ್ಲಿ ಪಾಲ್ಗೊಂಡು ಬಲಪಡಿಸಬೇಕೆಂದು ಹೇಳಿದ್ದಾರೆ. ಕೊನೇ ಹಂತದ ಈ ಘಟಕದಲ್ಲಿ ಯುವ ಕಾಂಗ್ರೆಸ್, ಎನ್​ಎಸ್​ಯುುಐ, ಸೇವಾದಳ, ಮಹಿಳಾ ಕಾಂಗ್ರೆಸ್ ಪ್ರತಿನಿಧಿಗಳು ಕಡ್ಡಾಯವಾಗಿ ಇರುವಂತೆ ಮಾಡಲಾಗುತ್ತದೆ. ಇದರೊಟ್ಟಿಗೆ, ಪ್ರತಿ ಬೂತ್ ವ್ಯಾಪ್ತಿಯಲ್ಲಿ ಯಾವ ಸಮುದಾಯ ಪ್ರಭಾವಶಾಲಿ? ಮತಗಳ ವರ್ಗೀಕರಣ ಹೇಗಿದೆ? ಸಾಮೂಹಿಕವಾಗಿ ಕಾಂಗ್ರೆಸ್ ಕೈ ತಪ್ಪಿರುವ ಮತ ಯಾವ ವರ್ಗದ್ದು? ಅಥವಾ ಈಗಾಗಲೆ ಕೈ ಹಿಡಿದ ಸಮುದಾಯವನ್ನು ಮುಂದೆಯೂ ಕೈತಪ್ಪದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡುವ ಚಿಂತನೆ ಇದೆ. ಈ ಮೂಲಕ ಚುನಾವಣೆ ವೇಳೆ ನಡೆಯುವ ಜಾತಿ ಸಮೀಕರಣ ಲೆಕ್ಕಾಚಾರವನ್ನು ಈಗಿನಿಂದಲೇ ಮೈಕ್ರೋ ಹಂತದಲ್ಲಿ ಮಾಡಲು ಕಾಂಗ್ರೆಸ್ ಹೆಜ್ಜೆ ಇಟ್ಟಂತಾಗಿದೆ.
ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ: ಕೇರಳದಲ್ಲಿ ಬೂತ್ ಸಮಿತಿಗಳಲ್ಲದೇ ಮಹಿಳಾ ಬೂತ್ ಸಮಿತಿಗಳೆಂದು ಪ್ರತ್ಯೇಕವಾಗಿಯೂ ಇದೆ. ಮಹಿಳೆಯರು ಹೆಚ್ಚೆಚ್ಚು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಷ್ಟೂ ಚುನಾವಣೆಯಲ್ಲಿ ಲಾಭವಾಗಲಿದೆ ಎಂಬ ಲೆಕ್ಕಾಚಾರವೂ ಅಡಗಿದೆ. ಪಕ್ಷ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಿದೆ ಎಂಬ ಸಕಾರಾತ್ಮಕ ಅಂಶವೂ ಜನರ ಮಧ್ಯೆ ಹೋಗಲಿದೆ ಎಂಬ ಆಲೋಚನೆಯಲ್ಲೇ ಪ್ರಯತ್ನ ನಡೆಯುತ್ತಿದೆ.
ರಾಜ್ಯದಲ್ಲಿ 58 ಸಾವಿರ ಬೂತ್​ಗಳಿದ್ದು, ಸರಾಸರಿ 20 ಜನರ ಸಮಿತಿ ರಚಿಸಿ ಅವು ಸಕ್ರಿಯವಾಗಿದ್ದರೆ 10-11 ಲಕ್ಷ ಸಕ್ರಿಯ ಕಾರ್ಯಕರ್ತರು ಪಕ್ಷಕ್ಕೆ ಸಿಕ್ಕಂತಾಗುತ್ತದೆ. ಜಾಲತಾಣದಲ್ಲೂ ಅವರನ್ನು ಕ್ರಿಯಾಶೀಲರಾಗಿಟ್ಟರೆ, ಅದೇ ಹಾದಿಯಲ್ಲಿ ಬರುವ ಬಿಜೆಪಿಯನ್ನು ಹಣಿಯಬಹುದೆಂಬ ಲೆಕ್ಕಾಚಾರದಲ್ಲೇ ಕೈ ಪಾಳಯದಲ್ಲಿ ಪ್ರಕ್ರಿಯೆ ನಡೆದಿದೆ.
ಡಿಕೆಶಿ ಮೂರು ಯೋಜನೆ:ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಕೆಪಿಸಿಸಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಪಕ್ಷ ಸಂಘಟನೆಗೆ ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ರಾಜ್ಯ ಮುಖಂಡರೊಂದಿಗೆ ರ್ಚಚಿಸಿ ಮೂರು ಅಂಶಗಳತ್ತ ಗಮನ ಹರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಪ್ರಥಮ ಆದ್ಯತೆಯಾಗಿ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿದೆ. ಒತ್ತಡ ತಂತ್ರ, ಜಾತಿ ಓಲೈಕೆ, ಪ್ರಭಾವಿಗಳ ಹಿಂಬಾಲಕರಿಗೆ ಮಣೆ ಹಾಕದೇ ಯಾರು ಪಕ್ಷ ನಿಷ್ಠೆಹೊಂದಿ ಕೆಲಸ ಮಾಡುತ್ತಾರೋ ಅವರಿಗೆ ಅವಕಾಶ ನೀಡಲು ಹೊಸ ಅಧ್ಯಕ್ಷರು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ. ನೂರು ಸಂಖ್ಯೆಯೊಳಗಿನ ಪ್ರಭಾವಶಾಲಿ ಸ್ಮಾರ್ಟ್ ತಂಡ ಕಟ್ಟಲು ಬಯಸಿದ್ದು, ಈ ನಿಟ್ಟಿನಲ್ಲಿ ಯಾವ ಜಿಲ್ಲೆಯಿಂದ ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎಂಬ ಮಾಹಿತಿ ಕಲೆ ಹಾಕುವ ಕೆಲಸವೂ ನಡೆದಿದೆ. ಆದರೆ ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕರ ದಂಡೇ ಇರುವುದರಿಂದ ಪದಾಧಿಕಾರಿಗಳ ಆಯ್ಕೆ ದೊಡ್ಡ ಸವಾಲು. ಸಣ್ಣ ಸಮಸ್ಯೆಯಾದರೂ ಸ್ಥಳೀಯ ಮಟ್ಟದಲ್ಲಿ ಅದು ದೊಡ್ಡದಾಗುವ ಅಪಾಯವಿದೆ.
ಎರಡನೇಯದಾಗಿ ಜಿಲ್ಲಾ ಮತ್ತು ವಿಧಾನಸಭಾ ವಾರು ಕ್ಷೇತ್ರದಲ್ಲೂ ಸಂಘಟನೆಯಲ್ಲಿ ಕ್ರಿಯಾಶೀಲತೆ ತರಲು ಎಲ್ಲ 224 ಕ್ಷೇತ್ರಗಳಲ್ಲೂ ಮುಂದಿನ 120 ದಿನಗಳೊಳಗೆ ಕಾರ್ಯಾಗಾರ ನಡೆಸಲು ನಿಶ್ಚಯಿಸಿದ್ದಾರೆ. ಕರೊನಾ ನಿರ್ವಹಣೆಯಲ್ಲಿ ಸರ್ಕಾರದ ವಿಫಲತೆ, ಜನರಿಗೆ ಮುಟ್ಟದ ಆರ್ಥಿಕ ಪ್ಯಾಕೇಜ್, ಅಭಿವೃದ್ಧಿ ಚಟುವಟಿಕೆಗಳೂ ಇಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುತ್ತದೆ.
ಮೂರನೇ ಆದ್ಯತೆಯಾಗಿ ಡಿಸೆಂಬರ್​ನಲ್ಲಿ ಪಕ್ಷದ ಸಂಸ್ಥಾಪನಾ ದಿನವಿದ್ದು ಅಷ್ಟರೊಳಗೆ ಡಿಕೆಶಿ ರಾಜ್ಯ ಪ್ರವಾಸವನ್ನೂ ನಡೆಸಲು ಬಯಸಿದ್ದಾರೆ. ಅದರ ಬಗ್ಗೆ ಇನ್ನೂ ಪ್ರಾಥಮಿಕ ಹಂತದ ಚರ್ಚೆಯಷ್ಟೇ ನಡೆದಿದೆ. ಶಿವಕುಮಾರ್ ಒಬ್ಬರೇ ಪ್ರವಾಸದಿಂದ ಹೆಚ್ಚಿನ ಪರಿಣಾಮ ನಿರೀಕ್ಷೆ ಕಷ್ಟ, ಎಲ್ಲ ಮುಖಂಡರು ಹೋದರಷ್ಟೇ ವಿಶ್ವಾಸ ಮೂಡಿಸಲು ಸಾಧ್ಯವೆಂಬುದು ಅವರಿಗೂ ಗೊತ್ತಿದೆ. ಆ ನಿಟ್ಟಿನಲ್ಲಿ ಮುಖಂಡರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.
ಬೂತ್ ಸಮಿತಿಗೆ ಹೊಸ ರೂಪ ಕೊಡಲಾಗುತ್ತದೆ. ಎಲ್ಲ ನಾಯಕರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ.
| ಡಿ.ಕೆ.ಶಿವಕುಮಾರ್​ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − four =
Remember me
