ಬೆಂಗಳೂರು:ಜಗಜ್ಯೋತಿ ಬಸವಣ್ಣ ಅವರನ್ನು ಯಾರೂ ದೇವರನ್ನಾಗಿ ಮಾಡಲು ಹೋಗಬೇಡಿ. ಅವರು ಮನುಷ್ಯರಾಗಿ ಹುಟ್ಟಿ ಸನ್ಮಾರ್ಗದಲ್ಲಿ ನಡೆದು ಈಗಾಗಲೆ ದೇವರ ಸ್ಥಾನದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಶನಿವಾರ ಆಯೋಜಿಸಲಾಗಿದ್ದ ಬಸವ ಜಯಂತಿ ಸಮಾರಂಭ ಹಾಗೂ 25ನೇ ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಸವಣ್ಣರ ವೈಚಾರಿಕ ಚಿಂತನೆಯನ್ನು ನಾವು ಸಮಾಜದಲ್ಲಿ ಆಚರಣೆಗೆ ತರುವಂಥ ಪ್ರಯತ್ನಗಳ ಕಾರ್ಯಕ್ರಮ ರೂಪಿಸುವ ಕಾಲ ಬಂದಿದೆ. ಈ ಬಗ್ಗೆ ಅವರ ಅನುಯಾಯಿಗಳು ಹೆಚ್ಚಿನ ವಿಚಾರ ಮಾಡಬೇಕಿದೆ. ಬಸವಣ್ಣ ಅವರೂ ನಮ್ಮಂತೆಯೇ ಮನುಷ್ಯರಾಗಿ ಹುಟ್ಟಿದ್ದು, ಮೊದಲು ತನ್ನ ಅಂತ@ಕರಣವನ್ನು ಶುದ್ದಿ ಮಾಡಿಕೊಂಡರು. ಒಬ್ಬ ಸಾಮಾನ್ಯ ಮನುಷ್ಯ ಸನ್ಮಾರ್ಗದಲ್ಲಿ ಹೋದರೆ, ದೇವ ಮಾನವನಾಗಬಲ್ಲ. ದೇವರೇ ಆಗಬಲ್ಲ ಎಂದು ತೋರಿಸಿದ ಪ್ರೇರಣೆ ಅವರಾಗಿದ್ದಾರೆ. ಈಗ ಅವರನ್ನು ದೇವರನ್ನಾಗಿಸುವ ಕಾರ್ಯವನ್ನು ಬಿಟ್ಟು ಅವರ ವಚನಗಳಲ್ಲಿರುವ ಸಾರವನ್ನು ಆಚರಣೆಗೆ ತರುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಬಸವಣ್ಣ ಅವರ ವಚನಗಳನ್ನು ನಿರರ್ಗಳವಾಗಿ ಹೇಳುವ ನಾವು ಆಚರಣೆಯಲ್ಲಿ ಹಿಂದುಳಿದಿದ್ದೇವೆ. ಬಸವಣ್ಣ ಇಂದಿಗೂ ಪ್ರಸ್ತುತವೆಂದ ಸಿಎಂ, ಅಸಮಾನತೆ, ಲಿಂಗಬೇಧ, ಮೂಢನಂಬಿಕೆಗಳು 800 ವರ್ಷ ಕಳೆದರೂ ಜೀವಂತವಾಗಿದ್ದು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಕೆಲ ಪ್ರಸಿದ್ಧ ವ್ಯಕ್ತಿಗಳು ತಮ್ಮ ವಿಚಾರಗಳನ್ನು ಎಲ್ಲೆಡೆ ಸಾರುತ್ತ, ಪ್ರಚಾರಕ್ಕೆ ಅನುಯಾಯಿಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಬಸವೇಶ್ವರರು ವೈಯಕ್ತಿಕ ವಿಕಾಸದ ಬಗ್ಗೆ ಎಂದೂ ಚಿಂತಿಸದೆ ನೂರಾರು ವಚನಕಾರರನ್ನು ಹುಟ್ಟು ಹಾಕಿದ್ದಾರೆ. ಇನ್ನು ರಾಜಕಾರಣದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುವುದು ಮತ್ತು ಸಮಸ್ಯೆಗಳನ್ನು ಪರಿಹಾರ ಮಾಡುವ 2 ವರ್ಗಗಳಿವೆ. ಈಗಾಗಲೆ 75 ವರ್ಷಗಳಿಂದ ಸಮಸ್ಯೆಗಳನ್ನು ಹುಟ್ಟು ಹಾಕಲಾಗಿದ್ದು, ಅವುಗಳನ್ನು ಈಗ ಪರಿಹಾರ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ.ಎಚ್​.ಆರ್​. ನಾಗೇಂದ್ರ ಅವರಿಗೆ ಬಸವಶ್ರೀ ಪ್ರಶಸ್ತಿ ಹಾಗೂ ಬೀದರ್​ನ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಗಂಗಾಂಬಿಕಾ ಅವರಿಗೆ ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ವಸತಿ ಸಚಿವ ಸೋಮಣ್ಣ, ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್​, ಉಪಾಧ್ಯಕ್ಷ ಷಡಕ್ಷರಿ, ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಬಸವಪಥದಲ್ಲಿಯೇ ಸರ್ಕಾರದ ಮುನ್ನಡೆಬಸವಣ್ಣ ಅವರು ಕಾಯಕದಲ್ಲಿಯೇ ಸ್ವರ್ಗ ಕಾಣುವುದು, ಸಾಮಾಜಿಕ ಸಮಾನತೆ, ಸಮಾನ ಅವಕಾಶ, ಸೈದ್ಧಾಂತಿಕ ಮತ್ತು ವೈಾನಿಕ ಚಿಂತನೆಯ ಸಮಾಜ ನಿರ್ಮಾಣ ಬಯಸಿದ್ದರು. ಇದೇ ಬಸವ ಪಥದಲ್ಲಿ ಸರ್ಕಾರ ಮುನ್ನಡೆಸುವ ಮೂಲಕ ದುಡಿಯುವವರಿಗೆ ಅವಕಾಶ ಕಲ್ಪಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಆರ್ಥಿಕತೆ ಎಂದರೆ ಹಣವಲ್ಲ, ಜನರ ದುಡಿಮೆಯಾಗಿದೆ. ಹೀಗಾಗಿ ದುಡಿಮೆಯೇ ದೊಡ್ಡಪ್ಪ ಎಂಬುದಾಗಿ ಬದಲಾಯಿಸುತ್ತಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೂ ಬಸವೇಶ್ವರರ ಪ್ರಭಾವ ಬೀರಿದ್ದು, ಹೊಸ ಪಾರ್ಲಿಮೆಂಟ್​ ನಿರ್ಮಾಣದ ವೇಳೆ ಅನುಭವ ಮಂಟಪದ ಉಲ್ಲೇಖ ಮಾಡಿದ್ದರು. ಬಸವ ವೇದಿಕೆಯಿಂದ ನಡೆಸಲಾಗುವ ಬಸವಶ್ರೀ ಪ್ರಶಸ್ತಿಯನ್ನು ಮುಂದಿನ ವರ್ಷ ರಾಷ್ಟ್ರಮಟ್ಟದಲ್ಲಿ ದೆಹಲಿಯಲ್ಲಿ ಹಮ್ಮಿಕೊಳ್ಳಲು ನೆರವು ನೀಡುವುದಾಗಿ ತಿಳಿಸಿದರು.
| ಡಾ.ಸಿ. ಸೋಮಶೇಖರ್​ ಬಸವ ವೇದಿಕೆ ಅಧ್ಯಕ್ಷ
ಎನ್​ಇಪಿಯಲ್ಲಿದೆ ಸಂಸ್ಕಾರ ಕಲಿಕೆನಮ್ಮ ದೇಶವು ನೆಮ್ಮದಿಯಿಂದ ಇರಲು ಕುಟುಂಬ, ಯೋಗ, ಸಂಗೀತ ಮತ್ತು ಜೀವನ ಶೈಲಿ ಕಾರಣವಾಗಿದೆ. ಈ ಸಂಸ್ಕಾರವನ್ನು ಒಳಗೊಂಡಿರುವ ಗೀತೆ, ಪುರಾಣ, ರಾಮಾಯಣ, ಮಹಾಭಾರತ ಹಾಗೂ ಬಸವೇಶ್ವರರ ವಚನಗಳನ್ನು ಅಧ್ಯಯನ ಮಾಡಲು ಜಗತ್ತಿನ ಅನೇಕ ರಾಷ್ಟ್ರಗಳ ಜನರು ಭಾರತಕ್ಕೆ ಬರುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಸಂಸ್ಕಾರ ಕಲಿಸುವಂತಹ ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು, ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
