| ರಮೇಶ ದೊಡ್ಡಪುರ ಬೆಂಗಳೂರು
ಕರೊನಾ ಸೋಂಕು ಗುಣಪಡಿಸುವಲ್ಲಿ ಭಾರತೀಯ ವೈದ್ಯಪದ್ಧತಿ ಆಯುರ್ವೇದವು ವೈಜ್ಞಾನಿಕವಾಗಿ ಸಾಮರ್ಥ್ಯ ಸಾಬೀತುಪಡಿಸಿದ್ದರೂ, ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಸರ್ಕಾರದ ವಿಳಂಬ ಧೋರಣೆ ಎದುರಾಗಿದೆ. ಖ್ಯಾತ ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅವರ ಔಷಧ ಬಳಸಲು ಅನುಮತಿ ನೀಡುವುದಷ್ಟೇ ಅಲ್ಲದೆ ಸರ್ಕಾರದ್ದೇ ಭಾಗವಾದ ಆಯುಷ್ ಇಲಾಖೆಯಿಂದ ಬಂದ ಆಯುರ್ವೆದ ಕಿಟ್ ಸರಬರಾಜಿಗೂ ಅನುಮತಿ ವಿಳಂಬ ಮಾಡುತ್ತಿರುವುದರ ಹಿಂದೆ ಸಾವಿರಾರು ಕೋಟಿ ವಹಿವಾಟಿನ ಔಷಧ ಲಾಬಿ ಕೆಲಸ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ನಾಲ್ಕು ದಿನದಲ್ಲೇ ವರದಿ:ಡಾ.ಗಿರಿಧರ ಕಜೆ ಅವರ ತಂಡ ಆಯುರ್ವೇದ ಔಷಧವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಕ್ಲಿನಿಕಲ್ ಟ್ರಯಲ್ ನಡೆಸಿ ಯಶಸ್ವಿಯಾಗಿತ್ತು. ಕೋವಿಡ್ ಟಾಸ್ಕ್​ಫೋರ್ಸ್ ಸಭೆಯಲ್ಲಿ ಚರ್ಚೆಯಾಗಿ, ಈ ಔಷಧ ನೀಡಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಕುರಿತು ವರದಿ ನೀಡುವಂತೆ ರಾಜೀವ್​ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಎಸ್.ಸಚ್ಚಿದಾನಂದ ಅವರಿಗೆ ತಿಳಿಸಲಾಗಿತ್ತು. ಕಜೆ ಅವರಿಂದ ವಿವರಣೆ ಪಡೆದ ಸಚ್ಚಿದಾನಂದ, ವಿವಿಧ ತಜ್ಞರೊಂದಿಗೆ ರ್ಚಚಿಸಿ ನಾಲ್ಕು ದಿನದಲ್ಲಿ ವರದಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಸಚ್ಚಿದಾನಂದ, ಸಿಟಿಆರ್​ಐನಲ್ಲಿ ನೋಂದಣಿ ಮಾಡಿಕೊಂಡು ಎಥಿಕಲ್ ಕಮಿಟಿ ಒಪ್ಪಿಗೆ ಪಡೆದು ಸಂಶೋಧನೆ ನಡೆಸಿದ್ದಾರೆ. ಹೆಚ್ಚಿನ ಜನರನ್ನು ಒಳಗೊಂಡ ಮತ್ತೊಂದು ಕ್ಲಿನಿಕಲ್ ಟ್ರಯಲ್ ಮಾಡಿದರೆ ಮತ್ತಷ್ಟು ಸ್ಪಷ್ಟತೆ ಸಿಗುತ್ತದೆಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಉಚಿತವಾಗಿ ನೀಡುತ್ತೇನೆಂದರೂ ನಿರ್ಲಕ್ಷ್ಯ:ರಾಜ್ಯದಲ್ಲಿರುವ ಸುಮಾರು 50 ಸಾವಿರ ಪ್ರಾಥಮಿಕ, ದ್ವಿತೀಯ ಸಂರ್ಪತರಿಗೆ ಔಷಧ ನೀಡಲು ಅವಕಾಶ ಒದಗಿಸುವಂತೆ ಡಾ.ಗಿರಿಧರ ಕಜೆ ಬೇಡಿಕೆ ಇಟ್ಟು 20 ದಿನಗಳೇ ಕಳೆದಿವೆ. ಇವರಾರೂ ಕರೊನಾ ಸೋಂಕಿತರಲ್ಲ, ಆದರೆ ಮುಂದೆ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಅಪಾಯ ಇರುವವರು. ಉಚಿತವಾಗಿ ಔಷಧ ನೀಡುತ್ತೇವೆ. ಇವರಲ್ಲಿ ಇರಬಹುದಾದ ಕರೊನಾ ಸೋಂಕು ಗುಣವಾದರೆ ಸರ್ಕಾರದ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ಕಜೆ ವಾದ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಗಿರಿಧರ ಕಜೆ, ಮುಖ್ಯಮಂತ್ರಿಯವರು ಹಾಗೂ ಆರೋಗ್ಯ ಸಚಿವರು ಇಲ್ಲಿವರೆಗೆ ಬೆಂಬಲ ನೀಡಿದ್ದಾರೆ. ಆದಷ್ಟೂ ಬೇಗನೆ ನಿರ್ಧಾರ ಕೈಗೊಂಡರೆ ಸೋಂಕಿನ ವಿರುದ್ಧದ ಹೋರಾಟಕ್ಕೆ ಬಲ ಬರುತ್ತದೆ ಎಂದಿದ್ದಾರೆ.
ಫಾರ್ಮಾ ಲಾಬಿ:ಆಯುರ್ವೇದ ಔಷಧಕ್ಕೆ ಮಾನ್ಯತೆ ಕೊಡಿಸದಿರಲು ಹಾಗೂ ಅದರ ಸಾಮರ್ಥ್ಯದ ಕುರಿತು ಅನಗತ್ಯ ಗೊಂದಲಗಳನ್ನು ಸರ್ಕಾರದಲ್ಲಿ ಫಾರ್ವ ಲಾಬಿ ಸೃಷ್ಟಿಸುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ. ಇಂಗ್ಲಿಷ್ ಔಷಧಕ್ಕೆ ಇಲ್ಲದ ಹತ್ತಾರು ಪ್ರಶ್ನೆಗಳನ್ನು ಆಯುರ್ವೇದಕ್ಕೆ ಕೇಳಲಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಅನೇಕ ಸಚಿವರು ಆಯುರ್ವೇದದ ಪರವಾಗಿದ್ದಾರೆ. ಬಹುತೇಕರು ಡಾ.ಗಿರಿಧರ ಕಜೆ ಹಾಗೂ ಇನ್ನಿತರ ಆಯುರ್ವೇದ ವೈದ್ಯರಿಂದ ಈಗಾಗಲೆ ಚಿಕಿತ್ಸೆ, ಮುನ್ನೆಚ್ಚರಿಕಾ ಔಷಧ ಪಡೆಯುತ್ತಿದ್ದಾರೆ. ಆದರೆ ಸರ್ಕಾರದಿಂದ ಆಯುರ್ವೇದಕ್ಕೆ ಅನುಮತಿ ನೀಡುವಲ್ಲಿ ಅನೇಕ ಏಜೆನ್ಸಿಗಳು ಗೊಂದಲ ಸೃಷ್ಟಿಸುತ್ತಿವೆ. ಸಾವಿರಾರು ಕೋಟಿ ರೂ. ಔಷಧ ಖರೀದಿ, ಅದರಲ್ಲಿನ ಭ್ರಷ್ಟಾಚಾರವು ಈ ಪ್ರಯತ್ನಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ.
ಆಯುಷ್ ಕಿಟ್​ಗೂ ಅಡಕತ್ತರಿ
ರಾಜ್ಯ ಸರ್ಕಾರದ್ದೇ ಭಾಗವಾದ ಆಯುಷ್ ಇಲಾಖೆ ವೈದ್ಯರೂ, ಕರೊನಾ ಗುಣಪಡಿಸುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಆಯುರ್ವೇದ ಕಷಾಯ ಹಾಗೂ ಯುನಾನಿಯ ದ್ರಾವಣ, ಚ್ಯವನ್​ಪ್ರಾಶ್ ಒಳಗೊಂಡ ಆಯುಷ್ ಕಿಟ್ ಅನ್ನು 10 ಲಕ್ಷ ಜನರಿಗೆ ವಿತರಿಸಿದ್ದಾರೆ. ದಾವಣಗೆರೆಯ ಕೋವಿಡ್ ಆಸ್ಪತ್ರೆಯಲ್ಲಿ ಸಾಮಾನ್ಯ ಗುಣಲಕ್ಷಣ ಹಾಗೂ ಗುಣಲಕ್ಷಣಗಳಿಲ್ಲದ 200ಕ್ಕೂ ಹೆಚ್ಚು ಕರೊನಾ ಸೋಂಕಿತರ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಕರೊನಾ ವಾರಿಯರ್ಸ್ ಜತೆಗೆ ಕಿಡ್ನಿ, ಹೃದಯ ಇನ್ನಿತರ ಆರೋಗ್ಯ ಸಮಸ್ಯೆ ಹೊಂದಿರುವ (ಕೊಮಾರ್ಬಿಡ್) ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ವಿತರಣೆ ಮಾಡಲು ಚಿಂತನೆ ನಡೆಸಿದೆ. ಇದ್ದ ದಾಸ್ತಾನು ಮುಕ್ತಾಯವಾಗಿದ್ದು, ಮತ್ತೆ ಔಷಧ ತಯಾರಿಸಲು ಹಣ ನೀಡುವಂತೆ 15 ದಿನದ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಆರೋಗ್ಯ ಸಿಬ್ಬಂದಿ ಹಾಗೂ ಸಾಮಾನ್ಯ ಜನರಿಂದ ತೀವ್ರ ಬೇಡಿಕೆ ಇದೆ. ಆದರೆ ಸರ್ಕಾರ ಈವರೆಗೆ ಅನುಮತಿ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಯುಷ್ ವೈದ್ಯರ ಸಾಮೂಹಿಕ ರಾಜೀನಾಮೆ
ಬೆಂಗಳೂರು: ವೇತನ ತಾರತಮ್ಯ ನಿವಾರಣೆ, ಖಾಸಗಿ ಆಯುಷ್ ವೈದ್ಯರಿಗೂ ತುರ್ತು ಪರಿಸ್ಥಿತಿಯಲ್ಲಿ ಅಲೋಪಥಿ ಔಷಧ ನೀಡಲು ಅವಕಾಶ ನೀಡುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2 ಸಾವಿರ ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದು, ರಾಜ್ಯಾದ್ಯಂತ 20 ಸಾವಿರಕ್ಕೂ ಹೆಚ್ಚು ಖಾಸಗಿ ಆಯುಷ್ ಕ್ಲಿನಿಕ್​ಗಳಲ್ಲಿ ಅನಿರ್ದಿಷ್ಟಾವಧಿ ಸೇವೆ ಸ್ಥಗಿತಗೊಳಿಸಿದ್ದಾರೆ.
ಇದುವರೆಗೂ ನಾನು ಹಾರಿಸಿದ್ದು ಕಾಗೆಯಲ್ಲ ಎಂದ ಡ್ರೋನ್ ಪ್ರತಾಪ್…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 11 =
Remember me
