| ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರು
ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೆ ಪೂರೈಕೆಯಾಗುವ ಮಧ್ಯಾಹ್ನದ ಬಿಸಿಯೂಟದಲ್ಲಿ ಇನ್ಮುಂದೆ ಕೊಳೆತ ತರಕಾರಿ, ಅಪೌಷ್ಟಿಕ ಪದಾರ್ಥ ದೂರವಾಗಲಿದ್ದು, ಗುಣಮಟ್ಟದ ತಾಜಾ ತರಕಾರಿಯ ಪೌಷ್ಟಿಕ ಆಹಾರ ಮಕ್ಕಳಿಗೆ ಲಭ್ಯವಾಗಲಿದೆ.
ಸರ್ಕಾರಿ ಶಾಲೆಗಳನ್ನು ತೆರೆಯಲು ದಿನಗಣನೆ ಆರಂಭವಾಗಿರುವ ನಡುವೆಯೇ ಶಾಲೆ, ಅಂಗನವಾಡಿಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಾದ ತರಕಾರಿ, ಸೊಪ್ಪು ಹಾಗೂ ಇತರ ಪೌಷ್ಟಿಕಾಂಶವುಳ್ಳ ಕಾಯಿಪಲ್ಯ ಉತ್ಪಾದನೆಗಾಗಿ‘ನ್ಯೂಟ್ರಿ ಗಾರ್ಡನ್’ ಬೆಳೆಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಸರ್ಕಾರ ನೀಡುತ್ತಿರುವ ಅಲ್ಪ ಪ್ರಮಾಣದ ಅನುದಾನದಿಂದ ಮಕ್ಕಳಿಗೆ ಪೌಷ್ಟಿಕ ತರಕಾರಿ ತಂದು ಬೇಯಿಸಲು ಸಾಧ್ಯವಾಗುತ್ತಿಲ್ಲ. ಬೇಳೆ ಜತೆಗೆ ಶಾಸ್ತ್ರಕ್ಕೆಂಬಂತೆ ಒಂದೆರೆಡು ತರಕಾರಿ ಬೇಯಿಸಿ ಮಕ್ಕಳಿಗೆ ಉಣ ಬಡಿಸಲಾಗುತ್ತಿದೆ. ಇದರಿಂದಾಗಿ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ.
ಆದ್ದರಿಂದ ಶಾಲಾ ಆವರಣದಲ್ಲೇ ಪೌಷ್ಟಿಕ ತರಕಾರಿ, ಸೊಪ್ಪಿನ ತೋಟ ಬೆಳೆಸಿ ಅಲ್ಲಿ ಉತ್ಪಾದನೆಯಾಗುವ ಪದಾರ್ಥಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿದರೆ, ಕಡಿಮೆ ಖರ್ಚಿನಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವೂ ದೊರೆಯಲಿದೆ ಎಂಬ ಆಲೋಚನೆ ಹಿನ್ನೆಲೆಯಲ್ಲಿ ನೂತನ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಈಗಾಗಲೇ ಆದೇಶಿಸಿದೆ.
ಪ್ರತಿ ಗಾರ್ಡನ್​ಗೆ 5180 ರೂ. ಅನುದಾನ:ಜಿಲ್ಲೆಯ 224 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜಾನುವಾರುಗಳು ನುಗ್ಗದಂತೆ ಕಾಂಪೌಂಡ್ ಅಥವಾ ತಂತಿ ಬೇಲಿ ಇರುವ ಆಯ್ದ ಶಾಲೆ, ಅಂಗನವಾಡಿ ಹಾಗೂ ಸಮುದಾಯ ಭವನಗಳ ಆವರಣದ 2 ಗುಂಟೆ ಜಾಗದಲ್ಲಿ ನ್ಯೂಟ್ರಿ ಗಾರ್ಡನ್ ಬೆಳೆಸಲು ಜಿಪಂ ಮುಂದಾಗಿದೆ.
ಪೌಷ್ಟಿಕ ತರಕಾರಿಯ ತೋಟ ಬೆಳೆಸಲು ಮಹಾತ್ಮ ಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಲ್ಲಿ ಹಣ ಕಾಯ್ದಿರಿಸಲಾಗಿದೆ. ಒಂದು ಕೈ ತೋಟ ಬೆಳೆಸಲು ಸಸಿ, ಕೂಲಿ ಎಲ್ಲ ಸೇರಿ 5180 ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಶಿಕ್ಷಣ, ಶಿಶು ಅಭಿವೃದ್ಧಿ, ತೋಟಗಾರಿಕೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಮತ್ತು ನಿರ್ದೇಶನದಲ್ಲಿ ಪೌಷ್ಟಿಕ ತೋಟ ಬೆಳೆಸಲಾಗುತ್ತದೆ. ಖರ್ಚು ವೆಚ್ಚವನ್ನು ಆಯಾ ಗ್ರಾಪಂಗಳು ನರೇಗಾ ಯೋಜನೆಯಡಿ ಸಂದಾಯ ಮಾಡಲಿವೆ.
ಈ ಕುರಿತು ಜಿಲ್ಲಾ ಪಂಚಾಯಿತಿ ಈಗಾಗಲೇ ಎಲ್ಲ ಗ್ರಾಪಂಗಳಲ್ಲಿ ಸೂಚಿಸಿದ್ದು, ಅವು ಒಂದೊಂದು ಸುರಕ್ಷಿತ ಶಾಲೆಗಳನ್ನು ಗುರುತಿಸಿ ಆಯಾ ತಾಪಂಗೆ ವರದಿ ನೀಡಿವೆ. ಕಳ್ಳಕಾಕರಿಂದ ಫಸಲು ಉಳಿಯುವ ಖಚಿತತೆ ಹಾಗೂ ಪೌಷ್ಟಿಕ ತೋಟದಿಂದಾಗುವ ಪ್ರಯೋಜನಗಳ ಆಧಾರದ ಮೇಲೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ನ್ಯೂಟ್ರಿ ಗಾರ್ಡನ್ ವಿಸ್ತರಿಸುವ ಚಿಂತನೆಯಿದೆ ಎನ್ನುತ್ತಾರೆ ಜಿಪಂ ಅಧಿಕಾರಿಗಳು.
ತರಕಾರಿ, ಹಣ್ಣು ಬೆಳೆಸಲು ಆದ್ಯತೆನ್ಯೂಟ್ರಿ ಗಾರ್ಡನ್​ನಲ್ಲಿ ಮನಬಂದಂತೆ ಏನೆಲ್ಲ ಬೆಳೆಯುವಂತಿಲ್ಲ. ಮಕ್ಕಳಿಗೆ ಸ್ವಾದಿಷ್ಟಭರಿತ ತರಕಾರಿ, ಸೊಪ್ಪು, ಹಣ್ಣುಗಳನ್ನು ಮಾತ್ರ ಬೆಳೆಸಬೇಕು. ತೋಟಗಾರಿಕೆ ಇಲಾಖೆ ಪ್ರಕಾರ ನುಗ್ಗೆ, ತೊಂಡೆ, ಬದನೆಕಾಯಿ, ಬಸಳೆ, ನಿಂಬೆ, ಚಕ್ರಮುನಿ ಹಾಗೂ ಮಡಿ ಮಾಡಿ ಬೆಳೆಸಬಹುದಾದ ವಿವಿಧ ಸೊಪ್ಪುಗಳು ಮತ್ತಿತರ 30 ತರಹದ ತರಕಾರಿ, ಹಣ್ಣುಗಳನ್ನು ಕೈ ತೋಟದಲ್ಲಿ ಬೆಳೆಸಬಹುದು. ಮಕ್ಕಳಿಗೆ ನೀಡಬಹುದಾದ ಬಾಳೆಹಣ್ಣು, ಪಪ್ಪಾಯಿ, ಸೀತಾಪೇರಲ, ತೆಂಗು ಹಾಗೂ ಸಪೋಟಾ ಬೆಳೆಸಲು ಈಗಾಗಲೇ ತೋಟಗಾರಿಕೆ ಇಲಾಖೆ ನರ್ಸರಿಗಳಲ್ಲಿ ಗಿಡಗಳನ್ನು ಕಾಯ್ದಿರಿಸಲಾಗಿದೆ. ತೋಟಗಾರಿಕೆಯಲ್ಲಿ ಇಲ್ಲದ್ದನ್ನು ಕೊಟೇಷನ್ ಮೂಲಕ ಇತರ ಕಡೆಯೂ ಖರೀದಿಸಬಹುದು. ತೋಟಕ್ಕೆ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರ ಬಳಸುವಂತಿಲ್ಲ. ಸಾವಯವ ಗೊಬ್ಬರ, ನೀರು ಮಾತ್ರ ಬಳಸಬೇಕು ಎಂಬ ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ. ಇದರಿಂದ ಶಾಲೆ ವ್ಯಾಪ್ತಿಯಲ್ಲೂ ಸಾವಯವ ಕೃಷಿಗೆ ಉತ್ತೇಜನ ದೊರೆಯಲಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:2 × 5 =
Remember me
