| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕಳೆದ ವರ್ಷ ಪ್ರವಾಹ ತಂದ ಹಾನಿಯಿಂದ ಪಾಠ ಕಲಿತಿರುವ ಸರ್ಕಾರ ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಸೂತ್ರಗಳನ್ನು ಅಳವಡಿಸಿಕೊಂಡು ನೆರೆ ಸವಾಲನ್ನು ಎದುರಿಸಲು ಸಜ್ಜಾಗಿದೆ. ಜಿಲ್ಲಾ ಮಟ್ಟದಲ್ಲಿ ಈ ಸೂತ್ರಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದಲ್ಲಿ ಕಳೆದ ವರ್ಷದಷ್ಟು ಹಾನಿ ಆಗದಂತೆ ತಡೆಯಬಹುದೆಂಬುದು ಸರ್ಕಾರದ ವಿಶ್ವಾಸ. ಈ ವರ್ಷವೂ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದಕ್ಕೂ ಮೊದಲೇ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮೂರು ಸೂತ್ರಗಳ ಕ್ರಿಯಾಯೋಜನೆಯ ಮೂಲಕ ಸಿದ್ಧತೆ ಮಾಡಿಕೊಂಡಿತ್ತು. ಎಲ್ಲ ಜಿಲ್ಲಾಡಳಿತಗಳ ಜತೆಗೆ ಸತತ ಸಂಪರ್ಕ ಇರಿಸಿಕೊಂಡು ಕರೊನಾ ನಡುವೆಯೂ ಪ್ರವಾಹ ಎದುರಿಸಲು ಸಜ್ಜಾ ಗಿತ್ತು. ರಾಜ್ಯದ ಇತಿಹಾಸದಲ್ಲಿ ಇಂತಹ ಕ್ರಮಗಳನ್ನು ಕೈ ಗೊಂಡಿದ್ದು ಇದೇ ಮೊದಲು.
ಸಮಗ್ರ ವಿಧಾನ:ನೆರೆ ಸಂದರ್ಭದಲ್ಲಿ ಅಣೆಕಟ್ಟು ಗಳು ತುಂಬಿದಾಗ ಅಲ್ಲಿಂದ ನೀರು ಬಿಡಬೇಕಾದುದು ಬಹಳ ಮುಖ್ಯ ಘಟ್ಟ. ಅಣೆಕಟ್ಟಿನ ನೀರಿನ ಸಂಗ್ರಹ ಸಾಮರ್ಥ್ಯವೆಷ್ಟು? ಮಳೆಯಿಂದ ಎಷ್ಟು ನೀರು ಬರಬಹುದು? ಎಷ್ಟು ನೀರು ಬಿಡಬೇಕು? ಕೆಳಹಂತದ ಜಲಾಶಯಗಳ ಸಂಗ್ರಹ ಸಾಮರ್ಥ್ಯ ಎಷ್ಟು?
ಹೆಚ್ಚು ನೀರು ಬಿಟ್ಟಲ್ಲಿ ಮುಳುಗಡೆಯಾಗುವ ಹಳ್ಳಿಗಳನ್ನು ತಕ್ಷಣ ಸ್ಥಳಾಂತರಿಸಲು ಇರುವ ವ್ಯವಸ್ಥೆಗಳೇನು? ಎಂಬುದರ ಕುರಿತು ಸಂಬಂಧಪಟ್ಟ ಎಲ್ಲ ಇಲಾಖೆಗಳ ಜತೆಗೆ ರೂಪಿಸಿರುವ ಯೋಜನೆ ಇದಾಗಿದೆ. ಒಂದೇ ಸಲ ನೀರು ಬಿಡದಂತೆ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ಪ್ರತಿಯೊಂದು ಅಣೆಕಟ್ಟೆಗೂ ಪ್ರತ್ಯೇಕವಾಗಿಯೇ ಯೋಜನೆಗಳು ಸಿದ್ಧವಾಗಿವೆ. ಒಂದು ಜಲಾಶಯದಲ್ಲಿ ಶೇ. 70ಕ್ಕಿಂತ ಹೆಚ್ಚು ನೀರು ಇರದಿರುವಂತೆ ನೋಡಿಕೊಳ್ಳಲಾಗುತ್ತದೆ.
ಜಿಲ್ಲೆಗಳ ಸಮಗ್ರ ಮಾಹಿತಿ ಸಿದ್ಧ:ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರವಾಹ ಪೀಡಿತ 19 ಜಿಲ್ಲೆಗಳ ಜತೆ 3 ಸಭೆ ನಡೆಸಿದೆ. ಪ್ರತಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ವೃದ್ಧರು, ಅಂಗವಿಕಲರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಎಷ್ಟು ಜನರಿದ್ದಾರೆ? ಜಾನುವಾರು ಎಷ್ಟಿವೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಪ್ರವಾಹ ಉಂಟಾದರೆ ಇವರನ್ನೆಲ್ಲ ತಕ್ಷಣ ಸ್ಥಳಾಂತರಿಸುವುದಾದರೆ ಸ್ಥಳ ಗುರುತಿಸಲಾಗಿದೆ. ಊಟ, ತಿಂಡಿ, ಔಷಧ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆ ಹಾಳಾದರೆ ಪರ್ಯಾಯ ಮಾರ್ಗಗಳೇನು ಎಂಬುದಕ್ಕೂ ಸಿದ್ಧತೆಯಾಗಿದೆ. ದೋಣಿ ಹಾಗೂ ಇತರ ವಸ್ತುಗಳನ್ನು ಸಜ್ಜುಗೊಳಿಸಲಾಗಿದೆ. ಅಷ್ಟರ ಮಟ್ಟಿಗೆ ಜಿಲ್ಲಾಡಳಿತಗಳು ಸಿದ್ಧವಾಗಿವೆ ಎಂದು ಸರ್ಕಾರ ಹೇಳುತ್ತದೆ.
ಗ್ರಾಪಂ ಕಾರ್ಯಪಡೆ
ಸರ್ಕಾರ ಹಾಗೂ ಜಿಲ್ಲಾಡಳಿತ ಏನೇ ಕ್ರಮಗಳನ್ನು ಕೈಗೊಂಡರು ಸ್ಥಳೀಯವಾಗಿ ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಆದ್ದರಿಂದ 826 ಗ್ರಾಪಂಗಳಲ್ಲಿ ಪ್ರಕೃತಿ ವಿಕೋಪ ನಿಯಂತ್ರಣ ಕಾರ್ಯಪಡೆ ರಚಿಸಲಾಗಿದೆ. ಪಿಡಿಒ ಇರುವ ಸಮಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಇವರು ತಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆರು ಸಮಿತಿಗಳನ್ನು ರಚನೆ ಮಾಡಿ ತರಬೇತಿ ನೀಡಿದ್ದಾರೆ. ಜೆಸಿಬಿ, ಹಗ್ಗ, ಮುಳುಗು ತಜ್ಞರು…ಇತ್ಯಾದಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಾಧಿತ ಜನರ ಸ್ಥಳಾಂತರ, ಊಟೋಪಚಾರ, ಆಶ್ರಯ ನಿರ್ವಹಣೆ, ಜಾನುವಾರು ಸಮಿತಿ, ಹಾನಿಯ ಮೌಲ್ಯಮಾಪನ ಹೀಗೆ ವಿವಿಧ ಸಮಿತಿಗಳಿರುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು
* ಪ್ರಥಮ ಚಿಕಿತ್ಸಾ ಪೆಟ್ಟಿಗೆ, ನೀರಿನ ಬಾಟಲಿ, ಟಾರ್ಚ್, ರೇಡಿಯೋ ಜತೆಯಲ್ಲಿರಲಿ
*ಗ್ರಾಮಕ್ಕೆ ಪ್ರವಾಹ ಬಂದರೆ ಬದಲಿ ರಸ್ತೆಗಳ ಬಗ್ಗೆ ತಿಳಿದಿರಿ
*ಏಣಿ, ಹಗ್ಗ, ಮರಳಿನ ಚೀಲಗಳನ್ನು ಮನೆಯಲ್ಲಿ ಇಟ್ಟಿರಿ
*ಜಾನುವಾರುಗಳನ್ನು ಕಟ್ಟಿಹಾಕಬೇಡಿ
*ವಿದ್ಯುತ್ ಹಾಗೂ ಗ್ಯಾಸ್ ಸಂಪರ್ಕ ಸ್ಥಗಿತಗೊಳಿಸಿ
*ಜಿಲ್ಲಾಡಳಿತದ ಸೂಚನೆ ಇದ್ದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿ
*ಶೌಚಗೃಹದ ಗುಂಡಿಗಳಿಗೆ ಮರಳಿನ ಚೀಲದಿಂದ ಮುಚ್ಚಿ, ಇಲ್ಲದಿದ್ದಲ್ಲಿ ನೀರು ತುಂಬಿ ಮಲಿನವಾಗುತ್ತದೆ. ಅದು ಚರ್ಮರೋಗಗಳಿಗೆ ಕಾರಣವಾಗುತ್ತದೆ
* ಭೂ ಕುಸಿತದ ಬಗ್ಗೆ ಎಚ್ಚರಿಕೆ ಇರಲಿ
* ವಿದ್ಯುತ್ ಮಾರ್ಗಗಳು ತುಂಡಾಗಿ ಬಿದ್ದಿರುವ ಸ್ಥಳಗಳ ಬಗ್ಗೆ ಎಚ್ಚರ
* ರಸ್ತೆ, ವಿದ್ಯುತ್ ಮಾರ್ಗ ಹಾನಿಯಾಗಿದ್ದರೆ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ
* ಗಾಳಿ ವೇಗವಾಗಿ ಬೀಸುತ್ತಿರುವ ಕಾರಣ ಮರಗಳ ಕೆಳಗೆ ನಿಲ್ಲಬೇಡಿ
* ಮನೆಗಳಿಗೆ ಡಿಡಿಟಿಯಂತಹ ಸೋಂಕು ನಿವಾರಕ ಸಿಂಪಡಿಸಿ
* ವಿಷಜಂತುಗಳ ಹಾವಳಿ ಹೆಚ್ಚಿರುತ್ತದೆ, ಎಚ್ಚರವಾಗಿರಿ
ಸ್ಥಳೀಯಾಡಳಿತ ಹೊಣೆ
ಅಣೆಕಟ್ಟೆಗಳಿಂದ ನೀರು ಬಿಡಲು ಸಮಗ್ರ ವಿಧಾನದ ಸ್ಪಷ್ಟ ನೀತಿ ರೂಪಿಸಲಾಗಿದೆ. ಜಿಲ್ಲಾಡಳಿತಗಳ ಬಳಿ ಪ್ರವಾಹ ಪೀಡಿತ ಗ್ರಾಮಗಳ ಸಮಗ್ರ ಮಾಹಿತಿ ಇರುವಂತೆ ನೋಡಿಕೊಳ್ಳಲಾಗಿದೆ. ರಾಜ್ಯದ 826 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಮೂರು ಸೂತ್ರಗಳ ಪರಿಣಾಮಕಾರಿ ಅನುಷ್ಠಾನ ಸ್ಥಳೀಯಾಡಳಿತಗಳ ಜವಾಬ್ದಾರಿಯಾಗಿದೆ.
ಡಿಸಿಗಳ ಬಳಿ ಹಣ
ಪ್ರವಾಹ ನಿಯಂತ್ರಣ ಕ್ರಮಕ್ಕಾಗಿ 30 ಜಿಲ್ಲೆಗಳ ಡಿಸಿಗಳ ಪಿಡಿ ಖಾತೆಯಲ್ಲಿ 825 ಕೋಟಿ ರೂ. ಇದೆ. ತಕ್ಷಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ. ಚಿಕ್ಕಮಗಳೂರು ಡಿಸಿ ಮಾತ್ರ ಹೆಚ್ಚುವರಿಯಾಗಿ 2 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
