ಬೆಂಗಳೂರು: ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ 2023ನೇ ಸಾಲಿನ ‘ಸ್ವಚ್ಛ ಸರ್ವೆಕ್ಷಣಾ ಪ್ರಶಸ್ತಿ’ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ 100 ರ್ಯಾಂಕ್​ಗಳಲ್ಲಿ ಮೈಸೂರು ಮಹಾನಗರ ಪಾಲಿಕೆ (23) ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆ (87) ಹೊರತುಪಡಿಸಿ ಇನ್ನುಳಿದ ನಗರ, ಪಟ್ಟಣಗಳು ಯಶ ಕಂಡಿಲ್ಲ.
ಇಡೀ ರಾಜ್ಯಕ್ಕೆ ಮಾದರಿಯಾಗಬೇಕಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 125ನೇ ಸ್ಥಾನ ಪಡೆದು ಕಳಪೆ ಪ್ರದರ್ಶನ ನೀಡಿದೆ. ದಕ್ಷಿಣ ಭಾರತ ಒಳಗೊಂಡ ರಾಜ್ಯಗಳ ವಲಯ ವಿಭಾಗದಲ್ಲೂ ಕರ್ನಾಟಕದ ಯಾವುದೇ ಮಧ್ಯಮ ಪ್ರಮಾಣದ ನಗರ-ಪಟ್ಟಣವು ಪ್ರಶಸ್ತಿ ಪಡೆಯಲು ಸಾಧ್ಯವಾಗಿಲ್ಲ.
ರಾಜ್ಯಮಟ್ಟದಲ್ಲಿ ಮೈಸೂರು ಪಾಲಿಕೆ ಮೊದಲ ಸ್ಥಾನದಲ್ಲಿದೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಿಂದಿನ ಸಾಧನೆಯನ್ನು ದಾಖಲಿಸಲು ಸಾಧ್ಯವಾಗಿಲ್ಲ. ಸಾಂಸ್ಕೃತಿಕ ನಗರಿ 2022 ಹಾಗೂ 2021ರಲ್ಲಿ ಕ್ರಮವಾಗಿ 2ನೇ ಹಾಗೂ 8ನೇ ಸ್ಥಾನದಲ್ಲಿತ್ತು. 2023ನೇ ಸಾಲಿನಲ್ಲಿ 25ನೇ ಸ್ಥಾನಕ್ಕೆ ಕುಸಿದಿದೆ. ಆದರೂ, ರಾಜ್ಯದ ಮಟ್ಟಿಗೆ ಮೊದಲ ಸ್ಥಾನವನ್ನು ಪಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಬಜ್ಪೆ ಪಟ್ಟಣ ಪಂಚಾಯಿತಿ ರಾಜ್ಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ.
ಮೂಲದಲ್ಲೇ ಕಸ ವಿಂಗಡಣೆಗೆ ಬೆನ್ನು:ಈ ಬಾರಿಯ ಸ್ಪರ್ಧೆಗೆ ರಾಜ್ಯದ 311 ನಗರ ಸ್ಥಳೀಯ ಸಂಸ್ಥೆಗಳು ನಾಮನಿರ್ದೇಶನಗೊಂಡಿದ್ದವು. ಈ ನಗರ-ಪಟ್ಟಣಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹ, ಮೂಲದಲ್ಲೇ ತ್ಯಾಜ್ಯ ಸಂಗ್ರಹ ಹಾಗೂ ತ್ಯಾಜ್ಯ ಸಂಸ್ಕರಣೆ ವಿಭಾಗದಲ್ಲಿ ಪ್ರಮುಖ ಅಂಶಗಳನ್ನು ಪರಿಗಣಿಸಲಾಗಿತ್ತು. ಇವುಗಳಲ್ಲಿ ಮೂಲದಲ್ಲೇ ಕಸ ವಿಂಗಡಣೆಯಲ್ಲಿ ಸರಾಸರಿ ಶೇ.32.88 ಪ್ರಮಾಣದಲ್ಲಿದೆ. ಇದುವೇ ಸ್ವಚ್ಛ ಸರ್ವೆಕ್ಷಣಾ ಸ್ಪರ್ಧೆ ಯಲ್ಲಿ ರಾಜ್ಯದ ನಗರಗಳು ಹಿಂದೆ ಬೀಳಲು ಕಾರಣವಾಗಿದೆ.
ಮೂಲದಲ್ಲೇ ಕಸ ವಿಂಗಡಣೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ಎಲ್ಲ ನಗರ-ಪಟ್ಟಣಗಳಿಗೆ ತಾಕೀತು ಮಾಡುತ್ತಲೇ ಬರುತ್ತಿದೆ. ಇದಕ್ಕಾಗಿ ಅಗತ್ಯ ಮಾರ್ಗಸೂಚಿ ಸಿದ್ಧಪಡಿಸಿದ್ದರೂ, ಸಮರ್ಪಕ ಅನುಷ್ಠಾನ ಆಗಿಲ್ಲ. ತ್ಯಾಜ್ಯ ನಿರ್ವಹಣೆ ಉಸ್ತುವಾರಿಗಾಗಿಯೇ ಎನ್​ಜಿಟಿ ಆದೇಶದನ್ವಯ ನಿವೃತ್ತ ನ್ಯಾ.ಸುಭಾಷ್ ಬಿ ಅಡಿ ನೇತೃತ್ವದ ಸಮಿತಿ ನಿಗಾ ಇಟ್ಟಿದ್ದರೂ, ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ತಲೆಬೇನೆ ಆಗಿರುವಂತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳು ಗಂಭೀರತೆ ಹೊಂದಬೇಕು ಎಂಬ ಸಂದೇಶ ರವಾನಿಸಿದೆ. ಇದರ ಜತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಎಲ್ಲ ಬಗೆಯ ಮಾಲಿನ್ಯವನ್ನು ತಡಗಟ್ಟಲು ಆಯಾ ಸಂಸ್ಥೆಗಳಿಗೆ ತಿಳಿವಳಿಕೆ ನೀಡಿದೆ. ಆದರೂ, ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ವ್ಯವಸ್ಥೆ ಸುಧಾರಣೆಯಾಗಿಲ್ಲ.
ಇಂದೋರ್-ಸೂರತ್ ಟಾಪ್:ದೇಶದ ಅತ್ಯಂತ ಸ್ವಚ್ಛನಗರಿಯಾಗಿ ಮಧ್ಯಪ್ರದೇಶದ ಇಂದೋರ್ ಹೊರಹೊಮ್ಮಿದೆ. ಮಾತ್ರವಲ್ಲ, ಈ ಮೂಲಕ ಅದು ಸತತ ಏಳನೇ ಸಲ ಈ ಸ್ಥಾನ ತನ್ನದಾಗಿಸಿಕೊಂಡಿದೆ. ಗುಜರಾತ್​ನ ಸೂರತ್ ನಗರವೂ ಮೊದಲನೇ ಸ್ಥಾನವನ್ನು ಹಂಚಿಕೊಂಡಿರುವುದು ವಿಶೇಷ.
ಜಿ20 ನಾಯಕರ ದೆಹಲಿ ಘೋಷಣೆಯಂತೆ 2030ರ ವೇಳೆಗೆ ತ್ಯಾಜ್ಯ ಉತ್ಪಾದನೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಹಾಗೂ ಶೂನ್ಯ ತ್ಯಾಜ್ಯ ಉಪಕ್ರಮಗಳ ಮಹತ್ವ ಎತ್ತಿ ತೋರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಎಲ್ಲ ರಾಜ್ಯಗಳಲ್ಲೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಕ್ರಮ ಕೈಗೊಳ್ಳಬೇಕು.
– ಹರ್ದೀಪ್​ಸಿಂಗ್ ಪುರಿ, ಕೇಂದ್ರ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 7 =
Remember me
