|ನವೀನ್ ಬಿಲ್ಗುಣಿಶಿವಮೊಗ್ಗ
ಬೇಸಿಗೆ ಬಿರುಸುಗೊಳ್ಳುತ್ತಿದ್ದು ಬಿಸಿಲಿನ ತಾಪಕ್ಕೆ ಕಾಡ್ಗಿಚ್ಚಿನ ಆತಂಕ ಶುರುವಾಗಿದೆ. ಕಳೆದ 15 ದಿನಗಳಿಂದೀಚೆಗೆ ಮೈಸೂರು, ದಕ್ಷಿಣ ಕನ್ನಡ, ಕೊಡಗು, ಗದಗ, ಶಿವಮೊಗ್ಗ, ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಕಾಡ್ಗಿಚ್ಚು ಕಾಣಿಸಿ ಕೊಂಡಿದೆ. ಅರಣ್ಯ ಇಲಾಖೆಯ ಕಟ್ಟೆಚ್ಚರದ ನಡುವೆಯೂ ಅರಣ್ಯಕ್ಕೆ ಸಂಕಷ್ಟ ಎದುರಾಗಿದ್ದು, ಬೆಂಕಿ ನಂದಿಸಲು ಅತ್ಯಾಧುನಿಕ ಸಾಮಗ್ರಿಗಳ ಕೊರತೆ ಜತೆಗೆ, ಇಲಾಖೆ ಸಿಬ್ಬಂದಿ ಜೀವ ಕಳೆದುಕೊಳ್ಳುವಂತಾಗಿದೆ.
ದಿನೇದಿನೆ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದ್ದು ಮಾರ್ಚ್ ಮೊದಲ ವಾರದಲ್ಲೇ ಉಷ್ಣಾಂಶವು ಗರಿಷ್ಠ 36-38 ಡಿಗ್ರಿವರೆಗೆ ತಲುಪಿದೆ. ಬಿಸಿ ಗಾಳಿ, ಬಿಸಿಲಿನ ಹೊಡೆತಕ್ಕೆ ಹಚ್ಚ ಹಸಿರಿನ ಕಾಡುಗಳಲ್ಲೂ ಎಲೆಗಳು ಉದುರುತ್ತಿವೆ. ಆಕಸ್ಮಿಕ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಆದರೆ, ಕಾಡ್ಗಿಚ್ಚು ನಂದಿಸಲು ಅರಣ್ಯ ಇಲಾಖೆ ಸರ್ವಸನ್ನದ್ಧವಾಗದೆ ಜೀವ ಸಂಕುಲ ಮತ್ತು ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶವಾಗುತ್ತಿದೆ.
ರಾಜ್ಯವು ಪ್ರಸ್ತುತ 30 ಲಕ್ಷಕ್ಕೂ ಅಧಿಕ ಹೆಕ್ಟೇರ್ ಅರಣ್ಯ ಹೊಂದಿದೆ. ಪ್ರತಿವರ್ಷವೂ ನಾನಾ ಕಾರಣಗಳಿಂದ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಅಕ್ರಮವಾಗಿ ಮರಗಳ ಕಡಿತಲೆ ಒಂದೆಡೆಯಾದರೆ, ಬೆಂಕಿ ಬಿದ್ದು ನೂರಾರು ಹೆಕ್ಟೇರ್ ಅರಣ್ಯದಲ್ಲಿನ ಗಿಡಮರಗಳು ಸುಟ್ಟು ಕರಕಲಾಗುತ್ತಿರುವುದು ಮತ್ತೊಂದೆಡೆ. ಬೆಂಕಿಯ ರುದ್ರ ನರ್ತನದಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ.
ಇದನ್ನೂ ಓದಿ:ಸ್ಮಾರ್ಟ್​ ಟ್ರ್ಯಾಪ್​: ಪ್ರಶಾಂತ್ ಮಾಡಾಳ್​ಗೆ ದೂರುದಾರ ಬಲೆ ಹೆಣೆದಿದ್ದು ಹೇಗೆ?
ಶೂ, ಗ್ಲೌಸ್ ಬಿಟ್ರೆ ಬೇರೇನೂ ಇಲ್ಲ:ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆ ಕಾಡಿನ ರಸ್ತೆ ಬದಿ ಎಲೆ ತೆರವುಗೊಳಿಸಿ, ಕಂದಕ ನಿರ್ವಿುಸಿ ಸಾರ್ವಜನಿಕರು ಬೆಂಕಿ ಹಚ್ಚುವುದಕ್ಕೆ ಬ್ರೇಕ್ ಹಾಕುತ್ತಿದೆ. ಆದರೆ, ಅರಣ್ಯ ರಕ್ಷಕರಿಗೆ ಶೂ, ಗ್ಲೌಸ್ ಬಿಟ್ಟರೆ ಬೇರೆ ಅತ್ಯಾಧುನಿಕ ಸಾಮಗ್ರಿಗಳನ್ನು ಇಲಾಖೆ ನೀಡುತ್ತಿಲ್ಲ. ಹೀಗಾಗಿ ಜೀವದ ಹಂಗು ತೊರೆದು ಸಿಬ್ಬಂದಿ ಬೆಂಕಿ ನಂದಿಸಬೇಕಿದೆ. ಕಳೆದ ಫೆಬ್ರವರಿಯಲ್ಲಿ ಸಕಲೇಪುರದಲ್ಲಿ ಬೆಂಕಿ ನಂದಿಸುವಾಗ ಅರಣ್ಯ ವೀಕ್ಷಕ ತೀರ್ಥಹಳ್ಳಿಯ ಸುಂದರೇಶ್ ಬಲಿಯಾಗಿದ್ದರೆ, ಹಲವರು ಗಾಯಗೊಂಡಿದ್ದು ಇದಕ್ಕೆ ತಾಜಾ ಉದಾಹರಣೆ.
ಇತ್ತೀಚೆಗೆ ಕಾಡ್ಗಿಚ್ಚು ಸಾಮಾನ್ಯವಾಗಿದೆ. ಸರ್ಕಾರ ಇದನ್ನು ತಡೆಯಲು ವಿಮಾನ ಅಥವಾ ಹೆಲಿಕಾಪ್ಟರ್​ಗಳನ್ನು ಬಳಸಬೇಕಿದೆ. ಇದರಿಂದಷ್ಟೇ ಜೀವಸಂಕುಲ ಉಳಿಸಲು ಸಾಧ್ಯ. ಈ ಬಗ್ಗೆ ಸದನದಲ್ಲೂ ಪ್ರಸ್ತಾಪಿಸಲಾಗುವುದು. ಸಾರ್ವಜನಿಕರೂ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕೈಜೋಡಿಸಬೇಕಿದೆ.
|ಡಿ.ಎಸ್. ಅರುಣ್ಎಂಎಲ್​ಸಿ
ಫ್ಲೈಟ್, ಕಾಪ್ಟರ್​ಗೆ ಹೆಚ್ಚಿದ ಬೇಡಿಕೆ:ರಾಜ್ಯದ ಆರೇಳು ಜಿಲ್ಲೆಗಳಲ್ಲಿ ಈಗಾಗಲೇ ವಿಮಾನ ನಿಲ್ದಾಣ ನಿರ್ವಣಗೊಂಡಿದ್ದು, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೊಂದು ಏರ್​ಪೋರ್ಟ್ ಆಗುವ ಸಾಧ್ಯತೆಗಳಿದ್ದು,ವಿದೇಶಗಳಂತೆ ಫ್ಲೈಟ್ ಅಥವಾ ಹೆಲಿಕಾಪ್ಟರ್​ಗಳ ಮೂಲಕ ಬೆಂಕಿ ನಂದಿಸುವ ಕೆಲಸ ಕರುನಾಡಲ್ಲೂ ಆಗಬೇಕಿದೆ ಎಂಬುದು ಪರಿಸರವಾದಿಗಳ ಒತ್ತಾಸೆ.
ಇದನ್ನೂ ಓದಿ:17% ಹೆಚ್ಚಳದ ನಂತರ ಸರ್ಕಾರಿ ನೌಕರರ ವೇತನವೆಷ್ಟು? ಇಲ್ಲಿದೆ ವೇತನ ವ್ಯತ್ಯಾಸದ ಪಟ್ಟಿ…
ಬೆಂಕಿ ನಂದಿಸಲು ಸೊಪ್ಪೇ ಅಸ್ತ್ರ:ಉಪಗ್ರಹಗಳ ಮೂಲಕ ಕಾಡ್ಗಿಚ್ಚಿನ ಪ್ರಮಾಣ, ವಿಸ್ತೀರ್ಣ ಕ್ಷಣದಲ್ಲೇ ತಿಳಿಯಲಾಗುತ್ತಿದೆ. ಹೀಗಿದ್ದರೂ ಕಾಡ್ಗಿಚ್ಚು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಮರಗಿಡಗಳ ಸೊಪ್ಪೇ ಪ್ರಮುಖ ಅಸ್ತ್ರವಾಗಿದೆ. ಕೆಲವೆಡೆ, ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವು ಪಡೆದರೂ ದಟ್ಟಾರಣ್ಯ, ಇಳಿಜಾರು, ಗುಡ್ಡ ಪ್ರದೇಶಗಳಲ್ಲಿ ಬೆಂಕಿ ನಂದಿಸಲು ಸಿಬ್ಬಂದಿ ಇಂದಿಗೂ ಮರಗಿಡಗಳ ಸೊಪ್ಪು ಬಳಸುತ್ತಿದ್ದಾರೆ.
ಕುರುಚಲು ಗುಡ್ಡಗಳಲ್ಲೇ ಹೆಚ್ಚು ಆತಂಕ:ಕುರುಚಲು ಗುಡ್ಡಗಳಲ್ಲೇ ಬೆಂಕಿ ಅವಘಡಗಳು ಹೆಚ್ಚು. ಬಯಲು ಸೀಮೆಯಲ್ಲಿ ಇಂಥ ಗುಡ್ಡಗಳು ಹೆಚ್ಚಾಗಿದ್ದು ಆ ಭಾಗಗಳಲ್ಲಿ ಬೆಂಕಿ ಅವಘಡಗಳು ಪದೇಪದೆ ಸಂಭವಿಸುತ್ತವೆ. ಎಷ್ಟೇ ನಿಗಾವಹಿಸಿದರೂ ಕಾಡಂಚಿನ ಭಾಗದಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಶಿವಮೊಗ್ಗ:ಕಾಡ್ಗಿಚ್ಚಿನಿಂದ ಅರಣ್ಯನಾಶ ಪ್ರತೀಬಾರಿಯೂ ಆಕಸ್ಮಿಕವೇ ಆಗಿರುವುದಿಲ್ಲ. ಮಾನವ ಅಪರಾಧದ ಪ್ರಮಾಣವೂ ದೊಡ್ಡದಿರುತ್ತದೆ. ಪ್ರವಾಸಿಗರ ಮೋಜು- ಮಸ್ತಿ, ಕ್ಯಾಂಪ್​ಫೈರ್ ಮತ್ತಿತರ ಕಿಡಿಗೇಡಿತನಗಳೂ ಕಾಡ್ಗಿಚ್ಚಿಗೆ ಕಾರಣವಾಗುತ್ತಿದೆ.
ಶಿವಮೊಗ್ಗ ಮತ್ತು ಶಿಕಾರಿಪುರ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ತರೀಕೆರೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ಪ್ರಮಾಣ ಹೆಚ್ಚು. ಅದರಲ್ಲೂ ಚಾರ್ವಡಿ ಘಾಟಿ ಪ್ರದೇಶದಲ್ಲಿ ಪ್ರವಾಸಿಗರು ಕಿಡಿಗೇಡಿತನ ಮೆರೆಯುವುದರಿಂದ ಕಾಡಿಗೆ ಬೆಂಕಿ ಬಿದ್ದ ಪ್ರಕರಣಗಳು ಹೆಚ್ಚುತ್ತಿವೆ. ಕಾಡಂಚಿನ ಭಾಗದಲ್ಲಿ ಅರಣ್ಯ ಇಲಾಖೆ ಸಿಸಿ ಕ್ಯಾಮರಾಗಳನ್ನೂ ಅಳವಡಿಸಿದೆ. ಆದರೂ, ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸುಸ್ತಾಗಿ ಹೋಗುತ್ತಿದ್ದಾರೆ. ಕಿಡಿಗೇಡಿಗಳು ಹಚ್ಚುವ ಬೆಂಕಿ ನಂದಿಸಲು ಸಿಬ್ಬಂದಿ ಜೀವದ ಹಂಗು ತೊರೆದು ಶ್ರಮಿಸಬೇಕಿದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಕಾಡಿಗೆ ಬೆಂಕಿ ಇಟ್ಟವರು ಯಾರು ಎಂಬ ಪ್ರಶ್ನೆ ಇಲಾಖೆಗೂ ನಿಗೂಢವಾಗುತ್ತಿರುವುದು ವಿಪರ್ಯಾಸ.
ನಂದಿ ಬೆಟ್ಟದ ತಪ್ಪಲಿನಲ್ಲಿ ಕಾಡ್ಗಿಚ್ಚು:ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ, ಆವಲಬೆಟ್ಟ, ವೀರದಿಮ್ಮನ ಕಣಿವೆ ಸೇರಿದಂತೆ ವಿವಿಧೆಡೆ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಂಡುಬರುತ್ತಿದೆ. ಕಳೆದ ಒಂದು ವಾರದಿಂದಲೂ ನಂದಿ ಬೆಟ್ಟದ ತಪ್ಪಲಿನಲ್ಲಿ ದಟ್ಟವಾದ ಬೆಂಕಿ ಹರಡಿಕೊಳ್ಳುತ್ತಿದೆ. ಇದನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪ್ರತಿವರ್ಷ ಸಾಮಾನ್ಯವಾಗಿ ಬೇಸಿಗೆಯಲ್ಲಿ ದನಗಾಹಿಗಳು ಹಾಗೂ ಕೆಲ ಕಿಡಿಗೇಡಿಗಳು ಇದ್ದಿಲು, ಸೌದೆಯ ಜತೆಗೆ ಬೇರೆ ಬೇರೆ ಉದ್ದೇಶಗಳಿಗೆ ಅರಣ್ಯದಲ್ಲಿನ ಹುಲ್ಲುಗಾವಲಿಗೆ ಬೆಂಕಿ ಹಚ್ಚುತ್ತಿದ್ದರ ನಡುವೆ ಈಗ ರಜಾ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ಲಗ್ಗೆಯಿಡುತ್ತಿರುವ ಜನರು ಮೋಜು-ಮಸ್ತಿಯಲ್ಲಿ ಫೈರ್ ಕ್ಯಾಂಪ್ ಹಾಕಿ, ಬೆಂಕಿಯನ್ನು ಆರಿಸದೆ ಹೋಗುತ್ತಿರುವುದರಿಂದ ಅಲ್ಲಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸುತ್ತಾರೆ.
ಇದನ್ನೂ ಓದಿ:ಬಾರ್‌ಗೆ ಬಂದ ಕಡಲಾಮೆ!; ಗ್ರಾಹಕರ ಟೇಬಲ್​ ಕೆಳಗೇ ಇಟ್ಟ ಮೊಟ್ಟೆಗಳ ಸಂರಕ್ಷಣೆ
ಇಲಾಖೆಗಳ ತಾಕಲಾಟ:ತರೀಕೆರೆ ತಾಲೂಕು ಭದ್ರಾ ವನ್ಯಜೀವಿ ವಿಭಾಗದ ತಣಿಗೆಬೈಲು ಅರಣ್ಯ ವಲಯದ ಬಫರ್ ಜೋನ್ ವ್ಯಾಪ್ತಿಯ ನಂದಿಬಟ್ಟಲು ಬಳಿಯ ಅಕೇಶಿಯಾ ಪ್ಲಾಂಟೇಷನ್​ನಲ್ಲಿ ಮೂರು ದಿನಗಳ ಹಿಂದೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಂದಾಜು 10 ಎಕರೆಯಷ್ಟು ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಅರಣ್ಯಾಧಿಕಾರಿಗಳು ತುರ್ತಾಗಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದರೆ ಕಾಡು ಸುಟ್ಟುಹೋಗುವುದನ್ನು ತಪ್ಪಿಸಬಹುದಿತ್ತು. ನಂದಿಬಟ್ಟಲು ಗ್ರಾಮದ ಬಳಿಯ ಅರಣ್ಯವು ತರೀಕೆರೆ ಸಾಮಾನ್ಯ ಅರಣ್ಯ ಇಲಾಖಾ ವಿಭಾಗಕ್ಕೆ ಸೇರಿದ್ದೆಂದು ಭದ್ರಾ ಅಭಯಾರಣ್ಯದ ಅಧಿಕಾರಿಗಳು ಸುಮ್ಮನಿದ್ದರೆ, ತರೀಕೆರೆ ಸಾಮಾನ್ಯ ಅರಣ್ಯ ಇಲಾಖೆಯವರು ಅದು ಭದ್ರಾ ಅಭಯಾರಣ್ಯಕ್ಕೆ ಸೇರಿರುವ ಪ್ರದೇಶವೆಂದು ಹೇಳಿ ನುಣುಚಿಕೊಳ್ಳುತ್ತ ಕಾಲಹರಣ ಮಾಡಿದ್ದರಿಂದ ಅಮೂಲ್ಯ ವನ ಸಂಪತ್ತು ಬೆಂಕಿಗೆ ಆಹುತಿಯಾಗಿದೆ ಎಂಬುದು ಸಾರ್ವಜನಿಕರ ಆರೋಪ.
ಕಾಡ್ಗಿಚ್ಚಿಗೆ ಅರಣ್ಯ ರಕ್ಷಕ ಬಲಿ:ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿ ಕಾಡ್ಗಿಚ್ಚಿಗೆ ಫೆ.16ರ ಮಧ್ಯಾಹ್ನ ತೀರ್ಥಹಳ್ಳಿ ಮೂಲದ ಅರಣ್ಯ ರಕ್ಷಕ ಸುಂದರೇಶ್(41) ಬಲಿಯಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಲಿಲ್ಲ. ಸುಂದರೇಶ್ ಅವರನ್ನು ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ತೀರ್ಥಹಳ್ಳಿ ತಾಲೂಕಿನ ಟೆಂಕಬೈಲು ಸಮೀಪದ ಸಂಪಿಗೆಸರ ಗ್ರಾಮದ ಸುಂದರೇಶ್, ಗಸ್ತು ಅರಣ್ಯ ಪಾಲಕ ಹುದ್ದೆಗೆ ಬಡ್ತಿ ಪಡೆದು ಕಳೆದ 10 ವರ್ಷಗಳಿಂದ ಹಾಸನ ಅರಣ್ಯ ವೃತ್ತದ ಸಕಲೇಶಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕಿಡಿಗೇಡಿಗಳು ಅರಣ್ಯಕ್ಕೆ ಕೊಳ್ಳಿ ಇಡುವುದನ್ನು ತಪ್ಪಿಸಲು ದೇವರಿಗೆ ಹರಕೆ ಹೊತ್ತ ಉದಾಹರಣೆಯೂ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಚಿಕ್ಕಮಗಳೂರು ತಾಲೂಕು ಸಿಂದಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇಂಥದ್ದೊಂದು ಹರಕೆ ಕಟ್ಟಿದ್ದರು. ಪ್ರತಿವರ್ಷ ಬೆಂಕಿಯಿಂದ ಕಾಡು ಉರಿಯುವುದನ್ನು ತಪ್ಪಿಸಲಾಗದೆ ಹತಾಶರಾಗಿದ್ದ ಜನರ ಮನಸ್ಸಿಗೆ ಹೊಳೆದ ಉಪಾಯವೇ ದೇವರು. ಸಿಂದಿಗೆರೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲೆಂದು ಶ್ರೀ ರೇವಣಸಿದ್ದೇಶ್ವರ ಹಾಗೂ ಪುರದಮ್ಮ ದೇವರಲ್ಲಿ ಹರಕೆ ಹೊರಲಾಗಿದೆ. ಈ ಅರಣ್ಯಕ್ಕೆ ದೇವರ ಕಾವಲಿದೆ ಎಚ್ಚರಿಕೆ ಎಂಬ ಬ್ಯಾನರ್ ಕಟ್ಟಿದ ಮೇಲೆ ಕಿಡಿಗೇಡಿತನ ಕಡಿಮೆಯಾಗಿತ್ತು.
ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ; ತರಕಾರಿ, ಹಾಲು, ನೀರೂ ತೆಗೆದುಕೊಳ್ಳುವಂತಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 10 =
Remember me
