ಬೆಂಗಳೂರು:ಲೋಕೋಪಯೋಗಿ ಇಲಾಖೆಯಲ್ಲಿ ಅಜೀರ್ಣವಾಗುವಷ್ಟು ಕಾಮಗಾರಿಗೆ ಮಂಜೂರಾತಿ ನೀಡಿದ್ದರಿಂದ ಉಂಟಾದ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಿಕೊಳ್ಳಲು ಹಣಕಾಸು ಇಲಾಖೆ ಸರ್ಕಾರದ ಕೈಕಟ್ಟಿದೆ. ಇದರಿಂದ ಪ್ರಗತಿಯಲ್ಲಿರುವ ಸಾವಿರಾರು ಕಾಮಗಾರಿಗಳಿಗೆ ಗ್ರಹಣ ಬಡಿದಂತಾಗಿದೆ, ಜತೆಗೆ ಗುತ್ತಿಗೆದಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಲೋಕೋಪಯೋಗಿ ಇಲಾಖೆಗೆ ವಾರ್ಷಿಕ ನಿಗದಿಯಾಗುವ ಅನುದಾನದ ಐದು ಪಟ್ಟು ಕಾಮಗಾರಿಗಳಿಗೆ ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ಇಲಾಖೆ ಅನುಮತಿ ಇಲ್ಲದೆ ಮಂಜೂರಾತಿ ಕೊಡಲಾಗಿತ್ತು. ಆ ಕಾಮಗಾರಿಗಳೆಲ್ಲ ಸದ್ಯ ಪ್ರಗತಿಯಲ್ಲಿದ್ದು, ಇದೀಗ ಆ ಕೆಲಸಗಳಿಗೆ ಸರ್ಕಾರ ಹಣ ಕೊಡಲಾಗದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಅನುಮತಿ ಇಲ್ಲದೆ ನಡೆಯುತ್ತಿರುವ ಕಾಮಗಾರಿಗಳನ್ನು ತಕ್ಷಣ ತಡೆ ಹಿಡಿಯುವಂತೆ ಹಣಕಾಸು ಇಲಾಖೆ ಸ್ಪಷ್ಟವಾಗಿ ಸೂಚಿಸಿದೆ.
ಮಾ.5ರಂದು 2020-21 ಸಾಲಿನ ಬಜೆಟ್ ಮಂಡನೆಯಾಗುತ್ತಿದ್ದು, ಇಲಾಖೆಗೆ ಸರಿಸುಮಾರು 10 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ನಿರೀಕ್ಷಿಸಲಾಗಿದೆ. ಆದರೆ, 54 ಸಾವಿರ ಕೋಟಿ ರೂ. ಕಾಮಗಾರಿ ಮಂಜೂರಾಗಿ ಕೆಲಸ ಪ್ರಗತಿಯಲ್ಲಿದೆ. ಲಭ್ಯವಾಗುವ ಅನುದಾನದಲ್ಲಿ ಈಗ ನಡೆಯುತ್ತಿರುವ ಕಾಮಗಾರಿಗೆ ಹಣ ಬಿಡುಗಡೆ ಅಸಾಧ್ಯ. ಈ ಕಾರಣದಿಂದ ಇಲಾಖೆ ಪರಿಸ್ಥಿತಿ ಅಯೋಮಯವಾಗಿದ್ದು, ಪರಿಸ್ಥಿತಿ ಸುಧಾರಿಸಲು ಇನ್ನೈದು ವರ್ಷವಾದರೂ ಬೇಕಾಗಬಹುದೆಂಬ ಅಂದಾಜಿದೆ.
ಹಳಿ ತಪ್ಪಿದ್ದೆಲ್ಲಿ?:ಸಾಮಾನ್ಯವಾಗಿ ಅಪೆಂಡಿಕ್ಸ್ ‘ಸಿ’ ಪ್ರಕಾರ ಮಂಜೂರಾದ ಕಾಮಗಾರಿಗಳಿಗೆ ಯಾವುದೇ ಹಣ ಸಮಸ್ಯೆಯಾಗದು. ಆದರೆ, ಅಪೆಂಡಿಕ್ಸ್ ‘ಇ’ ಅಡಿ ನಡೆಯುತ್ತಿರುವ ಬಹುಪಾಲು ಕಾಮಗಾರಿಗೆ ಗ್ರಹಣ ಹಿಡಿಯಲಿದೆ. ಯಾವೆಲ್ಲ ಕಾಮಗಾರಿಯ ಪ್ರಗತಿ ಎಷ್ಟಿದೆ, ಅದರ ಮಹತ್ವವೆಷ್ಟು ಎಂಬ ಮಾಹಿತಿಯನ್ನು ಇಲಾಖೆ ಸಂಗ್ರಹಿಸುತ್ತಿದೆ. ಇಲಾಖೆಗೆ ಮಂಜೂರಾದ ಬಜೆಟ್​ಗಿಂತ 1:1 ಅಥವಾ 1:1.5 ಕಾಮಗಾರಿಗಳಿಗೆ ಮಂಜೂರಾತಿ ಕೊಟ್ಟಿದ್ದರೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆದುಕೊಂಡೋ ಅಥವಾ ಮುಂದಿನ ಬಜೆಟ್​ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವಿತ್ತು. ಈ ರೀತಿಯ ಪದ್ಧತಿ ಹೊಸದೂ ಅಲ್ಲ. ಒಮ್ಮೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಪ್ರತಿ ವರ್ಷ ಸ್ವಲ್ಪ ಸ್ವಲ್ಪ ಹಣ ಪಡೆದು ಕಾಮಗಾರಿ ಮಾಡಿಸಿಕೊಳ್ಳುವ ಶಾಸಕರೂ ಇದ್ದಾರೆ. ಅದರೆ 5 ಪಟ್ಟು ಹೆಚ್ಚು ಮೊತ್ತದ ಕಾಮಗಾರಿಗೆ ಮಂಜೂರಾತಿಯನ್ನು ಹಿಂದಿನ ಸರ್ಕಾರವೇ ಅಧಿಕೃತ ವಾಗಿ ನೀಡಿಬಿಟ್ಟಿದೆ. ರಾಜಕೀಯ ಒತ್ತಡ, ರಾಜಕೀಯ ಬೆಳವಣಿಗೆಗಳು, ಅನಿಶ್ಚಿತತೆಯ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಮಂಜೂರಾತಿ ನೀಡಲಾಗಿದೆ ಎಂದು ಅಧಿಕಾರಿಗಳೇ ವಿಶ್ಲೇಷಿಸುತ್ತಾರೆ.
ಸರ್ಕಾರದ ಮುಂದಿರುವ ದಾರಿ
2. ಪ್ರಸ್ತುತ ಪ್ರಗತಿಯಲ್ಲಿರುವ ಪ್ರಮುಖ ಕೆಲಸಗಳನ್ನು ಪ್ರತ್ಯೇಕಿಸಿ ಅವುಗಳಿಗೆ ಹಣ ಹೊಂದಾಣಿಕೆ.
3. ಈ ವರ್ಷ, ಮುಂದಿನ ವರ್ಷದ ಬಜೆಟ್​ನಲ್ಲಿ ಪ್ರಗತಿಯಲ್ಲಿರುವ ಕೆಲಸಗಳಿಗೆ ಮಾತ್ರ ಆದ್ಯತೆ.
ಹೊಣೆ ಯಾರದ್ದು?
ಹಣಕಾಸಿನ ಲಭ್ಯತೆ ಇಲ್ಲದ ಹೊರತಾಗಿಯೂ ಯೋಜನೆ ನಡೆಸಲು ಇಲಾಖೆ ಅನುಮತಿ ನೀಡಿರುವುದು ಸಾಕಷ್ಟು ಗುಮಾನಿಗೆ ಕಾರಣವಾಗಿದೆ. ಹಳಿ ತಪ್ಪಿದ್ದು ನಮ್ಮ ಅವಧಿಯಲ್ಲಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರಲ್ಲದೆ, ನಿಕಟಪೂರ್ವ ಲೋಕೋಪಯೋಗಿ ಸಚಿವರತ್ತ ನೇರವಾಗಿ ಬೊಟ್ಟು ಮಾಡಿದ್ದಾರೆ. ಇಷ್ಟರ ನಡುವೆ ಸಚಿವರು, ಸರ್ಕಾರ ಬದಲಾದರೂ ಅಧಿಕಾರಿಗಳು ಜವಾಬ್ದಾರಿ ಮರೆತರೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ.
ಕಾಮಗಾರಿಗಳು ಯಾವುವು?
ರಸ್ತೆ, ಚರಂಡಿ, ವಿವಿಧ ಇಲಾಖೆಗಳ ಕಟ್ಟಡಗಳ ಕಾಮಗಾರಿ ಈಗ ಅರ್ಧಕ್ಕೆ ನಿಲ್ಲುವಂತಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದರಷ್ಟೇ ಅವು ಮುಂದುವರಿಯುತ್ತವೆ. ಇಲ್ಲವಾದರೆ ಈಗ ಮಾಡಿರುವ ಅರ್ಧಂಬರ್ಧ ವೆಚ್ಚವೂ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತದೆ. ಕಾಮಗಾರಿ ಪಡೆಯಲು ಒಂದಷ್ಟು ಕಮಿಷನ್ ಕೊಟ್ಟಿದ್ದು, ಕಾಮಗಾರಿಗಳ ಸಾಮಗ್ರಿಗೆ ಬಂಡವಾಳ ಹೂಡಿದ್ದಾರೆ. ಅವರ ಕತೆ ಏನೆಂಬುದು ಸರ್ಕಾರಕ್ಕೂ ಚಿಂತೆಯಾಗಿದೆ.
ನಿಕಟಪೂರ್ವ ಸಚಿವರ ಗೌಪ್ಯ ಸಭೆ
ಲೋಕೋಪಯೋಗಿ ನಿಕಟಪೂರ್ವ ಸಚಿವರು ವಿಧಾನಪರಿಷತ್ ಸದಸ್ಯರೊಬ್ಬರ ಮೂಲಕ ಇಲಾಖೆ ಅಧಿಕಾರಿಗಳನ್ನು ಕರೆಸಿ ಮಾತನಾಡುತ್ತಿದ್ದಾರೆ. ಇಲಾಖೆ ಕಾರ್ಯದರ್ಶಿ, ಮುಖ್ಯ ಇಂಜಿನಿಯರ್​ಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದು, ತಾವು ಆದೇಶಕೊಟ್ಟ ಯಾವ ಕಾಮಗಾರಿಗೆ ಸಮಸ್ಯೆಯಾಗಬಹುದೆಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆಂದು ತಿಳಿದುಬಂದಿದೆ.
| ಶ್ರೀಕಾಂತ ಶೇಷಾದ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
