|ರುದ್ರಣ್ಣ ಹರ್ತಿಕೋಟೆಬೆಂಗಳೂರು
ತೀವ್ರ ನಷ್ಟದ ಸುಳಿಗೆ ಸಿಲುಕಿರುವ ನಾಲ್ಕು ಸಾರಿಗೆ ನಿಗಮಗಳನ್ನು ಕನಿಷ್ಠ ಲಾಭ-ನಷ್ಟ ಸರಿದೂಗಿಸುವ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸರ್ಕಾರ ಹಲವು ಪರ್ಯಾಯ ಮಾಗೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿ ನೀಡಿರುವ ಸಲಹೆಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸಾರಿಗೆ ನಿಗಮಗಳಿಗೆ ಮತ್ತು ಹಣಕಾಸು ಇಲಾಖೆಗೆ ಕೆಲವೊಂದು ಸಲಹೆ ನೀಡಿದ್ದಾರೆ. ಆ ಮೂಲಕ ಸಾರಿಗೆ ನಿಗಮಗಳನ್ನು ಲಾಭ ಅಲ್ಲದಿದ್ದರೂ ಕನಿಷ್ಟ ನಷ್ಟದಿಂದ ಹೊರ ತರಬೇಕು ಎಂಬ ಉದ್ದೇಶ ಹೊಂದಲಾಗಿದೆ.
ಎಷ್ಟಿದೆ ನಷ್ಟ?:ಇಂಧನ ದರ ಏರಿಕೆ, ಸಾರಿಗೆ ನಿಗಮಗಳಲ್ಲಿನ ಭ್ರಷ್ಟಾಚಾರ, ದುರಾ ಡಳಿತದ ಪರಿಣಾಮ ಸಂಸ್ಥೆಗಳು ನಷ್ಟಕ್ಕೆ ಒಳಗಾಗಿವೆ. ಸಾರಿಗೆಯ ನಾಲ್ಕು ನಿಗಮಗಳಲ್ಲಿ ಆದಾಯಕ್ಕಿಂತ ವೆಚ್ಚ ಜಾಸ್ತಿಯಾಗಿದೆ. ಒಟ್ಟಾರೆ ನಷ್ಟ ಸುಮಾರು 4,500 ಕೋಟಿ ರೂ. ಇದ್ದರೆ, ಸಿಬ್ಬಂದಿಗೆ ಸುಮಾರು 1,700 ಕೋಟಿ ರೂ. ನೀಡುವುದು ಬಾಕಿ ಇದೆ. ವರ್ಷಕ್ಕೆ ಸುಮಾರು 1,200 ಕೋಟಿ ರೂ. ನಷ್ಟವಾಗುತ್ತದೆ ಎಂಬ ಅಂದಾಜಿದೆ. ಈ ವರ್ಷದೊಳಗೆ ನಷ್ಟದಿಂದ ಹೊರ ತರಬೇಕೆಂದು ಬೊಮ್ಮಾಯಿ ನಿರ್ಧರಿಸಿದ್ದಾರೆ. ಇಂಧನ ವೆಚ್ಚಕ್ಕೆ ಸಂಬಂಧಿಸಿದಂತೆ ಈಗಾಗಲೆ ನಿರ್ಧಾರ ಕೈಗೊಂಡಿದ್ದಾರೆ. ಇನ್ನಷ್ಟು ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ನಾಲ್ಕು ನಿಗಮಗಳು ಸೇರಿ ಒಟ್ಟು 24 ಸಾವಿರ ಬಸ್​ಗಳನ್ನು ಹೊಂದಿದ್ದು, ಬಹುದೊಡ್ಡ ಸಾರಿಗೆ ಸಂಸ್ಥೆಯಾಗಿದೆ. ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರಗಳಲ್ಲಿಯೂ ಇಷ್ಟು ಪ್ರಮಾಣದ ಬಸ್​ಗಳಿಲ್ಲ ಎಂಬುದು ವಿಶೇಷ.
ಆಸ್ತಿ ನಗದೀಕರಣ:ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಸಾಕಷ್ಟು ಆಸ್ತಿ ಇದೆ. ಬಸ್ ನಿಲ್ದಾಣ, ಡಿಪೋಗಳಲ್ಲಿಯೂ ಜಾಗ ಇದೆ. ನಾಲ್ಕು ನಿಗಮಗಳಿಂದ ಸುಮಾರು 6 ಸಾವಿರ ಕೋಟಿ ರೂ.ಗಳ ಮೊತ್ತದ ಆಸ್ತಿ ಇದೆ. ಆ ಜಾಗವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ನಗದೀಕರಣ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಅವರೇ ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಶ್ರೀನಿವಾಸಮೂರ್ತಿ ಅವರು ಮೊದಲಿಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಜಾಗದಲ್ಲಿ ವಸ್ತು ಸಂಗ್ರಹಾಲಯ ಮಾಡುವುದು ಹಾಗೂ ವಸ್ತು ಪ್ರದರ್ಶನ ಗ್ಯಾಲರಿ ರೂಪಿಸಿ ಆದಾಯದ ಮೂಲ ಕಂಡುಕೊಳ್ಳುವುದು ಎಂಬ ಸಲಹೆ ನೀಡಿದ್ದಾರೆ. ಬೆಂಗಳೂರಿನ ನಂತರ ಉಳಿದ ನಗರಗಳಲ್ಲಿಯೂ ಈ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. ನಿಗಮಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.
ಇವಿ ಬಸ್​ಗಳ ಬಳಕೆ:ವಿದ್ಯುತ್ ಚಾಲಿತ ಬಸ್​ಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಮೂಲಕ ಡೀಸೆಲ್ ವೆಚ್ಚವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಡೀಸೆಲ್ ಚಾಲಿತ ಬಸ್​ಗಳು ಪ್ರತಿ ಕಿಮೀಗೆ ವೆಚ್ಚ (ಇಂಧನ, ದುರಸ್ತಿ, ನಿರ್ವಹಣೆ, ವೇತನ ಸೇರಿ) 30 ರೂ.ಗಳಾದರೆ, ಇವಿ ಬಸ್​ಗಳಿಗೆ ಕೇವಲ 10 ರೂ.ಗಳು ಮಾತ್ರ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಇವಿ ಬಸ್​ಗಳ ಸಂಖ್ಯೆ ಹೆಚ್ಚಿಸುವ ಉದ್ದೇಶ ಸರ್ಕಾರಕ್ಕಿದೆ.
ಟಿಕೆಟ್ ವೆಂಡಿಂಗ್ ಮಿಷನ್:ಮೆಟ್ರೋದಲ್ಲಿ ಇರುವಂತೆ ಟಿಕೆಟ್ ವೆಂಡಿಂಗ್ ಮಿಷನ್ ಅಳವಡಿಕೆ ಬಗ್ಗೆಯೂ ಚರ್ಚೆ ನಡೆದಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ವೇಗವಾದ ಸೇವೆ ನೀಡಬಹುದಾಗಿದೆ. ಟಿಕೆಟ್​ರಹಿತ ಪ್ರಯಾಣಿಕರ ಸಂಖ್ಯೆ ಸಹ ಕಡಿಮೆಯಾಗಲಿದೆ.
ಇ ಕಾಮರ್ಸ್ ಸಂಸ್ಥೆಗಳಿಗೆ ನೆರವು:ಸಾರಿಗೆ ಬಸ್​ಗಳ ಸೇವೆ ಎಲ್ಲೆಡೆ ಇದೆ. ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಹಳ್ಳಿಹಳ್ಳಿಗೂ ತಲುಪಿಸಲು ನೆರವಾಗಬಹುದಾಗಿದೆ. ಇದರಿಂದ ಸಂಸ್ಥೆಗೂ ಲಾಭವಾಗುತ್ತದೆ. ಹಳ್ಳಿಗಳಲ್ಲಿಯೂ ಉದ್ಯೋಗದ ಅವಕಾಶಗಳು ಸಣ್ಣ ಪ್ರಮಾಣದಲ್ಲಿ ಆರಂಭವಾಗುತ್ತವೆ. ಆದ್ದರಿಂದ ಇ ಕಾಮರ್ಸ್ ಸಂಸ್ಥೆಗಳ ಜತೆಗೆ ಚರ್ಚೆ ನಡೆಸಲು ಸರ್ಕಾರ ನಿಗಮಗಳಿಗೆ ಸದ್ಯದಲ್ಲಿಯೇ ಸೂಚನೆ ನೀಡಲಿದೆ.
ತೆರಿಗೆ ವಿನಾಯಿತಿ:ಮೋಟಾರ್ ವಾಹನ ತೆರಿಗೆಯಿಂದ ಹೊರೆ ಜಾಸ್ತಿಯಾಗುತ್ತಿದೆ. ಆದ್ದರಿಂದ ಸಾರಿಗೆ ನಿಗಮದ ವಾಹನಗಳಿಗೆ ಹೊರೆ ಕಡಿಮೆ ಮಾಡುವ ಮೂಲಕ ನಷ್ಟದಿಂದ ಹೊರ ಬರುವಂತೆ ನೆರವಾಗಲು ಪರಿಶೀಲನೆ ಮಾಡಿ ವರದಿ ನೀಡುವಂತೆ ಮುಖ್ಯಮಂತ್ರಿ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಾನವ ಸಂಪನ್ಮೂಲ ಬಳಕೆ:ಎಚ್​ಆರ್​ಎಂಎಸ್, ಕಂಪ್ಯೂಟರೀಕರಣ ಸೇರಿ ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಆದೇಶ ನೀಡಲಾಗಿದೆ. ಹಾಗೆಂದು , ನೌಕರರ ಸಂಖ್ಯೆಯನ್ನೇನು ಕಡಿಮೆ ಮಾಡುವುದಿಲ್ಲ.
ವಿದ್ಯಾರ್ಥಿಗಳಿಗೆ ನೆರವು:ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್​ಗಳ ಮೇಲೆ ಅವಲಂಬಿತರಾಗಿರುವುದು ಹೆಚ್ಚು. ಆದ್ದರಿಂದ ಬೇರೆ ಬೇರೆ ಭಾಗದಲ್ಲಿ ಎಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯದ ಅಗತ್ಯ ಇದೆಯೋ ಅಲ್ಲಿಗೆ ಬಸ್ ಓಡಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಚಾಮರಾನಗರ ಜಿಲ್ಲೆಯ ಹನೂರಿನಿಂದ ಕೊಳ್ಳೇಗಾಲ ಹಾಗೂ ಚಾಮರಾಜನಗರಕ್ಕೆ ಹೆಚ್ಚಿನ ಬಸ್ ಓಡಿಸುತ್ತಿರುವುದರಿಂದ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಕಾಲೇಜು ಶಿಕ್ಷಣ ಪಡೆಯುವಂತಾಗಿದೆ ಎಂಬುದನ್ನು ಬಸವರಾಜ ಬೊಮ್ಮಾಯಿ ಇಲಾಖೆಯ ಸಭೆಗಳಲ್ಲಿ ನೆನಪಿಸಿಕೊಳ್ಳುತ್ತಿರುತ್ತಾರೆ.
ಟಿಕೆಟ್ ದರ ಏರಿಕೆ ಪರಿಹಾರವಲ್ಲ:ನಷ್ಟ ಸರಿದೂಗಿಸುವುದಕ್ಕೆ ಪ್ರಯಾಣಿಕರ ಟಿಕೆಟ್ ದರ ಏರಿಕೆಯೊಂದೇ ಪರಿಹಾರವಲ್ಲ, ಬದಲಾಗಿ ನಾಲ್ಕು ಸಂಸ್ಥೆಗಳನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು ಎಂಬುದು ಮುಖ್ಯಮಂತ್ರಿ ಅವರ ಉದ್ದೇಶವಾಗಿದೆ. ದರ ಏರಿಕೆ ಮಾಡದೇ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + ten =
Remember me
