ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಳೆಗಾಲ ಬಿರುಸುಗೊಂಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಡೆಂಘ ಪ್ರಕರಣಗಳು ಉಲ್ಬಣಗೊಂಡಿವೆ. ಇದರ ಜತೆಗೆ ಚಿಕೂನ್ ಗುನ್ಯಾ, ಝೀಕಾ ವೈರಸ್ ಸೇರಿ ನಾನಾ ವೈರಾಣು ಜ್ವರ ಮನೆ ಮನೆ ಬಾಗಿಲು ತಟ್ಟುತ್ತಿದ್ದು, ಜನರು ಹೈರಾಣಾಗಿದ್ದಾರೆ.
ಆಸ್ಪತ್ರೆಗಳ ವಾರ್ಡ್​ಗಳು ಜ್ವರ ಬಾಧಿತರಿಂದ ತುಂಬಿದ್ದು, ಬಹುತೇಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸ್ವಲ್ಪ ತಲೆ ನೋವು ಕಾಣಿಸಿಕೊಂಡರೂ, ಮೈ ಬಿಸಿಯಾದರೂ ಹೆದರಿ ಆಸ್ಪತ್ರೆಯತ್ತ ಓಡುವ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಮಳೆಯ ಜತೆಗೆ ಆಗಾಗ್ಗೆ ಬಿಸಿಲ ಕಣ್ಣಾಮುಚ್ಚಾಲೆ ಡೆಂಘ ಜ್ವರ ಹೆಚ್ಚಳಕ್ಕೆ ಕಾರಣವಾಗಿದೆ. ಮಳೆಯಿಂದ ಹಳ್ಳಕೊಳ್ಳಗಳಲ್ಲಿ ಹಾಗೂ ತ್ಯಾಜ್ಯ ವಸ್ತುಗಳಲ್ಲಿ ನಿಂತ ನೀರು ಡೆಂಘ ಹರಡುವ ಈಡಿಸ್ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಕಳೆದೊಂದು ತಿಂಗಳಲ್ಲಿ ಡೆಂಘ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆ ಕಂಡಿದ್ದು, ಸಾವು ನೋವು ವರದಿಯಾಗುತ್ತಿದೆ. ಈ ನಿಟ್ಟಿನಲ್ಲಿ ಡೆಂಘ ನಿಯಂತ್ರಣಕ್ಕೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕೈಗೊಂಡಿರುವ ಕ್ರಮ, ಜನರ ಬವಣೆ, ಲಭ್ಯವಿರುವ ಚಿಕಿತ್ಸೆ, ಡೆಂಘ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ, ಸರ್ಕಾರದ ಜಾಗೃತಿ ಕಾರ್ಯಕ್ರಮಗಳು ಒಳಗೊಂಡಂತೆ ಸಮಗ್ರ ಚಿತ್ರಣ ಇಲ್ಲಿದೆ.
ರೋಗಿಗಳ ವಿವರ: ರಾಜ್ಯದಲ್ಲಿ ಒಂದು ವರ್ಷದ ಒಳಗಿನ 131 ಮಕ್ಕಳು, 1ರಿಂದ 18 ವರ್ಷದವರೆಗಿನ 2,395 ಮಂದಿ ಹಾಗೂ 18 ವರ್ಷ ಮೇಲ್ಪಟ್ಟ 4,305 ಮಂದಿ ಸೇರಿ (ಜ.1ರಿಂದ ಜು. 5ರವರೆಗೂ) 6,831 ಮಂದಿ ಡೆಂಘ ಜ್ವರದಿಂದ ಬಳಲಿದ್ದಾರೆ. ಸದ್ಯ 343 ಮಂದಿ ಡೆಂಘ ಜ್ವರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆಯೇ ಹುಣಸೂರು ತಾಲೂಕಿನ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ (32) ಶಂಕಿತ ಡೆಂಘಯಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತರು ಡೆಂಘ ಜ್ವರದಿಂದ ಬಳಲಿದ್ದರು.
ಸಾರ್ವಜನಿಕರ ಪಾತ್ರವೂ ಮುಖ್ಯ:ಡೆಂಘ ಜ್ವರ ಹೊಸ ರೋಗವೇನಲ್ಲ. ಹಾಗಾಗಿ ಈ ಬಗ್ಗೆ ಆರೋಗ್ಯ ಇಲಾಖೆ ಪ್ರತಿ ವರ್ಷ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆಯಾದರೂ, ಜನರೂ ಸಹ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಫೀವರ್ ಕ್ಲಿನಿಕ್:ಡೆಂಘ ನಿಯಂತ್ರಿಸಲು ಹಾಗೂ ತ್ವರಿತ ಚಿಕಿತ್ಸೆ ನೀಡುವ ಮೂಲಕ ಸಾವು ನೋವು ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಆರೋಗ್ಯ ಇಲಾಖೆ ಡೆಂಘ ಪ್ರಕರಣಗಳು ಹೆಚ್ಚು ವರದಿಯಾಗುವ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಮುಂದಾಗಿದೆ. ಇದರಿಂದ ಆರಂಭದಲ್ಲೇ ಜ್ವರ ಪತ್ತೆ ಹೆಚ್ಚಿ ಚಿಕಿತ್ಸೆ ನೀಡುವ ಮೂಲಕ ಸಾವಿನ ಪ್ರಮಾಣ ತಡೆಯಲು ಕ್ರಮ ವಹಿಸಿದೆ.
ರೋಗ ಲಕ್ಷಣ:ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ-ಕೈ ನೋವು, ಅತಿಸಾರ ಇವು ಡೆಂಘ ಜ್ವರದ ಆರಂಭಿಕ ಲಕ್ಷಣಗಳು. ಗಂಭೀರ ಹಂತದಲ್ಲಿ ಅತ್ಯುದ್ವೇಗ ಕಾಡುತ್ತದೆ. ಕರುಳಿನಲ್ಲಿ ರಕ್ತಸ್ರಾವ ಆಗುತ್ತದೆ.
ಚೇತರಿಕೆ ಲಕ್ಷಣಗಳು:24 ಗಂಟೆಗಳಲ್ಲಿ ಯಾವುದೇ ಚಿಕಿತ್ಸೆಯ ನೆರವಿಲ್ಲದೇ ದೇಹಸ್ಥಿತಿ ಸ್ಥಿರವಾಗಿರಬೇಕು. ಉತ್ತಮ ಜೀರ್ಣಕ್ರಿಯೆ ಮತ್ತು ಮೂತ್ರವಿಸರ್ಜನೆ, ಸುಗಮ ಉಸಿರಾಟ, ರಕ್ತದ ಪ್ರತಿ ಕ್ಯೂಬಿಕ್ ಮಿಲಿಮೀಟರ್​ನ ಪ್ಲೇಟ್​ಲೆಟ್ ಸಂಖ್ಯೆ 50 ಸಾವಿರಕ್ಕೂ ಹೆಚ್ಚಿರಬೇಕು. ಕೆಂಪು ರಕ್ತ ಕಣಗಳು ಸ್ಥಿರವಾಗಿರಬೇಕು. ಸಂಧಿವಾತ ಅಥವಾ ತಲೆ ನೋವು ಇರಬಾರದು. ಡೆಂಘಯಿಂದ ಸಂಪೂರ್ಣ ಚೇತರಿಸಿಕೊಳ್ಳಲು 10ರಿಂದ 14 ದಿನಗಳ ಕಾಲಾವಕಾಶ ಅಗತ್ಯ.
7 ಸಾವಿರ ಗಡಿಯತ್ತ ನಾಗಾಲೋಟ:ರಾಜ್ಯದಲ್ಲಿ ಕಳೆದ ಐದು ದಿನಗಳಲ್ಲಿ 644 ಡೆಂಘ ಪ್ರಕರಣಗಳು ವರದಿ ಯಾಗಿದ್ದು, ಒಂದು ಸಾವು ಸಂಭವಿಸಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6,831ಕ್ಕೆ ಏರಿಕೆಯಾಗಿದೆ. ಈವರೆಗೂ 6 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ 155 ಡೆಂಘ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1,793 (1 ಸಾವು), ಚಿಕ್ಕಮಗಳೂರು 521, ಮೈಸೂರು 496, ಹಾವೇರಿ 481 (1), ಶಿವಮೊಗ್ಗ 292 (1), ಧಾರವಾಡ 289 (1), ಚಿತ್ರದುರ್ಗ 275, ದಕ್ಷಿಣ ಕನ್ನಡ 263, ಹಾಸನ 221 (2ಸಾವು) ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಅಧಿಕ ಶುಲ್ಕ ಪಡೆದರೆ ಕ್ರಮ:ರಾಜ್ಯದಲ್ಲಿ ಡೆಂಘೆ ಪ್ರಕರಣ ಹೆಚ್ಚುತ್ತಿರುವು ದನ್ನು ನಿಯಂತ್ರಿಸಲು ಸರ್ಕಾರದ ಕಡೆಯಿಂದ ಸೂಕ್ತ ಚಿಕಿತ್ಸೆ ಕೊಡುವ ವ್ಯವಸ್ಥೆ ಆಗಿದೆ. ಡೆಂಘೆ ಟೆಸ್ಟಿಂಗ್ ವಿಚಾರದಲ್ಲಿ ಆರೋಗ್ಯ ಇಲಾಖೆಯಿಂದ ದರ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಳ ಮಾಡುವುದು ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ದರ ಹೆಚ್ಚು ಪಡೆದರೆ ಅವರ ಲೈಸನ್ಸ್ ಕೂಡ ಕ್ಯಾನ್ಸಲ್ ಮಾಡಬಹುದು. ಎಪಿಡೆಮಿಕ್ ಮತ್ತು ಕೆಪಿಎಂಇ ಕಾನೂನಿನಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಶುದ್ಧ ನೀರಿನಲ್ಲೇ ಈಡಿಸ್ ಉತ್ಪತ್ತಿ :ಶುದ್ಧ ನೀರು ಇರುವ ಸಣ್ಣ ಪುಟ್ಟ ಸ್ಥಳದಲ್ಲೇ ಡೆಂಘ ಜ್ವರ ತರುವ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ. ಉದಾಹರಣೆಗೆ ತಾರಸಿಯಲ್ಲಿ ನಿಂತ ನೀರು, ತೆಂಗಿನ ಚಿಪು್ಪ, ಟೈರ್ ಟ್ಯೂಬ್, ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಲೋಟಗಳು, ಸಂಗ್ರಹಿಸಿಟ್ಟ ನೀರಿನ ತೊಟ್ಟಿ, ಡ್ರಮ್ ಬಿಂದಿಗೆ, ಹೂಕುಂಡಗಳು, ಏರ್​ಕೂಲರ್​ಗಳು ಸೇರಿ ನೀರು ನಿಲ್ಲಲು ಅವಕಾಶ ಇರುವ ತಾಣಗಳೆ ಈಡಿಸ್ ಸೊಳ್ಳೆಗಳ ಉಗಮ ತಾಣ. ಹಾಗಾಗಿ ಮನೆ ಒಳಗೆ ಹಾಗೂ ಹೊರಗೆ ನೀರು ನಿಲ್ಲದಂತೆ ಎಚ್ಚರವಹಿಸಬೇಕಿದೆ.
ಸರ್ಕಾರಕ್ಕೆ ಬಿಜೆಪಿ ತರಾಟೆ:ಅಭಿವೃದ್ಧಿ ಶೂನ್ಯವಾಗಿರುವ ರಾಜ್ಯದಲ್ಲಿ ಡೆಂಘಿ ಹೆಚ್ಚಳವಾಗಿದ್ದು, ಮರಣ ಮೃದಂಗ ಭಾರಿಸುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಕಟುವಾಗಿ ಟೀಕಿಸಿದೆ. ಸಾವಿರಾರು ಜನರು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮೌನ ವಾಗಿರುವುದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಬಿಬಿಎಂಪಿ ವ್ಯಾಪ್ತಿಯಲ್ಲೇ ಅತೀ ಹೆಚ್ಚು 1,793 (1 ಸಾವು) ಪ್ರಕರಣಗಳು ವರದಿಯಾಗಿವೆ. ಇದಲ್ಲದೇ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೇ ಪ್ರಕರಣಗಳು ಹೆಚ್ಚು ವರದಿಯಾಗಿರುವುದು ಸ್ಥಳೀಯ ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ. ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿರುವುದು, ಲಾರ್ವಾ ಸಮೀಕ್ಷೆ ನಡೆಸದಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.
. ಡೆಂಘಗೆ ಸೂಕ್ತ ಔಷಧವಿಲ್ಲ. ಮುಂಜಾಗ್ರತಾ ಕ್ರಮವೇ ಮದ್ದು
. ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ನಿರ್ಲಕ್ಷಿಸದೆ ಕೂಡಲೇ ಚಿಕಿತ್ಸೆ ಪಡೆಯಬೇಕು
. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು
. ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಸೂಕ್ತ
. ನೀರು ಶೇಖರಣಾ ತೊಟ್ಟಿ, ಟ್ಯಾಂಕ್​ಗಳ ಮುಚ್ಚಳ ಭದ್ರವಾಗಿ ಮುಚ್ಚಿಡಬೇಕು
. ಪಾತ್ರೆಗಳಲ್ಲಿ ಹೆಚ್ಚು ದಿನಗಳವರೆಗೆ ನೀರು ಸಂಗ್ರಹಿಸಿಡಬಾರದು
. ಮನೆಯ ತಾರಸಿ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು
. ತೆಂಗಿನ ಚಿಪು್ಪ, ಟಯರ್ ಸೇರಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು
. ತೊಟ್ಟಿ, ಡ್ರಮ್ ಸೇರಿ ದಿನಬಳಕೆಗೆ ಸಂಗ್ರಹಿಸಿದ ನೀರನ್ನು ಪ್ರತಿ 2 ದಿನಕ್ಕೊಮ್ಮೆ ಬದಲಿಸಬೇಕು
. ಸೊಳ್ಳೆಗಳ ತಡೆಗೆ ಮನೆಯ ಕಿಟಕಿ, ಬಾಗಿಲುಗಳಿಗೆ ಮೆಶ್ ಹಾಕಿಸಬೇಕು, ಇಲ್ಲವೆ ಸೊಳ್ಳೆನಾಶಕ ಔಷಧ ಬಳಸಬೇಕು.
ಡೆಂಘ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಪ್ರತಿ ಶುಕ್ರವಾರ ಡೆಂಘೆಗೆ ಕಾರಣವಾದ ಸೊಳ್ಳೆಗಳ ಉತ್ಪತ್ತಿ ತಾಣ ನಾಶ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಕರಣ ಹೆಚ್ಚು ವರದಿಯಾಗುವ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್ ತೆರೆಯುವುದು ಹಾಗೂ ಸಾರ್ವಜನಿಕರಲ್ಲಿ ಡೆಂಘ ಕುರಿತು ಜಾಗೃತಿ ಮೂಡಿಸುವುದು ಸೇರಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
| ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ, ದದ್ದಲ್‌ಗೆ ಎಸ್‌ಐಟಿ ನೋಟಿಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
