ಚಿಕ್ಕಬಳ್ಳಾಪುರ:ರಕ್ತದಾನ, ಉದ್ಯೋಗ ಮೇಳದಂತಹ ಸಾರ್ಥಕ ಕಾರ್ಯಕ್ರಮಗಳು, ಖ್ಯಾತ ಕಲಾವಿದರು ಮತ್ತು ನಟರಿಂದ ಮನರಂಜಿಸುವ ಸಾಂಸ್ಕೃತಿಕ ಕಲಾ ಪ್ರದರ್ಶನ, ಉತ್ಸಾಹ ತುಂಬುವ ಸ್ಪರ್ಧೆಗಳು, ಗಮನ ಸೆಳೆಯುವ ಆಕರ್ಷಕ ಫಲಪುಷ್ಪ ಮತ್ತು ಕೃಷಿ ಮೇಳ ಸೇರಿ ಎಲ್ಲ ವರ್ಗಗಳು ಇಷ್ಟಪಡುವ ಕಾರ್ಯಕ್ರಮಗಳ ಜತೆಗೆ ಉಪಯುಕ್ತ ಮಾಹಿತಿ ನೀಡುತ್ತಿರುವ 8 ದಿನಗಳ ಚಿಕ್ಕಬಳ್ಳಾಪುರ ಉತ್ಸವ ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
ವಿವಿಧ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು, ನೃತ್ಯ ಮತ್ತು ಗಾಯನ ಸೇರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರು, ಊರ ಹಬ್ಬದಲ್ಲಿ ಗ್ರಾಮಸ್ಥರು, ಅಡುಗೆ ತಯಾರಿಕೆ ಸೇರಿ ವಿಶೇಷ ವಿಭಾಗಗಳಲ್ಲಿ ಮಹಿಳೆಯರ ಪ್ರತಿಭೆ ಪ್ರದರ್ಶನ, ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದುಕೊಂಡ ಯುವಜನರು, ಪಾಲಕರೊಂದಿಗೆ ಬಂದು ಆಹಾರ ಮೇಳ ಮತ್ತು ಮನರಂಜನಾ ಚಟುವಟಿಕೆಯಲ್ಲಿ ಖುಷಿಗೊಂಡ ಮಕ್ಕಳು, ಮಾಹಿತಿ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಮಾಹಿತಿ ಮತ್ತು ಸೌಲಭ್ಯಗಳನ್ನು ಪಡೆದುಕೊಂಡ ರೈತರು, ಸ್ವಯಂ ಉದ್ಯೋಗಿಗಳು ಸೇರಿ ಎಲ್ಲ ವಲಯದ ಜನರನ್ನು ಸೆಳೆಯುವಲ್ಲಿ ಚಿಕ್ಕಬಳ್ಳಾಪುರ ಉತ್ಸವ ಯಶಸ್ವಿಯಾಗಿದ್ದು ಇಂದು (ಜ.14)ಅದ್ದೂರಿ ಉತ್ಸವಕ್ಕೆ ತೆರೆ ಬೀಳಲಿದೆ.
ಅಭಿವೃದ್ಧಿ ಗೋಚರಿಸುತ್ತಿದೆ:ಪ್ರಧಾನಿ ನರೇಂದ್ರ ಮೋದಿ ದೂರಗಾಮಿ ಚಿಂತನೆ, ಯೋಜನೆ ಅನುಷ್ಠಾನದ ಮೂಲಕ ಸಮರ್ಥ, ಸಮೃದ್ಧಿ ಮತ್ತು ಸ್ವಾಭಿಮಾನ ಭಾರತ ನಿರ್ವಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಚಿಕ್ಕಬಳ್ಳಾಪುರ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕಾರಣಿಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಅಭಿವೃದ್ಧಿ ಕೆಲಸಗಳು ದಾಖಲೆಗಳಲ್ಲಿ ಗೋಚರವಾಗುತ್ತಿದೆ ಎಂದರು. ಸಚಿವ ಡಾ ಕೆ.ಸುಧಾಕರ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮತ್ತಿತರರು ಇದ್ದರು.
ಬಯಲುಸೀಮೆಗೆ ಬಂತು ಟಾಂಗಾ:ಸ್ವಾತಂತ್ರ್ಯಪೂರ್ವದಲ್ಲಿ ರಾಜ್ಯಾದ್ಯಂತ ಇದ್ದ ಕುದುರೆ ಟಾಂಗಾಗಳು ಇದೀಗ ಅವನತಿಯ ಹಾದಿ ತಲುಪಿದ್ದು, ಪ್ರಸ್ತುತ ಸಾಂಸ್ಕೃತಿಕ ನಗರಿ ಮೈಸೂರು ಸೇರಿ ಕೆಲ ಭಾಗಗಳಲ್ಲಿ ಅಸ್ತಿತ್ವದಲ್ಲಿವೆ. ಇಂತಹ ಸಂದರ್ಭದಲ್ಲಿ ಜನರ ಸವಾರಿಗೆ 20ಕ್ಕೂ ಹೆಚ್ಚು ಕುದುರೆ ಟಾಂಗಾಗಳು ಚಿಕ್ಕಬಳ್ಳಾಪುರ ಉತ್ಸವಕ್ಕೆ ಲಗ್ಗೆ ಇಟ್ಟಿವೆ. ಕುದುರೆ ಟಾಂಗಾಗಳ ಪ್ರವೇಶದಿಂದಾಗಿ ಬಯಲುಸೀಮೆ ಜನರ ಕುತೂಹಲವೂ ನೂರ್ಮಡಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಪ್ರಮುಖ ರಸ್ತೆಗಳು, ನಗರದಿಂದ ಸರ್ಕಾರಿ ಪಿಯು ಕಾಲೇಜಿನಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಿರುವ ಕೆ.ವಿ ಕ್ಯಾಂಪಸ್​ವರೆಗೆ ದಿನ ಪೂರ್ತಿ ಸಂಚರಿಸುತ್ತಿವೆ. ಇದರಲ್ಲಿ ಸುತ್ತಾಡಿ ಜನರು ಖುಷಿ ಅನುಭವಿಸುತ್ತಿದ್ದಾರೆ. ಡಾ.ಕೆ.ಸುಧಾಕರ್ ಫೌಂಡೇಷನ್ ನಿಂದ ಟಾಂಗಾ ಉಚಿತ ಸೇವೆ ಒದಗಿಸಲಾಗುತ್ತಿದೆ.
ಕಾಂತಾರ ವೈಭವ:ನಟರಾದ ರಿಷಬ್ ಶೆಟ್ಟಿ ನೇತೃತ್ವದಲ್ಲಿ ಕಾಂತಾರ ಸಿನಿ ವೈಭವದ ಪ್ರದರ್ಶನವು ಏಳನೇ ದಿನದ ಕಾರ್ಯಕ್ರಮದ ಹೈಲೈಟ್ ಆಯಿತು. ಕಾಂತಾರ ಕಲಾವಿದರ ಕಾಮಿಡಿ ನಾಟಕ, ಸಪ್ತಮಿಗೌಡ ನೃತ್ಯ ಪ್ರದರ್ಶನ, ಅಜನೀಶ್ ಲೋಕನಾಥ್ ಹಾಗೂ ವಿಜಯ್ ಪ್ರಕಾಶ್ ಜೋಡಿಯ ಸೂಪರ್ ಹಿಟ್ ಗೀತೆಗಳು, ಸಾಯಿ ವಿಜ್ಞೇಶ್​ರಿಂದ ವರಾಹ ರೂಪಂ ಗಾಯನ ಹಾಗೂ ನೃತ್ಯ ಗಮನ ಸೆಳೆಯಿತು.
ಫ್ಯಾಷನ್ ಶೋ ಬೆಡಗು-ಬಿನ್ನಾಣ:ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಸ್ಥಳೀಯ ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು, ದಂಪತಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಾಮಾನ್ಯವಾಗಿ ಖ್ಯಾತ ರೂಪದರ್ಶಿಗಳು, ಸಿನಿಮಾ ನಟರು, ಕಾಲೇಜು ವಿದ್ಯಾರ್ಥಿನಿಯರು ಆಕರ್ಷಕ ಉಡುಗೆ ತೊಡುಗೆ, ಅಲಂಕಾರದಲ್ಲಿ ಫ್ಯಾಷನ್ ಶೋ ನೀಡುವುದು ಎಲ್ಲೆಡೆ ಕಂಡು ಬರುತ್ತದೆ. ಆದರೆ, ಇಲ್ಲಿ ಯುವತಿಯರನ್ನು ನಾಚಿಸುವಂತೆ ವೃದ್ಧರೂ ಸಾಂಪ್ರದಾಯಿಕ ಉಡುಗೆ, ನಡಿಗೆಯಲ್ಲಿ ಗಮನ ಸೆಳೆದರು. ಇದರಲ್ಲಿ ಬಹುಪಾಲು ಸ್ಥಳೀಯರು, ಅನನುಭವಿಗಳಾಗಿ ಪ್ರಥಮ ಬಾರಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಮುಖ ಅಂಶ. ಮಾಸ್ಟರ್ ಆಂಡ್ ಮಿಸ್, ಆದರ್ಶ ದಂಪತಿಗಳು ಮಿಸ್ಟರ್ ಆಂಡ್ ಮಿಸೆಸ್ ಸ್ಪರ್ಧೆಯಲ್ಲಿ ಆಕರ್ಷಕ ನಡಿಗೆಯಲ್ಲಿ ಬಂದರು.
ಕೃಷಿ ಮೇಳಕ್ಕೆ ಜನಸಾಗರ:ಚಿಕ್ಕಬಳ್ಳಾಪುರ ಉತ್ಸವದಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸುತ್ತಿರುವ ಪ್ರಮುಖ ವಿವಿಧ ಪ್ರದರ್ಶನಗಳ ಪೈಕಿ ಫಲಪುಷ್ಪ ಮತ್ತು ಕೃಷಿ ಮೇಳ ಒಂದು. ಪ್ರತಿನಿತ್ಯ ಸಾವಿರ ಜನರು ಬಂದು ಕಲಾಕೃತಿಗಳನ್ನು ವೀಕ್ಷಿಸುತ್ತಿದ್ದಾರೆ. ಗೆಳೆಯರೊಂದಿಗೆ ಪೋಟೋ ತೆಗೆಸಿಕೊಳ್ಳುತ್ತಿದ್ದು, ಇದು ಸೆಲ್ಪಿಗಳ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಮರಳಿನಲ್ಲಿ ಸಿದ್ಧಪಡಿಸಿರುವ ಸ್ವಾಮಿ ವಿವೇಕಾನಂದ, ಸರ್.ಎಂ.ವಿ. ಸೇರಿ ಇತರರ ಪ್ರತಿರೂಪಗಳು, ಹೂಗಳನ್ನು ಬಳಸಿ ಮಾಡಿರುವ ಪ್ರಸಿದ್ಧ ನಂದಿ ಗ್ರಾಮದ ಐತಿಹಾಸಿಕ ಭೋಗನಂದೀಶ್ವರಸ್ವಾಮಿ ದೇವಾಲಯದ ಮುಖ್ಯದ್ವಾರ, ನಂದಿ ಬಸವಣ್ಣ, ಗರ್ಭ ಗುಡಿಯಲ್ಲಿರುವ ಶಿವಲಿಂಗ ಸೇರಿ ವಿವಿಧ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ದಸರಾ ಮಾದರಿ ಕುಸ್ತಿ:ಮೈಸೂರು ದಸರಾ ಮಾದರಿಯಲ್ಲಿ ಕೈಗೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಪೈಲ್ವಾನ್​ಗಳ ಗೆಲುವಿನ ಪೈಪೋಟಿಗೆ ಜನರು ಪುಳಕಿತರಾದರು. ವಿಶೇಷ ಅಂಕಣದಲ್ಲಿ ಹಾಕಿರುವ ಮಣ್ಣಿನಲ್ಲಿ ತೊಡೆ, ಎದೆ ತಟ್ಟಿ ಮುನ್ನುಗ್ಗಿ ಬರುವ ಪೈಲ್ವಾನ್​ಗಳು, ಒಬ್ಬರನ್ನು ಎತ್ತಿ ಮತ್ತೊಬ್ಬರು ನೆಲಕ್ಕೆ ಹಾಕುವುದು, ಗೆಲುವಿನ ತನಕ ದಣಿವರಿಯದೇ ಎದುರಾಳಿಗೆ ಮಣ್ಣು ಮುಕ್ಕಿಸುವ ದೃಶ್ಯಗಳು ರೋಮಾಂಚನಗೊಳಿಸಿದವು. ಆಗಾಗ ಸೋಲು-ಗೆಲುವಿನ ವಿಚಾರವಾಗಿ ರೋಚಕ ತಿರುವುಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದವು. ಪಂದ್ಯಾವಳಿಯಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕುಸ್ತಿಪಟುಗಳು ಸೇರಿ 44 ಪೈಲ್ವಾನ್​ಗಳು ಹೆಸರು ನೋಂದಾಯಿಸಿಕೊಂಡಿದ್ದು, ದಾವಣಗೆರೆ, ಬೆಳಗಾವಿ, ಮೈಸೂರು, ಚಿತ್ರದುರ್ಗ, ರಾಮನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ದೆಹಲಿ, ಪಂಜಾಬ್, ಪುಣೆಯ ಜತೆಗೆ ದೇಶದ ನಾನಾ ಭಾಗಗಳಿಂದ ಕುಸ್ತಿಪಟುಗಳು ಭಾಗವಹಿಸಿದ್ದರು.
ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
