ಬೆಂಗಳೂರು:ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮಿಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್, ಶನಿವಾರ ಮತ್ತು ಭಾನುವಾರ ವಿಧಾನಸಭೆ ಕಲಾಪ ಇಲ್ಲದೇ ಇದ್ದರೂ ಧರಣಿ ನಡೆಸುತ್ತಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವ ವಹಿಸಿದ್ದರೆ, ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಪ್ರತಿಭಟನೆ ಸಾರಥ್ಯವಹಿಸಿದ್ದಾರೆ.
ಕೆಂಪುಕೋಟೆ ಮೇಲೆ ಭವಿಷ್ಯದಲ್ಲಿ ಕೇಸರಿ ಧ್ವಜ ಹಾರಬಹುದು ಎಂಬ ಈಶ್ವರಪ್ಪ ಹೇಳಿಕೆ ಖಂಡಿಸಿ ಕಾಂಗ್ರೆಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ನಿಳುವಳಿ ಸೂಚನೆ ನೀಡಿತ್ತು. ಅಲ್ಲಿಂದ ಶುರುವಾದ ಪ್ರತಿಭಟನೆ ದಿನೇ ದಿನೆ ತೀವ್ರ ಸ್ವರೂಪ ಪಡೆದು, ಗುರುವಾರದಿಂದ ಅಹೋರಾತ್ರಿ ಧರಣಿಗೆ ತಿರುಗಿತು. ಗುರುವಾರ ಮತ್ತು ಶುಕ್ರವಾರ ಸ್ಪೀಕರ್, ಸಿಎಂ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮನವೊಲಿಸುವ ಪರಿ ಪರಿ ಪ್ರಯತ್ನ ನಡೆಸಿದರೂ ಕಾಂಗ್ರೆಸ್ ಜಗ್ಗಲಿಲ್ಲ. ಭಾನುವಾರವೂ ಅಹೋರಾತ್ರಿ ಧರಣಿ ನಡೆಸಿ ಸೋಮವಾರ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಅಲ್ಲದೆ, ಫೆ.21ಕ್ಕೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಘೋಷಿಸಿದೆ. ಅಹೋರಾತ್ರಿ ಧರಣಿಯಿಂದ ಯಾರೂ ಹೊರಗುಳಿಯಬಾರದು ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ. ವಯಸ್ಸಿನ ಕಾರಣ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಆರ್.ವಿ.ದೇಶಪಾಂಡೆ ಅವರಿಗೆ ವಿನಾಯಿತಿ ನೀಡಲಾಗಿದೆ.
ಕಾದುನೋಡುವ ತಂತ್ರ:ಸರ್ಕಾರ ಸೋಮವಾರದವರೆಗೆ ಕಾಂಗ್ರೆಸ್ ಬೆಳವಣಿಗೆ ಕಾದು ನೋಡಲು ನಿರ್ಧರಿಸಿದೆ. ಸೋಮವಾರ ಸಂಧಾನ ಪ್ರಯತ್ನ ನಡೆಸಿ ಸಾಧ್ಯವಾಗದೇ ಹೋದರೆ ಮಂಗಳವಾರ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡುವ ಆಲೋಚನೆಯಲ್ಲಿದೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ:ವಿಧಾನಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿ ಸ್ಥಳಕ್ಕೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ್ದರು. ಮೊಗಸಾಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಜತೆ ಮಾತನಾಡಿ, ಧರಣಿ ಮುಂದು ವರಿಸುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಚರ್ಚೆ, ಹರಟೆ:ಧರಣಿ ನಿರತ ಕಾಂಗ್ರೆಸ್ ಶಾಸಕರು ತಮ್ಮ ತಮ್ಮ ಜಿಲ್ಲೆಯ ರಾಜಕೀಯ ಬೆಳವಣಿಗೆ, ರಾಜ್ಯ ಮತ್ತು ರಾಷ್ಟ್ರದ ರಾಜಕೀಯ ವಿದ್ಯಮಾನ ರ್ಚಚಿಸಿದರಲ್ಲದೆ, ಕೆಲ ಹೊತ್ತು ಹರಟೆ ಹೊಡೆದಿದ್ದಾರೆ. ಇನ್ನು ಕೆಲವರು ಟಿ.ವಿ. ನೋಡುವ ಮೂಲಕ ಕಾಲ ಕಳೆದರು.
ಈಶ್ವರಪ್ಪ ವಜಾ ಮಾಡುವವರೆಗೆ ನಾವು ಅಧಿವೇಶನ ನಡೆಯಲು ಬಿಡುವುದಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಈಗ ದೊಡ್ಡ ಸಾಧನೆ ಮಾಡಿರುವಂತೆ ಬೀಗುತ್ತಿದ್ದಾರೆ. ಸೋಮವಾರದಿಂದ ರಾಜ್ಯಾದ್ಯಂತ ತಾಲೂಕು ಕೇಂದ್ರ ಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ನಂತರ ಹಳ್ಳಿ ಹಳ್ಳಿಗೂ ಹೋಗಿ ಜನರ ಮಧ್ಯೆ ಹೋರಾಟ ಮಾಡುತ್ತೇವೆ.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ರಾಷ್ಟ್ರಧ್ವಜಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅವಮಾನ ಮಾಡಿರುವುದು ಸ್ಪಷ್ಟವಾಗಿದೆ. ಆದರೂ ರಾಜೀನಾಮೆ ಪಡೆಯಲಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕರಾಗಿದ್ದಾರೆ. ಬಿಜೆಪಿಯವರು ನಿಜವಾಗಿಯೂ ದೇಶಭಕ್ತರು, ರಾಷ್ಟ್ರಧ್ವಜದ ಬಗ್ಗೆ ಗೌರವ, ಅಭಿಮಾನ ಹೊಂದಿದ್ದರೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಲಿ.
|ಪ್ರಿಯಾಂಕ್ ಖರ್ಗೆಕೆಪಿಸಿಸಿ ವಕ್ತಾರ
ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನು ವಜಾಗೊಳಿಸಲು ವಿಧಾನ ಮಂಡಲದ ಅಧಿವೇಶನ ನಡೆಯುವವರೆಗೆ ಒತ್ತಾಯಿಸಿ ಹಗಲಿರುಳು ಧರಣಿ ಮುಂದುವರಿಸುತ್ತೇವೆ. ಒಂದು ವೇಳೆ ಅಧಿವೇಶನ ಮುಂದೂಡಿದರೆ ಜನರ ಬಳಿಗೆ ಹೋಗ್ತೇವೆ. ದಿನ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಾಡಬಹುದು ಎಂಬ ಹೇಳಿಕೆಯ ಹಿಂದೆ ಕುತಂತ್ರವಿದೆ. ಆರ್​ಎಸ್​ಎಸ್ ಹೇಳಿಕೊಟ್ಟಿದ್ದನ್ನು ಪೆದ್ದ ಈಶ್ವರಪ್ಪ ಬಾಯಿ ಬಿಟ್ಟಿದ್ದಾನೆ.
|ಸಿದ್ದರಾಮಯ್ಯಪ್ರತಿಪಕ್ಷ ನಾಯಕ
ಎಸ್ಪಿ ವಿರುದ್ಧ ಡಿಕೆಶಿ ಕಿಡಿ:ಕಾಂಗ್ರೆಸ್​ನ 15 ಜನ ಕಾರ್ಯಕರ್ತರ ವಿರುದ್ಧ ಎಫ್​ಐಆರ್ ದಾಖಲಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್ ಅವರಿಗೆ ಕರೆ ಮಾಡಿ ದಾವೆ ಹೂಡಿದ್ದನ್ನು ಪ್ರಶ್ನಿಸಿ, ಕಾರಣ ತಿಳಿದುಕೊಂಡಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಮೊಕದ್ದಮೆ ಹೂಡಿದ್ದಾಗಿ ಎಸ್ಪಿ ಮಾಹಿತಿ ನೀಡಿದ್ದಾರೆ.
ಸಚಿವ ಈಶ್ವರಪ್ಪ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿಯಾಗಿದೆ. ಆದರೂ ಹಗಲಿರುಳು ಧರಣಿ ಮುಂದುವರಿಸಿರುವ ಕಾಂಗ್ರೆಸ್ ವಿರೋಧ ಪಕ್ಷವಾಗಿ ಕೆಲಸ ಮಾಡುವ ನೈತಿಕತೆಯನ್ನೂ ಕಳೆದುಕೊಂಡಿದೆ. ವಿಧಾನ ಮಂಡಲದ ಅಧಿವೇಶನದಲ್ಲಿ ಕಳೆದ ಮೂರು ದಿನಗಳಿಂದ ಏನಾಗುತ್ತಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
‘ಧ್ವಜ’ ಪ್ರಕರಣಕ್ಕೆ ಸೀಮಿತವಾಗಿ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ಬಲ ದೊರೆತಿದ್ದು, ಪ್ರತಿಪಕ್ಷ ಕಾಂಗ್ರೆಸ್​ನ ಯಾವುದೇ ಒತ್ತಡ ತಂತ್ರಕ್ಕೆ ಮಣಿಯದಿರುವ ದೃಢ ನಿಲುವು ತಳೆದಿದೆ. ಅಲ್ಲದೆ, ರಾಜಕೀಯ ದುರುದ್ದೇಶದ ನಡೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಚಿಂತನೆ ನಡೆಸಿದೆ. ಸದನದಲ್ಲಿ ‘ಧ್ವಜ’ ಕದನ ಶುರುವಾದಾಗಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ಸಚಿವರಾದ ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ ಒಳಗೊಂಡು ಹಲವರು ಸಮಜಾಯಿಷಿ ನೀಡಿ, ಈಶ್ವರಪ್ಪ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಸಿ.ಟಿ.ರವಿ ಸದನದಲ್ಲಿ ಕಾಂಗ್ರೆಸ್ ಮೇಲೆ ಮುಗಿಬೀಳುವ ಮೂಲಕ ಈ ಪ್ರಕರಣದಲ್ಲಿ ನಾಯಕರ ಒಳಮನಸ್ಸಿನಲ್ಲೇನಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಉಭಯ ಸದನಗಳಲ್ಲಿ ಪಕ್ಷದ ಪದಾಧಿಕಾರಿಗಳೂ ಆದ ಶಾಸಕರು ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿ, ರಾಷ್ಟ್ರಧ್ವಜಕ್ಕೆ ಅಪಮಾನದ ಹೇಳಿಕೆ ಈಶ್ವರಪ್ಪ ನೀಡಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.
ಕಬ್ಬು ತಿನ್ನುವ ಆಸೆಯಿಂದಾಗಿ ಪ್ರಾಣ ಕಳ್ಕೊಂಡ ಬಾಲಕ; ಟ್ರ್ಯಾಕ್ಟರ್​ ಅಡಿಗೆ ಸಿಲುಕಿ ಸಾವು…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 11 =
Remember me
