ಬೆಂಗಳೂರು:ರಾಜ್ಯ ಪೊಲೀಸ್ ಸಬ್​ಇನ್​ಸ್ಪೆಕ್ಟರ್ (ಸಿವಿಲ್) 545 ಹುದ್ದೆಗಳ ನೇಮಕಾತಿಯ ಎಲ್ಲ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿರುವವರ ಸ್ಥಿತಿ ಡೋಲಾಯಮಾನವಾಗಿದೆ. ಕೆಲವರು ಸೃಷ್ಟಿಸಿದ ಗೊಂದಲ ಬಗೆಹರಿಸಲು ಸರ್ಕಾರ ತಿಣುಕಾಡುತ್ತಿದ್ದು, ಆಯ್ಕೆಗೊಂಡವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳೀಯ ಮೂಲವೃಂದದ 438 ಹುದ್ದೆಗಳು ಸೇರಿ ಒಟ್ಟು 545 ಪಿಎಸ್​ಐ (ಸಿವಿಲ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಪೊಲೀಸ್ ವೃಂದ ಮತ್ತು ನೇಮಕಾತಿ ನಡೆಸಿದೆ. ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜ.19ರಂದು ಪ್ರಕಟಿಸಿತು. ಹೈದರಾಬಾದ್ ಕರ್ನಾಟಕ ಮೀಸಲಾತಿ ಕುರಿತು 2020ರ ಜೂನ್ 6ರಂದು ಹೊರಡಿಸಿದ್ದ ಸುತ್ತೋಲೆ ಅನ್ವಯ ಈ ಪಟ್ಟಿ ಪ್ರಕಟಿಸಲಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಆದರೂ ಕಲ್ಯಾಣ ಕರ್ನಾಟಕ ಪ್ರದೇಶದ ಕೆಲ ಅಭ್ಯರ್ಥಿಗಳು ಮತ್ತು ಅನ್ಯರು ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ/ಮನವಿ ಸಲ್ಲಿಸಿದ್ದರು.
ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬುದು ಒಂದು ವಾದವಾದರೂ, ಮತ್ತೊಂದೆಡೆ ಲಕ್ಷಾಂತರ ರೂ. ಲಂಚ ಪಡೆದು ನೇಮಕಾತಿ ನಡೆದಿದೆ ಎಂಬ ಆರೋಪ ಸಹ ಕೇಳಿಬಂದಿವೆ. ಇದನ್ನೇ ಮುಂದಿಟ್ಟುಕೊಂಡು ಸರ್ಕಾರ ಪಟ್ಟಿ ಪ್ರಕಟಣೆ ನಂತರ ನಡೆಯಬೇಕಿದ್ದ ಎಲ್ಲ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದೆ. ಈ ಬಗ್ಗೆ ಪರಿಶೀಲನೆಗೆ ಫೆ.15ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಕಾಲಕಾಲಕ್ಕೆ ಸರ್ಕಾರ ಹೊರಡಿಸಿರುವ ಸುತ್ತೋಲೆಗಳ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದ್ದೆಯೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಈ ಸಮಿತಿ ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಒಪ್ಪಿಸಿದೆ ಎನ್ನಲಾಗಿದೆ.
ತಡೆ ಹಿಡಿದಿರುವ ತಾತ್ಕಾಲಿಕ ಆಯ್ಕೆಪಟ್ಟಿ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಸರ್ಕಾರ ಮೀನಮೇಷ ಏಣಿಸುತ್ತಿದೆ. ಇತ್ತ ಕಷ್ಟಪಟ್ಟು ಪೊಲೀಸ್ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರು ವಯೋಮಿತಿ ಮೀರುತ್ತಿದ್ದು, ಬೇರೆ ನೌಕರಿಗೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆವರೆಗೂ ಸುಮ್ಮನಿದ್ದ ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿ, ಮರುಪರೀಕ್ಷೆಗೆ ಒತ್ತಾಯ ಮಾಡುತ್ತಿದ್ದಾರೆ. ಪೊಲೀಸ್ ನೇಮಕಾತಿ ಪ್ರಕ್ರಿಯೆ ಮೇಲೆ ಅನುಮಾನ ಹುಟ್ಟಿಸುವಂತಹ ಸಂದಿಗ್ಧ ಪರಿಸ್ಥಿತಿಗೆ ದೂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಪಾರದರ್ಶಕತೆ ಇಲ್ಲವೇ?:ಪೊಲೀಸ್ ಇಲಾಖೆ ನೇರ ನೇಮಕಾತಿ ನಡೆಸುತ್ತಿದೆ. ಇದರಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುತ್ತಿಲ್ಲ. ಪೇದೆಗೆ -ಠಿ;25ರಿಂದ 40 ಲಕ್ಷ ಹಾಗೂ ಎಸ್​ಐಗೆ 60 ಲಕ್ಷದಿಂದ 1 ಕೋಟಿ ರೂ.ವರೆಗೂ ಲಂಚ ಪಡೆದು ನೇಮಕಾತಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಪ್ರತಿ ಬಾರಿ ಕೇಳಿಬಂದಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಪತ್ತೆಹಚ್ಚುವವರೇ ಕಳ್ಳ ಮಾರ್ಗದಲ್ಲಿ ಇಲಾಖೆಗೆ ಸೇರಿದರೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಗೃಹ ಸಚಿವರ ಹೇಳಿಕೆ ತಿದ್ದಿದ ಕಿಡಿಗೇಡಿಗಳು:ಮಾ.10ರಂದು ಮೇಲ್ಮನೆಯಲ್ಲಿ ಶಶೀಲ್ ನಮೋಶಿ 545 ಎಸ್​ಐ ನೇಮಕಾತಿ ಪಾರ ದರ್ಶಕವಾಗಿ ನಡೆದಿದೆಯೇ ಎಂಬ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದರು. ಇದನ್ನು ‘ಭ್ರಷ್ಟಾಚಾರದಿಂದ ನಡೆದಿದ್ದು, ನನ್ನ ಗಮನಕ್ಕೆ ಬಂದಿದೆ’ ಎಂದು ತಿದ್ದಿದ ಕಿಡಿಗೇಡಿಗಳು ವೈರಲ್ ಮಾಡಿದ್ದರು. ಜಾಲತಾಣದಲ್ಲಿ ಗೊಂದಲಸೃಷ್ಟಿಸಿ ಅಭ್ಯರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿವೆ.
ನೇಮಕಕ್ಕೆ ಕರೊನಾ ಕಾಟ:545 ಎಸ್​ಐ ಹುದ್ದೆಗಳ ನೇಮಕಾತಿಗೆ ಕರೊನಾ ಸಂಕಷ್ಟ ಎದುರಾಗಿತ್ತು. ನೋಟಿಫಿ ಕೇಷನ್ ಹೊರಡಿಸಿದ ಮೇಲೆ ಕೋವಿಡ್ ನೆಪದಲ್ಲಿ ಒಂದೂವರೆ ವರ್ಷ ಪ್ರಕ್ರಿಯೆ ಮುಂದೂಡಲಾಗಿತ್ತು. ಇದಾದ ಮೇಲೆ 2021ರ ಅಕ್ಟೋಬರ್ 3ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಹೈಕೋರ್ಟ್​ನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಸಂಬಂಧ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ವಿಚಾರಣೆ ಹಂತದಲ್ಲಿದೆ. ಆದರೂ, ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ಯಾಕೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ನಮಗೇ ಯಾಕೆ ಅನ್ಯಾಯ?:2020ರ ಜೂ.6ರಂದು ಹೈಕ ಹಾಗೂ ಹೈಕಯೇತರ ಮೀಸಲಾತಿ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆ ಅನ್ವಯ ನೇಮಕಾತಿ ನಡೆಯುತ್ತಿದೆ. ಪೊಲೀಸ್ ಪೇದೆ, ಆರ್​ಎಸ್​ಐ, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಹಾಗೂ ಕೆಪಿಎಸ್​ಸಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ, 545 ಎಸ್​ಐ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮ ಹಂತದಲ್ಲಿ ತಡೆಹಿಡಿದಿರುವುದು ಏಕೆ ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
