ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಖಾಸಗಿ ವಲಯದಲ್ಲಿ ‘ಸ್ಥಳೀಯರಿಗೆ’ ಉದ್ಯೋಗ ಗ್ಯಾರಂಟಿ ಕೊಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಮಸೂದೆಗೆ ಉದ್ಯಮ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ಸಿದ್ದರಾಮಯ್ಯ ಸಂಪುಟದ ಕೆಲವು ಸದಸ್ಯರಿಂದಲೂ ಅಪಸ್ವರ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವಿನಿಂದ ದಿಢೀರ್ ಹಿಂದೆ ಸರಿದಿದೆ.
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಇದು ರಾಜ್ಯದ ಉದ್ಯಮವರ್ಗದ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ ಸಿದ್ದರಾಮಯ್ಯ ಮಂತ್ರಿಮಂಡಲದಲ್ಲೂ ಅಪಸ್ವರ ಮೂಡಿಸಿತು. ಕಾಂಗ್ರೆಸ್ ಹೈಕಮಾಂಡ್​ಗೂ ಈ ಬೆಳವಣಿಗೆಯ ಬಿಸಿ ತಟ್ಟಿತು. ಈ ಕಾರಣಕ್ಕೆ ಸಿಎಂ ಕಚೇರಿ ಬುಧವಾರ ರಾತ್ರಿ ತನ್ನ ನಿರ್ಧಾರ ಮರು ಪರಿಶೀಲಿಸುವ ತೀರ್ವನಕ್ಕೆ ಬಂದಿದೆ.
ಚರ್ಚೆ ಇಲ್ಲದೆ ಪಾಸ್:ಸೋಮವಾರದ ಸಂಪುಟ ಸಭೆಯಲ್ಲಿ ಈ ಮಸೂದೆ ಹೆಚ್ಚು ಚರ್ಚೆ ಇಲ್ಲದೆ ಅನುಮೋದನೆಗೊಂಡಿದೆ ಎಂಬ ಮಾತು ಹರಿದಾಡುತ್ತಿದೆ. ಅಧಿವೇಶನ ಇದ್ದ ಕಾರಣ ಸಂಜೆ 6.30ಕ್ಕೆ ಆರಂಭವಾದ ಸಂಪುಟ ಸಭೆಯಲ್ಲಿ ಬಹಳ ವಿಷಯ ಚರ್ಚೆಗೆ ಬಂದಿದ್ದವು. ಹೀಗಾಗಿ ಈ ವಿಧೇಯಕದ ವಿಷಯ ಹೆಚ್ಚು ಚರ್ಚೆಗೆ ಅವಕಾಶ ಸಿಗಲಿಲ್ಲ ಎಂದು ಸಚಿವ ರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕೈಗಾರಿಕೆ ಹಾಗೂ ಐಟಿಬಿಟಿ ಇಲಾಖೆಗೆ ಈ ವಿಷಯ ಗಮನಕ್ಕೆ ಬಂದಿಲ್ಲ. ಜತೆಗೆ ವಿಧೇಯಕ ಮಂಡಿಸುವ ಮೊದಲು ಉದ್ಯಮ ಕ್ಷೇತ್ರದ ಜತೆ ಚರ್ಚೆ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಸಂಪುಟ ಸಭೆಗೆ ನೀಡಿದ ಚುಟುಕು ಮಾಹಿತಿಗೂ, ಕರಡು ಮಸೂದೆಯಲ್ಲಿನ ವಿವರಗಳಿಗೂ ವ್ಯತ್ಯಾಸಗಳಿದ್ದವು ಎಂಬ ಆಕ್ಷೇಪ ವ್ಯಕ್ತವಾಗಿದೆ.
*ಮ್ಯಾನೇಜ್​ವೆುಂಟ್​ನಲ್ಲಿ ಸೂಪರ್​ವೈಸರ್, ಟೆಕ್ನಿಕಲ್, ಆಪರೇಷನಲ್, ಆಡಳಿತ ಸೇರಿ ಉನ್ನತ ಹುದ್ದೆಗಳಲ್ಲಿ ಶೇ. 50 ಉದ್ಯೋಗ ಸ್ಥಳೀಯರಿಗೆ ಮೀಸಲು
*ನಾನ್ ಮ್ಯಾನೇಜ್​ವೆುಂಟ್ ವರ್ಗದಲ್ಲಿ ಕ್ಲರ್ಕ್, ಕೌಶಲ, ಕೌಶಲ ರಹಿತ ಹಾಗೂ ಅರೆ ಕೌಶಲ, ಗುತ್ತಿಗೆ ನೌಕರ ಹುದ್ದೆಗಳಲ್ಲಿ ಶೇ.75 ಸ್ಥಳೀಯರಿಗೆ ಮೀಸಲು
*ಈ ಕಾನೂನು ಜಾರಿ ಮಾಡದ ಸಂಸ್ಥೆಗೆ 10 ಸಾವಿರದಿಂದ 25 ಸಾವಿರ ರೂ.ವರೆಗೆ ದಂಡ ಹಾಗೂ ಪ್ರತಿ ದಿನ 100 ರೂ.ನಂತೆ ದಂಡ
1 ಕಾಂಗ್ರೆಸ್ ವರಿಷ್ಠರವರೆಗೂ ತಟ್ಟಿದ ಬಿಸಿ
2 ಸಂಪುಟದ ಕೆಲ ಸದಸ್ಯರ ಅಪಸ್ವರ
3 ರಾಜ್ಯದ ಉದ್ಯಮಿಗಳಿಂದ ತೀವ್ರ ಆಕ್ಷೇಪ
4 ಹೂಡಿಕೆಗೆ ಹೊಡೆತ ಬೀಳುವ ಆತಂಕ
5 ಅವಕಾಶ ಲಾಭಕ್ಕೆ ನೆರೆ ರಾಜ್ಯದ ಹೊಂಚು
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನಿರ್ಧಾರ ಸ್ವಾಗತಿಸುವೆ. ಸರ್ಕಾರದ ಮಟ್ಟದಲ್ಲಿ ಲಕ್ಷಕ್ಕೂ ಹೆಚ್ಚು ಉದ್ಯೋಗ ಖಾಲಿ ಇವೆ. ಈ ಬಗ್ಗೆಯೂ ಸಿಎಂ ಗಮನಿಸಬೇಕು.
| ಬಿ.ವೈ. ವಿಜಯೇಂದ್ರ, ಬಿಜೆಪಿ ಅಧ್ಯಕ್ಷ
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮಶಿಸಿ ನಿರ್ಧರಿಸಲಾಗುವುದು.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಕನ್ನಡಿಗರಿಗೆ ಕೆಲಸ ನೀಡಬೇಕೆಂದರೆ ಅವರಿಗೆ ತರಬೇತಿ ಕೊಡಲಿ, ಕೌಶಲ್ಯಾಭಿವೃದ್ಧಿ, ಇಂಟರ್ನ್​ಶಿಪ್, ಅಪ್ರೆಂಟಿಸ್​ಶಿಪ್ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚು ಖರ್ಚು ಮಾಡಲಿ. ರಾಜ್ಯ ಸರ್ಕಾರ ಈ ರೀತಿಯ ಮಸೂದೆ ತರಬಹುದು ಎಂದು ನಂಬುವುದಕ್ಕೂ ಸಾಧ್ಯವಿಲ್ಲ.
| ಮೋಹನ್ ದಾಸ್ ಪೈ ಉದ್ಯಮಿ
ಕೂಗುಮಾರಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಬೇಕಾಗಿಲ್ಲ. ಎಂದೋ ಆಗಬೇಕಾಗಿದ್ದ ಕೆಲಸವಿದು. ಸಿದ್ದರಾಮಯ್ಯ ಅವರ ಕನ್ನಡ ಕಾಳಜಿ, ಬದ್ಧತೆಯಿಂದ ಈಗ ಸಾಧ್ಯವಾಗುತ್ತಿದೆ. ಶಾಸಕರು ಸರ್ವಾನುಮತದಿಂದ ಅನುಮೋದಿಸಿ ಅಂಗೀಕರಿಸುತ್ತಾರೆಂಬ ವಿಶ್ವಾಸವಿದೆ.
| ಟಿ.ಎ. ನಾರಾಯಣಗೌಡ ಕರವೇ ಅಧ್ಯಕ್ಷ
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ತಾತ್ಕಾಲಿಕ ತಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 11 =
Remember me
