|ವಿಲಾಸ ಮೇಲಗಿರಿಬೆಂಗಳೂರು
ಸಹಕಾರಿ ಬ್ಯಾಂಕ್​ಗಳ ವ್ಯವಸ್ಥೆ ಸುಧಾರಣೆಗೆ ದಶಕಗಳಿಂದ ಕೂಗು ಕೇಳಿ ಬರುತ್ತಿದ್ದರೂ ರೈತರ ಶೋಷಣೆ ಮಾತ್ರ ನಿಂತಿಲ್ಲ. ಬಡ್ಡಿರಹಿತ ಸಾಲ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಟ್ಟು ರೈತರ ಅಭಿವೃದ್ಧಿಗೆ ದಾರಿಯಾಗಬೇಕಾದ ಸಹಕಾರ ಬ್ಯಾಂಕ್​ಗಳೇ ಸುಲಿಗೆಗಿಳಿದಿವೆ. ಹೌದು, ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್​ಗಳು ರೈತರ ಸಾಲ, ಅದರ ಮೇಲಿನ ಬಡ್ಡಿ, ಸಾಲ ಮನ್ನಾ, ಹೆಚ್ಚುವರಿ ಷೇರು ವಸೂಲಿ ಹೆಸರಿನಲ್ಲಿ ಎರಾ›ಬಿರ್ರಿ ವ್ಯವಹಾರ ನಡೆಸುತ್ತಿವೆ. ಈ ಮೂಲಕ ವ್ಯವಸಾಯ ಸೇವಾ ಸಹಕಾರ ಸಂಘಗಳ (ವಿಎಸ್​ಎಸ್​ಎನ್) ಅಧಿಕಾರ ಮೊಟುಕುಗೊಳಿಸುವ, ಆರ್ಥಿಕವಾಗಿ ಹೊಸಕಿ ಹಾಕುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಅಧಿಕ ಷೇರಿನ ಹೊರೆ:ವ್ಯವಸಾಯ ಸೇವಾ ಸಹಕಾರ ಸಂಘಗಳು ರೈತರಿಗೆ ನೀಡುವ ಸಾಲದಲ್ಲಿ ಶೇ.10 ರಷ್ಟನ್ನು ಅಧಿಕ ಷೇರು ಎಂದು ಡಿಸಿಸಿ ಬ್ಯಾಂಕಿನವರು ಕಟಾಯಿಸಿ ಮಂಜೂರಾದ ಹಣದಲ್ಲಿ ಶೇ.90 ಹಣವನ್ನು ಮಾತ್ರ ರೈತರಿಗೆ ನೀಡುತ್ತಿದ್ದಾರೆ!
ಕಡಿತಗೊಳಿಸಿದ ಮೊತ್ತವನ್ನು ಸ್ವಂತ ನಿಧಿ ಎಂದು ಭಾವಿಸಿ ಕೃಷಿಯೇತರ ಚಟುವಟಿಕೆ, ಖಾಸಗಿಯವರಿಗೆ ಶೇ.12.50-15ರ ವರೆಗಿನ ಬಡ್ಡಿ ದರದಲ್ಲಿ ಸಾಲ ನೀಡಿ ಆದಾಯ ಗಳಿಸುತ್ತಿವೆ. ಅದಾಗ್ಯೂ ಕಡಿತಗೊಳಿಸಿದ ಶೇ.10 ಹಣಕ್ಕೆ ರೈತರು ಬಡ್ಡಿ ನೀಡಬೇಕಾಗಿರುತ್ತದೆ ಅಥವಾ ಸರ್ಕಾರದಿಂದ ಬಡ್ಡಿ ರಿಯಾಯಿತಿ ಪಡೆಯಲಾಗುತ್ತಿದೆ. ಹೆಚ್ಚುವರಿ ಷೇರು ಎಂದು ಪರಿಗಣಿಸಿದರೂ ಕನಿಷ್ಟ ಡಿವಿಡೆಂಡ್ ಕೂಡ ಕೊಡುವುದಿಲ್ಲ. ಇದೊಂದು ಹಗಲು ದರೋಡೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳೆ ಸಾಲದ ಜತೆಗೆ ರೈತರಿಗೆ ನಬಾರ್ಡ್ ಪುನರ್​ಭರಣ ನಿಧಿಯಿಂದ ನೀಡುವ ಮಧ್ಯಮಾವಧಿ ಅಭಿವೃದ್ಧಿ ಸಾಲಗಳು ಸೇರಿವೆ. ಕೃಷಿ ಸಾಲಗಳು ಬಹುತೇಕ ಸಂಘಗಳಲ್ಲಿ ಮೂರು ಲಕ್ಷ ರೂ.ಗಳಿಗೆ ಮಿತಿ ಇದಾಗ್ಯೂ ಅಭಿವೃದ್ಧಿ ಸಾಲವನ್ನು ಅಂದಾಜು ಹತ್ತು ಲಕ್ಷ ರೂ.ವರೆಗೆ ನೀಡಲಾಗುತ್ತದೆ. ಆದರೆ, ಮಂಜೂರಾದ ಹತ್ತು ಲಕ್ಷದಲ್ಲಿ 1 ಲಕ್ಷ ರೂ.ವನ್ನು ರೈತ ಪಡೆಯದಿದ್ದರೂ ಅದರ ಮೇಲಿನ ಬಡ್ಡಿಯನ್ನು ಬಿಡುತ್ತಿಲ್ಲ. ಅಷ್ಟೇ ಅಲ್ಲ, ಆ 1 ಲಕ್ಷಕ್ಕೆ ಸರ್ಕಾರದಿಂದಲೂ ಬಡ್ಡಿ ಕ್ಲೇಮ್ ಪಡೆಯುತ್ತಿವೆ.
ಸಾಲ ಮನ್ನಾ ಆದರೂ ಷೇರು ವಾಪಸ್ಸಿಲ್ಲ:ಬೆಳೆ ಸಾಲಗಳಲ್ಲಿ ಹೆಚ್ಚುವರಿ ಷೇರು ಕಡಿತಗೊಳಿಸಿ ಹಣವನ್ನು ರೈತರ ಮುಂದಿನ ಸಾಲದಲ್ಲಿ ಹೊಂದಾಣಿಕೆ ಮಾಡುವುದು ಡಿ.ಸಿ.ಸಿ. ಬ್ಯಾಂಕುಗಳ ರೂಢಿ. ಆದಾಗ್ಯೂ ಸರ್ಕಾರ ನೂರಕ್ಕೆ ನೂರರಷ್ಟು ಹಣ ಮನ್ನಾ ಮಾಡಿದಾಗ ಈ ಹೆಚ್ಚುವರಿ ಷೇರನ್ನು ಅನೇಕ ರೈತರಿಗೆ ಹಿಂದಿರುಗಿಸಿಲ್ಲ ಎಂಬ ಆರೋಪಗಳೂ ಇವೆ. ಅಲ್ಲದೇ, ಹೆಚ್ಚುವರಿ ಷೇರಿನ ಹಣವನ್ನು ಮುಂದಿನ ಸಾಲಕ್ಕೆ ಹೊಂದಾಣಿಕೆ ಮಾಡಿ ಹೊಸ ಸಾಲದ ಮೇಲೆ ಹೆಚ್ಚುವರಿ ಷೇರು ಪಡೆಯುವುದಿಲ್ಲವೆಂದು ಹೇಳುತ್ತಾರೆ. ಆದರೆ, ಅದು ಕೂಡ ಅನೇಕ ಕಡೆ ಸುಳ್ಳಾದ ನಿದರ್ಶನಗಳಿವೆ.
ಸಂಘಗಳ ಅಧಿಕಾರಹರಣ:ಸಾಲ ಮಂಜೂರು ಮಾಡುವಾಗ ಸಹಕಾರ ಸಂಘಗಳಿಗೆ ಅಗತ್ಯವಿರುವ ಮೊತ್ತವನ್ನು ಡಿಸಿಸಿ ಬ್ಯಾಂಕ್ ಒದಗಿಸಬೇಕೆಂಬ ನಿಯಮವಿದೆ. ಯಾರಿಗೆ ಸಾಲ ಕೊಡಬೇಕು ಎಂಬ ನಿರ್ಣಯವನ್ನು ಸಂಬಂಧಪಟ್ಟ ಸಹಕಾರ ಸಂಘಗಳೇ ನಿರ್ಧಾರ ಮಾಡಬೇಕು. ಆದರೆ ಡಿಸಿಸಿ ಬ್ಯಾಂಕಿನವರೇ ಸಾಲಗಾರರ ಪಟ್ಟಿಯನ್ನು ಪಡೆದು ವೈಯಕ್ತಿಕವಾಗಿ ಪರಿಗಣಿಸಿ ಸಾಲ ಮಂಜೂರು ಮಾಡುವ ಸ್ಥಿತಿ ಇನ್ನೂ ಇದೆ.
ರೈತರ ಬಡ್ಡಿ ಉಳಿತಾಯಕ್ಕೂ ಕತ್ತರಿ:ರೈತರಿಗೆ ಸಾಲ ನೀಡಲು ನಬಾರ್ಡ್ ಹಣ ಒದಗಿಸುತ್ತದೆ. ಇದರಲ್ಲಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಗೆ ನೀಡುವ ಕಮಿಷನ್ ಕೂಡ ಸೇರಿರುತ್ತದೆ. ಈ ಹಿಂದೆ ನಬಾರ್ಡ್ ನೇರವಾಗಿ ಅಪೆಕ್ಸ್ ಬ್ಯಾಂಕ್​ನಿಂದ ಸಹಕಾರ ಸಂಘಗಳಿಗೆ ಹಣ ಮಂಜೂರು ಮಾಡಲು ಯೋಚಿಸಿತ್ತು. ಇದರಿಂದಾಗಿ ರೈತರಿಗೆ ಕನಿಷ್ಟ ಶೇ.1.5 ಬಡ್ಡಿ ಉಳಿತಾಯವಾಗುತ್ತಿತ್ತು. ಆದರೂ ಡಿಸಿಸಿ ಬ್ಯಾಂಕ್ ವ್ಯವಸ್ಥೆ ಇದನ್ನು ಕಾರ್ಯರೂಪಕ್ಕೆ ತರದೆ ವ್ಯವಸಾಯ ಸಹಕಾರ ಸಂಘಗಳನ್ನು ಅಧೀನವಾಗಿಸಿಕೊಂಡು ದರ್ಪ ತೋರುತ್ತಿದೆ ಎಂಬ ಆಕ್ರೋಶ ರೈತರದ್ದು.
ಸ್ವಾಯತ್ತೆಗೆ ಅಡ್ಡಿ:ಸಂಘಗಳು ಸ್ವ ಸಾಮರ್ಥ್ಯದ ಮೇಲೆ ಕೃಷಿ ಸಾಲ ಕೊಡಲು ತಯಾರಿದ್ದಾಗ್ಯೂ, ಸರ್ಕಾರದಿಂದ ಬರಬೇಕಾದ ಬಡ್ಡಿ ರಿಯಾಯಿತಿ ಮತ್ತು ಇತರೆ ಅನುಕೂಲಗಳನ್ನು ಡಿಸಿಸಿ ಬ್ಯಾಂಕ್ ಮುಖಾಂತರವೇ ಸಲ್ಲಿಸಬೇಕೆಂದು ಅಧಿಕಾರಿಗಳು ಮಾಡಿರುವ ಆದೇಶ ಸಹಕಾರ ಸಂಘಗಳ ಸ್ವಾಯತ್ತೆಗೆ ಅಡ್ಡಿಯಾಗಿದೆ. ಗುಜರಾತ್ ಮಾದರಿಯಲ್ಲಿ ಸಹಕಾರ ಸಂಘಗಳು ಸ್ವಂತ ಹಣದಿಂದ ರೈತರಿಗೆ ಸಾಲ ನೀಡಿ, ನೇರವಾಗಿ ಅಪೆಕ್ಸ್ ಬ್ಯಾಂಕ್ ಮುಖಾಂತರ ವ್ಯವಹರಿಸಲು ಅವಕಾಶ ನೀಡಬೇಕಿದೆ. ಕೆಲವು ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲ ತಂದು ರೈತರಿಗೆ ಕೊಡುತ್ತಿವೆ. ಬಡ್ಡಿ ರಿಯಾಯಿತಿ ಆಸೆಗಾಗಿ ಆ ಬಿಲ್​ಗಳನ್ನು ಕೂಡ ಡಿಸಿಸಿ ಬ್ಯಾಂಕ್​ಗಳು ಪಡೆದುಕೊಳ್ಳುತ್ತಿವೆ..!
ಹಿಂದೆಯೇ ಪ್ರಸ್ತಾಪ:ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಎಸ್.ಎಸ್. ಪಾಟೀಲ್ ಸಹಕಾರ ಸಚಿವರಾಗಿದ್ದರು. ಆಗ ವಿಧಾನಸಭೆ ಅಧಿವೇಶನದಲ್ಲಿ ಈಗಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಈ ಅನ್ಯಾಯ ಪ್ರಸ್ತಾಪಿಸಿದ್ದರು. ಆಗ ಒಂದು ಒಪ್ಪಂದಕ್ಕೆ ಬಂದು ಶೇ.5 ಹೆಚ್ಚುವರಿ ಷೇರು ಪಡೆಯಲು ತೀರ್ವನಿಸಲಾಗಿತ್ತು. ಆದರೆ, ಶೇ.10 ಅಧಿಕ ಷೇರು ಪಡೆಯುವುದು ಮಾತ್ರ ನಿಂತಿಲ್ಲ.
755.76 ಕೋಟಿ ರೂ ಹೆಚ್ಚುವರಿ ಷೇರು:ರೈತರಿಗೆ ಐದು ವರ್ಷಗಳಲ್ಲಿ 75,576.79 ಕೋಟಿ ರೂ. ಸಾಲ ನೀಡಿದ್ದು, ಶೇ.10 ಹೆಚ್ಚುವರಿ ಷೇರು ಲೆಕ್ಕ ಹಾಕಿದರೆ ಅಂದಾಜು 755.76 ಕೋಟಿ ರೂ. ಗಳಾಗುತ್ತದೆ. ಈ ಅಧಿಕ ಷೇರು ಮೊತ್ತವನ್ನು ಬ್ಯಾಂಕ್​ಗಳು ವ್ಯವಹಾರಕ್ಕೆ ಬಳಸಿಕೊಳ್ಳುತ್ತವೆ. ಇದರಿಂದ ಬರುವ ಬಡ್ಡಿ ಜತೆಗೆ ಸರ್ಕಾರದಿಂದ ಬರುವ ಬಡ್ಡಿ ಸಬ್ಸಿಡಿಯನ್ನೂ ಪಡೆಯುತ್ತವೆ. ಜತೆಗೆ ಈ ಷೇರು ಹಣದ ಮೇಲೂ ರೈತರಿಂದ ಬಡ್ಡಿ ವಸೂಲು ಮಾಡುತ್ತವೆ!
ಹೋಬಳಿಗೊಂದು ಶಾಖೆ ಏಕೆ?:ಸಹಕಾರ ಸಂಘಗಳ ಮುಖಾಂತರ ಸಾಲ ನೀಡಿ ಸಂಘಗಳನ್ನು ಬೆಳೆಸಬೇಕಾಗಿದ್ದ ಡಿಸಿಸಿ ಬ್ಯಾಂಕ್ ಹೋಬಳಿಗೆ ಒಂದು ಶಾಖೆ ಮಾಡಿ ಸಾಲ ವಿತರಿಸುತ್ತಿವೆ. ಇದರಿಂದಾಗಿ ಡಿಸಿಸಿ ಬ್ಯಾಂಕಿನ ಸಿಬ್ಬಂದಿ ಸಂಬಳ ಹಾಗೂ ವ್ಯವಸ್ಥೆಯ ಖರ್ಚು ಹೆಚ್ಚಾಗುತ್ತಿದೆ. ಜತೆಗೆ ತಮಗೆ ಬೇಕಾದವರಿಗೆ ಕೆಲಸ ಕೊಡುವುದೇ ಶಾಖೆ ತೆರೆಯುವ ಮುಖ್ಯ ಗುರಿ ಎನ್ನುವಂತಾಗಿದೆ. ಹೊಸ ಶಾಖೆಗಳಿಂದ ಸಂಘಗಳು ನಿಷ್ಕ್ರಿಯವಾಗುತ್ತಿರುವುದು ಸುಳ್ಳಲ್ಲ.
ಕೋರ್ ಬ್ಯಾಂಕಿಂಗ್ ಇಲ್ಲ:ದೇಶಾದ್ಯಂತ ಇಸಿಎಸ್ ಅಥವಾ ಆರ್​ಟಿಜಿಎಸ್ ಮುಖಾಂತರ ಫಲಾನುಭವಿಗಳ ಅಕೌಂಟ್​ಗೆ ಹಣ ರವಾನಿಸುವ ವ್ಯವಸ್ಥೆ ಜಾರಿಯಲ್ಲಿದೆ. ಆದಾಗ್ಯೂ ಸಹಕಾರ ಸಂಘ ಗಳಲ್ಲಿ ಪಡೆಯುವ ಸಾಲವನ್ನು ಡಿಸಿಸಿ ಬ್ಯಾಂಕ್ ಶಾಖೆಯ ಮುಖಾಂ ತರ ರೈತರು ಕ್ಯೂ ನಿಂತು ಪಡೆಯುವ ಸ್ಥಿತಿ ಇನ್ನೂ ಇದ್ದು, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಅನಾಸಕ್ತಿ ಎದ್ದು ಕಾಣುತ್ತಿದೆ.
ಸಾಲ ಮಂಜೂರಾತಿ ವಿಳಂಬ:ರೈತರು ನಿಗದಿತ ಅವಧಿಯಲ್ಲಿ ಸಾಲ ತೀರುವಳಿ ಮಾಡದಿದ್ದಲ್ಲಿ ಸಾಲದ ಮೇಲಿನ ಸಬ್ಸಿಡಿ ಕೈತಪು್ಪತ್ತದೆ. ಆಗ ರೈತರು ಶೇ.11 ರಿಂದ 13ರವರೆಗೆ ಬಡ್ಡಿ ತೆರಬೇಕಾಗುತ್ತದೆ. ಇದರಿಂದಾಗಿ ಸಂಘಗಳು ಸಕಾಲಕ್ಕೆ ವಸೂಲಾತಿ ರೂಢಿಸಿಕೊಂಡು ಡಿಸಿಸಿ ಬ್ಯಾಂಕಿಗೆ ಸಾಲದ ಕಂತು ಮರುಪಾವತಿ ಮಾಡಲೇಬೇಕಾಗಿರುತ್ತದೆ. ಇನ್ನು ಕೆಲ ಸಂದರ್ಭಗಳಲ್ಲಿ ಸಂಘಗಳೇ ರೈತರ ಸಾಲ ಮರುಪಾವತಿಸಿರುತ್ತವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಬುಕ್ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಈ ಮರುಪಾವತಿ ಮಾಡಿದ ಸಾಲದ ನವೀಕರಣಕ್ಕೆ ಸಂಘದವರು ಡಿಸಿಸಿ ಬ್ಯಾಂಕಿಗೆ ಮನವಿ ಸಲ್ಲಿಸಿದರೆ ತಿಂಗಳುಗಟ್ಟಲೆ ಹಣ ಮಂಜೂರಾಗಿರುವುದಿಲ್ಲ. ಹೀಗೆ ವಿಳಂಬವಾಗುವ ಅವಧಿಯ ಬಡ್ಡಿಯನ್ನು ಸಂಘವೇ ಭರಿಸಬೇಕಾಗುತ್ತದೆ. ಇದರಿಂದಾಗಿ ಸಂಘಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಕೆಲವು ಸಂಘದವರು ಈ ಹಣವನ್ನೂ ರೈತರ ಸಾಲ ನವೀಕರಿಸುವ ಸಮಯದಲ್ಲಿ ವಸೂಲು ಮಾಡಿರುವ ದೂರುಗಳೂ ಇವೆ. ಬಡ್ಡಿ ಮನ್ನಾ ಇದ್ದಾಗ್ಯೂ ನಾವೇಕೆ ಬಡ್ಡಿ ಪಾವತಿಸಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 16 =
Remember me
