|ಶಿವಾನಂದ ತಗಡೂರುಬೆಂಗಳೂರು
ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಸರ್ಕಾರ ಅದಕ್ಕೆ ಪೂರಕ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದು, ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಂದು ಸಾವಿರ ಚಾರ್ಜಿಂಗ್ ಸೆಂಟರ್ ತೆರೆಯಲು ಇಂಧನ ಇಲಾಖೆ ಮುಂದಾಗಿದೆ. ಇಂಧನ ಇಲಾಖೆಯಲ್ಲಿ ಒಂದಷ್ಟು ಬದಲಾವಣೆ ಮಾಡುತ್ತಿರುವ ಸಚಿವ ವಿ.ಸುನೀಲ್​ಕುಮಾರ್, ಸಾವಿರ ಚಾರ್ಜಿಂಗ್ ಸೆಂಟರ್​ಗಳಿಗೆ ಶೀಘ್ರವೇ ಚಾಲನೆ ನೀಡಲು ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.
ಮೂರು ವರ್ಷಗಳ ಹಿಂದೆ ನೂರು ಚಾರ್ಜಿಂಗ್ ಸೆಂಟರ್ ಪ್ರಾರಂಭಿಸಲು ಮುಂದಾಗಿದ್ದ ಸರ್ಕಾರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಕ್ರಮೇಣ ಚಾರ್ಜಿಂಗ್ ಸೆಂಟರ್​ಗಳಿಗೆ ಡಿಮ್ಯಾಂಡ್ ಬರುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿರುವ ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಜಾಗದಲ್ಲಿ ಚಾರ್ಜಿಂಗ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ನಾಲ್ಕು ಚಕ್ರದ ವಾಹನಗಳ ಚಾರ್ಜಿಂಗ್ ಸೆಂಟರ್​ಗೆ ಡಿಮ್ಯಾಂಡ್ ಇದೆ. ಇನ್ನುಳಿದ ನಗರಗಳಲ್ಲಿ ದ್ವಿಚಕ್ರ ವಾಹನಗಳ ಚಾರ್ಜಿಂಗ್​ಗೆ ಡಿಮ್ಯಾಂಡ್ ಬರುತ್ತಿದೆ. ಇದನ್ನು ಅನುಸರಿಸಿ ಹೊಸ ಚಾರ್ಜಿಂಗ್ ಸೆಂಟರ್ ಮಾಡಲು ಇಂಧನ ಇಲಾಖೆ ಕಾರ್ಯಯೋಜನೆ ರೂಪಿಸಿದೆ.
32 ಸಾವಿರ ಎಲೆಕ್ಟ್ರಿಕ್ ವಾಹನ:4 ವರ್ಷದ ಹಿಂದೆ ರಾಜ್ಯದಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಪರಿಸರ ಸ್ನೇಹಿ ವಾಹನಗಳ ಬಳಕೆ ಬಗ್ಗೆ ಹೆಚ್ಚು ಒತ್ತು ನೀಡಿ ನೀತಿ ರೂಪಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಂಡ ಮೇಲೆ ಜನರ ಗಮನ ಎಲೆಕ್ಟ್ರಿಕ್ ಬ್ಯಾಟರಿ ವಾಹನಗಳ ಮೇಲೆ ಬಿದ್ದಿದೆ. ರಾಜ್ಯದಲ್ಲಿ ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಅಷ್ಟೆ ಅಲ್ಲ, ದೇಶದಲ್ಲಿಯೇ ಅತಿ ಹೆಚ್ಚು 32 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹೊಂದಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಅತಿ ಹೆಚ್ಚು ದ್ವಿಚಕ್ರ:50 ಲಕ್ಷಕ್ಕೂ ಹೆಚ್ಚು ಸಾಮಾನ್ಯ ದ್ವಿಚಕ್ರ ವಾಹನಗಳು ಬೆಂಗಳೂರಿನಲ್ಲಿಯೇ ಇರುವುದು ದಾಖಲೆ. ಇನ್ನು ಕಾರು, ಬಸ್, ಲಾರಿ ಸೇರಿ ಎಲ್ಲ ಬಗೆಯ ವಾಹನಗಳ ಸಂಖ್ಯೆ 85 ಲಕ್ಷಕ್ಕೆ ಹೆಚ್ಚಳವಾಗಿದೆ. ಈಗಿರುವ ರಸ್ತೆಗಳ ಸಾಮರ್ಥ್ಯ ಮಾತ್ರ ಅಷ್ಟೆ ಇದೆ. ಆದರೆ, ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿದೆ. ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆಯಾದರೆ, ಮತ್ತೊಂದೆಡೆ ವಾಹನಗಳ ಹೊಗೆಯಿಂದಾಗಿ ಪರಿಸರ ಮಾಲಿನ್ಯ ವಿಪರೀತ ಹೆಚ್ಚಿದೆ. ಅದಕ್ಕಾಗಿಯೇ ಪ್ರಕೃತಿ ಸ್ನೇಹಿ (ಹೊಗೆ ರಹಿತ) ವಾಹನಗಳಿಗೆ ಬೇಡಿಕೆ ಬರುತ್ತಿದೆ.
ಡಿಸಿ ಚಾರ್ಜ್, ಎಸಿ ಚಾರ್ಜ್:ಡೈರೆಕ್ಟ್ ಚಾರ್ಜಿಂಗ್ ಹಾಕಿದರೆ 1 ಗಂಟೆಯಲ್ಲಿ ಬ್ಯಾಟರಿಗಳು ಸಂಪೂರ್ಣ ಚಾರ್ಜ್ ಆಗಿ ಬಿಡುತ್ತವೆ. ಎಸಿ ಚಾರ್ಜಿಂಗ್​ನಲ್ಲಿ ಹಾಕಿದರೆ ಕನಿಷ್ಠ 4 ಗಂಟೆ ಬೇಕಾಗುತ್ತದೆ. ಡೈರೆಕ್ಟ್ ಚಾರ್ಜ್ ಮಾಡುವ ಸೆಂಟರ್ ನಿರ್ವಣಕ್ಕೆ 4 ರಿಂದ 5 ಲಕ್ಷ ರೂ ಬೇಕು. ಎಸಿ ಚಾರ್ಜಿಂಗ್ ಸೆಂಟರ್​ಗೆ 50 ರಿಂದ 75 ಸಾವಿರ ಬೇಕಿದೆ. ಕಡಿಮೆ ಅವಧಿಯಲ್ಲಿಯೇ ಚಾರ್ಜ್ ಮಾಡಬೇಕು ಎಂಬ ಬೇಡಿಕೆ ಹೆಚ್ಚು ಇರುವುದರಿಂದ ಡಿಸಿ ಚಾರ್ಜಿಂಗ್​ಗೆ ಹೆಚ್ಚು ಬೇಡಿಕೆ ಇದೆ.
ಸರಾಸರಿ 136 ಕಿ.ಮೀ. ಮೈಲೇಜ್:ಬ್ಯಾಟರಿ ಆಧಾರಿತ ಎಲೆಕ್ಟ್ರಿಕ್ ವಾಹನಗಳು ಕನಿಷ್ಟ 100 ರಿಂದ 136 ಕಿಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಬಸ್​ಗಳಿಗೂ ಹೆವಿ ಡ್ಯೂಟಿ ಬ್ಯಾಟರಿ ಅಳವಡಿಸುವುದರಿಂದ 100 ಕಿ.ಮೀ. ಓಡಿಸಲು ಯಾವುದೇ ಸಮಸ್ಯೆ ಇಲ್ಲ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿಕೊಂಡರೆ ಆರಾಮವಾಗಿ ಪ್ರಯಾಣಿಸಬಹುದು.
ಯುನಿಟ್​ಗೆ 5 ರೂ:120 ಕಿ.ಮೀ. ಕ್ರಮಿಸುವ ಬ್ಯಾಟರಿಯನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಸಾಕು. ಬ್ಯಾಟರಿ ಚಾರ್ಜ್ ಮಾಡಲು ಬಳಕೆಯಾಗುವ ಪ್ರತಿ ಯುನಿಟ್​ಗೆ 5 ರೂ ದರವಿಧಿಸಲಾಗಿದೆ. ಚಾರ್ಜ್ ಮಾಡಿಸಿಕೊಳ್ಳಲು 18 ರಿಂದ 20 ಯುನಿಟ್ ವಿದ್ಯುತ್ ಸಾಕು. 70 ರೂ. ಸರಾಸರಿಯಲ್ಲಿ ಬ್ಯಾಟರಿ ಚಾರ್ಜಿಂಗ್ ಮಾಡಲು ಸಾಧ್ಯವಿದೆ. ಆದ್ದರಿಂದ ಪೆಟ್ರೋಲ್ ರೇಟ್​ಗಿಂತಲೂ ಎಲೆಕ್ಟ್ರಿಕ್ ಚಾರ್ಜಿಂಗ್ ಅಗ್ಗವಾಗಲಿದೆ.
ಪರಿಸರ ಸ್ನೇಹಿ ವಾಹನಗಳನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಶೀಘ್ರವೇ ರಾಜ್ಯದಲ್ಲಿ 1 ಸಾವಿರ ಚಾರ್ಜಿಂಗ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದದಲ್ಲಿ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಸೆಂಟರ್ ಮಾಡಲಾಗುವುದು.
|ವಿ. ಸುನೀಲ್​ಕುಮಾರ್ಇಂಧನ ಸಚಿವರು.
ಬೆಂಗಳೂರಿನಲ್ಲಿ 350 ಚಾರ್ಜಿಂಗ್ ಸೆಂಟರ್​ಗಳಿವೆ. ಪೆಟ್ರೋಲ್ ಬಂಕ್​ಗಳಲ್ಲಿಯೂ ಚಾರ್ಜಿಂಗ್ ಸೆಂಟರ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಶೀಘ್ರವೇ ಈ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸಲಾಗುವುದು. ಬೇಡಿಕೆ ಆಧಾರದ ಮೇಲೆ ಚಾರ್ಜಿಂಗ್ ಸೆಂಟರ್ ಮಾಡಲಾಗುವುದು.
|ರಾಜೇಂದ್ರ ಚೋಳನ್ಎಂಡಿ, ಬೆಸ್ಕಾಂ.
500 ಚಾರ್ಜಿಂಗ್ ಸೆಂಟರ್:ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಬೇಕೆಂದರೆ, ಪೆಟ್ರೋಲ್ ಬಂಕ್ ರೀತಿಯಲ್ಲಿ ಎಲ್ಲ ಕಡೆಯಲ್ಲೂ ಚಾರ್ಜಿಂಗ್ ಸೆಂಟರ್​ಗಳು ಸೌಲಭ್ಯ ಸಿಗಬೇಕು. ಈ ಕಾರಣಕ್ಕಾಗಿಯೇ ವಿಧಾನಸೌಧ ಮತ್ತು ವಿಕಾಸ ಸೌಧದ ಸೇರಿ ಹಲವು ಸರ್ಕಾರಿ ಕಚೇರಿಗಳ ಆವರಣಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರಿನಲ್ಲಿಯೇ 350 ಚಾರ್ಜಿಂಗ್ ಸೆಂಟರ್​ಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಸಂಖ್ಯೆ ಶೀಘ್ರವೇ 500 ದಾಟಲಿದೆ.
ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four × 2 =
Remember me
