ಪ್ರತಿ ವರ್ಷ ಮೇ ತಿಂಗಳ ಮೊದಲ ದಿನವನ್ನು ಅಂತಾರಾಷ್ಟ್ರೀಯ ಕಾರ್ಮಿಕ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರ್ಮಿಕ ವರ್ಗದ ಸಾಧನೆಗಳನ್ನು ಗೌರವಿಸುವುದು ಈ ಆಚರಣೆ ಹಿಂದಿನ ಉದ್ದೇಶವಾಗಿದ್ದು, ಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏನೆಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ, ಅದರ ಸೌಲಭ್ಯ ಪಡೆಯುವುದೇಗೆ ಎಂಬುದು ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು:ದೇಶ ನಿರ್ಮಾಣದ ಕಾರ್ಯದಲ್ಲಿ ಶ್ರಮಿಕ ವರ್ಗದವರ ಶ್ರಮ ಅಪಾರ. ದೈಹಿಕವಾಗಿ ಶ್ರಮಪಟ್ಟು ಬೆವರು ಹರಿಸಿ ದುಡಿಯುವ ವರ್ಗದವರ ಸಂಖ್ಯೆ ದೊಡ್ಡದಿದೆ. ಇಂತಹ ಶ್ರಮಜೀವಿಗಳ ಸಾಮಾಜಿಕ ಭದ್ರತೆ ಹಾಗೂ ಜೀವನ ಸುಧಾರಣೆಗೆ ಕೇಂದ್ರ ಸರ್ಕಾರ ರೂಪಿಸಿರುವ ‘ಇ-ಶ್ರಮ್’ ಯೋಜನೆ ವರದಾನವಾಗಿದೆ.
ಇತ್ತೀಚಿನ ವರ್ಷದವರೆಗೂ ಈ ಶ್ರಮಜೀವಿಗಳಿಗೆ ಪಗಾರ ಹೊರತುಪಡಿಸಿ ಇತರ ಕಾರ್ಮಿಕರು ಪಡೆಯುವ ಸೌಲಭ್ಯಗಳು ಗಗನಕುಸುಮವಾಗಿತ್ತು. ಅಸಂಘಟಿತ ವಲಯಕ್ಕೆ ಸೇರಿದ್ದಾರೆಂಬ ಒಂದೇ ಕಾರಣಕ್ಕೆ ಈ ವರ್ಗದವರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಕಾರ್ಯಕ್ರಮಗಳು ಕಾಗದದ ಮೇಲಷ್ಟೇ ಕಾಣುತ್ತಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಲು ಕಾರ್ಮಿಕ ಸಂಘಟನೆಗಳ ಅವಿರತ ಹೋರಾಟ, ಶ್ರಮಿಕರ ಪರ ಕೆಲಸ ಮಾಡುತ್ತಿರುವ ಸಂಘಟನೆಗಳ ಒತ್ತಡದಿಂದಾಗಿ ಇ-ಶ್ರಮ್ ಯೋಜನೆಯನ್ನು ಬಹು ವಿಸ್ತಾರವಾಗಿ ಜಾರಿಗೆ ತರಲಾಗಿದೆ. ದೇಶದಲ್ಲಿರುವ 45 ಕೋಟಿ ಅಸಂಘಟಿತರ ಪೈಕಿ ಸುಮಾರು 30 ಕೋಟಿ ಮಂದಿ ಇ-ಶ್ರಮ್ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಈ-ಶ್ರಮ್ ಯೋಜನೆಗೆ ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಚಾಲಕರು, ಮನೆಗೆಲಸದವರು ಸೇರಿ 379 ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸೇರ್ಪಡೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆಯುಳ್ಳ ಕಾರ್ಡ್ ನೀಡಲಾಗಿದೆ. ಈ ಕಾರ್ಡ್‌ನಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮಗಳಲ್ಲಿ ಹಣದ ನೆರವು ನೇರವಾಗಿ ಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯಿಂದಾಗಿ ಶ್ರಮಿಕರ ಬೆವರಿಗೆ ನ್ಯಾಯ ನೀಡುವ ಸಾರ್ಥಕತೆ ಸರ್ಕಾರದಿಂದ ಕೈಗೊಳ್ಳಲಾಗುತ್ತಿದೆ.
ರಾಜ್ಯ ಮಂಡಳಿಯಿಂದ ಸಪ್ತ ಯೋಜನೆ:
ಕರ್ನಾಟಕದಲ್ಲಿ ಶ್ರಮಿಕ ವರ್ಗದವರಿಗಾಗಿ ರಾಜ್ಯ ಸರ್ಕಾರ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿವೆ. ಕಾರ್ಮಿಕರ ಮಕ್ಕಳ ಶೈಕ್ಷಣಿಕ ನೆರವು, ಆರೋಗ್ಯ ನೆರವು ಸಹಿತ 7 ಕಾರ್ಯಕ್ರಮಗಳನ್ನು ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿಗೆ (ಕೆಎಲ್‌ಡಬ್ಲುಬಿ) ಅನುಷ್ಠಾನದ ಹೊಣೆ ವಹಿಸಲಾಗಿದೆ. ಮಾಸಿಕ 21 ಸಾವಿರ ರೂ.ಗಿಂತ ಕಡಿಮೆ ಮೊತ್ತವನ್ನು ಪಡೆಯುವ ಯಾವುದೇ ಕಾರ್ಮಿಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ನೆರವು: ಪ್ರೌಢಶಾಲೆ ಹಂತದಿಂದ ಸ್ನಾತಕೋತ್ತರ ಪದವಿ ಓದುವ ಕಾರ್ಮಿಕರ ಮಕ್ಕಳಿಗೆ ವಾರ್ಷಿಕ ಶೈಕ್ಷಣಿಕ ನೆರವು ನೀಡಲಾಗುತ್ತಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 3 ಸಾವಿರ ರೂ., ಪಿಯುಸಿ/ಡಿಪ್ಲೊಮಾ/ಟಿಸಿಎಚ್ ವ್ಯಾಸಂಗದವರಿಗೆ 4 ಸಾವಿರ ರೂ., ಪದವಿಗೆ 5 ಸಾವಿರ ರೂ., ಪಿಜಿಗೆ 6,000 ಸಾವಿರ ರೂ. ಹಾಗೂ ವೈದ್ಯಕೀಯ/ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ನೀಡಲಾಗುತ್ತದೆ.
ವೈದ್ಯಕೀಯ ನೆರವು: ಹೃದಯ ಸಂಬಂಧಿ ಶಸಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಸೇರಿ ಪ್ರಮುಖ ಕಾಯಿಲೆಗಳ ವೈದ್ಯಕೀಯ ನೆರವಾಗಿ ವಾರ್ಷಿಕವಾಗಿ ಗರಿಷ್ಠ 25 ಸಾವಿರ ರೂ. ನೀಡಲಾಗುತ್ತದೆ. ಸಾಮಾನ್ಯ ವೈದ್ಯಕೀಯ ತಪಾಸಣೆಗೆ 1,000 ರೂ. ನೀಡಲಾಗುತ್ತದೆ.
ಹೆರಿಗೆ ಸೌಲಭ್ಯದ ನೆರವು: ಮಹಿಳಾ ಕಾರ್ಮಿಕರಿಗಾಗಿ ಹೆರಿಗೆ ಸೌಲಭ್ಯದ ನೆರವು ರೂಪದಲ್ಲಿ 10 ಸಾವಿರ ರೂ. ನೀಡಲಾಗುತ್ತದೆ. ಈ ಸೌಲಭ್ಯವು ಎರಡು ಮಕ್ಕಳಿಗೆ ಅನ್ವಯವಾಗಲಿದೆ.
ಅಪಘಾತ ನೆರವು: ಕಾರ್ಮಿಕರೊಬ್ಬರು ಅಪಘಾತಕ್ಕೊಳಗಾದಲ್ಲಿ ಮೊದಲ ಮೂರು ತಿಂಗಳ ಅವಧಿಯೊಳಗೆ 10 ಸಾವಿರ ರೂ. ನೆರವು ನೀಡಲಾಗುತ್ತದೆ.
ಅಂತ್ಯಕ್ರಿಯೆ ವೆಚ್ಚಕ್ಕೆ ನೆರವು: ಕಾರ್ಮಿಕರೊಬ್ಬರು ಅಸುನೀಗಿದ್ದಲ್ಲಿ ಅಂತ್ಯಕ್ರಿಯೆಗಾಗಿ ಅವರ ಕುಟುಂಬದವರಿಗೆ 10 ಸಾವಿರ ರೂ. ನೆರವು ಒದಗಿಸಲಾಗುತ್ತದೆ. ಈ ಸೌಲಭ್ಯ ಪಡೆದುಕೊಳ್ಳಲು 6 ತಿಂಗಳು ಅವಕಾಶವಿರಲಿದೆ.
ವೈದ್ಯಕೀಯ ಶಿಬಿರ: ಕಾರ್ಮಿಕ ಸಂಘಟನೆಗಳು ವಾರ್ಷಿಕವಾಗಿ ತನ್ನ ಸದಸ್ಯರಿಗೆ ವಾರ್ಷಿಕ ವೈದ್ಯಕೀಯ ತಪಾಸಣೆ ನಡೆಸಲು ಆಯೋಜಿಸುವ ಶಿಬಿರಗಳಿಗೆ 1 ಲಕ್ಷ ರೂ. ನೆರವು ದೊರೆಯಲಿದೆ.
ಕ್ರೀಡಾಕೂಟಕ್ಕೆ ನೆರವು: ಕಾರ್ಮಿಕ ಸಂಘಟನೆಗಳು ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ವಾರ್ಷಿಕ ಕ್ರೀಡಾ ಚಟುವಟಿಕೆಗೆ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುತ್ತದೆ.
ಕುಟುಂಬ ನಿರ್ವಹಣೆಗೆ ಪಿಂಚಣಿ ಸೌಲಭ್ಯ:
ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬ 60 ವರ್ಷ ಪೂರೈಸಿದ ಬಳಿಕ ಆತನಿಗೆ ಮಾಸಿಕ ಪಿಂಚಣಿ ಪಡೆಯುವ ಅವಕಾಶ ಇದೆ. ಮಾಸಿಕ 3 ಸಾವಿರ ರೂ. ಪಿಂಚಣಿ ಮೊತ್ತವು ಮಂಡಳಿ ವತಿಯಿಂದಲೇ ಭರಿಸಲಾಗುತ್ತದೆ. ಪಿಂಚಣಿದಾರ ಮೃತನಾದಲ್ಲಿ ಆತನ ಪತ್ನಿ/ಪತಿ ಅಥವಾ ಅವಲಂಬಿತ ಕುಟುಂಬ ಸದಸ್ಯರಿಗೆ ಪಿಂಚಣಿ ಮುಂದುವರಿಸಲಾಗುತ್ತದೆ.
ಜಿಲ್ಲೆಗಳಲ್ಲಿ ತಾತ್ಕಾಲಿಕ ವಸತಿ ಸಮುಚ್ಚಯ:
ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು ವಲಸೆ ಹೋಗುವ ಸ್ಥಳದಲ್ಲಿ ವಾಸ್ತವ್ಯ ಹೂಡಲು ಪರದಾಡುವುದುಂಟು. ಈ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ಜಿಲ್ಲೆಗಳಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಲು ಹೊಸ ಯೋಜನೆ ಪ್ರಕಟಿಸಿದೆ. ಈ ವರ್ಷ 10 ಜಿಲ್ಲೆಗಳಲ್ಲಿ ಇಂತಹ ವಸತಿ ಸಮುಚ್ಚಯಗಳನ್ನು ನಿರ್ಮಿಸಲು 100 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಿದೆ.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ:
ಕೆಲಸದ ಕಾಯಂ ಇಲ್ಲದೆ ದುಡಿಯುತ್ತಿರುವ ಸಾರಿಗೆ ವಲಯದ ಅಸಂಘಟಿತ ಚಾಲಕರು ಹಾಗೂ ಇತರರಿಗೆ ಸಾಮಾಜಿಕ ಭದ್ರತೆ ಕಾರ್ಯಕ್ರಮ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಅಂದಾಜು 45 ಲಕ್ಷ ಇಂತಹ ಶ್ರಮಿಕರಿದ್ದು, ಅವರೆಲ್ಲರಿಗೂ ವೈದ್ಯಕೀಯ, ಶಿಕ್ಷಣ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವು ನೀಡುವ ಕಾರ್ಯಕ್ರಮ ಜಾರಿಗೊಳಿಸಲು ಕಾರ್ಮಿಕ ಇಲಾಖೆ ಸಿದ್ಧತೆ ನಡೆಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
