ಬೆಂಗಳೂರು:ವೈದ್ಯರಿಗೆ ಭದ್ರತೆ ನೀಡಲು ಹಾಗೂ ಅವರ ಸುರಕ್ಷತೆಗಾಗಿ ಕ್ರಮಕೈಗೊಳ್ಳಲು ಸರ್ಕಾರ ಕಟಿಬದ್ಧವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ‘ಯುವ ಸಂವಾದ’ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಸಚಿವರು, ಅವರ ಆಶೋತ್ತರಗಳನ್ನು ತಿಳಿಯುವುದರ ಜೊತೆಗೆ ಸಮಸ್ಯೆಗಳನ್ನು ಆಲಿಸಿ ಕ್ರಮ ವಹಿಸುವ ಭರವಸೆ ನೀಡಿದರು.
ಈ ವೇಳೆ ವಿದ್ಯಾರ್ಥಿ ಆಕಾಶ್ ಗಂಗಾಧರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರೋಗ್ಯ ಸಚಿವನಾಗಿ ವೈದ್ಯರ ಸುರಕ್ಷತೆಯ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇನೆ. ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಲ್ಲೆ ಕಡಿಮೆಯಾಗಿದ್ದು, ಜಾಗೃತಿ ಮೂಡುತ್ತಿದೆ. ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಕ್ರಮಗಳೂ ಇವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬೇಕಿದೆ ಎಂದ ಅವರು, ಸರ್ಕಾರ ಸದಾ ವೈದ್ಯರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಪರಿಸ್ಥಿತಿಯ ಹೊಸ ಅನುಭವ:ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯ ಹೊಸ ಅನುಭವ ಗಳಿಸಿದ್ದಾರೆ. ಕಳೆದ ನೂರು ವರ್ಷದ ಹಿಂದಿನ ಬ್ಯಾಚ್ ಕೂಡ ಈ ರೀತಿಯ ಸವಾಲನ್ನು ಎದುರಿಸಿರಲಿಲ್ಲ. ಆದ್ದರಿಂದ 2020ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್​ನಿಂದ ಉತ್ತಮ ಅನುಭವ ಗಳಿಸಿದ್ದಾರೆ ಎಂದರು.
ವೈದ್ಯರಿಗೆ ನಿರುದ್ಯೋಗ ಸಮಸ್ಯೆ ಕಾಡದು:ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದರಿಂದ ವೈದ್ಯರಿಗೆ ಬೇಡಿಕೆ ತಗ್ಗಿ ನಿರುದ್ಯೋಗ ಸಮಸ್ಯೆ ಎದುರಾಗುವುದಿಲ್ಲವೆ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ, ಈಗ ಮೆಡಿಕಲ್ ಟೂರಿಸಂ ಹೆಚ್ಚು ಬೆಳೆಯುತ್ತಿದೆ. ರಾಜ್ಯದಲ್ಲಿ ಹಿಂದೆ 2,300 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದರು. ಈಗ 900 ಜನಸಂಖ್ಯೆಗೆ ಒಬ್ಬರಿದ್ದಾರೆ. ಆಯುಷ್ ವೈದ್ಯರು ಸೇರಿದರೆ ಈ ಸಂಖ್ಯೆ 700ಕ್ಕೆ ಇಳಿಯುತ್ತದೆ. 130 ಕೋಟಿ ಜನರು ಇರುವ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜುಗಳ ಅಗತ್ಯವಿದೆ. ಒಂದು ವೈದ್ಯಕೀಯ ಕಾಲೇಜಿಗೆ 750 ಕೋಟಿ ರೂ. ಖರ್ಚಾಗುತ್ತದೆ. ಈ ಹೊರೆ ತಗ್ಗಿಸಲು ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕಾಲೇಜು ನಿರ್ಮಿಸುವ ಪ್ರಸ್ತಾಪವಿದೆ ಎಂದರು.
ರಾಜ್ಯದಲ್ಲಿ ಇನ್ನೂ 9 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ. ಹಾಗಾಗಿ ದಾವಣಗೆರೆ, ಉಡುಪಿ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರದ ಪಾಲು ಹೊಂದಿರುವ ಕಾಲೇಜು ಆರಂಭಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಇಂಜಿನಿಯರಿಂಗ್‌ನಂತೆ ವೈದ್ಯ ಕ್ಷೇತ್ರದಲ್ಲಿ ಉದ್ಯೋಗ ನಷ್ಟ, ನಿರುದ್ಯೋಗ ಸಮಸ್ಯೆ ಆಗುವುದಿಲ್ಲ. ಬದಲಿಗೆ ವೈದ್ಯರಿಗೆ ಇನ್ನೂ ಹೆಚ್ಚು ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಕಾಲೇಜುಗಳ ಶುಲ್ಕ ಕಡಿಮೆ ಮಾಡಬೇಕು ಹಾಗೂ ವೈದ್ಯರ ಭತ್ಯೆಯಲ್ಲಿ ಏಕರೂಪತೆ ತರುವುದು ಸೇರಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ ಸಚಿವರು, ಕಳೆದ ಏಳೆಂಟು ವರ್ಷಗಳಿಂದಲೂ ಭತ್ಯೆ ಹೆಚ್ಚಳ ಆಗಿರಲಿಲ್ಲ, ಆದರೆ ಕೋವಿಡ್ ಸಮಯದಲ್ಲೂ ವೈದ್ಯರ ಭತ್ಯೆಯನ್ನು ಶೇ.30-60% ರಷ್ಟು ಹೆಚ್ಚಿಸಲಾಗಿದೆ ಎಂದರು.
ಯುವಜನರು ರಾಜಕೀಯಕ್ಕೆ ಬನ್ನಿ:ಯುವಜನರನ್ನು ರಾಜಕೀಯಕ್ಕೆ ಕರೆ ತರುವ ಕುರಿತು ವಿದ್ಯಾರ್ಥಿ ಮಣಿಕಂಠನ್ ಕೇಳಿದ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಸಚಿವರು, ನನ್ನಂತಹವರನ್ನು ನೋಡಿ ನೀವೆಲ್ಲರೂ ರಾಜಕೀಯ ಪ್ರವೇಶ ಮಾಡಬಹುದು. ಯಾವುದೇ ಕಾನೂನು ಜಾರಿಯಾಗುವುದು ಜನರು ಆರಿಸಿದ ಜನಪ್ರತಿನಿಯಿಂದ. ಜನರಿಗಾಗಿ ಸೇವೆ ಮಾಡುವ, ಶಿಕ್ಷಣ ಹೊಂದಿರುವ ವ್ಯಕ್ತಿಯನ್ನು ರಾಜಕೀಯಕ್ಕೆ ಆರಿಸದಿದ್ದರೆ ಸಮಸ್ಯೆ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರುವುದರಿಂದ ಆರಂಭವಾಗಿ ಪ್ರಧಾನಿಯಾಗುವವರೆಗೆ ಬೆಳೆದಿದ್ದಾರೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು ಎಂದು ಕರೆ ನೀಡಿದರು.
ಖ್ಯಾತ ನಟನಿಗೆ ಕ್ಯಾನ್ಸರ್​, ಧನಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಕೋರಿಕೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 19 =
Remember me
