| ಡಾ.ಸೂರ್ಯನಾರಾಯಣ ಶರ್ಮ ಪಿ.ಎಂ.ಕಳೆದ ವಾರ ಕಾರವಾರದ ಆಸ್ಪತ್ರೆಯೊಂದರಲ್ಲಿ 32 ವರ್ಷದ ಲೆಕ್ಕಪರಿಶೋಧಕಿಯೊಬ್ಬರು ಪಾರ್ಶ್ವವಾಯು ತಡೆಗಟ್ಟುವ ಸಲುವಾಗಿ ಇಂಜೆಕ್ಷನ್ ತೆಗೆದುಕೊಂಡ ನಂತರ ಸಾವನ್ನಪ್ಪಿದ ಘಟನೆ ನಡೆದಿದೆ. ವೈದ್ಯಕೀಯ ಲೋಕದಲ್ಲಿ ಯಾವುದೇ ಇಂಜೆಕ್ಷನ್​ಗೆ ತೀವ್ರ ಸ್ವರೂಪದ ಅಲರ್ಜಿ ಉಂಟಾಗಿ ಸಾವನ್ನಪ್ಪುವ ಘಟನೆಗಳು ಅಲ್ಲಲ್ಲಿ ಸಂಭವಿಸುವುದು ಎಲ್ಲರ ಗಮನ ಸೆಳೆದರೂ ಆ ಚುಚ್ಚುಮದ್ದಿನ ಅವಶ್ಯಕತೆ ಏನಿತ್ತು ಎನ್ನುವುದರ ಬಗ್ಗೆಯೂ ಪ್ರಶ್ನೆಗಳು ಏಳುತ್ತವೆ. ಪಾರ್ಶ್ವ ವಾಯುವಿನಂತಹ ಗಂಭೀರ ಮಾರಣಾಂತಿಕ ಕಾಯಿಲೆಗೆ ತುರ್ತು ಚಿಕಿತ್ಸೆ ನೀಡುವಾಗ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯ. ದುರದೃಷ್ಟವಶಾತ್ ನಮ್ಮ ರಾಜ್ಯದಲ್ಲಿ ಪಾರ್ಶ್ವವಾಯು ಚಿಕಿತ್ಸೆಯ ಗುಣಮಟ್ಟವನ್ನು ನಿಯಂತ್ರಿಸುವ ಮಾರ್ಗದರ್ಶಿ ಸೂತ್ರಗಳು ಕಾಗದದಲ್ಲಿಯೇ ಉಳಿದಿವೆ.
ಕಳೆದ ಎರಡು ದಶಕಗಳಲ್ಲಿ ವೈದ್ಯಕೀಯ ಲೋಕದಲ್ಲಿ ಪಾರ್ಶ್ವವಾಯುವಿನ ತಡೆ ಮತ್ತು ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಲಕ್ಷಾಂತರ ರೋಗಿಗಳ ಮೇಲೆ ಅಧ್ಯಯನ ನಡೆಸಿದ ವರದಿಗಳು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಯ/ರಕ್ತಸ್ರಾವದ ಚಿಕಿತ್ಸೆಯ ರೂಪುರೇಷೆಗಳನ್ನು ಸಿದ್ಧಪಡಿಸಿವೆ. ಅಂತಾರಾಷ್ಟ್ರೀಯ ಮಾನದಂಡಗಳು ತುರ್ತು ಚಿಕಿತ್ಸೆಯ ಮಹತ್ವವನ್ನು ಒತ್ತಿ ಹೇಳುತ್ತವೆ. ಹಾಗಾಗಿ ಕೇವಲ ನರರೋಗ ತಜ್ಞರಲ್ಲದೆ, ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಪಾರ್ಶ್ವವಾಯುವಿನ ತುರ್ತು ಚಿಕಿತ್ಸೆಯ ಮಹತ್ವ ಅರಿತುಕೊಳ್ಳುವುದು ಹಾಗೂ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯ.
ಪಾರ್ಶ್ವವಾಯುವಿನ ಚಿಕಿತ್ಸೆ ಹೆಸರಿನಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಚಿಕಿತ್ಸಾ ಕ್ರಮಗಳು ರೋಗಿಗಳ ಜೀವಕ್ಕೇ ಸಂಚಕಾರ ತರುವ ಸಾಧ್ಯತೆ ಇರುವುದರಿಂದ ಇಂತಹ ನಕಲಿ ವೈದ್ಯರ/ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಟೊ›ೕಕ್ ರೆಡಿ ಆಸ್ಪತ್ರೆಗೆ ಮಾರ್ಗಸೂಚಿ ರೂಪಿಸಿ ಎಲ್ಲ ಸಂಸ್ಥೆಗಳು ಅದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು.
ಸ್ಟ್ರೋಕ್ ಅಥವಾ ಪಾರ್ಶ್ವವಾಯು ಜಗತ್ತಿನಲ್ಲಿ ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ (ಹೃದಯಾಘಾತದ ನಂತರ). ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಕಡಿಮೆ ಇದೆ.
ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳು ಚಿಕಿತ್ಸೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಹಿಮಾಚಲ ಪ್ರದೇಶದಂತ ಬೆಟ್ಟ ಗುಡ್ಡಗಳು, ಪರ್ವತಗಳು ಹೆಚ್ಚಿರುವ ಪ್ರದೇಶಗಳಲ್ಲಿ ಟೆಲಿಸ್ಟ್ರೋಕ್ ಸೌಲಭ್ಯದ ಮೂಲಕ ನವದೆಹಲಿಯ ಏಮ್್ಸ ಆಸ್ಪತ್ರೆಯ ಸಹಯೋಗದಲ್ಲಿ ತಜ್ಞರ ಟೆಲಿ ಮೆಡಿಸಿನ್ ನೆರವಿನೊಂದಿಗೆ ಪಾರ್ಶ್ವವಾಯು ತುರ್ತು ಚಿಕಿತ್ಸೆಯನ್ನು ಸ್ಥಳೀಯ ವೈದ್ಯರೇ ನೀಡುತ್ತಿದ್ದಾರೆ.
2019ರ ಅಧ್ಯಯನದ ಪ್ರಕಾರ ರಾಜ್ಯದಲ್ಲಿ ವಾರ್ಷಿಕವಾಗಿ ಪ್ರತಿ ಒಂದು ಲಕ್ಷ ಮಂದಿಗೆ 109 ಜನರು ಪಾರ್ಶ್ವ ವಾಯುಗೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಅಂದಾಜು 40 ಜನ ಪ್ರತಿನಿತ್ಯ ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ಕೇವಲ ಶೇಕಡಾ 10-15ರಷ್ಟು ಕಡಿಮೆ ರೋಗಿಗಳು ‘ಸುವರ್ಣ ಸಮಯ’ದಲ್ಲಿ (ಚಿಕಿತ್ಸೆ ಒದಗಿಸಬಹುದಾದ ಸಮಯದೊಳಗೆ) ಆಸ್ಪತ್ರೆ ತಲುಪಿದ್ದಾರೆ. ಇದರ ಪ್ರಮಾಣವನ್ನು ಹೆಚ್ಚಿಸಲು ಅವಕಾಶ ಇದೆ.
ಪಾರ್ಶ್ವವಾಯುವಿನ ಚಿಕಿತ್ಸೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳ ಹಾಗೂ ರಾಜ್ಯ ಸರ್ಕಾರದ ಸಂಯೋಜಿತ ಪಾತ್ರ ಬಹಳ ಮುಖ್ಯ. ಸರ್ಕಾರಿ ಮಟ್ಟದಲ್ಲಿ ತಜ್ಞರ ಸಮಿತಿ ಸಹಾಯದಿಂದ ಯೋಜನೆ ರೂಪಿಸಿದರೆ ಸಾವಿರಾರು ರೋಗಿಗಳ ಜೀವ ಉಳಿಸಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ಮೊದಲ ಮಂತ್ರವೇ ‘ಛಟ ್ಞ ಜಚ್ಟಞ’. ಅಂದರೆ, ರೋಗಿಗೆ ಒಳ್ಳೆಯದನ್ನು ಮಾಡದಿದ್ದರೂ ತೊಂದರೆ ಮಾಡಬಾರದು ಎಂಬುದು. ಅದನ್ನು ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಪಾಲಿಸಬೇಕು.
1. ಪಾರ್ಶ್ವವಾಯು ಗುಣಪಡಿಸಬಹುದಾದ ಒಂದು ರೋಗ ಎಂದು ಅರಿವು ಮೂಡಿಸುವುದು.
2. ಪಾರ್ಶ್ವವಾಯು ಸಂಭವಿಸಿದ ಮೊದಲ ನಾಲ್ಕೂವರೆ ಗಂಟೆಗಳ ಕಾಲ ಸುವರ್ಣ ಸಮಯ ಅಥವಾ ಗೋಲ್ಡನ್ ಅವರ್ ಸಂದರ್ಭದಲ್ಲಿ ಸ್ಟ್ರೋಕ್ ರೆಡಿ ಆಸ್ಪತ್ರೆಗೆ ದಾಖಲಾದರೆ ಅತ್ಯಾಧುನಿಕ ಚಿಕಿತ್ಸೆಗಳ ಮೂಲಕ ಪಾರ್ಶ್ವವಾಯು ಗುಣಪಡಿಸಬಹುದು ಮತ್ತು ಅಂಗವೈಕಲ್ಯ ತಡೆಗಟ್ಟಬಹುದು.
3. ಬೆಂಗಳೂರಿನಾದ್ಯಂತ ಇರುವ ದೊಡ್ಡ, ಮಧ್ಯಮ ಆಸ್ಪತ್ರೆಗಳನ್ನು ಸ್ಟ್ರೋಕ್ ರೆಡಿ ಹಾಸ್ಪಿಟಲ್ ಎಂದು ವರ್ಗೀ ಕರಿಸಿ ಮಾರ್ಗದರ್ಶನ ಮಾಡುವುದು. ನಂತರ ಆಂಬುಲೆನ್ಸ್ ಚಾಲಕರಿಗೆ ಸೂಕ್ತ ತರಬೇತಿ ನೀಡುವುದು.
4. ರೋಗಿಯನ್ನು ಹತ್ತಿರದ ಸ್ಟ್ರೋಕ್ ರೆಡಿ ಆಸ್ಪತ್ರೆಗೆ ಜಿಪಿಎಸ್ ತಂತ್ರಜ್ಞಾನದ ಮೂಲಕ ತುರ್ತಾಗಿ ಸ್ಥಳಾಂತರಿಸಲು ಯೋಜನೆ ರೂಪಿಸುವುದು.
5. ಪಾರ್ಶ್ವವಾಯು ಸಂಭವಿಸಿದ ಮೊದಲ ನಾಲ್ಕೂವರೆ ಗಂಟೆಗಳ ಒಳಗೆ ಕೊಡಲಾಗುವ ಕ್ಲಾಟ್ ಬ್ಲಸ್ಟರ್ ಔಷಧಿ (ಟಿಪಿಎ ಅಥವಾ ಟೆನೆಕ್ಟಪ್ಲೇಸ್) ದುಬಾರಿಯಾಗಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು. ಹಲವಾರು ರಾಜ್ಯಗಳಲ್ಲಿ ಈ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರಕುತ್ತಿದೆ.
6. ತಮಿಳುನಾಡಿನಲ್ಲಿ ಮೆಕ್ಯಾನಿಕಲ್ ತ್ರಾಂಬೆಕ್ಟಮಿ ಚಿಕಿತ್ಸೆ ಸರ್ಕಾರಿ ಮಟ್ಟದಲ್ಲಿ ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಇಲ್ಲೂ ಅದೇ ಮಾದರಿ ಅನುಸರಿಸಬಹುದು. ತುರ್ತು ಸಂದರ್ಭದಲ್ಲಿ ಶಸ್ತ›ಚಿಕಿತ್ಸೆಗೆ ಕೂಡ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಅನುದಾನ ನೀಡುವ ಮೂಲಕ ಉಚಿತ ಸೇವೆ ನೀಡಬಹುದು.
7. ನರ್ಸ್​ಗಳಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಎಮರ್ಜೆನ್ಸಿ ವಿಭಾಗದಲ್ಲಿ ಚಿಕಿತ್ಸೆ ನೀಡುವ ಕಿರಿಯ ವೈದ್ಯರಿಗೆ ತರಬೇತಿ ನೀಡುವುದು. ಎಲ್ಲಾ ಪಾರ್ಶ್ವವಾಯು ಪೀಡಿತ ರೋಗಿಗಳಿಗೆ ನರರೋಗ ತಜ್ಞರೇ ಚಿಕಿತ್ಸೆ ನೀಡುವುದು ಪ್ರಾಯೋಗಿಕವಾಗಿ ಸಾಧುವಲ್ಲ.
8. ಗ್ರಾಮಾಂತರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇರುವ ವೈದ್ಯರು ತುರ್ತು ಸಂದರ್ಭದಲ್ಲಿ ತಜ್ಞರನ್ನು ಸಂರ್ಪಸಲು ರಾಜ್ಯಮಟ್ಟದಲ್ಲಿ ಹೆಲ್ಪ್ ಲೈನ್ ಸ್ಥಾಪಿಸುವುದು. ಪಾರ್ಶ್ವವಾಯು ಸಂಭವಿಸಿದ ತಕ್ಷಣ ತರಬೇತಿ ಪಡೆದ ಪ್ಯಾರಾಮೆಡಿಕಲ್ ಸಿಬ್ಬಂದಿಯಿಂದ/ಸ್ಥಳೀಯ ವೈದ್ಯರಿಂದ ವಿಡಿಯೋ ಮೂಲಕ ತಜ್ಞರಿಂದ ತಪಾಸಣೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡುವುದು.
9. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಟ್ರೋಕ್ ಪ್ರಿವೆನ್ಶನ್ ಕ್ಲಿನಿಕ್ ಸ್ಥಾಪಿಸುವುದು. ತಿಂಗಳಿಗೆ ಒಂದು ಬಾರಿ ಹಿರಿಯ ತಜ್ಞರಿಂದ ರೋಗಿಗಳ ತಪಾಸಣೆ ಮಾಡಿ ಸೂಕ್ತ ಸಲಹೆ ಕೊಡಿಸುವುದು.
10. ರಾಜ್ಯದಲ್ಲಿ ನರರೋಗ ಚಿಕಿತ್ಸೆಗಾಗಿ ನಿಮ್ಹಾನ್ಸ್ ಮೇಲಿನ ಅವಲಂಬನೆ ವಿಪರೀತವಾಗಿದೆ. ಪಾರ್ಶ್ವವಾ ಯುವಿನ ಚಿಕಿತ್ಸೆ ಅತ್ಯಂತ ತುರ್ತಿನದ್ದಾಗಿರುವುದರಿಂದ ರಾಜ್ಯ ಮಟ್ಟದಲ್ಲಿ ಒಂದು ಸಂಸ್ಥೆ ರಚಿಸುವುದು ಇಂದಿನ ಅಗತ್ಯ. ಉದಾಹರಣೆಗೆ, ಕರ್ನಾಟಕ ಪಾರ್ಶ್ವವಾಯು ಸಂಶೋಧನಾ ಸಂಸ್ಥೆ ರೀತಿಯ ಸ್ವಾಯತ್ತ ಸಂಸ್ಥೆಗಳನ್ನು ರಚಿಸಿದರೆ ಅವು ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಬಹುದಾಗಿದೆ.
11. ರಾಜ್ಯಮಟ್ಟದಲ್ಲಿ ಸ್ಟ್ರೋಕ್ ಟಾಸ್ಕ್​ಫೋರ್ಸ್ ರೂಪಿಸಿ, ಸರ್ಕಾರಿ ಮತ್ತು ಖಾಸಗಿ ವಲಯದ ವೈದ್ಯರನ್ನು, ಅಧಿಕಾರಿಗಳನ್ನು, ಸಮಾಜ ಸೇವಕರನ್ನು ಹಾಗೂ ಪಾರ್ಶ್ವವಾಯುವಿನಿಂದ ಗುಣಮುಖರಾದ ರೋಗಿಗಳನ್ನು ಅದರಲ್ಲಿ ಸೇರಿಸಿ, ಕಾಲಕಾಲಕ್ಕೆ ವೈಜ್ಞಾನಿಕ ಅಭಿಪ್ರಾಯ ನೀಡುವುದು.
(ಲೇಖಕರು ಹಿರಿಯ ನರರೋಗ ತಜ್ಞರು ಹಾಗೂ ಕರ್ನಾಟಕ ಸ್ಟ್ರೋಕ್ ಫೌಂಡೇಷನ್ ಕಾರ್ಯದರ್ಶಿ)
ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!

ಹತ್ತು ದಿನಗಳ ಹಿಂದೆ ಪುತ್ರನೊಂದಿಗೆ ರೀಲ್ಸ್​ನಲ್ಲಿ ರಂಜಿಸಿದ್ದ ಸಿ.ವಿ. ಶಿವಶಂಕರ್; ವಿಡಿಯೋ ವೈರಲ್, ಆ ಖುಷಿ ಇನ್ನು ಬರೀ ನೆನಪು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + seventeen =
Remember me
