ಬೆಂಗಳೂರು:ಕರ್ನಾಟಕದಲ್ಲಿ ಶನಿವಾರ 918 ಸೋಂಕಿತರು ಪತ್ತೆ ಆಗಿದ್ದು, ಭಾನುವಾರ ಪತ್ತೆಯಾದ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದ್ದು, ಕರೊನಾ ಸಮುದಾಯಕ್ಕೆ ಹರಡಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಅಂಥದ್ದರಲ್ಲೂ 8.5 ಲಕ್ಷ ವಿದ್ಯಾರ್ಥಿಗಳಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸುವ ಸರ್ಕಾರದ ಹಠಕ್ಕೆ ಆಡಳಿತ ಪಕ್ಷದ ಶಾಸಕರು ಮತ್ತು ಅಧಿಕಾರಿಗಳ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸೋಂಕಿತರ ಪ್ರಮಾಣ, ಸಾವಿನ ಸಂಖ್ಯೆ ಏರುತ್ತಿದೆ, ಐಸೋಲೇಷನ್ ವಾರ್ಡ್​ಗಳಿಗೆ ಶಿಫ್ಟ್ ಆಗುತ್ತಿರುವವರೂ ಹೆಚ್ಚಾಗುತ್ತಿದ್ದಾರೆ. ಒಟ್ಟಾರೆ ಪರಿಸ್ಥಿತಿ ವಿಕೋಪಕ್ಕೆ ಹೊರಳುತ್ತಿದ್ದರೂ ‘ಯಾರೂ ಆತಂಕ ಪಡುವ ಅಗತ್ಯವಿಲ್ಲ, ಪರೀಕ್ಷೆ ನಡೆಸುತ್ತೇವೆ’ ಎಂದು ಶಿಕ್ಷಣ ಇಲಾಖೆ ಪಟ್ಟು ಹಿಡಿದಿದೆ.
ರಾಜ್ಯದ ಪರಿಸ್ಥಿತಿ ನಿಯಂತ್ರಿಸಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಮೇಲೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವರು ಅಧಿಕೃತ ಹೇಳಿಕೆ ನೀಡುವ ಮೂಲಕ ವಾತಾವರಣ ನಿಯಂತ್ರಣ ಮೀರುವ ಹಂತ ತಲುಪಿದೆ ಎಂದು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಇದು ಪೋಷಕರ ದುಗುಡ ಹೆಚ್ಚಿಸಿದೆ. ಈ ನಡುವೆಯೂ ಮಕ್ಕಳು ಪರೀಕ್ಷೆ ಬರೆಯಲಿ ಎಂಬ ಧೋರಣೆ ಶಿಕ್ಷಣ ಇಲಾಖೆಯದ್ದು.
ಇನ್ನೊಂದೆಡೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಈ ವಿಚಾರದಲ್ಲಿ ಆತಂಕದಲ್ಲಿ ಇದ್ದಾರೆಂಬ ಮಾಹಿತಿ ಇದೆ. ಕೇಂದ್ರ ಪಠ್ಯಕ್ರಮದ ಶಾಲೆಗಳು, ನೆರೆ ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡಿವೆ. ರೋಗ ಹರಡುವ ಆತಂಕದಲ್ಲಿ ರಿಸ್ಕ್ ಏಕೆ ಎಂದು ಕಠಿಣ ನಿರ್ಧಾರ ಪ್ರಕಟಿಸಿವೆ. ಅಂಥದ್ದರಲ್ಲಿ ನಮಗೇಕೆ ಬೇಕಿತ್ತು? ಎಂಬ ಅಭಿಪ್ರಾಯ ಅಧಿಕಾರಿಗಳಲ್ಲಿ ಹಾಗೂ ಆಡಳಿತ ಪಕ್ಷದ ಶಾಸಕರಲ್ಲೂ ಇದೆ.
ಇನ್ನೂ 4 ಪರೀಕ್ಷೆಗಳು ಬಾಕಿ ಇದ್ದು, ಮಕ್ಕಳಲ್ಲಿ ಪ್ರಕರಣ ಹೆಚ್ಚಾದರೆ ನಮ್ಮ ಮುಖಕ್ಕೆ ನಾವೇ ಮಸಿ ಹಚ್ಚಿಕೊಂಡಂತಲ್ಲವೇ ಎಂದು ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಶಾಸಕರ ನಡುವಿನ ಅನೌಪಚಾರಿಕ ಚರ್ಚೆ ವೇಳೆ ಈ ವಿಚಾರವೂ ಬಂದಿದೆ. ಪರೀಕ್ಷೆ ನಡೆಸಲೇಬೇಕೆಂಬ ಹಠವೇಕೆ, ಹೆಚ್ಚುಕಡಿಮೆಯಾದರೆ ಸರ್ಕಾರಕ್ಕೆ ಕಳಂಕವಲ್ಲವೇ ಎಂದು ಅಭಿಪ್ರಾಯ ನೀಡಿದ್ದಾರೆ.
ಆಡಳಿತಯಂತ್ರದ ಗಮನದಲ್ಲಿ ವಿಶ್ಲೇಷಣೆ ನಡೆಸಿ ಅಭಿಪ್ರಾಯ ನೀಡಿರುವ ಹಣಕಾಸು ಇಲಾಖೆ ಅಧಿಕಾರಿ, ನಮ್ಮ ಈಗಿನ ಆದ್ಯತೆ ಕರೊನಾ ಪರೀಕ್ಷೆ ಆಗಬೇಕಿತ್ತೇ ಹೊರತು, ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲ ಎಂದಿದ್ದಾರೆ. ಈ ಹಂತದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳು ಉಸಿರುಗಟ್ಟಿಕೊಂಡು ಕರೊನಾ ನಿರ್ವಹಣೆ ಮಾಡುತ್ತಿರುವಾಗ ಎಸ್​ಎಸ್​ಎಲ್​ಸಿ ಪರೀಕ್ಷೆ ನಿರ್ವಹಣೆ ಹೆಚ್ಚುವರಿ ಹೊಣೆ. ಅವರೂ ರೋಸಿ ಹೋಗುತ್ತಿದ್ದಾರೆ ಎಂದು ಪರಿಸ್ಥಿತಿ ವಿಶ್ಲೇಷಿಸಿದ್ದಾರೆ.
ಕರೊನಾ ಜತೆ ಇನ್ನಷ್ಟು ದಿನ ಕಳೆಯಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ, ಹಾಗೆಂದು ಮಕ್ಕಳನ್ನು ಅಪಾಯಕ್ಕೆ ದೂಡುವುದಲ್ಲ ಎಂಬ ಮಾತೂ ಸರ್ಕಾರದ ವಲಯದಲ್ಲಿದೆ. ಎಂಟು ಲಕ್ಷ ಮಕ್ಕಳು ಪರೀಕ್ಷೆಗೆ ಬಂದರೆ, ಅನೇಕ ಕಡೆ ಅವರ ಪೋಷಕರೂ ಬರುತ್ತಾರೆ. ಅವರಿಗೂ ಆತಂಕ, ನಾವೇ ಮತ್ತಷ್ಟು ಅಪಾಯಕ್ಕೆ ಆಹ್ವಾನ ಕೊಟ್ಟಂತಲ್ಲವೇ? ಎಂದು ಸರ್ಕಾರದ ಹಿರಿಯ ಮಂತ್ರಿಯೊಬ್ಬರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದು ಗುಟ್ಟಾಗಿ ಉಳಿದ ವಿಚಾರವೇನಲ್ಲ.
ಕಾದು ಕುಳಿತಿರುವ ಕಾಂಗ್ರೆಸ್: ಅತ್ತ ಪ್ರತಿಪಕ್ಷ ಕಾಂಗ್ರೆಸ್ ಅವಕಾಶಕ್ಕಾಗಿ ಕಾದು ಕುಳಿತಿದೆ. ಒಂದು ವೇಳೆ ಪರೀಕ್ಷೆ ನಡೆಸಿ ಅಚಾತುರ್ಯಗಳಾದರೆ ಸರ್ಕಾರದ ವಿರುದ್ಧ ಮುಗಿಬೀಳಲು ದೊಡ್ಡ ಅಸ್ತ್ರವನ್ನೇ ಕೈಕೊಟ್ಟಂತಾಗುತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿ ಇಲ್ಲ, ಹಾಸಿಗೆಗಳ ಕೊರತೆ ಇದೆ, ಉಪಕರಣ ಲಭ್ಯವಿಲ್ಲ, ನಿರ್ವಹಣೆಯಲ್ಲಿ ಹಲವು ಗೊಂದಲ.. ಇವೆಲ್ಲವನ್ನು ಮುಂದಿಟ್ಟು ಜನರಲ್ಲಿ ಆಡಳಿತ ಯಂತ್ರದ ವೈಫಲ್ಯ ಎಂದು ತೋರಿಸುವ ಯತ್ನ ಪ್ರತಿಪಕ್ಷಗಳಿಂದ ನಡೆದಿದೆ. ಈ ನಡುವೆ ಪರೀಕ್ಷೆ ಪ್ರತಿಷ್ಠೆ ಬೇಕಿತ್ತಾ? ಎಂದು ಆಡಳಿತ ಪಕ್ಷದವರೇ ಸರ್ಕಾರವನ್ನು ಕುಟುಕಲು ಆರಂಭಿಸಿದ್ದಾರೆ. ಹಠಮಾರಿತನದಿಂದ ಸಾಧಿಸುವುದಾದರೂ ಏನು ಎಂದು ಪಕ್ಷದ ವೇದಿಕೆಯಲ್ಲೂ ಪ್ರಶ್ನೆಗಳು ತೂರಿಬಂದಿವೆ.
ಗುರುವಾರ, ಶನಿವಾರ ನಡೆದ ಎಸ್​ಎಸ್​ಎಲ್ ಸಿ ಪರೀಕ್ಷೆಯಲ್ಲಿ ಎರಡೂ ದಿನ ಸುಮಾರು ಶೇ.98 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮನೆಯಿಂದ ಹೊರಟಾಗಿನಿಂದ ಪರೀಕ್ಷೆ ಬರೆದು ಮನೆಗೆ ಹಿಂದಿರುಗುವವರೆಗೂ ಪ್ರತಿ ಹಂತದಲ್ಲೂ ಮಕ್ಕಳ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಿದೆ.
| ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
