|ಡಾ.ಕಾಂತೇಶಾಚಾರ್ಯ ಕದರಮಂಡಲಗಿ
ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಸರ್ವಮೂಲ ಗ್ರಂಥಗಳು ಅವು ಬಹುದೊಡ್ಡ ಜ್ಞಾನಭಂಡಾರ. ನಿತ್ಯದಲ್ಲಿ ಮಾಡ ಬೇಕಾದ ಅನುಷ್ಠಾನಗಳು, ಉಪಾಸನೆಗಳು, ತಿಳಿಯಬೇಕಾದ ಸಾವಿರಾರು ಪ್ರಮೇಯಗಳು, ಅಳವಡಿಸಿಕೊಳ್ಳಬೇಕಾದ ಅನುಸಂಧಾನ ಗಳು ಹೀಗೆ ಆಚಾರ್ಯರು ತಮ್ಮ ಗ್ರಂಥಗಳಲ್ಲಿ ತಿಳಿಸಿರುವ ವಿಷಯ ಒಂದೇ ಎರಡೇ! ಸಹಸ್ರಸಹಸ್ರ ವಿಚಾರಗಳ ಗಣಿ ಅದು ಆಚಾರ್ಯರ ಸರ್ವಮೂಲಗ್ರಂಥಗಳು.
ಬಾಲಸಂಘಮಪಿ ಬೋಧಯತ್ ಭೃಶಂ ದುರ್ನಿರೂಪವಚನಂ ಚ ಪಂಡಿತೈಃ |
ಆಚಾರ್ಯರ ಗ್ರಂಥಗಳು ಬಾಲಕರಿಗೂ ಅರ್ಥವಾಗುವಂತೆ ಮೇಲ್ನೋಟಕ್ಕೆ ತೋರಿದರೂ ಅದು ದೊಡ್ಡ ದೊಡ್ಡ ಪಂಡಿತರಿಗೂ ಕಬ್ಬಿಣದ ಕಡಲೆಯೇ. ಅನ್ನುವುದಕ್ಕಾಗಿಯೇ ವ್ಯಾಖ್ಯಾಸ್ಯತ್ಯೇಷ ಗೋರಾಟ್ ಎಂಬ ಆಚಾರ್ಯರ ಆದೇಶವನ್ನು ಶಿರಸಾ ವಹಿಸಿ, ಸರ್ವಮೂಲಗಳ ಸರ್ವತೋಮುಖ ವ್ಯಾಖ್ಯಾನವನ್ನು ಮಾಡಲಿ ಕ್ಕಾಗಿಯೇ ಭುವಿಗಿಳಿದು ಬಂದ ಭವ್ಯಚೇತನ ಶ್ರೀಜಯತೀರ್ಥರು. ಆಚಾರ್ಯರ ಆಂತರಿಕ ಅಭಿಪ್ರಾಯಗಳನ್ನು, ವಿವಕ್ಷಿತ ವಿಚಾರಗಳನ್ನು ಸುಧಾದಿಗ್ರಂಥಗಳ ಮೂಲಕ ಸಮರ್ಪಕ ರೀತಿಯಲ್ಲಿ ಸರ್ವರಿಗೂ ತಲುಪಿಸಿದ ಧೀಮಂತ ಸಂತರು ಶ್ರೀಮಟ್ಟೀಕಾಕೃತ್ಪಾದರು (ಶ್ರೀ ಜಯತೀರ್ಥರು). ಸ್ವರ್ಗದ ಸುರರಿಗೆ ಸುರೇಂದ್ರ ಸುಧೆಯನುಣಿಸುವಂತೆ, ಭೂಸುರರಿಗೆ ಸುಧೆಯ ಸವಿಯನುಣಿಸಿದ ಸುರೇಂದ್ರರು. ಸುಖತೀರ್ಥರ ಸರ್ವಮೂಲಗಳಿಗೆ ಅನ್ಯೂನಅನತಿಕ್ರಮ ರೀತಿಯಲ್ಲಿ ಅನಿತರ ಸಾಧಾರಣ ಟೀಕೆಗಳನ್ನು ವಿರಚಿಸಿ ಟೀಕಾಚಾರ್ಯರೆಂದೇ ಪ್ರಖ್ಯಾತರಾದ ಪ್ರತಿಭಾಶಾಲಿಗಳು. ಶ್ರೀ ಜಯತೀರ್ಥರು ಸಂಚಾರ ಕ್ರಮದಿಂದ ತಕ್ಷಶಿಲಾಕ್ಕೆ ಹೋದಾಗ ಅಲ್ಲಿನ ವಿಶ್ವವಿದ್ಯಾಲಯಕ್ಕೆ ಕೆಲವು ಕಾಲ ಕುಲಪತಿಗಳಾದರು. ವಿಶ್ವವಿದ್ಯಾಲಯದ ಸಮಗ್ರ ಗ್ರಂಥಭಂಡಾರವನ್ನೂ ತಮ್ಮ ಬುದ್ಧಿ ಭಂಡಾರದಲ್ಲಿ ಇರಿಸಿಕೊಂಡರು. ಹಾಗಾಗಿ ಯರಗೋಳದ ಗುಹೆಯಲ್ಲಿ ಕುಳಿತು ಎಲ್ಲ ಮತಗಳ ವಿಷಯಗಳನ್ನೂ ವಿಮರ್ಶೆ ಗೊಳಪಡಿಸಿ, ಶ್ರೀಮನ್ನಾ್ಯಯಸುಧಾ ತತ್ವಪ್ರಕಾಶಿಕಾ ಮುಂತಾದ ಮೇರುಕೃತಿಗಳ ನ್ನೊಳಗೊಂಡ 21 ಅದ್ಭುತ ಗ್ರಂಥಗಳನ್ನು ರಚಿಸಿದರು. ಹಾಗಾಗಿಯೇ ಶ್ರೀಮಟ್ಟೀಕಾಕೃತ್ಪಾದರ ಬಗ್ಗೆ ಒಂದು ಮಹತ್ವದ ಮಾತಿದೆ-
ಮಿಥೋ ವಿಶೇಷೋ ನ ವಿದಾಂ ಬಭೂವ ವಿದ್ಯಾಪ್ರತೀತೇ ಜಯತೀರ್ಥಭಿಕ್ಷೌ | ಖದ್ಯೋತಚಂದ್ರಗ್ರಹತಾರಕಾಣಾಂ ಪ್ರದ್ಯೋತನೇ ಜಾಗ್ರತಿ ಕೋ ವಿಶೇಷಃ ||
ಬೆಳಕಿನ ಹುಳದ ಪ್ರಕಾಶ ಅಲ್ಪ, ಅದಕ್ಕಿಂತ ಬಲ್ಪ್​ಗಳ ಪ್ರಕಾಶ ಜಾಸ್ತಿ, ಅದಕ್ಕಿಂತ ನಕ್ಷತ್ರಗಳ ಪ್ರಕಾಶ ಜಾಸ್ತಿ, ಅದಕ್ಕಿಂತ ಗ್ರಹಗಳ ಪ್ರಕಾಶ ಇನ್ನೂ ಜಾಸ್ತಿ, ಅದಕ್ಕಿಂತಲೂ ಚಂದ್ರನ ಪ್ರಕಾಶ ಇನ್ನೂ ಜಾಸ್ತಿ, ಹೀಗೆ ಪ್ರಕಾಶಮಯಪದಾರ್ಥಗಳ ಮಧ್ಯದಲ್ಲಿ ತಾರತಮ್ಯವನ್ನು ತಿಳಿಯುತ್ತೇವೆ. ಯಾವಾಗ? ರಾತ್ರಿವೇಳೆಯಲ್ಲಿ ಆ ತಾರತಮ್ಯ ಸ್ಪುಟವಾಗಿ ತಿಳಿಯುತ್ತದೆ. ಆದರೆ ಬೆಳಗ್ಗೆ ಸೂರ್ಯನ ಉದಯವಾದ ನಂತರ ಈ ತಾರತಮ್ಯ ತಿಳಿಯಲು ಸಾಧ್ಯವಿಲ್ಲ. ಕಾರಣ ಸೂರ್ಯೋದಯವಾದರೆ ಬೆಳಕಿನಹುಳ, ಬಲ್ಪ್, ನಕ್ಷತ್ರಗಳು ಇದಾವುದರ ಬೆಳಕೂ ನಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ. ಸೂರ್ಯನ ಪ್ರಕಾಶದ ಮುಂದೆ ಈ ಎಲ್ಲ ಪ್ರಕಾಶಗಳೂ ಮಂದವೇ. ಅದರಂತೆ ಇವರು ಪಂಡಿತರು, ಇವರು ಮಹಾಪಂಡಿತರು, ಇವರು ಎರಡು-ಮೂರು ಶಾಸ್ತ್ರಗಳಲ್ಲಿ ಪಂಡಿತರು, ಇವರು ಚತುಃಶಾಸ್ತ್ರಪಂಡಿತರು, ಹೀಗೆಲ್ಲ ವಿಭಾಗ ಮಾಡಿಟ್ಟುಕೊಂಡಿದ್ದರಂತೆ. ಅದು ಎಲ್ಲಿಯವರೆಗೆ? ಶ್ರೀಮಟ್ಟೀಕಾಕೃತ್ಪಾದರ ಅವತಾರವಾಗುವವರೆಗೆ. ಯಾವಾಗ ಶ್ರೀಮಟ್ಟೀಕಾಕೃತ್ಪಾದರ ಮಹಾಪಾಂಡಿತ್ಯದ ಪ್ರಸಿದ್ಧಿ ಎಲ್ಲಕಡೆಗೆ ಹರಡಿತೋ ಆಗ ಯಾರು ಸಣ್ಣಪಂಡಿತರು, ಯಾರು ದೊಡ್ಡ ಪಂಡಿತರು ಅನ್ನುವ ವ್ಯತ್ಯಾಸವೇ ಉಳಿಯಲಿಲ್ಲವಂತೆ! ಎಲ್ಲ ಪಂಡಿತರೂ ಒಂದು ಕಡೆಯಾದರೆ, ಶ್ರೀಮಟ್ಟೀಕಾಕೃತ್ಪಾದರು ಮತ್ತೊಂದು ಕಡೆ.
ನ್ಯಾಯಸುಧಾ:ಶ್ರೀಮಟ್ಟೀಕಾಕೃತ್ಪಾದರು ರಚಿಸಿದ ಎಲ್ಲ ಕೃತಿಗಳಲ್ಲಿ ಶ್ರೀಮನ್ನಾ್ಯಯಸುಧಾ ಮೇರುಕೃತಿ. ಈ ಕೃತಿಗೆ ಮಾರುಹೋಗದ ಯಾವ ಮಾನವನಿಲ್ಲ. ಲಕ್ಷ ಲಕ್ಷ ಯುಕ್ತಿಮಣಿಗಳ ಖಣಿ, ಪ್ರಮೇಯ ರತ್ನಗಳ ಸರಮಾಲೆ, ತತ್ವಜ್ಞಾನ, ದರ್ಶನ, ಪ್ರಮೇಯ, ಪ್ರಮಾಣ ಇತ್ಯಾದಿ ಸಕಲವಿಷಯಗಳ ಬಗ್ಗೆ ಬರುವ ಲಕ್ಷಾವಧಿ ಪ್ರಶ್ನೆಗಳಿಗೆ ತಾತ್ವಿಕ ತಳಹದಿಯ ಮೇಲೆ ಕೇವಲ ಪ್ರತಿಭೆಯಿಂದ ಊಹಿತವಾಗದ ಪ್ರಾಮಾಣಿಕ ಸಮಾಧಾನಗಳನ್ನು ನೀಡಿದ ಅದ್ಭುತ ವಾಙ್ಮಯವಿದು. ಶ್ರೀಮಟ್ಟೀಕಾಕೃತ್ಪಾದರು ತಮ್ಮ ಗ್ರಂಥಗಳಲ್ಲಿ ಪ್ರಸ್ತುತಪಡಿಸದ ಪ್ರಮೇಯಗಳಿಲ್ಲ. ವಿಮಶಿಸದ ವಿಚಾರಗಳಿಲ್ಲ. ತತ್ವಜ್ಞಾನದ ಪ್ರಪಂಚದಲ್ಲಿ 50ಕ್ಕಿಂತಲೂ ಅಧಿಕವಾದ ವ್ಯಾಖ್ಯಾನಗಳನ್ನು (ಟಿಪ್ಪಣಿಗಳನ್ನು) ಹೊಂದಿ ಅತ್ಯುನ್ನತ ಸ್ಥಾನದಲ್ಲಿ ಅಲಂಕರಿಸಿದ ಗ್ರಂಥವೆಂದರೆ ಶ್ರೀಮನ್ನಾ್ಯಯಸುಧಾ ಗ್ರಂಥವನ್ನು ಬಿಟ್ಟು ಬೇರೊಂದಿಲ್ಲ ಎನ್ನುವುದರಿಂದಲೇ ಇದರ ಗೌರವ, ಮಹತ್ವದ ಅರಿವಾಗುತ್ತದೆ. ಶ್ರೀಪಾದ ರಾಜರು, ಶ್ರೀವ್ಯಾಸರಾಜರು, ಶ್ರೀವಾದಿ ರಾಜರು, ಶ್ರೀವಿದ್ಯಾಧೀಶರು, ಶ್ರೀವಿಜಯೀಂದ್ರರು, ಶ್ರೀರಘೂತ್ತಮರು, ಶ್ರೀರಾಘವೇಂದ್ರಸ್ವಾಮಿಗಳವರು ಮುಂತಾದ ಮಹನೀಯಚರಣರು ಹಾಗೂ ಅನೇಕಾನೇಕ ಗೃಹಸ್ಥ ಟಿಪ್ಪಣೀಕಾರರು ಎಲ್ಲರೂ ಶ್ರೀಮಟ್ಟೀಕಾಕೃತ್ಪಾದರ ಸುಧಾದಿಗ್ರಂಥಗಳ ವ್ಯಾಖ್ಯಾನ ಮಾಡುವುದರಿಂದಲೇ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಶಬ್ದ-ಧಾತುಗಳಿಂದ ಪ್ರಾರಂಭ ಮಾಡಿ ವ್ಯಾಸತ್ರಯಗಳವರೆಗೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಕೊನೆಯಲ್ಲಿ ಸುಧಾ ಗ್ರಂಥದ ಅಧ್ಯಯನ ಮಾಡಿದರೆ ಮಾತ್ರ ಪಂಡಿತ ವಿದ್ವಾನ್ ಎಂಬ ಬಿರುದು ಹೊಂದುತ್ತಾನೆ. ಸುಧಾಗ್ರಂಥದ ಅಧ್ಯಯನದಿಂದಲೇ ವಿದ್ಯೆಯ ಪರಿಪೂರ್ಣತೆ ಪಡೆಯಲು ಸಾಧ್ಯ. ಅಂತೆಯೇ ಶಾಸ್ತ್ರ ಓದುವ ವಿದ್ಯಾರ್ಥಿಗಳು ಸುಧಾಮಂಗಳದ ಮೂಲಕ ಸ್ನಾತಕರಾಗುತ್ತಾರೆ.
ಶ್ರೀಮಟ್ಟೀಕಾಕೃತ್ಪಾದರು ಭುವಿಗಿಳಿದು ಬಂದು ಮಾಡಬೇಕಾದ ಎಲ್ಲ ಅವತಾರಕಾರ್ಯಗಳೂ ಸುಸಂಪನ್ನವಾದ ಮೇಲೆ ಪರಮಪವಿತ್ರ ಕಾಗಿಣೀನದಿಯ ತೀರ, ತಮ್ಮ ಗುರುಗಳಾದ ಶ್ರೀಅಕ್ಷೋಭ್ಯತೀರ್ಥರ ಮೂಲವೃಂದಾವನದ ಸನ್ನಿಧಾನ ಮಳಖೇಡದಲ್ಲಿ ತಾವೂ ವೃಂದಾ ವನಸ್ಥರಾದರು. ಅಂತಹ ಶ್ರೀಮಟ್ಟೀಕಾಕೃತ್ಪಾದರ ಮೂಲವೃಂದಾವನ ಸನ್ನಿಧಾನೋಪೇತವಾದ ಮಳಖೇಡ ಕ್ಷೇತ್ರದಲ್ಲಿ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ 1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಮ್ಮ 11ನೇ ನ್ಯಾಯಸುಧಾಮಂಗಳ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಬೆಂಗಳೂರಿನ ಶ್ರೀ ಲಕ್ಷ್ಮೀನರಸಿಂಹದೇವರ ದಿವ್ಯಸನ್ನಿಧಾನ ಶ್ರೀ ಉತ್ತರಾದಿಮಠದಲ್ಲಿ ಅನೇಕ ಮಠಾಧೀಶರ, ನೂರಾರು ವಿದ್ವಾಂಸರ ಸಮ್ಮುಖದಲ್ಲಿ ಸುಧಾ ವಿದ್ಯಾರ್ಥಿಗಳ ಸಮಗ್ರಸುಧಾಪರೀಕ್ಷೆಯನ್ನು ಅಭೂತ ಪೂರ್ವರೀತಿಯಲ್ಲಿ ನೆರವೇರಿಸಿ, ಸುಧಾಮಂಗಳದ ಅವಭೃತಸ್ನಾನವನ್ನು ಮಳಖೇಡದಲ್ಲಿ ನೆರವೇರಿಸುತ್ತಿದ್ದಾರೆ.
(ಲೇಖಕರು ಸಂಸ್ಕ್ರತ ವಿದ್ವಾಂಸರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 13 =
Remember me
