|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿರುವ ನಲವತ್ತು ಪರ್ಸೆಂಟ್ ಆರೋಪ, ಬೆಲೆ ಏರಿಕೆ ವಿಚಾರ ಮತ್ತು ಸಿದ್ದರಾಮೋತ್ಸವ, ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಿಂದಾಗಿ ಎದುರಾಳಿಗೆ ಹೋಲಿಸಿದರೆ ಕಾಂಗ್ರೆಸ್ ಸದ್ಯ ಮೇಲುಗೈ ಸಾಧಿಸಿದೆ ಎಂಬ ಆಂತರಿಕ ವರದಿಯನ್ನು ಮುಂದಿಟ್ಟುಕೊಂಡು, ಇದೇ ಮೊಮೆಂಟಮ್ (ಆವೇಗ) ಮುಂದಿನ ಆರು ತಿಂಗಳು ಕಾಪಾಡಿಕೊಳ್ಳಲು ನೀಲಿನಕ್ಷೆ ಸಿದ್ಧಪಡಿಸುವ ಕಾರ್ಯಕ್ಕೆ ಕೈ ನಾಯಕರು ಮುಂದಾಗಿದ್ದಾರೆ.
ಎರಡು ಪ್ರಮುಖ ಶಕ್ತಿ ಪ್ರದರ್ಶನ ನಡೆದಿದ್ದು, ಇದಾದ ಬಳಿಕ ರಾಜ್ಯದ ರಾಜಕೀಯ ಕಂಪನದ ಪ್ರಭಾವ ಅಳೆಯಲಾಗಿದೆ. ಈ ರ್ಯಾಲಿಗೆ ಮುನ್ನ ಮತ್ತು ಈಗಿನ ಪರಿಸ್ಥಿತಿ ಬಗ್ಗೆ ಮತ್ತೊಂದು ಸುತ್ತಿನ ಸರ್ವೆ ನಡೆಸಿ ನಿಖರತೆ ಕಂಡುಕೊಳ್ಳಲು ಸಹ ಉದ್ದೇಶಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹುಬ್ಬಳ್ಳಿಯಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆದಿತ್ತು. ಬಳಿಕ ಎರಡು ದಿನಗಳ ಹಿಂದೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಮುಂದಿನ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದ್ದರು.
ಸದ್ಯ ರಾಜ್ಯ ವಿಧಾನಸಭೆ ಚುನಾವಣೆಗೆ ಮಾರ್ಗದರ್ಶನ ಮಾಡುತ್ತಿರುವ ಖಾಸಗಿ ಸಂಸ್ಥೆಯು ತನ್ನ ಅಭಿಪ್ರಾಯವನ್ನು ಈ ಸಭೆಯಲ್ಲಿ ಮಂಡಿಸಿದ್ದು, ಪಕ್ಷಕ್ಕೆ ಖುಷಿ ನೀಡುವ ಸಂಗತಿಗಳನ್ನು ಪ್ರಸ್ತಾಪಿಸಿದೆ. ಹಾಗೆಯೇ ಕೆಲ ಎಚ್ಚರಿಕೆಗಳನ್ನು ನೀಡಿದೆ ಎಂದು ತಿಳಿದುಬಂದಿದೆ.
ಖುಷಿಯ ವಿಚಾರ ಯಾವುದು?:ಶೇ.40 ಪರ್ಸೆಂಟ್ ಆರೋಪ ಜನರ ಮನಸ್ಸಿಗೆ ಇಳಿದಿದೆ. ಜನ ಸಾಮಾನ್ಯರ ಬಾಯಲ್ಲಿ ಈ ವಿಷಯ ಇದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರದ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿರುವುದು ಕಾಣಿಸಿದೆ. ಸರ್ಕಾರದ ಸೇವೆ ಅಥವಾ ವ್ಯವಸ್ಥೆಯಲ್ಲಿನ ಯಾವುದೇ ಲೋಪಗಳಿದ್ದರೂ ಅದನ್ನು 40 ಪರ್ಸೆಂಟ್ ಕಮೀಷನ್​ಗೆ ತಳುಕು ಹಾಕಲಾಗುತ್ತಿದೆ ಎಂಬುದನ್ನು ಖಾಸಗಿ ಸಂಸ್ಥೆಯ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನೊಂದು ಪ್ರಮುಖ ಸಂಗತಿ ಎಂದರೆ ಬೆಲೆ ಏರಿಕೆ ಪ್ರತಿ ಮನೆಯನ್ನೂ ತಟ್ಟಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣಿಸದೇ ಇರುವುದು ಜನ ರೋಸಿ ಹೋಗುವಂತೆ ಮಾಡಿದೆ. ಜತೆಗೆ ಸರ್ಕಾರ ಸುಭದ್ರವಾಗಿಲ್ಲ, ಅಸ್ಥಿರತೆ ಇದೆ ಎಂಬುದು ಪಕ್ಷದ ನಾಯಕರು, ಸಚಿವರು, ಶಾಸಕರು, ಮಾಜಿ ಶಾಸಕರ ಹೇಳಿಕೆಗಳಿಂದ ಪದೇಪದೆ ಬಹಿರಂಗವಾಗುತ್ತಿದೆ. ಖಂಡಿತವಾಗಿ ಇದು ಕಾಂಗ್ರೆಸ್​ಗೆ ಅನುಕೂಲವಾಗಿದೆ ಎಂದು ಖಾಸಗಿ ಸಂಸ್ಥೆ ಮುಖ್ಯಸ್ಥರು ಪಕ್ಷದ ನಾಯಕರಿಗೆ ವರದಿ ಒಪ್ಪಿಸಿದ್ದಾರೆ.
ಎಚ್ಚರಿಕೆ ಏನು?:ನಾಯಕತ್ವ ವಿಚಾರ ಗೌಣವಾಗಬೇಕು, ಅದು ಗೌಣವಾದಷ್ಟೂ ಪಕ್ಷಕ್ಕೆ ಲಾಭ. ಪಕ್ಷದೊಳಗೂ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ. ಇನ್ನು ಮುಂದೆ ಸಾಮೂಹಿಕ ನಾಯಕತ್ವದಡಿಯೇ ಸಾಗುವ ಬಗ್ಗೆ ಹೋಗುವ ನಡವಳಿಕೆ ಮುಖ್ಯವಾಗುತ್ತದೆ ಎಂದು ಚುನಾವಣಾ ತಂತ್ರಗಾರರು ಮನವರಿಕೆ ಮಾಡಿಕೊಟ್ಟಿದ್ದಾರೆನ್ನಲಾಗಿದೆ. ಜೆಡಿಎಸ್ ಬಗ್ಗೆ ಹೆಚ್ಚು ಒತ್ತುಕೊಡಬಾರದು, ವೈಯಕ್ತಿಕ ಟೀಕೆ ಕೂಡದು ಎಂಬ ನಿರ್ಧಾರಕ್ಕೂ ಬರಲಾಗಿದೆ. ಜತೆಗೆ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಚಟುವಟಿಕೆ ಬಗ್ಗೆ ಈಗಲೇ ಗಮನ ಕೊಡದೇ ಕೊನೆಯ ಆದ್ಯತೆಯಾಗಿ ತೆಗೆದುಕೊಳ್ಳಬೇಕು. ಇದು ಪಕ್ಷಕ್ಕೆ ಖಂಡಿತ ಲಾಭ ತಂದುಕೊಡಲಿದೆ ಎಂಬ ಸಲಹೆ ಬಂದಿದ್ದು, ಅದನ್ನು ಅನುಸರಿಸಲು ಸುರ್ಜೆವಾಲ ಕೂಡ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ವಿಭಾಗವಾರು ಕಾರ್ಯಕ್ರಮ ಮಾಡುವಾಗ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಮೊದಲು ಒಂದೊಂದು ಕಾರ್ಯಕ್ರಮ ರೂಪಿಸಬೇಕೆಂಬ ನಿರ್ಣಯಕ್ಕೆ ಬರಲಾಗಿದೆ.
ಮುಂದೇನು?:ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಜನರಲ್ಲಿರುವ ನಕಾರಾತ್ಮಕ ಭಾವನೆ ಮುಂದುವರಿಯುವಂತೆ ಮಾಡಲು ಕಾರ್ಯಕ್ರಮ ರೂಪಿಸಲು ಪಕ್ಷಕ್ಕೆ ಸಲಹೆ ಬಂದಿದೆ. ಅದರಲ್ಲೂ ಪ್ರಮುಖವಾಗಿ ಯುವಕರು ಹಾಗೂ ಮಹಿಳೆಯರನ್ನು ಗುರಿಯಾಗಿಸಿ ಮುಂದಿನ ಎರಡು ತಿಂಗಳು ವಿವಿಧ ಕಾರ್ಯಕ್ರಮ ರೂಪಿಸಬೇಕು. ಅಲ್ಲಿ ಬೆಲೆ ಏರಿಕೆ, ನಲವತ್ತು ಪರ್ಸೆಂಟ್ ವಿಚಾರ ಪದೇಪದೆ ಪ್ರಸ್ತಾಪ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರ ಚಾರ್ಮ್​ ಇಟ್ಟುಕೊಂಡೇ ಚುನಾವಣೆ ಎದುರಿಸುವುದು ನಿಶ್ಚಿತ, ರಾಜ್ಯ ನಾಯಕತ್ವಕ್ಕೆ ಮಹತ್ವ ಇಲ್ಲ. ಹೀಗಾಗಿ ಮೋದಿ ಅವರನ್ನು ಎದುರಿಸಲು ರಾಜ್ಯ ಕಾಂಗ್ರೆಸ್ ತಯಾರಾಗಬೇಕು ಎಂದು ಸಭೆಯಲ್ಲಿ ಚರ್ಚೆಯಾಗಿದೆ. ಬೆಲೆ ಏರಿಕೆ ಪ್ರತಿ ಮನೆಯ ವಿಚಾರ, ಈ ವಿಚಾರದಲ್ಲಿ ನೇರವಾಗಿ ಮೋದಿ ಅವರೇ ಗುರಿಯಾಗುತ್ತಾರೆ ಎಂಬ ಚರ್ಚೆ ನಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
