ಬೆಂಗಳೂರು:ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಮತದಾನ (ಜೂ.10) ಸಮೀಪಿಸುತ್ತಿದ್ದಂತೆ ಆಡಳಿತ ಬಿಜೆಪಿ ಕಸರತ್ತು ತೀವ್ರಗೊಳಿಸಿದೆ. ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಬೇಕಾದ ಮತಗಳು ಮೂರು ಪಕ್ಷಗಳಲ್ಲಿಲ್ಲ. ಇದರಿಂದಾಗಿ ನಿರಾಯಾಸ ಗೆಲುವಿಗೆ ಕಾಂಗ್ರೆಸ್, ಜೆಡಿಎಸ್ ಅಡ್ಡಿಯಾಗದಂತೆ ನೋಡಿಕೊಳ್ಳುವತ್ತ ಕಮಲಪಡೆ ಚಿತ್ತನೆಟ್ಟಿದೆ.
ಪಕ್ಷದ ರಾಜ್ಯ ಚುನಾವಣೆ ವೀಕ್ಷಕ ಕಿಶನ್ ರೆಡ್ಡಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮಕ್ಷಮ ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಮಹತ್ವದ ಬೈಠಕ್ ನಡೆಯಿತು. ಎಲ್ಲ 122 ಶಾಸಕರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಲಾಗಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಮೂರನೇ ಅಭ್ಯರ್ಥಿ ಜಯ ಸುಲಭವೆಂದು ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ವರಿಷ್ಠರ ಸಂದೇಶವನ್ನು ಈ ವೇಳೆ ತಲುಪಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮತಗಳ ವಿಂಗಡಣೆ, ಶಾಸಕರು ನಿಗದಿ:ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿ ಜಗ್ಗೇಶ್​ಗೆ ತಲಾ 45 ಮತಗಳು ಮತ್ತು ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಿಗೆ 32 ಮತಗಳು ವಿಂಗಡಣೆಯಾಗಿವೆ. ಯಾರ್ಯಾರಿಗೆ ಯಾವ ಶಾಸಕರು ಮತ ಹಾಕಬೇಕು ಎಂಬ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್ ಮತ್ತು ಮುಖ್ಯ ಸಚೇತಕ ರ್ಚಚಿಸಿ ನಿಗದಿಪಡಿಸಲಿದ್ದು, ಈ ಪಟ್ಟಿ ತಯಾರಾದ ನಂತರ ಪಕ್ಷದ ವರಿಷ್ಠರಿಗೆ ಅರುಣ್ ಸಿಂಗ್ ವರದಿ ಸಲ್ಲಿಸಲಿದ್ದಾರೆ. ರಣತಂತ್ರ ಸಹಿತ ಸಿದ್ಧಪಡಿಸಿದ ಮತಗಳ ಹಂಚಿಕೆ ಲೆಕ್ಕವನ್ನು ವರಿಷ್ಠರು ಪರಿಶೀಲಿಸಿ, ನೀಡಲಿರುವ ಸೂಚನೆಯಂತೆ ಮುಂದಿನ ಹೆಜ್ಜೆಯಿಡಲು ಸಭೆ ಸಹಮತ ವ್ಯಕ್ತಪಡಿಸಿದೆ. ತಾಂತ್ರಿಕ ಸಮಸ್ಯೆಗಳಾಗದಂತೆ ಎಚ್ಚರಿಕೆ ವಹಿಸಿ ತಲಾ ಒಂದು ಹೆಚ್ಚುವರಿ ಮತವನ್ನು ಮೊದಲ ಹಾಗೂ ಎರಡನೇ ಅಭ್ಯರ್ಥಿಗೆ ಹಾಕಲು ವರಿಷ್ಠರು ನಿರ್ದೇಶಿಸಿದರೆ, ಅಭ್ಯರ್ಥಿಗಳಿಬ್ಬರಿಗೆ ತಲಾ 46 ಮೊದಲ ಪ್ರಾಶಸ್ಱದ ಮತ ಹಾಕಲಿದ್ದಾರೆ. ಈ ರೀತಿಯಾದರೆ ಮೂರನೇ ಅಭ್ಯರ್ಥಿಗೆ 30 ಶಾಸಕರು ಮೊದಲ ಪ್ರಾಶಸ್ಱದ ಮತ ಹಾಕುವರು.
ತಂತ್ರಗಾರಿಕೆ:ಎರಡನೇ ಪ್ರಾಶಸ್ಱದ ಮತಗಳ ನೆರವಿನಿಂದ ಲೆಹರ್ ಸಿಂಗ್ ಗೆಲುವಿನ ದಡ ಸೇರಲಿದ್ದಾರೆ. ಅದಕ್ಕೂ ಮುನ್ನ ಸಹ ಸದಸ್ಯ ಎಚ್.ನಾಗೇಶ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಅಂಶವೂ ಈ ಸಭೆಯಲ್ಲಿ ಚರ್ಚೆಯಾಯಿತು ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್, ಜೆಡಿಎಸ್ ತಮ್ಮ ಪಾಲಿನ ಮತಗಳನ್ನು ಹಿಡಿತದಲ್ಲಿಟ್ಟುಕೊಂಡರೆ ಬಿಜೆಪಿಗೆ ಯಾವುದೇ ಸಮಸ್ಯೆ ಎದುರಾಗದು. ‘ಅಡ್ಡ’ ಮತದಾನದ ಪ್ರಯತ್ನಗಳಿಗೆ ಪ್ರತಿ ತಂತ್ರಗಾರಿಕೆ ಹೆಣೆದು, ಬೇರೆ ಪಕ್ಷದ ಮೂವರು ಶಾಸಕರನ್ನು ಸೆಳೆಯುವ ಬಗ್ಗೆ ಪ್ರಸ್ತಾಪವಾಯಿತು ಎನ್ನಲಾಗಿದೆ. ಮೂರನೇ ಅಭ್ಯರ್ಥಿ 32 ಹೆಚ್ಚುವರಿ ಜತೆಗೆ ಬೇರೆ ಪಕ್ಷದ 3-4 ಶಾಸಕರಿಂದ ಮೊದಲ ಪ್ರಾಶಸ್ಱದ ಮತ ಸೆಳೆಯುವ ‘ಸುರಕ್ಷಿತ ಮಾಗೋಪಾಯ’ದತ್ತ ಬೈಠಕ್ ಗಮನಹರಿಸಿದೆ. ಲೆಹರ್ ಸಿಂಗ್ ಅವರಿಗಿಂತ ಕಾಂಗ್ರೆಸ್​ನ ಎರಡನೇ ಅಭ್ಯರ್ಥಿ ಮೊದಲ ಪ್ರಾಶಸ್ಱದ ಮತ ಹೆಚ್ಚು ಪಡೆಯದಂತೆ ಎಚ್ಚರಿಕೆ ವಹಿಸಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
15 ದಿನ ಅಭಿಯಾನ:ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷಗಳ ಸಾಧನೆ, ಎಲ್ಲ ವರ್ಗಗಳ ಜನರ ಏಳಿಗೆಗೆ ನೀಡಿದ ಕೊಡುಗೆ ಬಗ್ಗೆ ಜನರಿಗೆ ತಿಳಿಸಲೆಂದು ಪಕ್ಷದಿಂದ 15 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅರುಣ್ ಸಿಂಗ್ ಹೇಳಿದರು. ಪ್ರತಿ ಗ್ರಾಮದ ಪ್ರತಿ ಮನೆಯನ್ನು ಸಂರ್ಪಸಿ ಸಾಧನೆಯನ್ನು ತಿಳಿಸುವ ಕಾರ್ಯ ನಡೆಯುತ್ತಿದ್ದು, ಈ ಅಭಿಯಾನದ ಜತೆಗೆ ರಾಜ್ಯ ಸರ್ಕಾರದ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಮೂವರೂ ಆಯ್ಕೆ:ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಮೂವರು ಅಭ್ಯರ್ಥಿಗಳು ನಿರಾಯಾಸವಾಗಿ ಜಯಭೇರಿ ಬಾರಿಸಲಿದ್ದಾರೆ ಎಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಏನೇ ಸರ್ಕಸ್ ಮಾಡಿದರೂ ಕಾಂಗ್ರೆಸ್, ಜೆಡಿಎಸ್ ಪ್ರಯತ್ನ ಫಲಿಸುವುದಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು, ಗುರಿ ಸಾಧಿಸುವುದು ನಿಶ್ಚಿತ.
|ಆರ್.ಅಶೋಕ್ಸಚಿವ
ಬೆಂಗಳೂರು:ವಿಧಾನ ಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣಾ ಪ್ರಚಾರದ ಅಖಾಡಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧುಮುಕಲಿದ್ದು, ತೆರೆಮರೆಯಲ್ಲಿ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಸೋಮವಾರ ಮಧ್ಯಾಹ್ನ 3.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಬೆಳಗಾವಿ ತಲುಪಿ ವಾಸ್ತವ್ಯ ಹೂಡಲಿದ್ದಾರೆ. ಜೂ. 7, 8ರಂದು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಂಡು, ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಜೂ.8ರ ಮಧ್ಯಾಹ್ನ 3ಕ್ಕೆ ಬೆಳಗಾವಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವರು. ನಂತರ ಸಾಂಬ್ರಾ ವಿಮಾನ ನಿಲ್ದಾಣದಿಂದ ಮರು ಪ್ರಯಾಣ ಬೆಳೆಸಿ ರಾತ್ರಿ 9ಕ್ಕೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಬೆಂಗಳೂರು:ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಪಡೆಯುವ ಪ್ರಯತ್ನಕ್ಕೆ ಜೆಡಿಎಸ್ ಪೂರ್ಣ ವಿರಾಮವಿಟ್ಟಿಲ್ಲ. ಕೋಮುವಾದಿ ಬಿಜೆಪಿಯನ್ನು ದೂರವಿಡಬೇಕು ಮತ್ತು ಜಾತ್ಯತಿತ ಪಕ್ಷಗಳು ಒಂದಾಗಬೇಕೆಂಬ ಸಂದೇಶ ಮುಂದಿಡುವುದ ರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಭ್ಯರ್ಥಿ ಕಣಕ್ಕಿಳಿಯುವ ಮುನ್ನವೇ ದೇವೇಗೌಡರು ಸೋನಿಯಾ ಗಾಂಧಿ ಬೆಂಬಲ ಕೋರಿ, ಒಂದು ಹಂತದಲ್ಲಿ ಸಮ್ಮತಿಯನ್ನೂ ಪಡೆದುಕೊಂಡಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಮನ್ಸೂರ್ ಆಲಿಖಾನ್ ನಾಮಪತ್ರ ವಾಪಸ್ ತೆಗೆಸಲು ಜೆಡಿಎಸ್ ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಈಗ ಮತ್ತೊಮ್ಮೆ ಗೌಡರು ಸೋನಿಯಾ ಸಂರ್ಪಸಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ಮೂಲಕ ಬಿಜೆಪಿ ದೂರ ಇಡಬೇಕು ಹಾಗೂ ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎಂಬ ಅಭಿಪ್ರಾಯವನ್ನು ಮುಂದಿಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಮಾತುಕತೆ ಫಲಪ್ರದವಾದರೆ ಸೋನಿಯಾ ಗಾಂಧಿ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದರೆ, ಕೊನೇ ಗಳಿಗೆಯಲ್ಲಿ ಚುನಾವಣಾ ಕಣದ ಚಿತ್ರಣವೇ ಬದಲಾಗಬಹುದು.
ಅಡ್ಡಮತದಾನದ ಆತಂಕ:ವಿಧಾನಸಭೆಯಲ್ಲಿ ಪಕ್ಷದ 32 ಸದಸ್ಯರಿದ್ದರೂ ವರಿಷ್ಠರ ಬಗ್ಗೆ ಅಸಮಾಧಾನ ಇರುವ ಜೆಡಿಎಸ್​ನ ಕೆಲ ಶಾಸಕರು ಈ ಚುನಾವಣೆಯಲ್ಲಿ ಬಿಜೆಪಿ ಇಲ್ಲವೇ ಕಾಂಗ್ರೆಸ್ ಬೆಂಬಲಿಸುವ ಅಥವಾ ಮತದಾನಕ್ಕೆ ಗೈರು ಹಾಜರಾಗುವ ಆತಂಕ ಕೂಡ ವರಿಷ್ಠರಲ್ಲಿದೆ. 2016ರಲ್ಲಿ ಅಡ್ಡಮತದಾನದ ಕಹಿ ಅನುಭವವನ್ನು ಜೆಡಿಎಸ್ ಕಂಡಿದೆ. ಹೀಗಾಗಿ ಈ ಬಾರಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ.
ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಇಳಿಕೆ; ಅದಕ್ಕೆ ಕಾರಣ ಮೋದಿ ಸರ್ಕಾರದ ಇದೊಂದು ಕ್ರಮ..

ಕಂದಕಕ್ಕೆ ಉರುಳಿತು 28 ಯಾತ್ರಿಗಳಿದ್ದ ಬಸ್​; 22 ಮಂದಿ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
