ಕೌಟುಂಬಿಕ ಕಲಹ, ಒತ್ತಡ, ಆರ್ಥಿಕ ಮುಗ್ಗಟ್ಟು, ಪ್ರೇಮವೈಫಲ್ಯ, ಮಾನಸಿಕ ಖಿನ್ನತೆ, ಅಪಮಾನ, ತಾತ್ಸಾರ ಸೇರಿ ಇನ್ನಿತರ ಕಾರಣಗಳಿಗೆ ಆತ್ಮಹತ್ಯೆ ಹಾದಿ ತುಳಿಯುವವರ ಸಂಖ್ಯೆ ಹೆಚ್ಚುತ್ತಿದೆ. ಆತ್ಮಹತ್ಯೆಗೆ ನಿರ್ಧರಿಸಿರುವವರಲ್ಲಿ ಕಂಡುಬರುವ ಲಕ್ಷಣಗಳನ್ನು ಗಮನಿಸಿ ತಕ್ಷಣ ಅವರಿಗೆ ಆಪ್ತ ಸಲಹೆ ಹಾಗೂ ಸೂಕ್ತ ಮಾಹಿತಿ ನೀಡಿದರೆ ಆತ್ಮಹತ್ಯೆಯನ್ನು ತಪ್ಪಿಸಬಹುದು. ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನ (ಸೆ.10)ದ ಹಿನ್ನೆಲೆಯಲ್ಲಿ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಬೆಂಗಳೂರಿನ ಅಭಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಮನೋವೈದ್ಯ ಡಾ.ಎ.ಜಗದೀಶ್ ಭಾಗಿಯಾಗಿದ್ದರು. ಏರುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸರ್ಕಾರ ಏನು ಮಾಡಬೇಕು? ಕುಟುಂಬದ ಪಾತ್ರವೇನು? ಎಂಬುದರ ಕುರಿತು ವಿಸ್ತಾರವಾಗಿ ಮಾತನಾಡಿದ್ದು, ಅದರ ವಿವರ ಇಲ್ಲಿದೆ.
ಆತ್ಮಹತ್ಯೆ ವಿಚಾರದಲ್ಲೂ ಅನುಕರಣೆ ಹೆಚ್ಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಆಗಿರುವ ಆತ್ಮಹತ್ಯೆ ವಿಡಿಯೋಗಳನ್ನೇ ನೋಡಿ ಅವರಂತೆ ಸುಯಿಸೈಡ್ ಮಾಡಿಕೊಳ್ಳುವಂಥ ಪ್ರಕರಣಗಳು ಹೆಚ್ಚುತ್ತಿವೆ. ಆತ್ಮಹತ್ಯೆ ಪ್ರಕರಣಗಳ ನಿಯಂತ್ರಣ ದೃಷ್ಟಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ನಿಷೇಧಿಸಿರುವಂತೆ ಆತ್ಮಹತ್ಯೆಯ ವಿಡಿಯೋಗಳನ್ನು ಸಹ ಬ್ಯಾನ್ ಮಾಡಬೇಕು ಎಂದು ಹಿರಿಯ ಮನೋವೈದ್ಯ ಡಾ.ಎ.ಜಗದೀಶ್ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ದೇಶದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ, ಕಾಪಿಕ್ಯಾಟ್ ಮಾದರಿಗೆ ಪೂರಕವಾಗುವ ವಿಡಿಯೋಗಳನ್ನು ಅಪ್​ಲೋಡ್ ಮಾಡುವ ವೆಬ್​ಸೈಟ್, ಮತ್ತಿತರ ಪೋರ್ಟಲ್​ಗಳನ್ನು ನಿಷೇಧಿಸಲಾಗಿದೆ. ಈ ಕ್ರಮ ಕೈಗೊಂಡ ನಂತರ ಅಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದ್ದರಿಂದ ಭಾರತದಲ್ಲೂ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಯುವ ಸಮುದಾಯ ಪ್ರತಿಯೊಂದು ವಿಷಯದಲ್ಲೂ ಸ್ವಂತಿಕೆಯನ್ನು ಕಳೆದುಕೊಂಡಿದ್ದು, ಎಲ್ಲವನ್ನೂ ಸಾಮಾಜಿಕ ಜಾಲತಾಣ ನೋಡಿ ಕಲಿಯುವುದನ್ನು ರೂಢಿ ಮಾಡಿಕೊಂಡಿದೆ. ಆತ್ಮಹತ್ಯೆಯಂತಹ ದುರ್ಘಟನೆಯ ಹಿಂದೆ ಕೂಡ ಕಾಪಿಕ್ಯಾಟ್ ಸಂಸ್ಕೃತಿ ಪ್ರಭಾವ ಬೀರುತ್ತಿರುವುದು ವಿಷಾದಕರ ಸಂಗತಿ. ಹೀಗಾಗಿ ಜಾಲತಾಣಗಳಲ್ಲಿ ಪ್ರಚೋದನೆ ನೀಡುವಂತಹ ಆತ್ಮಹತ್ಯೆ ವಿಡಿಯೋಗಳನ್ನು ಹಾಕುವುದಕ್ಕೆ ನಿಷೇಧ ಹೇರಬೇಕು ಎಂದರು.
ಒತ್ತಡ ಬೇಡ:ಭಾರತದಲ್ಲಿ ವಿದ್ಯೆಯೇ ಎಲ್ಲ್ಕತ ದೊಡ್ಡ ಆಸ್ತಿ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಕ್ಕಿಂತ ಪಾಲಕರ ಪ್ರಭಾವ ಬಳಸಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸೇರಿಸುತ್ತಾರೆ. ವಿದ್ಯಾರ್ಥಿಗಳು ಅಲ್ಲಿನ ನಿರೀಕ್ಷೆಗೆ ತಕ್ಕಷ್ಟು ಸಾಧನೆ ಮಾಡಲು ಸಾಧ್ಯವಾಗದೆ, ಪಾಲಕರ ಮುಂದೆ ಹೇಳಿಕೊಳ್ಳುವುದಕ್ಕೂ ಆಗದೆ ಕೀಳರಿಮೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.
ಆನ್​ಲೈನ್ ಗೇಮ್ ಗೀಳಿನಿಂದ ಖಿನ್ನತೆ:ಪಬ್​ಜಿ ಸೇರಿ ಆನ್​ಲೈನ್ ಗೇಮ್ ಚಟಕ್ಕೆ ಬಿದ್ದಿರುವ ಯುವಕರು ಇವುಗಳ ಪ್ರಚೋದನೆಯಿಂದ ಖಿನ್ನತೆಗೆ ಒಳಗಾಗಿರುವ ಹಲವು ಉದಾಹರಣೆಗಳಿವೆ. ವಿಡಿಯೋ ಗೇಮ್ ಮತ್ತು ಮೊಬೈಲ್ ಹೆಚ್ಚು ಬಳಸುವ ಹದಿಹರೆಯದ ವಯಸ್ಸಿನ ಅಂದರೆ 9, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಖಿನ್ನತೆಯಿಂದ ಆತ್ಮಹತ್ಯೆ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಇವರು ಸದಾ ಒಬ್ಬರೇ ಇರಲು ಬಯಸುತ್ತಾರೆ. ಹಾಗಾಗಿ ಒಂದು ರೂಮ್ ಸೇರಿಕೊಂಡು ಸದಾ ಮೊಬೈಲ್ ಬಳಕೆ ಮಾಡುತ್ತಿರುತ್ತಾರೆ. ರೂಮ್ ಬಾಗಿಲು ಬಡಿದರೆ ಗಲಾಟೆ ಮಾಡುತ್ತಾರೆ. ಒಂದು ವೇಳೆ ಇವರಿಂದ ಮೊಬೈಲ್ ಕಸಿದುಕೊಂಡರೆ ಪ್ರಾಣ ಕಳೆದುಕೊಳ್ಳುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ. ಇದನ್ನು ‘ಸ್ಕ್ರೀನ್ ಟೈಮ್ ಅಡಿಕ್ಷನ್’ ಎನ್ನಲಾಗುತ್ತದೆ. ಇಂತಹವರಿಗೆ ಪಾಲಕರು ತಾಳ್ಮೆಯಿಂದ ಅದರ ದುಷ್ಪರಿಣಾಮದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅದು ಸಾಧ್ಯವಾಗದೆ ಇದ್ದಾಗ ಆಪ್ತ ಸಮಾಲೋಚಕರನ್ನು ಭೇಟಿ ಮಾಡಿಸಿ ಕೌನ್ಸೆಲಿಂಗ್ ಕೊಡಿಸಬೇಕು. ಇದಕ್ಕಾಗಿ ನಿಮಾನ್ಸ್ ನಲ್ಲಿ ಷಟ್ ಕ್ಲಿನಿಕ್ ತೆರೆಯಲಾಗಿದ್ದು, ಇದರ ಉಪಯೋಗ ಪಡೆಯಬಹುದಾಗಿದೆ.
ಆಪ್ತ ಸಲಹೆ, ಸೂಕ್ತ ಮಾಹಿತಿ ಅವಶ್ಯ:ಆತ್ಮಹತ್ಯೆ ಎಂಬುದು ಒಂದು ತುರ್ತು ಸಂದರ್ಭ. ಈ ಬಗ್ಗೆ ತಾತ್ಸಾರ, ಗೇಲಿ ಮಾಡದೆ ಗಂಭೀರವಾಗಿ ತೆಗೆದುಕೊಂಡರೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಭಾರತದ ಆತ್ಮಹತ್ಯೆಯ ಪ್ರಕರಣಗಳು ಶೇ.10 ರಿಂದ ಶೇ.13ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಿಳೆಯರು ಹೆಚ್ಚಾಗಿದ್ದು, ಶೇ.37 ಇದ್ದಾರೆ. ಪುರುಷರ ಆತ್ಮಹತ್ಯೆಯ ಪ್ರಮಾಣ ಶೇ.25 ಇದೆ. ಕರ್ನಾಟಕದಲ್ಲಿ ಒಟ್ಟಾರೆ ಸಾವಿನ ಸಂಖ್ಯೆಯ ಶೇ.19ರಷ್ಟು ಆತ್ಮಹತ್ಯೆಯಿಂದ ಆಗುತ್ತಿದ್ದು, ತಮಿಳುನಾಡು ಮತ್ತು ಕೇರಳದಲ್ಲಿ ಇದಕ್ಕಿಂತ ಹೆಚ್ಚಿದೆ. ದೇಶದಲ್ಲಿ ಸಿಕ್ಕಿಂ ರಾಜ್ಯ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಬಹುದೊಡ್ಡ ಭೌಗೋಳಿಕ ಮತ್ತು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಆತ್ಮಹತ್ಯೆ ಪ್ರಮಾಣ ಕಡಿಮೆ ಇದೆ. ವ್ಯಕ್ತಿಯಲ್ಲಿ ಆಗುತ್ತಿರುವ ಬದಲಾವಣೆ, ವೈರಾಗ್ಯದ ಮಾತುಗಳನ್ನು ಗಮನಿಸಿ ಸಂಬಂಧಪಟ್ಟವರು ಸೂಕ್ತ ಕಾಲದಲ್ಲಿ ತಜ್ಞರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಮತ್ತು ಮಾಹಿತಿಯನ್ನು ನೀಡಿದಲ್ಲಿ ಅಮೂಲ್ಯ ಜೀವಗಳನ್ನು ಆತ್ಮಹತ್ಯೆಯಿಂದ ಉಳಿಸಬಹುದು.
ಶಾಪವಾದ ಮದ್ಯಪಾನ:ಸಾಮಾನ್ಯವಾಗಿ ಯಾವುದೇ ನೋವುಗಳನ್ನು ಅನುಭವಿಸುತ್ತಿರುವವರು, ನೋವು ಮರೆಯುವುದಕ್ಕಾಗಿ ಮದ್ಯಪಾನ ಮಾಡುವುದಾಗಿ ಹೇಳುತ್ತಾರೆ. ಆದರೆ ಮದ್ಯಪಾನ ಮಾಡಿದಾಗ ಆತ್ಮಹತ್ಯೆಗೆ ಪ್ರಚೋದನೆ ದೊರೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಲ್ಕೋಹಾಲ್ ದೇಹದಲ್ಲಿದ್ದಾಗ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ. ಈ ಸಂದರ್ಭದಲ್ಲಿ ಶಾಶ್ವತ ಮತ್ತು ಸೂಕ್ತ ನಿರ್ಧಾರ ಸಾವು ಎಂಬ ತಪ್ಪು ಅಭಿಪ್ರಾಯಕ್ಕೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆಪ್ತ ಸಮಾಲೋಚಕರ ಕೊರತೆ:ಭಾರತದಲ್ಲಿ ಮನೋರೋಗಕ್ಕೆ ಸಂಬಂಧಿಸಿದಂತೆ ಸಲಹೆ ನೀಡಲು ಅನುಭವ ಹೊಂದಿದ ಆಪ್ತ ಸಮಾಲೋಚಕರ ತೀವ್ರವಾದ ಕೊರತೆ ಇದೆ. ಭಾರತದಲ್ಲಿ 20 ಸಾವಿರ ಆಪ್ತ ಸಮಾಲೋಚಕರ ಅಗತ್ಯವಿದೆ. ಆದರೆ ಪ್ರಸ್ತುತ ನೋಂದಾಯಿತ 4 ಸಾವಿರ ಆಪ್ತ ಸಮಾಲೋಚಕರು ಮಾತ್ರವೇ ಇದ್ದಾರೆ. ಉಳಿದಂತೆ ತರಬೇತಿ ಪಡೆದಿರುವ ಸ್ವಯಂಸೇವಕರು ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಹೊರತಾಗಿಯೂ ಭಾರತದಲ್ಲಿ ಆತ್ಮಹತ್ಯೆ ತಡೆಗಟ್ಟಲು ಬೇರೆ ಬೇರೆ ಕ್ಷೇತ್ರಗಳು ನೆರವಾಗುತ್ತಿವೆ. ಅವೆಂದರೆ ಧಾರ್ವಿುಕ ಆಚರಣೆ, ದೇವಾಲಯ, ಜ್ಯೋತಿಷ್ಯ, ಯೋಗಗುರುಗಳು, ಧಾರ್ವಿುಕ ಗುರುಗಳು, ಸಹ ಆಪ್ತ ಸಮಾಲೋಚನೆಯಂತಹ ಇತರ ಅವಕಾಶಗಳು ನಮ್ಮ ಸಮಾಜದಲ್ಲಿವೆ.
ನಿರಂತರ ಸಂಪರ್ಕದ ವ್ಯಕ್ತಿಯದ್ದು ಪ್ರಮುಖ ಪಾತ್ರ:ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಓರ್ವ ವ್ಯಕ್ತಿ ಮಹತ್ವದ ಪಾತ್ರವನ್ನು ವಹಿಸುತ್ತಿರುತ್ತಾನೆ. ಅದು ತಂದೆ, ತಾಯಿ, ಸ್ನೇಹಿತ, ಅಜ್ಜ, ಅಜ್ಜಿ, ಶಿಕ್ಷಕ ಯಾರಾದರೂ ಆಗಿರಬಹದು. ಆತನಿಗೆ ಪ್ರಿಯವೆನಿಸುವ, ವಿಶ್ವಾಸ ಮೂಡಿಸುವ ಆ ವ್ಯಕ್ತಿಯ ಪಾತ್ರ ಬಹಳ ಮುಖ್ಯವಾದದ್ದು. ಯಾವುದೇ ವ್ಯಕ್ತಿಯಲ್ಲಿ ಆತ್ಮಹತ್ಯೆಯ ಮಾತು, ಚಿಂತನೆ ಚಿಗುರೊಡೆದರೆ ಆ ವ್ಯಕ್ತಿ ಆ ಚಿಂತನೆಯನ್ನು ದೂರ ಮಾಡುವಲ್ಲಿ ಪ್ರಯತ್ನಿಸಬೇಕು. ದುರ್ಬಲ ಮನಸ್ಸಿನ, ನಕರಾತ್ಮಕ ಚಿಂತನೆ ನಾಶಗೊಳಿಸುವ ನಿಟ್ಟಿನಲ್ಲಿ ಆತನ ಒಂದು ಸಲಹೆ, ಮಾರ್ಗದರ್ಶನ ಜೀವನದ ದಿಕ್ಕನ್ನೇ ಬದಲಿಸಿ, ಜೀವಹಾನಿ ತಪ್ಪಿಸಿ ಸಾಧನೆಯ ಹಾದಿಯನ್ನು ತೋರಿಸಬಹುದು. ಈ ನಿಟ್ಟಿನಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಮನೆಯಲ್ಲಿ ತಂದೆ-ತಾಯಿ ಬಹಳ ಕಟ್ಟುನಿಟ್ಟಾಗಿ ಮಕ್ಕಳನ್ನು ಬೆಳೆಸುತ್ತಿದ್ದರೆ ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾದವೆಂಬ ಕಾರಣಕ್ಕೆ ಶಿಕ್ಷಿಸಲು ಮುಂದಾದರೆ ಮನೆಯಲ್ಲಿರುವ ಅಜ್ಜಿ-ಅಜ್ಜ ಪ್ರೀತಿಯಿಂದ ಮೊಮ್ಮಕ್ಕಳ ಪರವಾಗಿ ನಿಲ್ಲುತ್ತಾರೆ. ಅದು ಮಕ್ಕಳ ಸ್ಥೈರ್ಯ ಹೆಚ್ಚಾಗಲು ಕಾರಣವಾಗುತ್ತದೆ. ನಕಾರಾತ್ಮಕ ಯೋಚನೆಗಳಿಗೆ ಅವಕಾಶ ನೀಡುವುದಿಲ್ಲ.
ಪರಿಹಾರದ ಹೆಜ್ಜೆಗಳು
ಸರ್ಕಾರದ ನೀತಿ
ಆತ್ಮಹತ್ಯೆ ತಡೆಗಟ್ಟುವಿಕೆ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಅನ್ವಯ ಭಾರತದಲ್ಲಿ 2022ರ ನವೆಂಬರ್ 21ರಂದು ಸರ್ಕಾರ 2020-30ರ ವೇಳೆಗೆ ಆತ್ಮಹತ್ಯೆ ಪ್ರಮಾಣವನ್ನು ಶೇ.12ರಿಂದ 10ಕ್ಕೆ ಇಳಿಸಲು ನೀತಿ ರೂಪಿಸಿದೆ.
ಆತ್ಮಹತ್ಯೆ ತಡೆಗಟ್ಟುವಿಕೆ ಕ್ರಮಗಳು
ಕೌನ್ಸೆಲರ್​ಗಳ ಅಗತ್ಯತೆ
ಇತ್ತೀಚಿನ ವರ್ಷಗಳಲ್ಲಿ ನಾನಾ ಕಾರಣಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಇದನ್ನು ತಡೆಯಲು ಶಾಲೆಗಳಲ್ಲಿ ಆಪ್ತಸಮಾಲೋಚಕರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಇಲ್ಲವೆ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡುವುದು ಸೂಕ್ತ. ಇದಲ್ಲದೆ ಪಾಲಕರು ಶಿಕ್ಷಕರೊಂದಿಗೆ ಉತ್ತಮ ಸಂವಹನ ಹೊಂದಿರಬೇಕು. (ಉದಾಹರಣೆಗೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಗೆ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಆತ 2-3 ತಿಂಗಳಿನಿಂದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿತು. ಈ ವಿಚಾರವನ್ನು ಶಿಕ್ಷಕರು ಮೊದಲೇ ಪಾಲಕರಿಗೆ ತಿಳಿಸಿದ್ದರೆ ಸೂಕ್ತ ಚಿಕಿತ್ಸೆ ಅಥವಾ ಕೌನ್ಸೆಲಿಂಗ್ ಕೊಡಿಸಬಹುದಿತ್ತು.) ಪಾಲಕರು ಓದಿನ ಬಗ್ಗೆ ಮಾತ್ರವಲ್ಲದೆ ಅವರ ವರ್ತನೆ, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆಯೂ ವಿಚಾರಿಸುತ್ತಿರಬೇಕು. ವರ್ತನೆಯಲ್ಲಿ ವ್ಯತ್ಯಾಸಗಳು ಕಂಡು ಬಂದಲ್ಲಿ ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು.
ಫಿನ್ಲೆಂಡ್ ಮಾದರಿ
ಫಿನ್ನಿಷ್ ಇನ್​ಸ್ಟಿಟ್ಯೂಟ್ ಫಾರ್ ಹೆಲ್ತ್ ಆಂಡ್ ವೆಲ್ಪೇರ್​ನಲ್ಲಿನ ಸಂಶೋಧನಾ ಪ್ರಾಧ್ಯಾಪಕ ಟಿಮೊ ಪಾಟೋನೆನ್ ನಡೆಸಿದ ಅಧ್ಯಯನ ವರದಿಯನ್ನು ಗಮನಿಸಿದರೆ ಆತ್ಮಹತ್ಯೆ ಸಾವಿನ ಬಗೆಗೆ ಫಿನ್ಲೆಂಡ್​ನ ಇತಿಹಾಸದಲ್ಲೇ 1990 ಅತ್ಯಂತ ಕರಾಳ ವರ್ಷವಾಗಿತ್ತು. ಕೇವಲ 50 ಲಕ್ಷ ಜನಸಂಖ್ಯೆ ಹೊಂದಿದ್ದ ಫಿನ್ಲೆಂಡ್​ನಲ್ಲಿ ಆ ವರ್ಷ 1,512 ಮಂದಿ ಆತ್ಮಹತ್ಯೆಯಿಂದ ಮೃತಪಟ್ಟಿದ್ದರು. ಇದಕ್ಕೆ ವ್ಯತಿರಿಕ್ತವಾಗಿ 2022ರಲ್ಲಿ ಈ ಸಂಖ್ಯೆ 740ಕ್ಕೆ ಇಳಿಕೆಯಾಗಿತ್ತು. ಈ ಬದಲಾವಣೆಗೆ ಕಾರಣ ಅಲ್ಲಿನ ಸರ್ಕಾರ ಜಾರಿಗೆ ತಂದ ‘ಆತ್ಮಹತ್ಯೆ ತಡೆಗಟ್ಟುವ ರಾಷ್ಟ್ರೀಯ ಯೋಜನೆ’. ಆತ್ಮಹತ್ಯೆ ನಿಯಂತ್ರಣ ಕುರಿತು ಶಿಕ್ಷಣದಿಂದ ಆತ್ಮಹತ್ಯೆ ಪ್ರಮಾಣ ಶೇ.50ಕ್ಕೆ ಇಳಿಕೆಯಾಯಿತು.
ಅದೊಂದು ಪತ್ರ ನೋಡಿ ನನ್ನ ಕೈ-ಕಾಲು ನಡುಗಿತ್ತು! ಫ್ಯಾನ್​ ಕೊಟ್ಟ ಲೆಟರ್​ ಮರೆಯದ ವಿರಾಟ್​ ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
