|ಡಾ. ದತ್ತಾತ್ರೇಯ ಎಲ್. ವೇಲಣಕರ್
ಕಲೆಗಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಅನೇಕ ಮಹನೀಯರನ್ನು ನಮ್ಮ ಭಾರತೀಯ ಸಂಗೀತ ಪರಂಪರೆಯಲ್ಲಿ ಕಾಣಬಹುದು. ಕರ್ನಾಟಕದವರೇ ಆದ, ಧಾರವಾಡ ಮೂಲದ ನಮ್ಮೆಲ್ಲರ ನಡುವೆ ಸಂಗೀತದ ಮೂಲಕ ಅಗಾಧವಾಗಿ ಬೆಳೆದ ಪಂಡಿತ ವಿನಾಯಕ ತೊರವಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವ್ಯಕ್ತಿಯಿಂದ ಶಕ್ತಿಯಾಗಿ, ವ್ಯಷ್ಠಿಯಿಂದ ಸಮಷ್ಠಿಗೆ ಬೆಳೆದು ಧಾರವಾಡದ ಅಪ್ಪಟ ಶಾಸ್ತ್ರೀಯ ಸಂಗೀತದ ಮೆರುಗನ್ನು ದೇಶ ವಿದೇಶಗಳಲ್ಲಿ ಪಸರಿಸಿದ್ದಾರೆ. ಸುಸಂಸ್ಕೃತ ಕುಟುಂಬದಲ್ಲಿ 1948ರ ಸೆ. 4ರಂದು ವಿನಾಯಕರು ಜನಿಸಿದರು. ತಂದೆ ಖ್ಯಾತ ಕೀರ್ತನಕಾರ, ಕೀರ್ತನ ಕೇಸರಿ ಮಲ್ಹಾರರಾವ್ ತೊರವಿ, ತಾಯಿ ಅನಸೂಯಾಬಾಯಿ. ಕುಲದೇವರಾದ ಮುರಗೋಡದ ಚಿದಂಬರ ಮಹಾಸ್ವಾಮಿಗಳ ಉಪಾಸನೆ, ತಂದೆಯ ಕೀರ್ತನೆ, ತಾಯಿಯ ಪ್ರೀತಿಯ ಪಾಲನೆ, ಅಣ್ಣಂದಿರಾದ ಶಿವಣ್ಣ, ಅಮೃತ ಮತ್ತು ತಮ್ಮ ಚಿದಂಬರರ ಉತ್ತೇಜನ ಮತ್ತು ಪೋ›ತ್ಸಾಹ- ಹೀಗೆ ಬಾಲ್ಯದಿಂದಲೂ ಸಂಗೀತದ ವಾತಾವರಣ ಮತ್ತು ಸೆಳೆತ ತೊರವಿಯವರಲ್ಲಿ ಇತ್ತು. ಎಳವೆಯಲ್ಲಿ ತಂದೆಯೊಂದಿಗೆ ಕೀರ್ತನೆಯ ಜತೆಯಲ್ಲಿ ಹಾರ್ವೇನಿಯಂ ಸಾಥಿ ಮತ್ತು ಸಹಗಾಯನದೊಂದಿಗೆ ಪ್ರಾರಂಭವಾದ ಸಂಗೀತದ ಪಯಣ ಮುಂದೆ ಹೆಮ್ಮರವಾಗಿ ಬೆಳೆದು ಈಗ ನನ್ನಂತಹ ಅನೇಕ ಶಿಷ್ಯರಿಗೆ ನೆರಳನ್ನು ಕೊಡುವ ಅಗಾಧ ವಟವೃಕ್ಷದಂತೆ ಆಗಿದೆ ಪಂಡಿತ ತೊರವಿಯವರ ಜೀವನ.
ಹಟ ಮತ್ತು ಸಾಧಿಸುವ ಛಲವಿದ್ದರೆ ಜೀವನದಲ್ಲಿ ಸಕಾಲಕ್ಕೆ ಗುರುವಿನ ಮಾರ್ಗದರ್ಶನ ದೊರೆಯುತ್ತದೆ. ಶಿಷ್ಯರೇ ಗುರುವಿನ ಹುಡುಕಾಟದಲ್ಲಿ ಹೋದುದನ್ನೂ ನಾವು ಕೇಳಿದ್ದೇವೆ. ಆದರೆ ವಿನಾಯಕ ತೊರವಿಯವರ ಜೀವನದಲ್ಲಿ ಇಬ್ಬರು ಮಹಾನ್ ಗುರುಗಳು, ಗ್ವಾಲಿಯರ್ ಘರಾಣೆಯ ಮೇರು ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಮತ್ತು ಭಾರತ ರತ್ನ ಪಂಡಿತ ಭೀಮಸೇನ ಜೋಶಿ ‘‘ಬಾ ನಿನಗೆ ಸಂಗೀತ ನಾನು ಕಲಿಸುತ್ತೇನೆ’ ಎಂದು ಆಶೀರ್ವದಿಸಿ ಕಲಿಸಿದ್ದನ್ನು ನಾವು ಕಾಣಬಹುದು.

ಸಂಗೀತದಿಂದ ಹೊಟ್ಟೆ ಹೊರೆದುಕೊಳ್ಳಬೇಡ ಎಂಬ ಗುರುವಾಕ್ಯದಂತೆ ಕೆನರಾ ಬ್ಯಾಂಕ್​ನಲ್ಲಿ ನೌಕರಿಗೆ ಸೇರಿ, ಬೆಂಗಳೂರಿಗೆ ವರ್ಗವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಚಾರ ಬಹಳ ಕಡಿಮೆ ಇದ್ದ ಕಾಲಘಟ್ಟದಲ್ಲಿ ಬಂದು ಭಾರತದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನಕ್ಷೆಯಲ್ಲಿ ಬೆಂಗಳೂರಿನ ಹೆಸರನ್ನು ಬರುವಂತೆ ಮಾಡಿದ ಮಹನೀಯರಲ್ಲಿ ವಿನಾಯಕ ತೊರವಿಯವರೂ ಒಬ್ಬರು.
ಒಬ್ಬ ಕಲಾವಿದ ಅನೇಕ ಆಯಾಮಗಳಲ್ಲಿ ಸಂಗೀತದ ಸೇವೆ ಸಲ್ಲಿಸುತ್ತಾನೆ. ಪ್ರದರ್ಶನ, ಆಯೋಜನ, ಪ್ರಶಿಕ್ಷಣ ಮತ್ತು ಪ್ರಕಟಣ. ಈ ನಾಲ್ಕು ಆಯಾಮಗಳಲ್ಲಿ ತೊರವಿಯವರ ಸಾಧನೆ ಮತ್ತು ಕೊಡುಗೆ ಅಪಾರ. ತಮ್ಮ ಸಂಗೀತ ಕಚೇರಿಗಳಿಂದ ದೇಶ-ವಿದೇಶಗಳಲ್ಲಿ ಸಹಸ್ರಾವಧಿ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದಾರೆ. ಕೇರಳದ ತಿರುವನಂತಪುರದಿಂದ ಪಂಜಾಬ್​ನ ಚಂಡಿಗಢವರೆಗೂ, ಗುಜರಾತಿನ ಅಹಮದಾಬಾದ್​ನಿಂದ ಅಸ್ಸಾಂನ ಸಿಲ್ಚರ್​ವರೆಗೂ ಎಲ್ಲೆಡೆ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಮೆರಿಕಾ, ಯೂರೋಪ್, ದುಬೈ, ಆಸ್ಟ್ರೇಲಿಯಾ ಹೀಗೆ ವಿದೇಶಗಳಲ್ಲಿಯೂ ಹಾಡಿ ಧಾರವಾಡದ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ದ ಮಹನೀಯರಲ್ಲಿ ಇವರೂ ಒಬ್ಬರು. 1978-79ರಲ್ಲಿ ಅವರು ಬೆಂಗಳೂರಿಗೆ ಬಂದಾಗ ಹಿಂದೂಸ್ತಾನಿ ಶ್ರೋತೃ ವರ್ಗ ಮತ್ತು ಆಯೋಜಕರು ಬೆರಳೆಣಿಕೆಯಷ್ಟಿದ್ದರು. ಗಣಪತಿ ಹಬ್ಬ, ದಸರಾ, ಯುಗಾದಿ ಮುಂತಾದ ಸಂದರ್ಭಗಳಲ್ಲಿ ‘‘ನಾನು ಹಾಡುತ್ತೇನೆ ಕೇಳಿ’ ಎಂದು ಸ್ವಯಂ ಗಾಯನ ಕಾರ್ಯಕ್ರಮಗಳನ್ನು ನಡೆಸಿ ನಿಧಾನವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರುಚಿ ಹತ್ತಿಸಿದರು. ಗುರುಗಳಾದ ಗುರುರಾವ್ ದೇಶಪಾಂಡೆಯವರು 1983ರಲ್ಲಿ ಅಕಾಲಿಕವಾಗಿ ನಿಧನರಾದರು. ‘ಗುರುಗಳು ನಮ್ಮೊಡನೆ ಇಲ್ಲದಿದ್ದರೂ ಅವರ ಸಂಗೀತದ ಪ್ರಸರಣವಾಗಬೇಕು’ ಎಂಬ ಮಹತ್ ಉದ್ದೇಶದಿಂದ ತೊರವಿಯವರು ‘ಗುರುರಾವ್ ದೇಶಪಾಂಡೆ ಸಂಗೀತ ಸಭಾ’ ಪ್ರಾರಂಭಿಸಿದರು. ಬೆಂಗಳೂರಿನ ಜನರಿಗೆ ಅತಿ ವಿರಳವೂ ಅಪ್ರಚಲಿತವೂ ಆದ ರಾತ್ರಿಯಿಡೀ ಸಂಗೀತದ ಪರಿಚಯ ಮಾಡಿಸಿದರು. ಕಳೆದ 39 ವರ್ಷಗಳಿಂದ ಅವ್ಯಾಹತವಾಗಿ ಕಾರ್ಯಕ್ರಮಗಳನ್ನು ನಡೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. 80ರ ದಶಕದಿಂದಲೂ ತೊರವಿಯವರು ಸಂಗೀತಧಾರೆಯನ್ನು ಶಿಷ್ಯರಿಗೆ ಉಣಬಡಿಸಿ ಗುರುರಾವ್- ಭೀಮಸೇನ ಪರಂಪರೆಯ ದೊಡ್ಡ ಪಡೆಯನ್ನೇ ಸೃಷ್ಟಿಸಿದ್ದಾರೆ. ಶಿಷ್ಯರು ವಿನಾಯಕ ತೊರವಿಯವರ ಪಥದಲ್ಲಿ ಸಾಗುತ್ತಾ, ಅನೇಕ ಸಂಗೀತ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಆ ದೃಷ್ಟಿಯಲ್ಲಿ ನಮ್ಮ ಗುರುಗಳಾದ ಪಂ. ತೊರವಿಯವರು ಅಜ್ಜನ ಸ್ಥಾನದಲ್ಲಿದ್ದಾರೆ. ಅನೇಕ ಶಿಷ್ಯರ ಶಿಷ್ಯರು- ಹೀಗೆ ತೊರವಿಯವರ ಘರಾಣೆಯು ಬಹಳ ವಿಸ್ತಾರವಾಗಿದೆ. ‘ಗುರುದಾಸ’ ಎಂಬ ಅಂಕಿತದಿಂದ ನೂರಾರು ಶಾಸ್ತ್ರೀಯ ಬಂದೀಷ್​ಗಳನ್ನು ರಚಿಸಿದ್ದಾರೆ. ಇವರ ಕೃತಿಗಳ ಪುಸ್ತಕವನ್ನು ಷಡ್ಜ ಕಲಾ ಕೇಂದ್ರದಿಂದ ‘ಕಹತ ಗುರುದಾಸ’ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಿದ್ದಾರೆ.
ಅನೇಕ ರಾಷ್ಟ್ರೀಯ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಿರಾಣಾ ಘರಾಣಾ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ರಾಷ್ಟ್ರೀಯ ಚೌಡಯ್ಯ ಪ್ರಶಸ್ತಿ ಮತ್ತು ಮೈಸೂರಿನ ಡಾ| ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಇತ್ಯಾದಿ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಅನೇಕ ಸಂಗೀತ ವಿದ್ವಾಂಸರು ತೊರವಿಯವರ ಗಾಯನವನ್ನು ಕೇಳಿ ಹಾರೈಸಿದ್ದಾರೆ. ಪಂ. ರಾಮಾಶ್ರಯ ಝಾ ಅವರು ತೊರವಿಯವರನ್ನು ‘ಸುರ್ ಲಯ್ ಕಾ ಬಾದಶಾಹ್’ ಎಂದು ಕರೆದುದು ಇವರ ವಿದ್ವತ್ ಪ್ರಭೆಗೆ ಕಳಶವಿಟ್ಟಂತೆ. ವಿನಾಯಕ ತೊರವಿಯವರ ಸಂಗೀತ, ಪಂಡಿತರಿಂದ ಪಾಮರರವರೆಗೆ, ವಿದ್ವಾಂಸರಿಂದ ಸಾಮಾನ್ಯರವರೆಗೆ ಎಲ್ಲರನ್ನೂ ಮಂತ್ರಮುಗ್ಧವಾಗಿಸಬಲ್ಲದು. ಗುರೂಜಿ ಪಂ. ವಿನಾಯಕ ತೊರವಿಯವರಿಗೆ ಚಿದಂಬರ ಮಹಾಸ್ವಾಮಿಗಳು, ಗುರುದ್ವಯರ ಕೃಪಾಶೀರ್ವಾದ ದೊರಕಲಿ ಎಂದು ಹಾರೈಸೋಣ.
ಇಂದು ಸನ್ಮಾನ:ಸರಳ, ಸಜ್ಜನಿಕೆಯ ಪಂ. ವಿನಾಯಕ ತೊರವಿಯವರು ತಮ್ಮ ಎಪ್ಪತೆôದು ವರ್ಷಗಳನ್ನು ಸಾರ್ಥಕತೆಯಿಂದ ಕಳೆದಿದ್ದಾರೆ. ಇವರ ಸಂಗೀತ ಜೀವನಕ್ಕೆ ಧರ್ಮಪತ್ನಿ ಪ್ರಮೀಳಾ ಹೆಗಲು ಕೊಟ್ಟು ಕುಟುಂಬವನ್ನು ಸಮರ್ಥವಾಗಿ ನಡೆಸಿ ಶಿಷ್ಯರನ್ನು ಮಕ್ಕಳಂತೆ ಕಂಡ ಮಹಾತಾಯಿ. ತೊರವಿಯವರ ಅಭಿಮಾನಿಗಳು ಮತ್ತು ಶಿಷ್ಯರೆಲ್ಲಾ ಸೇರಿ ಸೆ. 1ರಂದು ಸಂಜೆ 5ಕ್ಕೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾರೆ. ಶಿಕ್ಷಣ ತಜ್ಞ, ವಿದ್ವಾಂಸ ಗುರುರಾಜ ಕರ್ಜಗಿ ಸನ್ಮಾನ ನೆರವೇರಿಸಲಿದ್ದು, ತೊರವಿಯವರ ಬಗ್ಗೆ ಪಂ. ರವೀಂದ್ರ ಯಾವಗಲ್, ಪಂ. ರವೀಂದ್ರ ಕಾಟೋಟಿ, ಪಂ. ಜಿ.ಎಸ್. ಹೆಗಡೆ ಮಾತನಾಡಲಿದ್ದಾರೆ. ಅರ್ಚನಾ ಶೆಣೈ, ಡಾ. ಅಶ್ವಿನಿ ಭಿಡೆ ದೇಶಪಾಂಡೆ ಅವರ ಗಾಯನ ಇರಲಿದೆ. ಯೋಗೀಶ್ ಭಟ್, ವ್ಯಾಸಮೂರ್ತಿ ಕಟ್ಟಿ, ತೇಜಸ್ ಕಾಟೋಟಿ ಸಾಥ್ ನೀಡಲಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ; ಅ.5ಕ್ಕೆ ಮತದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + sixteen =
Remember me
