ಬೆಂಗಳೂರು:ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಿ ನ.1ಕ್ಕೆ 50 ವರ್ಷಗಳು ತುಂಬಲಿವೆ. ಈ ನಿಮಿತ್ತ ವರ್ಷಪೂರ್ತಿ ಸುವರ್ಣ ಸಂಭ್ರಮೋತ್ಸವಕ್ಕೆ ಸರ್ಕಾರ ಸಜ್ಜಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ.
ನಾಲ್ಕು ಕಂದಾಯ ವಿಭಾಗಗಳಲ್ಲಿ ಸಭೆ, ವಿವಿಧ ಕ್ಷೇತ್ರಗಳ ಗಣ್ಯರಿಂದ ಅಭಿಪ್ರಾಯ ಸಂಗ್ರಹ, 1,250 ಸಲಹೆಗಳ ಸ್ವೀಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ರ್ಚಚಿಸಿದ ನಂತರ ಕಾರ್ಯಚಟುವಟಿಕೆ ನೀಲಿನಕ್ಷೆ ಅಂತಿಮಗೊಳಿಸಲಾಗಿದೆ ಎಂದರು.
ಡಿ. ದೇವರಾಜ ಅರಸು ಸಿಎಂ ಆಗಿದ್ದ ಸಂದರ್ಭದಲ್ಲಿ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಹಂಪಿಯಿಂದ ಆರಂಭಿಸಿ ಗದಗವರೆಗೆ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ರೀತಿ ಪುನರಾವರ್ತನೆಯಾಗಲಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ನಾಡಿನ ಜನ-ಮನ ತಲುಪಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸುವರ್ಣ ಸಂಭ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುತ್ತದೆ.
ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಡಿಸಿ, ಜಿ.ಪಂ. ಸಿಇಒಗಳ ಮುಖೇನ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ಐಟಿ-ಬಿಟಿ ಕಂಪನಿಗಳು, ವಸತಿ ಸಮುಚ್ಚಯಗಳ ಸಂಘಗಳೊಂದಿಗೆ ಸಮಾಲೋಚಿಸಿ ಸುವರ್ಣ ಸಂಭ್ರಮದ ಮಹತ್ವ ತಿಳಿಸಿದ್ದು, ಬಹುತೇಕ ಕಂಪನಿ, ಸಂಘ-ಸಂಸ್ಥೆಗಳು ಅರ್ಥಪೂರ್ಣ ಆಚರಣೆಗೆ ಉತ್ಸಾಹ ವ್ಯಕ್ತಪಡಿಸಿವೆ ಎಂದರು.
ಗಡಿನಾಡ ಶಾಲೆಗಳ ತಾಪತ್ರಯ:ನಾಡಿನ ಭಾಷೆ ಉಳಿಸಿ ಬೆಳೆಸುವುದಕ್ಕೆ ಸರ್ಕಾರದ ಜತೆಗೆ ನಾಡಿನ ಜನರು ಕೈಜೋಡಿಸಬೇಕು. ಬೇರೆ ಭಾಷೆ ಬಳಕೆ ವಿಷಯದಲ್ಲಿ ಕನ್ನಡಿಗರ ಔದಾರ್ಯ ಸ್ವಲ್ಪ ಹೆಚ್ಚೇ ಇದೆ. ಗಡಿನಾಡ ಶಾಲೆಗಳು ಅನುದಾನ, ಪಠ್ಯಪುಸ್ತಕ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆದ್ಯತೆ ಮೇಲೆ ಬಗೆಹರಿಸಲಾಗುವುದು. ಗಡಿನಾಡ ಕನ್ನಡಿಗರ ಕುಂದು- ಕೊರತೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಶಿವರಾಜ ತಂಗಡಿಗೆ ಹೇಳಿದರು.
ನಾಡಧ್ವಜಕ್ಕೆ ಒಪ್ಪಿಗೆ ಸಿಕ್ಕಿಲ್ಲ:ನಾಡಧ್ವಜಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಐದು ವರ್ಷಗಳು ಕಳೆದಿದ್ದು, ಇದುವರೆಗೆ ಒಪ್ಪಿಗೆ ನೀಡಿಲ್ಲ. ಸದ್ಯಕ್ಕೆ ಕೆಂಪು, ಹಳದಿ ಬಣ್ಣದ ಬಾವುಟ ಬಳಸುತ್ತಿದ್ದರೂ ಅಧಿಕೃತ ಎಂದು ಪರಿಗಣಿಸಲು ಬರುವುದಿಲ್ಲ ಎಮದು ತಂಗಡಗಿ ತಿಳಿಸಿದರು. ಬೆಂಗಳೂರಿನಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ಹಾಗೂ ಮೈಸೂರಿನಲ್ಲಿ ದೇವರಾಜ ಅರಸು ಪ್ರತಿಮೆ ಅನಾವರಣ ಸುವರ್ಣ ಸಂಭ್ರಮ ಸಮಾರೋಪದ ದಿನ ನೆರವೇರಲಿದೆ. ವಿಧಾನಸೌಧ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಒಲವು ತೋರಿದ್ದು, ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಸುವರ್ಣ ಸಂಭ್ರಮ ನಿಮಿತ್ತದ ಕಾರ್ಯಚಟುವಟಿಕೆಗಳಿಗೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಪ್ರಾಧಿಕಾರಗಳು, ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರ ಮತ್ತು ಸದಸ್ಯರ ನೇಮಕ ಪೂರ್ವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್ ಅಂತ್ಯದೊಳಗೆ ನೇಮಕವಾಗಲಿದೆ ಎಂದು ಶಿವರಾಜ್ ತಿಳಿಸಿದರು.
ಸುವರ್ಣ ಸಡಗರ:ನ.1ರಂದು ಹಳ್ಳಿಯಿಂದ ರಾಜಧಾನಿವರೆಗೆ ರಾಷ್ಟ್ರ ಧ್ವಜಾರೋಹಣ, ರಾಷ್ಟ್ರ ಮತ್ತು ನಾಡಗೀತೆ ಜತೆಗೆ ಕುವೆಂಪು, ಹುಯಿಲುಗೋಳ ನಾರಾಯಣ ರಾವ್, ದ.ರಾ. ಬೇಂದ್ರೆ, ಸಿದ್ದಯ್ಯ ಪುರಾಣಿಕ್ ಮತ್ತು ಚನ್ನವೀರ ಕಣವಿ ರಚಿತ ಗೀತೆಗಳ ಗಾಯನ ನಡೆಯಲಿದೆ. ನಾಡಿನ ಎಲ್ಲರ ಮನೆ ಮುಂದೆ ರಂಗೋಲಿ, ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಆಯಾ ಊರಿನ ಮೈದಾನದಲ್ಲಿ ಕೆಂಪು, ಹಳದಿ ಬಣ್ಣದ ಗಾಳಿಪಟ ಹಾರಿಸಲು ಜನರಿಗೆ ಮನವಿ ಮಾಡಿಕೊಳ್ಳಲಾಗಿದೆ. ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಎಲ್ಲ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲಾಗುವುದು. ವರ್ಷಪೂರ್ತಿ ರಥಯಾತ್ರೆ ನಡೆಯಲಿದೆ. ಆಯಾ ಜಿಲ್ಲಾ ಕೇಂದ್ರಕ್ಕೆ ರಥ ತಲುಪಿದಾಗ ಜಿಲ್ಲೆಯಾದ್ಯಂತ ಸುವರ್ಣ ಮಹೋತ್ಸವವನ್ನು ಸಡಗರದಿಂದ ಆಚರಿಸಲು ತಿಳಿಸಲಾಗಿದೆ ಎಂದು ಶಿವರಾಜ್ ತಂಗಡಗಿ ವಿವರಿಸಿದರು.
ಹಂಪಿಯಿಂದ ರಥಯಾತ್ರೆ:ಹಂಪಿಯ ಎದುರು ಬಸವಣ್ಣ ವೇದಿಕೆ ಮುಂಬದಿ ರಥಯಾತ್ರೆಗೆ ನ.2ರ ಸಂಜೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗಂಗಾ ಜಲಾಭಿಷೇಕ, ಭುವನೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ರಥಬೀದಿಯಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಲಿದ್ದು, ಹೆಲಿಕಾಪ್ಟರ್​ನಿಂದ ಪುಷ್ಪವೃಷ್ಟಿಯಾಗಲಿದೆ. ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೆಎಂಎಫ್​ನವರು ‘ಕರ್ನಾಟಕ ಪಾಕ’ ಹೊಸ ಸಿಹಿ ತಿನಿಸು ಬಿಡುಗಡೆ ಮಾಡಲಿದ್ದಾರೆ.
ಇದೊಂದಿದ್ರೆ ಸಾಕು, ಬ್ಯಾಂಕ್​ ಖಾತೆಯೇ ಬೇಕಾಗಿಲ್ಲ: ಹಣ ಪಾವತಿ-ಸ್ವೀಕೃತಿ ಎಲ್ಲವೂ ಬ್ಯಾಂಕ್ ಅಕೌಂಟ್ ಇಲ್ಲದೆಯೂ ಸಾಧ್ಯ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 5 =
Remember me
