| ಸ್ವಾಮಿ ಜಪಾನಂದ
ಶ್ರೀಮತ್ ಸ್ವಾಮಿ ಹರ್ಷಾನಂದಜೀ ಅವರು ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಪಾದಾರವಿಂದಗಳಲ್ಲಿ ಲೀನರಾದರು ಎಂಬ ಸುದ್ದಿಯು – ಪರಮಪೂಜ್ಯರ ವಾತ್ಸಲ್ಯ ಹಾಗೂ ಆಧ್ಯಾತ್ಮಿಕ ತರಬೇತಿಯ ನೆರಳಿನಲ್ಲಿ ಜೀವನವನ್ನು ಅರಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನನ್ನಂತಹ ಅನೇಕ ಸಂನ್ಯಾಸಿಗಳಿಗೆ ಖಂಡಿತವಾಗಿ ಆಘಾತವೇ ಸರಿ.
1963-64ರಲ್ಲಿ ಮೈಸೂರು ರಾಮಕೃಷ್ಣ ಆಶ್ರಮದ ಪವಿತ್ರ ವಾತಾವರಣದಲ್ಲಿ ಸ್ವಾಮೀಜಿಯನ್ನು ಕಂಡು ನಮಸ್ಕರಿಸುವಾಗ ಈ ಮಹಾನ್ ಆಧ್ಯಾತ್ಮಿಕ ಪುರುಷ ನನ್ನ ಜೀವನವನ್ನೇ ಪರಿವರ್ತಿಸುತ್ತಾರೆ ಎಂಬುದನ್ನು ಕನಸಿನಲ್ಲಿಯೂ ನೆನೆಸಿರಲಿಲ್ಲ. ಆರು ವರ್ಷದ ಪುಟ್ಟ ಬಾಲಕನಾದ ನನ್ನನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ, ಅಂದಿನ ಶ್ರೀ ರಾಮಕೃಷ್ಣ ತರುಣ ಸಂಘದ ಮತ್ತೊಂದು ಘಟಕವಾದ ಬಾಲಕ ಸಂಘದಲ್ಲಿ ಅವಕಾಶ ನೀಡಿದರು. ಅಂದಿನಿಂದ ನನಗೆ ಭಗವಾನ್ ಶ್ರೀರಾಮಕೃಷ್ಣರೇ ಕಳುಹಿಸಿದ ಶಿಕ್ಷಾಗುರುವಾಗಿ ಸ್ವಾಮೀಜಿಯವರು ಜವಾಬ್ದಾರಿ ತೆಗೆದುಕೊಂಡರು ಎಂದರೆ ತಪ್ಪಾಗಲಾರದು. ಅಂದಿನ ದಿನಗಳಲ್ಲಿ ಅವರು ನಮ್ಮಂತಹ ಬಾಲಕರ ಕಂಠದಿಂದ ಓಂಕಾರವನ್ನು ಉಚ್ಚರಿಸುವಂತೆ ಮಾಡಲು ಅದೆಷ್ಟು ಶ್ರಮಿಸಿದರು ಎಂಬುದನ್ನು ವಿವರಿಸಲಾಗದು.
ಪ್ರತೀ ರಜಾ ದಿನಗಳಲ್ಲಿ ಹಾಗೂ ಭಾನುವಾರಗಳಲ್ಲಿ ಆಶ್ರಮಕ್ಕೆ ಹೋಗುತ್ತಿದ್ದ ಸಂದರ್ಭಗಳವು. 1964ರಲ್ಲಿ ಭಗವದ್ಗೀತಾ ಪಠಣ ಸ್ಪರ್ಧೆಯಲ್ಲಿ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಅಂದು ಆರಂಭವಾದ ಆ ಶಿಕ್ಷಣ ಇಂದಿಗೂ ಮುಂದುವರಿದಿತ್ತು. ಹಾಗೆಂದಾಕ್ಷಣಕ್ಕೆ ಅವರು ಸದಾ ಪ್ರೀತಿ ವಾತ್ಸಲ್ಯದಿಂದಲೇ ತಿದ್ದುತ್ತಿರಲಿಲ್ಲ, ನಿಜವಾದ ಆಚಾರ್ಯರಾಗಿ ಅನೇಕ ಬಾರಿ ಶಿಕ್ಷೆಯನ್ನು ನೀಡಿದ್ದೂ ಉಂಟು. ಆದರೆ, ಅವರ ಹೃದಯ ಅತ್ಯಂತ ಮೃದುವಾದುದು. ಶಿಕ್ಷೆಯ ನಂತರ ಸಿಹಿತಿಂಡಿಗಳನ್ನು ನೀಡಿ, ‘ನಿನ್ನ ಜೀವನಕ್ಕೆ ದಾರಿಯನ್ನು ತೋರುತ್ತಿದ್ದೇನೆಯೇ ವಿನಾ ಶಿಕ್ಷೆಯೇ ಮುಖ್ಯವಲ್ಲ’ ಎಂದು ತಿದ್ದಿ ಹೇಳುತ್ತಿದ್ದ ಮಾತೃಹೃದಯಿ.
ಸ್ವಾಮೀಜಿಯವರು ಮಹಾನ್ ವಾಗ್ಮಿ. ಜೊತೆಗೆ ಮಹಾನ್ ವಿದ್ವಾಂಸರು. ಆರಂಭದಿಂದಲೇ ಅಂದರೆ ಬ್ರಹ್ಮಚರ್ಯ ದೀಕ್ಷಾ ಸಂದರ್ಭದಿಂದಲೂ ಗ್ರಂಥಗಳನ್ನು ರಚಿಸಿದವರು. ಆಧುನಿಕರಿಗೆ ಭಾರತೀಯ ಸಂಸ್ಕೃತಿ, ಪರಂಪರೆ, ಸನಾತನ ಧರ್ಮದ ಪರಿಚಯ ಅತ್ಯಂತ ಸಮರ್ಪಕವಾಗಿ ಆಗುವಂತೆ ರಚಿಸಿದ ಗ್ರಂಥಗಳು ಅನೇಕಾನೇಕ. ಈ ಗ್ರಂಥಗಳಲ್ಲಿ ಬಹು ಮುಖ್ಯವಾಗಿರುವಂಥದ್ದು ‘ಎ ಕನ್ಸೆ ೖಸ್ ಎನ್​ಸೈಕ್ಲೋಪಿಡಿಯಾ ಆಫ್ ಹಿಂದುಯಿಸಂ’ ಸಂಪುಟಗಳು.
ಆಮೂಲಾಗ್ರ ಅಧ್ಯಯನ ಹಾಗೂ ಚಿಂತನೆ, ಗ್ರಂಥಗಳ ರಚನೆ, ಸಂರಕ್ಷಣೆ, ಅಮೂಲ್ಯ ಹಸ್ತಪ್ರತಿಗಳ ಸಂರಕ್ಷಣೆ – ಇವುಗಳ ಮೂಲಕ ಸನಾತನಧರ್ಮದ ಆಧ್ಯಾತ್ಮಿಕ ಸೆಲೆಗಳನ್ನು ನಾನಾ ಭಾಷೆಗಳ ಮೂಲಕ ಜಗತ್ತಿಗೆ ಪರಿಚಯಿಸಿದರು. ಇದರೊಂದಿಗೆ ಶ್ರೀ ರಾಮಕೃಷ್ಣ ಪರಮಹಂಸ, ಮಹಾಮಾತೆ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಜೀವನ ಸಿದ್ಧಾಂತಗಳನ್ನು ಆಧುನಿಕತೆಯ ಹಿನ್ನೆಲೆಯಲ್ಲಿ ಪರಿಚಯಿಸಿದರು. ಈ ದಿವ್ಯತ್ರಯರ ಕುರಿತು ಅನೇಕಾನೇಕ ಸ್ತೋತ್ರಗಳನ್ನು, ಸುಪ್ರಭಾತಗಳನ್ನು ರಚಿಸಿದ್ದರು.
ಹಿಂದೂಧರ್ಮದ ಉಳಿವಿಗಾಗಿ ಹಾಗೂ ರಕ್ಷಣೆಗಾಗಿ ತನ್ನನ್ನೇ ಸಮರ್ಪಿಸಿಕೊಂಡ ಮಹಾನ್ ಸಾಧು ಹರ್ಷಾನಂದಜೀ ಎಂದರೆ ತಪ್ಪಾಗಲಾರದು. ಅವರ ಅದ್ಭುತ ಉಪನ್ಯಾಸ ಮಾಲಿಕೆಗಳು ಹಾಗೂ ದಿವ್ಯತ್ರಯರ ವಿಚಾರಧಾರೆಗಳ ಭಾಷಣಗಳು, ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರ, ಪಾತಂಜಲ ಯೋಗಸೂತ್ರ, ನಾರದ ಭಕ್ತಿಸೂತ್ರ, ಶಾಂಡಿಲ್ಯ ಭಕ್ತಿಸೂತ್ರ ಮುಂತಾದ ಮಹಾನ್ ಗ್ರಂಥಗಳ ಬಗೆಗಿನ ನುಡಿಮಾಲಿಕೆಗಳೆಲ್ಲ ಸನಾತನಧರ್ಮದ ಬಾನಿನಲ್ಲಿ ಧ್ರುವತಾರೆಯಂತೆ ರಾರಾಜಿಸುತ್ತಲೇ ಇರುತ್ತವೆ.
ಉತ್ತರಾದಿ ಹಾಗೂ ದಕ್ಷಿಣಾದಿ ಸಂಗೀತದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ಕೆಲವೇ ಸಂನ್ಯಾಸಿಗಳಲ್ಲಿ ಹರ್ಷಾನಂದಜೀ ಎತ್ತರದ ಸ್ಥಾನ ಪಡೆದಿದ್ದರು.1974ರಲ್ಲಿ ಅವರು ಉತ್ತರಾದಿ ಸಂಗೀತದಲ್ಲಿ ನೈಪುಣ್ಯ ಪಡೆಯುತ್ತಿದ್ದ ಸಂದರ್ಭದಲ್ಲಿ ನಾನು ಅವರ ಸನಿಹದಲ್ಲಿಯೇ ಸಾಧನಾಜೀವನವನ್ನು ಆರಂಭಿಸಿದ್ದೆ. ಆಗ ಅವರು ಮರಾಠಿ ಅಭಂಗಗಳನ್ನು ನಿರರ್ಗಳವಾಗಿ, ಸುಶ್ರಾವ್ಯವಾಗಿ ಹಾಡಿ ನೆರೆದ ಭಕ್ತರೂ ಪಾಂಡುರಂಗ ವಿಠಲನ ಪಾದಾರವಿಂದಗಳನ್ನು ನೆನೆಯುವಂತೆ ಮಾಡುತ್ತಿದ್ದರು.
ಮಗುವಿನಂತೆ ಕಪಟತನವಿಲ್ಲದೆ ತನ್ನ ಅನಿಸಿಕೆಗಳನ್ನು ಸರಳವಾಗಿ ವ್ಯಕ್ತಪಡಿಸುತ್ತಿದ್ದ ವಾತ್ಸಲ್ಯಮೂರ್ತಿ, ಪ್ರಾಪಂಚಿಕದ ಲಾಲಸೆ, ಆಡಂಬರಗಳಿಗೆ ಒಳಗಾಗದ ಈ ಮಹಾನ್ ಚೇತನವು ಮರ್ತ್ಯಲೋಕದ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಮುಗಿಸಿ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಪಾದಾರವಿಂದಗಳಲ್ಲಿ ಲೀನವಾಯಿತು. ಜ್ಞಾನ, ವೈರಾಗ್ಯ ಹಾಗೂ ಸಾಧುಜೀವನದ ಸಾಕಾರ ಮೂರ್ತಿಯಾಗಿದ್ದ ಅವರ ಅಗಲಿಕೆಯಿಂದ ಭಾರತೀಯ ಸಾಧುಸಮಾಜವು ಶ್ರೀರಾಮಕೃಷ್ಣ ಪರಂಪರೆಯ ಹಿರಿಯ ಕೊಂಡಿಯೊಂದನ್ನು ಕಳೆದುಕೊಂಡಂತಾಗಿದೆ. ಅವರ ಜೀವನಮಾರ್ಗ ನೂತನ ಪೀಳಿಗೆಗೆ ಮಹಾನ್ ಆದರ್ಶವಾಗಿದೆ.
(ಲೇಖಕರು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರು)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 2 =
Remember me
