ಬೆಂಗಳೂರು:ಅತ್ಯಂತ ದಕ್ಷತೆ ಹಾಗೂ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣ ನೀಡಿ ಅವಧಿಗೂ ಮುನ್ನವೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಬಾರದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಬಿಜೆಪಿ ಹೈಕಮಾಂಡ್ ಅನ್ನು ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಬಿಎಸ್​ವೈ ಕೇವಲ ಲಿಂಗಾಯತ ಸಮುದಾಯದ ನಾಯಕರಾಗದೆ ಸರ್ವ ಜನಾಂಗದ ಪ್ರೀತಿ- ವಿಶ್ವಾಸ ಗಳಿಸಿದ್ದಾರೆ. ಸರ್ಕಾರ ರಚನೆ ಸಂದರ್ಭ ಅಪಕೀರ್ತಿಗೆ ಒಳಗಾಗಿದ್ದರೂ ಉತ್ತಮ ಆಡಳಿತ ನೀಡಿದ್ದಾರೆ. ವಯಸ್ಸು ಮೀರಿದೆ ಎಂಬ ಕಾರಣಕ್ಕಾಗಿ ಬಿಜೆಪಿ ವರಿಷ್ಠರು ಇವರನ್ನು ಕೆಳಗೆ ಇಳಿಸುತ್ತಿರುವುದು ಸರಿಯಲ್ಲ. ಸದ್ಯ ಬಿಎಸ್​ವೈಗೆ ಸರಿಸಾಟಿಯಾಗಬಲ್ಲ ನಾಯಕ ಬೇರ್ಯಾರೂ ಇಲ್ಲ ಎಂದರು.
ರಾಜ್ಯದಲ್ಲಿ ಕರೊನಾ 3ನೇ ಅಲೆ ಬರುವ ಆತಂಕವಿದೆ. ಈಗ ನೆರೆ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭ ಬದಲಾವಣೆ ಅವಶ್ಯಕತೆ ಏನಿದೆ? ಇತರ ಸಮುದಾಯದ ಮಠಾಧೀಶರು ಬಿಎಸ್​ವೈಗೆ ಬೆಂಬಲ ಕೊಟ್ಟಿದ್ದಾರೆ. ಜಾತಿ, ಮತ ಎಲ್ಲವನ್ನೂ ಮೀರಿದ ನಾಯಕರಾಗಿರುವ ಇವರನ್ನು ಸಿಎಂ ಆಗಿ ಮುಂದುವರಿಸಬೇಕು. ಬಿಜೆಪಿ ವರಿಷ್ಠರು ಮಠಾಧೀಶರ ಮಾತಿಗೆ ಗೌರವ ಹಾಗೂ ಮನ್ನಣೆ ನೀಡಬೇಕು. ವಯಸ್ಸಿನ ಹಾಗೂ ಪಕ್ಷದ ವಿಚಾರವನ್ನೂ ನಾನು ಒಪ್ಪುತ್ತೇನೆ. ಕೇರಳದಲ್ಲಿ 75 ವರ್ಷ ಮೀರಿದ ವ್ಯಕ್ತಿಯನ್ನು ಸಿಎಂ ಎಂದು ಬಿಂಬಿಸಿ ಚುನಾವಣೆ ಎದುರಿಸಲಾಗಿತ್ತು. ಆದ್ದರಿಂದ, ಹೈಕಮಾಂಡ್ ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. ಬಿಎಸ್​ವೈ
ಸ್ವಇಚ್ಚೆಯಿಂದ ಕೆಳಕ್ಕೆ ಇಳಿಯಲು ಸಿದ್ದರಿಲ್ಲ. ಒತ್ತಾಯಪೂರ್ವಕವಾಗಿ ಇಳಿಸಲಾಗುತ್ತಿದೆ. ಈ ಕಾರಣಕ್ಕಾಗಿ ಇವರ ಜತೆ ಸ್ವಾಮೀಜಿಗಳು ಇದ್ದಾರೆ. ಇದು ರಾಜಕೀಯ ಸಭೆಯಲ್ಲ. ಧರ್ಮದ ಸಭೆ ಎಂದರು.
ಷಾ ವಿರುದ್ದ ಗುಡುಗು:ಚುನಾವಣೆ ವೇಳೆ ಬಿಎಸ್​ವೈ ಪೂರ್ಣಾವಧಿ ಸಿಎಂ ಆಗಲಿದ್ದಾರೆ ಎಂದು ವರಿಷ್ಠರು ಭರವಸೆ ನೀಡಿದ್ದರು. ಕೊಟ್ಟಿರುವ ಭರವಸೆ ನೀವೇಕೆ ಈಗ ಉಳಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಬಿಎಸ್​ವೈ ಅವರನ್ನು ಬದಲಾಯಿಸಬಾರದು ಎಂದು ಅಮಿತ್ ಷಾ ವಿರುದ್ಧ ಬನವಾಸಿಯ ಹೊಳೆಮಠದ ನಾಗಭೂಷಣ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಹುದ್ದೆ ಖಾಲಿ ಇಲ್ಲದಿದ್ದಾಗ ಪೈಪೋಟಿ ಯಾಕೆ?:ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮಠಾಧೀಶರ ಸಮಾವೇಶದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾದ ಗೋವಿಂದ ಕಾರಜೋಳ, ಈಶ್ವರಪ್ಪ, ಅರವಿಂದ ಬೆಲ್ಲದ್, ಆರ್.ಅಶೋಕ್, ಬಸನಗೌಡ ಪಾಟೀಲ ಯತ್ನಾಳ್, ಪ್ರಲ್ಹಾದ ಜೋಶಿ ಇದ್ದಾರೆ. ಆದರೆ ಯಡಿಯೂರಪ್ಪರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದ ಮಠಾಧಿಪತಿಗಳು, ಸರ್ಕಾರ ರಚನೆಗೆ ಯಡಿಯೂರಪ್ಪ ಬೇಕು. ಪೂರ್ಣ ಪ್ರಮಾಣದ ಅಧಿಕಾರ ನಡೆಸಲು ಬೇಡ ಎಂದರೆ ಹೇಗೆ ಇದು ಪ್ರಶ್ನಿಸಿದರು. ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಮಠಾಧೀಶರು ಸಂಕಷ್ಟ ಕಾಲದಲ್ಲಿ ಸಲಹೆ ನೀಡುವ, ಮಾರ್ಗದರ್ಶನ ಮಾಡುವ ಪರಿಪಾಠ ಹಿಂದಿನಿಂದ ನಡೆದುಕೊಂಡು ಬಂದಿದೆ. ಈಗ ರಾಜರೆಂದರೆ ರಾಜಕಾರಣಿಗಳು. ನಾಡು ದೊಡ್ಡ ದೊಡ್ಡ ಸಮಸ್ಯೆ ಎದುರಿಸುವಾಗ ಧರ್ಮಗುರುಗಳ ಪಾತ್ರ ಮಹತ್ವದ್ದು ಎಂದರು.
ಕೈಕಟ್ಟಿ ಕುಳಿತುಕೊಳ್ಳಬೇಕೇ?:ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ನಾಡಿದ ಶ್ರೇಷ್ಠ ನಾಯಕನಿಗೆ ಅನ್ಯಾಯ, ಅಪಮಾನ, ಕಿರುಕುಳ ಆದರೆ ನಾವೆಲ್ಲ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವೆ? ಹುದ್ದೆ ಖಾಲಿ ಇಲ್ಲದಿದ್ದಾಗ ಸಿಎಂ ಸ್ಥಾನಕ್ಕೆ ಪೈಪೋಟಿ ಸರಿಯಲ್ಲ. ಚುನಾವಣೆ ಬಂದಾಗ ಯಾಕೆ ಮಠಕ್ಕೆ ಬರುತ್ತೀರಿ? ರಾಜಕೀಯದಲ್ಲಿ ವ್ಯತ್ಯಾಸ ಆದಾಗ ಧರ್ಮ ಗುರುಗಳ ಪ್ರವೇಶ ಅಗತ್ಯ ಎಂದು ಪ್ರತಿಪಾದಿಸಿದರು. ಎಲ್ಲದಕ್ಕೂ ಬಿ.ವೈ.ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ, ಆಡಳಿತದಲ್ಲಿ ಹಸ್ತಕ್ಷೇಪ ಆರೋಪ ಮಾಡುತ್ತಿದ್ದಾರೆ. ವಿಜಯೇಂದ್ರ ತಂದೆಗೆ ಸಹಕಾರ ಕೊಡುತ್ತಿದ್ದಾರೆಯೇ ವಿನಾ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಹಿಂದಿನ ಸಿಎಂಗಳ ಪುತ್ರರೂ ಇದೇ ರೀತಿ ಸಹಕಾರ ಮಾಡಿದ್ದಾರೆ ಎಂದರು.
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಿರ್ಸಿ ಬಣ್ಣದ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಮಹಾಸ್ವಾಮಿಗಳು, ಶಿವಗಂಗೆ ಶ್ರೀ ವಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿಗಳು, ಜಗದ್ಗುರು ನುಲಿ ಚಂದಯ್ಯ ಪೀಠದ ಶ್ರೀ ವೃಷಬೇಂದ್ರ ಮಹಾಸ್ವಾಮಿಗಳು, ಶಿವಗಂಗೆ ಮಹಾಲಕ್ಷಿ್ಮಪೀಠದ ಜಗದ್ಗುರು ಜ್ಞಾನಾನಂದಪುರಿ ಮಹಾಸ್ವಾಮಿಗಳು, ಛಲವಾದಿ ಪೀಠದ ಶ್ರೀ ನಾಗಿದೇವ ಸ್ವಾಮೀಜಿಗಳು, ಕಡೂರು ಶ್ರೀ ಜ್ಞಾನಪ್ರಭು ಸಿದ್ದರಾಮ ಸ್ವಾಮೀಜಿಗಳು, ರಾಮೇನಹಳ್ಳಿ ಶಿವ ಪಂಚಾಕ್ಷ ಮಹಾಸ್ವಾಮಿಗಳು, ಚಕ್ರಭಾವಿ ಸಿದ್ದಲಿಂಗ ಸ್ವಾಮೀಜಿಗಳು, ಮಹಾಂತ ಶ್ರೀಗಳು ಮತ್ತಿತರರು ಉಪಸ್ಥಿತರಿದ್ದರು.
ಸಮಾವೇಶ ಏಕಪಕ್ಷೀಯವಲ್ಲ:ಮಠಾಧಿಪತಿಗಳ ಮಹಾ ಸಮಾವೇಶ ಏಕಪಕ್ಷೀಯ ನಿರ್ಣಯವಲ್ಲ. ಸಮಾಜಕ್ಕೆ ಅನ್ಯಾಯವಾದಾಗ ಕೇಳುವ, ಮಾರ್ಗದರ್ಶನ, ಹೋರಾಟ ಮಾಡುವ ಅಧಿಕಾರ ಮಠಾಧೀಶರಿಗಿದೆ ಎಂದು ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ದೇವರು ಹೇಳಿದರು.
ಯುವ ಮಠಾಧೀಶರ ಸಭೆ:ಯುವ ಮಠಾಧೀಶರ ವೇದಿಕೆ ಮಾಡಲಾಗುತ್ತದೆ. ಚಿತ್ರದುರ್ಗದಲ್ಲಿ ಶೀಘ್ರವೇ ಸಭೆ ಕರೆಯಲಾಗುತ್ತದೆ. ನೆರೆಪೀಡಿತ ಪ್ರದೇಶಗಳಲ್ಲಿ 50 ಯುವ ಸ್ವಾಮೀಜಿಗಳ ತಂಡ ತೆರಳಿ ಕೆಲಸ ಮಾಡಲು ಮುಂದಾಗಿದೆ ಎಂದು ಶ್ರೀ ಬಸವ ಕುಮಾರಸ್ವಾಮೀಜಿ ತಿಳಿಸಿದರು.
ಕುತೂಹಲ ಮೂಡಿಸಿದ ಪ್ರಲ್ಹಾದ ಜೋಶಿ ನಡೆ (ಹುಬ್ಬಳ್ಳಿ ವರದಿ):ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಗರಿಗೆದರಿರುವ ಸಮಯದಲ್ಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾನುವಾರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಯಿತು. ಶುಕ್ರವಾರ ತಂದೆಯ ಶ್ರಾದ್ಧ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ್ದರು. ಸಂಸತ್ ಅಧಿವೇಶನ ನಡೆಯುತ್ತಿದ್ದು, ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಬೆಳೆಸುವ ಬದಲು ವಿಶೇಷ ವಿಮಾನದಲ್ಲಿ ಪತ್ನಿ, ಸಹೋದರನ ಜತೆ ಬೆಂಗಳೂರಿಗೆ ಪ್ರಯಾಣಿಸಿ ಕುತೂಹಲ ಮೂಡಿಸಿದರು.
ಅನುದಾನಕ್ಕೆ ಕೈಚಾಚಿಲ್ಲ:ಕೆಲವರು ಮಠಾಧಿಪತಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಮೊದಲನೇ ಬಾರಿ ಬಜೆಟ್​ನಲ್ಲಿ ಮಠಗಳಿಗೆ ಹಣ ಕೊಟ್ಟವರು ಯಡಿಯೂರಪ್ಪ. ಇತರರು ಅವರನ್ನು ಅನುಕರಿಸಿದರು. ಮಠಗಳಿಗೆ ಅನುದಾನ ಕೊಟ್ಟಿದ್ದಾರೆಂಬ ಕಾರಣಕ್ಕಾಗಿ ಬೆಂಬಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಅನುದಾನ ಪಡೆದವರಲ್ಲಿ ಹಲವರು ಈ ಸಮಾವೇಶಕ್ಕೆ ಬಂದಿಲ್ಲ. ಅನುದಾನಕ್ಕೆ ನಾವು ಕೈಚಾಚಿಲ್ಲ ಎಂದು ಬಾಳೆಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಯಡಿಯೂರಪ್ಪ ಒಂದೇ ಜಾತಿಯನ್ನು ಬೆಂಬಲಿಸಿಲ್ಲ. ಅವರ ಜಾತ್ಯತೀತ ನಿಲುವಿಗೆ ಮಠಾಧಿಪತಿಗಳ ಬೆಂಬಲವೇ ಹೊರತು ಅನುದಾನಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
