ರಾಜಗುರು ಬಿ.ಎಸ್.ದ್ವಾರಕನಾಥಬೆಂಗಳೂರು:ಹೆಣ್ಣು ತನಗಾಗಿ ಏನನ್ನೂ ಬೇಡುವುದಿಲ್ಲ,ಇತರರ ಸುಖಕ್ಕಾಗಿ ತನ್ನ ಜೀವನ ಸವೆಸುತ್ತಾಳೆ.ಆಕೆ ತನ್ನ ಸೌಮಂಗಲ್ಯಕ್ಕಾಗಿ ಮಾಡುವ ವಿವಿಧ ಪೂಜೆ–ವ್ರತಗಳಲ್ಲಿ ಸ್ವರ್ಣಗೌರಿ ವ್ರತ ಪ್ರಮುಖವಾದದ್ದು.
ಬಾದ್ರಪದ ಮಾಸದ ತದಿಗೆಯಂದು ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುತ್ತದೆ.ಆಷಾಡ ಮಾಸ ಮಧ್ಯದಲ್ಲಿ ಉತ್ತರಾಯಣ ಕಾಲ ಮುಗಿದು ದಕ್ಷಿಣಾಯನ ಆರಂಭವಾಗುತ್ತಿದ್ದಂತೆ ವ್ರತಗಳು ಆರಂಭವಾಗುತ್ತವೆ.ಜ್ಯೋತಿರ್ಭೀಮೇಶ್ವರ ವ್ರತದಿಂದ ಆರಂಭವಾಗಿ ಶ್ರಾವಣಮಾಸದಲ್ಲಿ ಮಂಗಳಗೌರಿ,ವರಮಹಾಲಕ್ಷ್ಮಿ ವ್ರತಗಳ ನಂತರ ಬಾದ್ರಪದ ಮಾಸದ ತದಿಗೆಯನ್ನು ಮಹಾಗೌರಿಯನ್ನು ಪೂಜಿಸುವ ಸ್ವರ್ಣಗೌರಿ ವ್ರತವು ಸುಮಂಗಲೆಯರ ಪ್ರಮುಖ ಹಬ್ಬ.
ಸ್ವರ್ಣಗೌರಿಯನ್ನು ವ್ರತನಿಯಮದಂತೆ ಪೂಜಿಸುವ ಮುತ್ತೈದೆಯರಿಗೆ ದೀರ್ಘ ಸೌಮಂಗಲ್ಯ ಪ್ರಾಪ್ತಿಯಾಗಿ ಸಕಲ ಭೋಗ–ಭಾಗ್ಯಗಳು ದೊರೆಯುತ್ತವೆ ಎಂದು ಶಾಸಗ್ರಂಥಗಳು ಉಲ್ಲೇಖಿಸಿವೆ.ಶಿವ–ಪಾರ್ವತಿಯರ ಪುತ್ರಶ್ರೇಷ್ಠನಾದ ಷಣ್ಮುಖನು ಜಗದೀಶ್ವರನಲ್ಲಿ ಭೂಲೋಕದ ಮಾನವರ ಸಕಲ ಇಷ್ಟಾರ್ಥಗಳೆಲ್ಲವನ್ನೂ ಪೂರೈಸುವ ಶ್ರೇಷ್ಠ ವ್ರತ ಯಾವುದು ಎಂದು ಕೇಳಿದಾಗ ಸಾಕ್ಷಾತ್ ಶಿವನೇ ಹೇಳಿದ ಶ್ರೇಷ್ಠ ವ್ರತ ಸ್ವರ್ಣಗೌರಿ ವ್ರತ.
ಜಗದೀಶ್ವರಿಯಾದ ಮಹಾಗೌರಿಯನ್ನು ಪೂಜಿಸುವ ಸ್ವರ್ಣಗೌರಿ ವ್ರತವನ್ನು ಆಚರಿಸಲು ವ್ರತಕತೆಯಲ್ಲಿಯೇ ಕೆಲ ನಿಯಮಗಳನ್ನು ಹೇಳಲಾಗಿದೆ.ವ್ರತವನ್ನು ಕೈಗೊಳ್ಳುವವರು ಮೊದಲಿಗೆ ಅರಿಶಿಣ ಬೆರೆಸಿದ ಎಣ್ಣೆಯನ್ನು ಲೇಪಿಸಿಕೊಂಡು ಮಂಗಲ ಸ್ನಾನವನ್ನು ಮಾಡಿ ಪತಿಯ ಕಾಲಿಗೆ ನಮಸ್ಕರಿಸಿ, 16ಗಂಟುಗಳಿಂದ ಕೂಡಿದ ಕಂಕಣವನ್ನು ಹಿರಿಯರಿಂದ ಕಟ್ಟಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು.
ಮೊದಲಿಗೆ ಗಣಪತಿಯನ್ನು ಪೂಜಿಸಿ ಅವರವರ ಮನೆಯ ಪದ್ದತಿಯಂತೆ ಕಲಶವನ್ನು ಸ್ಥಾಪಿಸಿ ಅಥವಾ ಗೌರಿ ವಿಗ್ರಹವನ್ನು ಪ್ರತಿಷ್ಠಾಪಿಸಿ ದೇವಿಯನ್ನು ಆಹ್ವಾನಿಸಬೇಕು.ಪಂಚಾಮೃತ,ಮಂಗಲದ್ರವ್ಯಗಳಿಂದ ಅಭಿಷೇಕ ಮಾಡಿ,ಅರಿಶಿಣ–ಕುಂಕುಮ,ಹೂವಿನಿಂದ ಸಕಾಲಾಂಗ ಪೂಜೆಯನ್ನು ಮಾಡಬೇಕು.ನಂತರ ವ್ರತಕತೆ,ಗೌರಿಯ ಅಷ್ಟೋತ್ತರವನ್ನು ಪಠಣ ಮಾಡಿ ನೈವೇದ್ಯವನ್ನು ಅರ್ಪಿಸಿ ಮಹಾ ಮಂಗಳಾರತಿ ಮಾಡಬೇಕು.
ಗೌರಿ ಹಬ್ಬದ ಪ್ರಮುಖವಾದ ಭಾಗ ಸುಮಂಗಲೆಯರಿಗೆ ಬಾಗೀನ ನೀಡುವುದು. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಎಂಬ ಮಾತಿನಂತೆ ಪ್ರತಿಯೋರ್ವ ಸೀ ಕೂಡಾ ಶಕ್ತಿಯ ಪ್ರತಿರೂಪ ಎಂಬುದರ ಪ್ರತೀಕವಾಗಿ ಸ್ವರ್ಣಗೌರಿ ವ್ರತದಲ್ಲಿ16ಜನ ಮುತ್ತೈದೆಯರಿಗೆ ಬಾಗೀನ ಸಮರ್ಪಿಸಬೇಕು.ಬಾಗೀನ ಸಮರ್ಪಣೆಯ ಹೊರತು ವ್ರತ ಸಂಪೂರ್ಣವಾಗುವುದಿಲ್ಲ.
ಬಾಗೀನವನ್ನು ಬಿದಿರಿನಿಂದ ಮಾಡಿರುವ ಮೊರದಲ್ಲಿಯೇ ನೀಡಬೇಕೆಂಬ ನಿಯಮವಿದೆ.ಬಾಗೀನವನ್ನು ತೆರೆದು ನೀಡಬಾರದು.ಬಾಗೀನವನ್ನು ಮುಚ್ಚಿ ಕೊಡುವುದು ಪದ್ದತಿ.ಒಂದು ಮೊರದಲ್ಲಿ ಅಕ್ಕಿ,ಬೆಲ್ಲ,ಬೇಳೆ,ಕುಪ್ಪಸ,ಬಳೆ,ಕನ್ನಡಿ,ಕಾಲುಂಗರ ಇತ್ಯಾದಿ ಶುಭಕಾರಕ ವಸ್ತುಗಳನ್ನು ಇಟ್ಟು ಮತ್ತೊಂದು ಮೊರವನ್ನು ಮುಚ್ಚಿ ಮುತ್ತೈದೆಯರ ಉಡಿತುಂಬಿ ಆರತಿ ಬೆಳಗಿ ಅವರ ಮನಸಂತೋಷ ಪಡಿಸಬೇಕು.ಮುತ್ತೈದೆಯರು ಸಂತೋಷಪಟ್ಟರೆ ಬಾಗೀನ ನೀಡಿದವರು ಅಖಂಡ ಸೌಭಾಗ್ಯವತಿಯಾಗುತ್ತಾಳೆ ಆ ಮೂಲಕ ವ್ರತದ ಲ ಸಂಪೂರ್ಣವಾಗಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಪ್ರತಿಯೊಂದು ವ್ರತ,ಪೂಜೆಗೆ ತನ್ನದೇ ಆದ ಹಿನ್ನೆಲೆ ಇರುತ್ತದೆ.ಅಂತೆಯೇ ಸ್ವರ್ಣಗೌರಿ ವ್ರತದ ಬಗ್ಗೆಯೂ ಕೂಡಾ ಪುರಾಣಗಳಲ್ಲಿ ಒಂದು ಕತೆ ಇದೆ.ಹಿಂದೆ ಚಂದ್ರಸೇನ ನೆಂಬ ರಾಜನು ರಾಜ್ಯಭಾರ ಮಾಡುತ್ತಿದ್ದನು.ಆತನಿಗೆ ಇಬ್ಬರು ಪತ್ನಿಯರು.ಒಮ್ಮೆ ಚಂದ್ರಸೇನ ಮಹಾರಾಜನು ಬೇಟೆಗಾಗಿ ಕಾಡಿಗೆ ಹೋಗಿದ್ದಾಗ ದಾರಿ ತಪ್ಪಿ ಬಹುದೂರ ಹೋಗುತ್ತಾನೆ.ಅಂದು ಭಾದ್ರಪದ ತದಿಗೆಯಾಗಿರುತ್ತದೆ.ಆ ಕಾಡಿನ ಮಧ್ಯದಲ್ಲಿ ಒಂದು ಅಪ್ಸರ ಕುಂಡ ಎಂಬ ಸರೋವರ ಇರುತ್ತದೆ.ಆ ಸರೋವರದಲ್ಲಿ ಮಿಂದ ಅಪ್ಸರೆಯರು ಸರೋವರದ ದಂಡೆಯ ಮೇಲೆ ಸ್ವರ್ಣಗೌರಿಯ ವ್ರತವನ್ನು ಮಾಡುತ್ತಿರುತ್ತಾರೆ.ಇದನ್ನು ಕಂಡ ಚಂದ್ರಸೇನಾ ಕುತೂಹಲದಿಂದ ಅವರನ್ನು ತಾವು ಯಾರು,ಯಾವ ಪೂಜೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾನೆ.ಆಗ ಅಪ್ಸರೆಯರು ಸ್ವರ್ಣಗೌರಿ ವ್ರತವನ್ನು ವಿವರಿಸಿ ಆತನ ಕೈಗೆ16ಗಂಟುಗಳುಳ್ಳ ಕಂಕಣ ದಾರವನ್ನು ಕಟ್ಟುತ್ತಾರೆ.ಆ ದಾರವನ್ನು ಕಟ್ಟಿಕೊಂಡು ಅರಮನೆಗೆ ಬರುತ್ತಾನೆ.
ರಾಜನ ಕೈಯಲ್ಲಿ ಕಟ್ಟಿದ್ದ ದಾರವನ್ನು ಕಂಡು ಮೊದಲ ಹೆಂಡತಿ ಅನುಮಾನದಿಂದ ಯಾವುದೋ ವಶೀಕರಣಕ್ಕೆ ಕಟ್ಟಿದ ದಾರ ಎಂಬ ಅನುಮಾನದಿಂದ ಅದನ್ನು ಗಂಡನ ಕೈಯಿಂದ ಕಿತ್ತು ಎಸೆಯುತ್ತಾಳೆ.ಆ ದಾರ ಒಂದು ಒಣಗಿದ ಮರದ ಮೇಲೆ ಹೋಗಿ ಬೀಳುತ್ತದೆ.ಆಗ ಆ ಮರ ಚಿಗುರುತ್ತದೆ.ಇದನ್ನು ಕಂಡು ಆಕೆ ಗಾಬರಿಯಿಂದ ತನ್ನಿಂದಾದ ಅಚಾತುರ್ಯಕ್ಕೆ ಪಶ್ಚಾತ್ತಾಪ ಪಟ್ಟು ತಲೆ ಕೆಟ್ಟು ದೇಶಾಂತರ ಹೋಗುತ್ತಾಳೆ.ಆದರೆ ಎರಡನೇ ಪತ್ನಿಯು ಗಂಡನಿಂದ ಸ್ವರ್ಣಗೌರಿ ವ್ರತದ ವಿವರಗಳನ್ನು ಕೇಳಿಕೊಂಡು ಅದರಂತೆ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಮಹಾಗೌರಿಯ ಕೃಪೆಗೆ ಪಾತ್ರಳಾಗಿ ಸಕಲ ಭೋಗ–ಭಾಗ್ಯಗಳನ್ನು ಪಡೆದುಕೊಳ್ಳುತ್ತಾಳೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:six + eleven =
Remember me
