|ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಮೇಲೆ ಅಲ್ಲಿ ಅವರ ಪ್ರತಿಮೆ ಸ್ಥಾಪಿಸಬೇಕು ಎನ್ನುವ ಉದ್ದೇಶವಿತ್ತು. ಈ ದಿಕ್ಕಿನಲ್ಲಿ ಹಿಂದಿನ ಸರ್ಕಾರಗಳೂ ಪ್ರಯತ್ನ ಮಾಡಿದ್ದುವು. ಆದರೆ, ಸರಿಯಾದ ಸ್ಥಳ ತೀರ್ಮಾನ ಆಗಿರಲಿಲ್ಲ. ಮೊದಲಿನ ಜಾಗ ವಿಮಾನ ನಿಲ್ದಾಣದ ಆಚೆ ಇತ್ತು. ಅದು ಎತ್ತರದ ದೃಷ್ಟಿಯಿಂದ ನೋಡಿದಾಗ ತೊಡಕಾಗುವ ಸಾಧ್ಯತೆ ಇತ್ತು. ಹಾಗಾಗಿ ಸುಮಾರು 15 ಅಡಿಯ ಒಂದು ಪ್ರತಿಮೆ ಮಾತ್ರ ಮಾಡಬೇಕು ಎಂಬ ಆಲೋಚನೆ ಆಗ ಇತ್ತು. ಆದರೆ, ಅದು ಸಾಂಕೇತಿಕವಾಗಿರುತ್ತಿತ್ತು. ಅಲ್ಲದೆ, ಅದು ಕಾಗದದ ಮೇಲೆ ಮಾತ್ರ ಇದ್ದ ಯೋಜನೆಯಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಪ್ರಕಟಣೆ ಮಾಡಿದರು.
ಈ ಘೋಷಣೆಯ ನಂತರ ನನ್ನನ್ನು ಕರೆದು ‘ಇದನ್ನು ಕಾರ್ಯರೂಪಕ್ಕೆ ತರುವ ಹೊಣೆ ನಿಮ್ಮದು’ ಎಂದು ಹೇಳಿದರು. ಇದಕ್ಕೂ ಮುಂಚೆಯೇ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗಿತ್ತು. ಅದರ ಉಪಾಧ್ಯಕ್ಷರಾಗಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಇರುತ್ತಾರೆ. ಹೀಗಾಗಿ, ನಾನು ಆ ಪ್ರಾಧಿಕಾರದ ಉಪಾಧ್ಯಕ್ಷನಾಗಿದ್ದೆ. ಪ್ರತಿಮೆಯ ಸ್ಥಾಪನೆಯ ಉಸ್ತುವಾರಿ ನನ್ನ ಭುಜದ ಮೇಲೆ ಬಿತ್ತು.
ಯೋಜನೆ ರೂಪಿಸುವುದೇ ಬಹಳ ಮುಖ್ಯವಾದುದು. ಹಲವು ಸುತ್ತಿನ ಮಾತುಕತೆಗಳ ನಂತರ ಈಗಿನ ಜಾಗ ನಿಗದಿಯಾಯಿತು. ಇಂಥ ದೊಡ್ಡ ಕೆಲಸಗಳು ರಾತ್ರೋರಾತ್ರಿ ಆಗುವುದಿಲ್ಲ. ಅಲ್ಲದೆ, ಅದಕ್ಕೆ ಹಲವು ಅಡಚಣೆಗಳೂ ಇರುತ್ತವೆ. ಆದರೆ, ಒಮ್ಮೆ ಸಂಕಲ್ಪ ಮಾಡಿದರೆ ಅವುಗಳೆಲ್ಲ ತಾನೇ ತಾನಾಗಿ ನಿವಾರಣೆಯಾಗಿ ಸ್ಪಷ್ಟವಾದ ಹಾದಿ ಕಾಣಿಸತೊಡಗುತ್ತದೆ.
ಕೆಂಪೇಗೌಡರ ಪ್ರತಿಮೆ ಹೇಗಿರಬೇಕು ಎನ್ನುವುದು ನಮ್ಮ ಮುಂದೆ ಇದ್ದ ಪ್ರಶ್ನೆಯಾಗಿತ್ತು. ಅವರು ಶ್ರೇಷ್ಠ ಆಡಳಿತಗಾರ. ಶೂರ ಮತ್ತು ಸಾಮಂತ. ಈ ಮೂರೂ ವ್ಯಕ್ತಿತ್ವಗಳು ಆ ಪ್ರತಿಮೆಯಲ್ಲಿ ಮೇಳೈಸಬೇಕಿತ್ತು. ಮುಖ್ಯಮಂತ್ರಿಗಳು, ಸ್ವಾಮೀಜಿಗಳು ಮತ್ತು ಪರಿಣತರ ಜತೆಗೆ ರ್ಚಚಿಸಿ ಅಂತಿಮವಾಗಿ ಪ್ರತಿಮೆಯ ನಿರ್ವಣದ ಹೊಣೆಯನ್ನು ರಾಂ ಸುತಾರ್ ಅವರಿಗೇ ಕೊಡಬೇಕು ಎಂದು ನಿರ್ಧರಿಸಿದೆವು. ಸುತಾರ್ ಅವರಿಗೆ ಹಲವು ಪ್ರತಿಮೆಗಳನ್ನು ಮಾಡಿರುವ ಅನುಭವವಿದೆ. ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ಮೇಲೆ ಅದಕ್ಕೆ ಏನೂ ತೊಂದರೆಯಾಗದಿರುವುದು ಮುಖ್ಯ. ಮುಖ್ಯವಾಗಿ ಅದು ಗಾಳಿನಿರೋಧಕ ಮತ್ತು ಭೂಕಂಪನ ನಿರೋಧಕ ಶಕ್ತಿ ಹೊಂದಿರಬೇಕು. ಈ ಕುರಿತು ತಜ್ಞರಿಂದ ಮಾಹಿತಿ ಪಡೆದೆವು. ಅಂತಿಮವಾಗಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ನೂರು ಟನ್ ತೂಕದ ಪ್ರತಿಮೆ ಮಾಡುವುದು ಎಂದು ನಿರ್ಣಯಿಸಿದೆವು. ಪ್ರತಿಮೆಯ ಅಡಿಯಲ್ಲಿ 120 ಟನ್ ಕಬ್ಬಿಣ ಬಳಸಲಾಗಿದೆ. 18 ಅಡಿ ಎತ್ತರದ ಉಷ್ಣತಾ ನಿರೋಧಕ ಕಾಂಕ್ರೀಟ್ ಕಟ್ಟೆಯನ್ನು ಪ್ರತಿಮೆಯ ಅಡಿಪಾಯವಾಗಿ ನಿರ್ವಿುಸಿದ್ದೇವೆ. ಅದರ ಮೇಲೆ ತಲಾ ಒಂದು ಟನ್ ತೂಕದ ಕಂಚಿನ ನಾಲ್ಕು ಉಬ್ಬು ಶಿಲ್ಪಗಳಿವೆ. ಸುತ್ತಲೂ ಭೂ ದೃಶ್ಯಗಳನ್ನು ಅಂದವಾಗಿ ರೂಪಿಸಲಾಗಿದೆ. ಕೋವಿಡ್ ಇದ್ದರೂ ಅದರಿಂದ ಎಷ್ಟೇ ಅಡಚಣೆಗಳು ಬಂದರೂ ಯಾವ ಕೆಲಸವನ್ನೂ ನಾವು ನಿಲ್ಲಿಸಲಿಲ್ಲ.
ಥೀಮ್ ಪಾರ್ಕ್ ಮತ್ತು ಭೂದೃಶ್ಯಗಳ ನಿರ್ವಣಕ್ಕೆ 20 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಅದರ ಕೆಲಸವೂ ಶುರುವಾಗಿದೆ. ಪರಿಣತರನ್ನು ಕರೆಸಿಯೇ ಈ ಕೆಲಸ ಮಾಡುತ್ತಿದ್ದೇವೆ. ಹಲವು ಘಟಕಗಳು ಅದರಲ್ಲಿ ಇರಲಿವೆ. ಎತ್ತಿನ ಬಂಡಿಯ ಪರಿಕಲ್ಪನೆಯನ್ನೂ ಅಲ್ಲಿ ಅಳವಡಿಸಿದ್ದೇವೆ. ಭೂದೃಶ್ಯಗಳಲ್ಲಿ ಕೆಂಪೇಗೌಡರು ಕೆರೆ ಕಟ್ಟೆಗಳನ್ನು ನಿರ್ವಿುಸಿರುವುದಕ್ಕೆ ಪ್ರಾಮುಖ್ಯ ಕೊಟ್ಟಿದ್ದೇವೆ. ಅಲ್ಲಿ ನೀರಿನ ಹರಿವು ಇದೆ, ಕಾಲುವೆಗಳು ಇವೆ. ಜಲ ಮತ್ತು ಹಸಿರು ಸಂಪತ್ತಿನ, ಸಮೃದ್ಧಿಯ ದ್ಯೋತಕ.
ಇದರ ಜತೆಗೆ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿರುವ ಮೆಟಾವರ್ಸ್ ಅನ್ನೂ ಇಲ್ಲಿ ಅಳವಡಿಸಲಿದ್ದೇವೆ. ಅದು ವರ್ಚುವಲ್ ಅನುಭವನ್ನು ತಂದುಕೊಡುತ್ತದೆ. ಆ ತಂತ್ರಜ್ಞಾನದ ಮೂಲಕ ಕೆಂಪೇಗೌಡರನ್ನು ನಿಜರೂಪದಲ್ಲಿಯೇ ನಾವು ಕಾಣಬಹುದು. ಥೀಮ್ ಪಾರ್ಕ್ ಆದ ಮೇಲೆ ಬೆಂಗಳೂರು ಮತ್ತು ಸುತ್ತಮುತ್ತ ಇರುವ ಕೆಂಪೇಗೌಡರ ತಾಣಗಳನ್ನು ಒಳಗೊಂಡು ಪ್ರವಾಸಿ ರ್ಸಟ್ ಮಾಡುವ ಉದ್ದೇಶವಿದೆ. ಎಲ್ಲವನ್ನೂ ಸಾಧ್ಯವಾದಷ್ಟು ಬೇಗ ಮಾಡುತ್ತೇವೆ. ಹತ್ತಿರದ ಕೆಂಪಾಪುರದಲ್ಲಿ ಕೆಂಪೇಗೌಡರ ವೀರ ಸಮಾಧಿ ಇರುವ ಐದೂವರೆ ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಹನ್ನೊಂದು ಕೋಟಿ ರೂಪಾಯಿ ನೀಡಿದ್ದೇವೆ. ಕೆಂಪಾಪುರ ಅಭಿವೃದ್ಧಿಗೂ ಎಲ್ಲ ಸಿದ್ಧತೆಗಳು ಆಗಿದೆ.
ಈ ಪ್ರತಿಮೆಯ ಸ್ಥಾಪನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೋರಿಸಿದ ಮುತುವರ್ಜಿ ಮತ್ತು ಮಾಡಿದ ಮಾರ್ಗದರ್ಶನದಿಂದಾಗಿಯೇ ಈ ಕೆಲಸ ಕೇವಲ 18 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿತು. ನಮಗೆ ಹಣಕಾಸಿನ ತೊಂದರೆಯಾಗದಂತೆ ಇವರಿಬ್ಬರೂ ನೋಡಿಕೊಂಡರು ಎಂಬುದನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ನಮಗೆ ಆಗಾಗ ಉಪಯುಕ್ತ ಸಲಹೆ ಸೂಚನೆ ನೀಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೇರಿದಂತೆ ಅನೇಕ ರಾಜಕೀಯ ಧುರೀಣರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ಕೆಲಸ ಮಾಡಿದ್ದೇವೆ.
ಹಲವು ಕಡೆ ಸವಾಲುಗಳು ಎದುರಾದುವು. ಆದರೆ, ಯಾವ ವಿಘ್ನವೂ ಇಲ್ಲದೇ ಅಂತಿಮವಾಗಿ ಈ ಪ್ರತಿಮೆ ಈಗ ಆಕಾಶದ ಎತ್ತರಕ್ಕೆ ಎದ್ದು ನಿಂತಿದೆ ಎಂಬುದು ನನಗೆ ಸಂತೋಷದ ಹೆಮ್ಮೆಯ ಸಂಗತಿ. ಕೆಂಪೇಗೌಡರ ಬದುಕು ಒಂದು ಸ್ಪೂರ್ತಿದಾಯಕ ಕಥೆ. ಸಾಮಂತ ಇದ್ದವರು ಈ ಮಟ್ಟಕ್ಕೆ ಸಾಧನೆ ಮಾಡಿದುದು ಸಾಮಾನ್ಯ ಸಂಗತಿಯಲ್ಲ. ಅದನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ. ಅದಕ್ಕಾಗಿಯೇ ಇದಕ್ಕೆ ‘ಪ್ರಗತಿಯ ಪ್ರತಿಮೆ’, ‘Statue of Prosperity’ ಎಂದು ಹೆಸರಿಟ್ಟಿದ್ದೇವೆ. ಬೆಂಗಳೂರು ಐ.ಟಿ, ಬಿ.ಟಿ ಮಾತ್ರವಲ್ಲ ಸ್ಟಾರ್ಟಪ್​ಗಳಲ್ಲಿ, ನಾವೀನ್ಯಗಳಲ್ಲಿ ದಾಪುಗಾಲಿನ ಹೆಜ್ಜೆ ಇಡುತ್ತ ಮುನ್ನಡೆಯುತ್ತಿದೆ. ಇದು ಯುವಜನರ ಆಶೋತ್ತರಗಳ ರಾಜಧಾನಿಯಾಗಿದೆ.
ಈ ನಗರದ ಜತೆಗೆ ಇಡೀ ಕರ್ನಾಟಕವನ್ನು ಬೆಸೆಯುವ ಸಲುವಾಗಿ ರಾಜ್ಯದಾದ್ಯಂತದ 22 ಸಾವಿರಕ್ಕಿಂತ ಹೆಚ್ಚು ಹಳ್ಳಿ, ಪಟ್ಟಣ ಮತ್ತು ನಗರಗಳಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ತರುವ ಕೆಲಸ ಮುಗಿದಿದೆ. ಈ ಮೃತ್ತಿಕೆಯನ್ನು ಪ್ರತಿಮೆಯ ಸುತ್ತ ನಿರ್ವಿುಸುವ ಕೆಂಪೇಗೌಡರ ಗಡಿ ಗೋಪುರಗಳ ಪ್ರತಿರೂಪಗಳಲ್ಲಿ ಶಾಶ್ವತಗೊಳಿಸಲಿದ್ದೇವೆ. ಕೆಂಪೇಗೌಡರ ಪ್ರತಿಮೆಯ ಅನಾವರಣ ಎನ್ನುವುದು ಒಂದು ಕಾರ್ಯಕ್ರಮ ಮಾತ್ರವಲ್ಲ; ಅದು ಒಂದು ಅಭಿಯಾನ. ಅದು ಆ ಮಹಾನುಭಾವನ ಸುಸ್ಥಿರ ನಗರ ಪರಿಕಲ್ಪನೆಯ ಮುಂದುವರಿಕೆ. ಕೆಂಪೇಗೌಡರು ಕಂಡ ಸರ್ವ ಜನಾಂಗದ ಶಾಂತಿಯ ತೋಟದ ಕನಸನ್ನು ಸಾಕಾರಗೊಳಿಸುವ ಅಭಿಯಾನ.
ಪ್ರಧಾನಿ ನರೇಂದ್ರ ಮೋದಿಯವರೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಕನಸನ್ನು ನನಸು ಮಾಡಲು ಹೊರಟ ಧೀಮಂತ ನಾಯಕರು. ಅವರು ಶುಕ್ರವಾರ, ನವೆಂಬರ್ 11ರಂದು ಈ ಪ್ರತಿಮೆಯನ್ನು ಅನಾವರಣ ಮಾಡಲಿರುವುದು ನಮ್ಮ ಜೀವನದಲ್ಲಿ ಒಂದು ಅಮೃತ ಘಳಿಗೆ. ಕರ್ನಾಟಕದ ಇತಿಹಾಸದಲ್ಲಿ ಚಿನ್ನದ ರೇಕುಗಳಿಂದ ಬರೆಯಬೇಕಾದ ಒಂದು ಅಪೂರ್ವ ಅಧ್ಯಾಯ.
(ಲೇಖಕರು ಉನ್ನತ ಶಿಕ್ಷಣ ಸಚಿವರು ಹಾಗೂ ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು)
ವರ್ಲ್ಡ್ ಬುಕ್​ ಆಫ್ ರೆಕಾರ್ಡ್ಸ್​ಗೆ ಸೇರಿದ ‘ಪ್ರಗತಿಯ ಪ್ರತಿಮೆ’; ಅತಿ ಎತ್ತರದ ಕಂಚಿನ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
